
ಬೆಂಗಳೂರು, ಮೇ 23: ಬಹುಭಾಷಾ ನಟಿ (Tamannaah Bhatia) ಅವರನ್ನು ಕರ್ನಾಟಕ ಸರ್ಕಾರ ಮೈಸೂರು ಸ್ಯಾಂಡಲ್ ಸೋಪ್ಗೆ (Mysore Sandal Soap) ರಾಯಭಾರಿಯಾಗಿ ಆಯ್ಕೆ ಮಾಡಿದೆ. ಎರಡು ವರ್ಷ ಎರಡು ದಿನಕ್ಕೆ ತಮ್ಮನ್ನಾ ಜೊತೆ ಬರೋಬ್ಬರಿ 6.20 ಕೋಟಿ ರೂಪಾಯಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಆದರೆ, ಇದಕ್ಕೆ ಕರ್ನಾಟಕದಲ್ಲಿ ಆಕ್ಷೇಪ ವ್ಯಕ್ತವಾಗಿದೆ. ತಮನ್ನಾ ಭಾಟಿಯಾರನ್ನು ಮೈಸೂರು ಸ್ಯಾಂಡಲ್ ಸೋಪ್ಗೆ ರಾಯಭಾರಿಯಾಗಿ ಆಯ್ಕೆ ಮಾಡುವ ಮೂಲಕ ಕನ್ನಡಿಗರಿಗೆ ಮಾಡಿದ್ದಾರೆ. ಒಪ್ಪಂದ ವಾಪಸ್ಸು ಪಡೆದಿಲ್ಲ ಎಂದರೆ ಕರವೇ ದೊಡ್ಡಮಟ್ಟದ ಹೋರಾಟಕ್ಕೆ ಸಜ್ಜಾಗುತ್ತದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣ ಗೌಡ ಎಂದು ಎಚ್ಚರಿಕೆ ನೀಡಿದರು.
ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮೈಸೂರು ಸ್ಯಾಂಡಲ್ ಸೋಪ್ ಫ್ಯಾಕ್ಟರಿಯನ್ನು ನಮ್ಮ ನಾಲ್ವಡಿ ಕೃಷ್ಣರಾಜ ಒಡೆಯರ್ 1916 ರಲ್ಲಿ ಸ್ಥಾಪನೆ ಮಾಡಿದ್ದಾರೆ. ಸದ್ಯ ರಾಜ್ಯ ಸರ್ಕಾದ ಅಧಿನದಲ್ಲಿದೆ. ಸಾವಿರಾರು ಮಂದಿ ಕನ್ನಡಿಗರಿಗೆ ಉದ್ಯೋಗ ಕೊಟ್ಟಿದೆ. ಕರ್ನಾಟಕ ಸೋಪ್ಸ್ ಆ್ಯಂಡ್ ಡಿಟರ್ಜೆಂಟ್ಸ್ ಲಿಮಿಟೆಡ್ (ಕೆಎಸ್‌ಡಿಎಲ್ ) ನಿಂದ 23ಕ್ಕೂ ಹೆಚ್ಚು ಉತ್ಪನ್ನಗಳು ಉತ್ಪಾದನೆಯಾಗುತ್ತವೆ ಎಂದು ಹೇಳಿದರು.
ಮೈಸೂರು ಸ್ಯಾಂಡಲ್ ಕಾರ್ಖಾನೆಯ ಸೋಪ್ಗಳನ್ನು ಕನ್ನಡಿಗರು ಬಳಕೆ ಮಾಡುತ್ತಾರೆ. ಈಗಿರುವ ಆ ಬ್ರ್ಯಾಂಡ್ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದುಕೊಳ್ಳಬೇಕೆಂದು, ಬಾಲಿವುಡ್ ನಟಿ ತಮನ್ನಾ ಭಾಟೀಯ ಅವರಿಗೆ 6 ಕೋಟಿ 20 ಲಕ್ಷ ಕೊಟ್ಟು ಎರಡು ವರ್ಷದ ಅವಧಿಗೆ ರಾಯಭಾರಿಯಾಗಿ ಮಾಡಿಕೊಳ್ಳುವ ಮೂಲಕ ಕನ್ನಡಿಗರಿಗೆ ಅವಮಾನ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕನ್ನಡ ಚಿತ್ರರಂಗದಲ್ಲಿ ಅದ್ಭುತವಾದ ನಟಿಯರಿದ್ದಾರೆ. ಕನ್ನಡಿಗರು ಕಟ್ಟಿದ ಸಂಸ್ಥೆಗೆ ಕನ್ನಡಿಗರನ್ನೇ ರಾಯಭಾರಿಯಾಗಿ ನೇಮಕ ಮಾಡಿಕೊಳ್ಳಬಹುದಿತ್ತು. ಅದನ್ನು ಬಿಟ್ಟು ಸಚಿವರು ಮಿಲ್ಕ್ ಬ್ಯೂಟಿ ಎಂದು ನಟಿಯನ್ನು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಅವರಿಗಿಂತ ಚೆನ್ನಾಗಿರುವ ನಟಿಯರು ನಮ್ಮಲ್ಲಿ ಇದ್ದಾರೆ. ಆಯ್ಕೆ ಸಮಿತಿ ಅಧ್ಯಕ್ಷ ರಜನಿಕಾಂತ್ ಅಂತೆ, ಆ ನಟಿಯ ಜೊತೆಗೆ ಏನು ಒಪ್ಪಂದ ಇದೆಯೋ ಗೊತ್ತಿಲ್ಲ ಎಂದರು.
