ಕೊರೊನಾ ದಾರುಣ ವಾಸ್ತವಗಳಿಗೆ ಕೊನೆ ಮೊದಲು ಎಂಬಂತಿಲ್ಲವಾಗಿದೆ. ಸಾಲು ಸಾಲು ಸಾವುಗಳ ಮೂಲಕ ಬ್ರಹ್ಮರಾಕ್ಷಸ ಕೊರೊನಾ ರಣಕೇಕೆ ಹಾಕುತ್ತಿದೆ. ಒಂದೇ ಮನೆಗಳಲ್ಲೇ ಇಬ್ಬರು-ಮೂವರು ಸಾವಗೀಡಾಗುತ್ತಿದ್ದಾರೆ. ಚಿಕ್ಕ ಚಿಕ್ಕ ಮಕ್ಕಳನ್ನು ಅನಾಥ ಮಾಡಿಟ್ಟು ನಾಗಾಲೋಟದಲ್ಲಿ ಸಾಗುತ್ತಿದೆ ಕೊರೊನಾ ಕ್ರಿಮಿ. ಈ ಮಧ್ಯೆ ನಿವೃತ್ತ ತಹಶೀಲ್ದಾರ್ ಒಬ್ಬರು ಕೊರೊನಾ ಬಾಧೆಯಿಂದ ಮುಕ್ತಿ ಪಡೆಯಲು ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ತಂದೆ ತಾಯಿ ಕಳೆದುಕೊಂಡು ಮಗು, ಅಜ್ಜ ಅಜ್ಜಿಗೂ ಕೊರೊನಾ: ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಸಾವುಗಳು ಮುಂದುವರಿದಿವೆ. ಮೊನ್ನೆಯಷ್ಟೇ ತಂದೆಯನ್ನು ಕಳೆದು ಕೊಂಡಿದ್ದ ಮಗು ಇಂದು ಬೆಳಗ್ಗೆ ತಾಯಿಯನ್ನೂ ಕಳೆದು ಕೊಂಡು ಅನಾಥವಾಗಿದೆ.
ಚಾಮರಾಜನಗರ ಜಿಲ್ಲಾ ಕೋವಿಡ್ ಅಸ್ಪತ್ರೆಯಲ್ಲಿ ಪೋಷಕರು ಮೃತಪಟ್ಟಿದ್ದಾರೆ. ಇದೀಗ ಮಗುವಿನ ಅಜ್ಜ ಅಜ್ಜಿಗೂ ಕೊರೊನಾ ಧೃಡಪಟ್ಟಿದೆ. ಲೋಕ ಅರಿಯದ ಮಗು ಕಂಗೆಟ್ಟಿದೆ. ಚಾಮರಾಜನಗರ ತಾಲೂಕಿನ ಕೊತ್ತಲವಾಡಿ ಗ್ರಾಮದಲ್ಲಿ ಈ ಪ್ರಸಂಗ ನಡೆದಿದೆ.
ಬೆಳಗಾವಿ ಆಸ್ಪತ್ರೆಯಲ್ಲಿ ತಂದೆ-ಮಗ ಸಾವು:
ಬೆಳಗಾವಿ ಆಸ್ಪತ್ರೆಯಲ್ಲಿ ತಂದೆ-ಮಗ ಸಾವು
ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ತಂದೆ-ಮಗ ಸಾವಿಗೀಡಾಗಿದ್ದಾರೆ. ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ತಂದೆ ರವೀಂದ್ರನಾಥ ವಸ್ತ್ರದ್ (74) ಮತ್ತು ಮಗ ವಿಶ್ವನಾಥ ವಸ್ತ್ರದ್(47) ಕೊರೊನಾ ಸೋಂಕಿನಿಂದ ಕೊನೆಯುಸಿರೆಳೆದಿದ್ದಾರೆ. ಇಬ್ಬರೂ 4 ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು. ನಿನ್ನೆ ಅಪ್ಪ,ಕಿರಾಣಿ ವರ್ತಕರ ಸಂಘದ ಕಾರ್ಯದರ್ಶಿಯಾಗಿದ್ದ ರವೀಂದ್ರನಾಥ ನಿಧನರಾಗಿದ್ದರೆ ಇಂದು ಮಗ ಮೃತಪಟ್ಟಿದ್ದಾರೆ. ಕುಟುಂಬದ ಇನ್ನೂ ಇಬ್ಬರಿಗೆ ಕೊರೊನಾ ಹಿನ್ನೆಲೆ ವಸ್ತ್ರದ್ ಕುಟುಂಬದಲ್ಲಿ ಆತಂಕ ಮನೆ ಮಾಡಿದೆ.
ಮನೆಮಂದಿಗೆಲ್ಲಾ ಕೊರೊನಾ ಹರಡಬಹುದು ಅನ್ನೋ ಭೀತಿಯಲ್ಲಿ ಅಧಿಕಾರಿ ಆತ್ಮಹತ್ಯೆ ಈ ಮಧ್ಯೆ ನಿವೃತ್ತ ಅಧಿಕಾರಿಯಬ್ಬರು ಕೊರೊನಾದಿಂದ ಕಂಗೆಟ್ಟು ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯೂ ನಡೆದಿದೆ. ನಿವೃತ್ತ ಉಪತಹಶೀಲ್ದಾರ್ ಸೋಮನಾಯಕ್ (72) ಆತ್ಮಹತ್ಯೆ ಮಾಡಿಕೊಂಡವರು. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಬೇಲೇನಹಳ್ಳಿ ತಾಂಡಾ ಬಳಿ ಕಾರಿನಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೊರೊನಾ ಹಿನ್ನೆಲೆ ಗನ್‌ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮನೆಮಂದಿಗೆಲ್ಲಾ ಕೊರೊನಾ ಹರಡಬಹುದು ಅನ್ನೋ ಭೀತಿಯಲ್ಲಿ ಅಧಿಕಾರಿ ಆತ್ಮಹತ್ಯೆ, ಡೆತ್ ನೋಟ್
ಡೆತ್ ನೋಟ್ ಬರೆದಿಟ್ಟು ತೋಟದಲ್ಲಿ ಕಾರಿನಲ್ಲಿ ಕುಳಿತು ತಲೆಗೆ ಶೂಟ್ ಮಾಡಿಕೊಂಡು ಸೋಮನಾಯಕ್ ಸೂಸೈಡ್ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ನಡೆದಿದೆ. ಮನೆಮಂದಿಗೆಲ್ಲಾ ಕೊರೊನಾ ಹರಡಬಹುದು ಅನ್ನೋ ಭಯದಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ತರೀಕೆರೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.