ಕಣ್ಣೀರಲ್ಲಿ ಕೈ ತೊಳೆಯುತ್ತಿರುವ ತುಮಕೂರಿನ ಶಿಕ್ಷಕರ ಕುಟುಂಬ: ಪರಿಹಾರಕ್ಕೆ ಆಗ್ರಹ
ಕೊರೊನಾ ವೇಳೆಯಲ್ಲೂ ಮಕ್ಕಳಿಗೆ ಪಾಠಮಾಡುವ ಶಿಕ್ಷಕ ವೃಂದವನ್ನು ಕೊರೊನಾ ವಾರಿಯರ್ಸ್ ಎಂದು ಪರಿಗಣಿಸಿ ವಿಮೆ ಮಾಡಿಸಬೇಕು. ಪರಿಹಾರ ಮೊತ್ತ 30 ಲಕ್ಷ ರೂ. ಕೊಡಬೇಕು ಎಂದು ರಾಜ್ಯಾದ್ಯಂತ ಒತ್ತಾಯವಾಗಿತ್ತು. ಆದರೆ ಸರ್ಕಾರ ಮೃತ ಬಡ ಶಿಕ್ಷಕ ಕುಟುಂಬ ಮನವಿಗೆ ಸ್ಪಂಧಿಸಿಲ್ಲ.
ತುಮಕೂರು: ಶಿಕ್ಷಣ ಇಲಾಖೆ ಹೊರಡಿಸಿರುವ ವಿದ್ಯಾಗಮ ಯೋಜನೆಯಲ್ಲಿ ಪಾಲ್ಗೊಂಡು ಕೊರೊನಾ ಸೋಂಕಿಗೆ ತುತ್ತಾದ ಶಿಕ್ಷಕರನ್ನು ಕೊರೊನಾ ವಾರಿಯರ್ಸ್ ಎಂದು ಪರಿಗಣಿಸಲು ಆಗುವುದಿಲ್ಲ ಎಂದು ಶಿಕ್ಷಣ ಇಲಾಖೆ ಕಡ್ಡಿಮುರಿದಂತೆ ಹೇಳಿದೆ. ಈ ಮೂಲಕ ಮೃತಪಟ್ಟ ಹಲವಾರು ಶಿಕ್ಷಕ ಕುಟುಂಬಕ್ಕೆ ಸರ್ಕಾರ ಮರ್ಮಾಘಾತ ಕೊಟ್ಟಿದೆ. ಪರಿಹಾರ ನೀಡುವಂತೆ ಮನವಿ ಮಾಡಿದ್ದ ತುಮಕೂರಿನ ಜನಪನಹಳ್ಳಿ ಶಾಲೆಯ ಶಿಕ್ಷಕ ಶಿವಕುಮಾರ್ ಕುಟುಂಬದ ಅರ್ಜಿಯನ್ನು ಶಿಕ್ಷಣ ಇಲಾಖೆ ತಳ್ಳಿ ಹಾಕಿದೆ. ಇದರಿಂದ ಮೃತ ಶಿಕ್ಷಕ ಶಿವಕುಮಾರ್ ಕುಟುಂಬ ಕಣ್ಣೀರಲ್ಲಿ ಕೈ ತೊಳೆಯುವಂತೆ ಆಗಿದೆ.
ವಿದ್ಯಾಗಮ ಯೋಜನೆಯಿಂದಾಗಿ ರಾಜ್ಯದ ಹಲವಾರು ಶಿಕ್ಷಕರು ಕೊರೊನಾ ಸೋಂಕಿಗೆ ತುತ್ತಾಗಿ ಮೃತಪಟ್ಟಿದ್ದರು. ಇದು ರಾಜ್ಯ ಮಟ್ಟದಲ್ಲಿ ಸುದ್ದಿಯಾಗುತಿದ್ದಂತೆ ವಿದ್ಯಾಗಮ ಯೋಜನೆಯನ್ನು ಸರ್ಕಾರ ನಿಲ್ಲಿಸಿತ್ತು. ಕೊರೊನಾ ವೇಳೆಯಲ್ಲೂ ಮಕ್ಕಳಿಗೆ ಪಾಠಮಾಡುವ ಶಿಕ್ಷಕ ವೃಂದವನ್ನು ಕೊರೊನಾ ವಾರಿಯರ್ಸ್ ಎಂದು ಪರಿಗಣಿಸಿ ವಿಮೆ ಮಾಡಿಸಬೇಕು. ಪರಿಹಾರ ಮೊತ್ತ 30 ಲಕ್ಷ ರೂಪಾಯಿ ಕೊಡಬೇಕು ಎಂದು ರಾಜ್ಯಾದ್ಯಂತ ಒತ್ತಾಯವಾಗಿತ್ತು. ಆದರೆ ಸರ್ಕಾರ ಮೃತ ಬಡ ಶಿಕ್ಷಕ ಕುಟುಂಬದ ಮನವಿಗೆ ಸ್ಪಂಧಿಸಿಲ್ಲ.