ಕನ್ನಡಿಗರು ಕಟ್ಟಿದ ಸಂಸ್ಥೆಯಲ್ಲಿ ಕನ್ನಡಿಗರಿಗೆ ಆದ್ಯತೆ ಸಿಗಲ್ಲ ಎಂದರೆ ಇದನ್ನು ನಾವು ಒಪ್ಪಿಕೊಳ್ಳಬೇಕಾ? ಸಚಿವ ಎಂ.ಬಿ. ಪಾಟೀಲರು ಈ ಆಯ್ಕೆಯನ್ನು ಸಮರ್ಥನೆ ಮಾಡಿಕೊಳ್ಳುತ್ತಾರೆ. ಡಾ. ರಾಜ್ ಕುಮಾರ್ ಅವರನ್ನು ಇಡೀ ಭಾರತೀಯ ಚಿತ್ರರಂಗ ಒಪ್ಪಿಕೊಂಡಿದೆ. ಅವರು ನಂದಿನಿ ಹಾಲಿಗೆ ರಾಯಭಾರಿ ಆಗಿ ಕೆಲಸ ಮಾಡಿದ ಇತಿಹಾಸವಿದೆ. ಅದು ಕೂಡ ಉಚಿತವಾಗಿ ಒಂದು ರುಪಾಯಿ ಹಣವನ್ನು ಪಡೆದುಕೊಂಡಿಲ್ಲ. ಅವರು ಯಾವುದೇ ಕಂಪನಿಗೆ ರಾಯಭಾರಿಯಾಗಿ ಕೆಲಸ ಮಾಡಿಲ್ಲ. ನಂದಿನಿ ಉತ್ಪನ್ನಗಳು ಇವತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಮಾರಾಟವಾಗುತ್ತಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮೈಸೂರು ಸ್ಯಾಂಡಲ್ ಸೋಪ್ಗೆ ತಮನ್ನಾ ರಾಯಭಾರಿ; ಕನ್ನಡದ ನಟಿಯರು ಸಿಗಲಿಲ್ಲವಾ ಎಂದು ನೆಟ್ಟಿಗರ ಪ್ರಶ್ನೆ
ಐದು ಸಾವಿರ, ಹತ್ತು ಸಾವಿರ ಕೋಟಿ ವ್ಯಾಪಾರ ಮಾಡಿತ್ತಾರಾ, ಮಾಡಿ. ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ ನಮ್ಮ ನೆಲದ ಕನ್ನಡದ ಅನೇಕ ಬ್ಯೂಟಿಗಳಿದ್ದಾರೆ. ಈಗ ತಮನ್ನಾ ಜೊತೆಗೆ ಆಗಿರುವ ಒಪ್ಪಂದ ವಾಪಸ್ಸು ಪಡೆದುಕೊಳ್ಳಬೇಕು. ಕನ್ನಡದ ನಟಿಯರಿಗೆ ಅವಕಾಶ ಮಾಡಿಕೊಡಬೇಕೆಂದು ಸಚಿವರಿಗೆ ಹಾಗೂ ಮೈಸೂರು ಸ್ಯಾಂಡಲ್ ಸೋಪ್ ಫ್ಯಾಕ್ಟರಿ ಅಧ್ಯಕ್ಷರಿಗೆ ಮನವಿ ಮಾಡುತ್ತೇವೆ. ಒಪ್ಪಂದ ವಾಪಸ್ಸು ಪಡೆದಿಲ್ಲ ಎಂದರೆ ಕರವೇ ದೊಡ್ಡಮಟ್ಟದ ಹೋರಾಟಕ್ಕೆ ಸಜ್ಜಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:14 pm, Fri, 23 May 25