ತುಮಕೂರಿನ ಜನಪನಹಳ್ಳಿ ಶಾಲೆಯ ಶಿಕ್ಷಕ ಶಿವಕುಮಾರ್ ವಿದ್ಯಾಗಮ ಕಾರ್ಯಕ್ರಮದಡಿ ಪಾಠ ಮಾಡುತಿದ್ದರು. ಸೆಪ್ಟೆಂಬರ್ 23 ರಂದು ಕೊರೊನಾದಿಂದ ಸಾವನಪ್ಪಿದ್ದರು. ಹಾಗಾಗಿ ತಮ್ಮ ಪತಿಯನ್ನು ಕೊರೊನಾ ವಾರಿಯರ್ಸ್ ಎಂದು ಪರಿಗಣಿಸಿ ಕುಟುಂಬಕ್ಕೆ ಪರಿಹಾರ ಕೊಡಬೇಕು ಎಂದು ಶಿವಕುಮಾರ್ ಪತ್ನಿ ನಿರ್ಮಲಾ ಸರ್ಕಾರಕ್ಕೆ ಮನವಿ ಮಾಡಿದ್ದರು. ಆದರೆ ಶಿಕ್ಷಣ ಇಲಾಖೆ ಇವರ ಮನವಿಯನ್ನು ತಿರಸ್ಕರಿಸಿ, ಕೊರೊನಾ ವಾರಿಯರ್ಸ್ ಎಂದು ಪರಿಗಣಿಸಲು ಸಾಧ್ಯವಿಲ್ಲ. ಹಾಗಾಗಿ ಪರಿಹಾರವನ್ನೂ ನೀಡಲು ಆಗುವುದಿಲ್ಲ ಎಂದು ಹಿಂಬರಹ ನೀಡಿದೆ.
ಪ್ರತಿಭಟನೆಯ ಎಚ್ಚರ
ಇನ್ನೂ ಶಿಕ್ಷಣ ಇಲಾಖೆಯ ಪತ್ರದಿಂದ ಮೃತ ಶಿಕ್ಷಕ ಶಿವಕುಮಾರ್ ಕುಟುಂಬ ಕಂಗಾಲಾಗಿದೆ. ಒಬ್ಬ ಬುದ್ಧಿ ಮಾಂದ್ಯ ಮಗ, ಮಗಳು ಹಾಗೂ ಕುಟುಂಬದವರ ಇತರ ಸದಸ್ಯರ ಪೋಷಣೆ ಹೇಗೆ ಮಾಡುವುದು ಎಂದು ಶಿವಕುಮಾರ್ ಪತ್ನಿ ಅಳಲು ತೋಡಿಕೊಂಡಿದ್ದಾರೆ. ಕೊರೊನಾ ಇದ್ದರೂ ಸರ್ಕಾರ ವಿದ್ಯಾಗಮ ಆರಂಭಿಸಿ ತಮ್ಮ ಪತಿಯ ಪ್ರಾಣ ತೆಗೆದುಕೊಂಡಿದೆ. ಪರಿಣಾಮ ನಮ್ಮ ಕುಟುಂಬದ ನಿರ್ವಹಣೆ ಕಷ್ಟಸಾಧ್ಯವಾಗಿದೆ. ಇದೇ ಪರಿಸ್ಥಿತಿ ರಾಜ್ಯದ ಹಲವು ಕುಟುಂಬಕ್ಕೆ ಬಂದಿದೆ. ಸರ್ಕಾರ ಪರಿಹಾರ ಕೊಟ್ಟು ನೆರವಿಗೆ ಬರಬೇಕು ಎಂದು ಒತ್ತಾಯಿಸಿದ್ದಾರೆ.
ಇನ್ನೂ ಸರ್ಕಾರದ ಈ ನಿರ್ಧಾರದಿಂದಾಗಿ ಪರಿಹಾರಕ್ಕಾಗಿ ಕಾಯುತಿದ್ದ ಶಿಕ್ಷಕರ ಕುಟುಂಬ ಕಂಗಾಲಾಗಿದ್ದು, ಪರಿಹಾರ ನೀಡದೆಯಿದ್ದರೆ ರಾಜ್ಯದ ಎಲ್ಲ ಮೃತ ಶಿಕ್ಷಕರ ಕುಟುಂಬದವರು ಸೇರಿ ಪ್ರತಿಭಟಿಸುವ ಎಚ್ಚರಿಕೆಯನ್ನು ಕೊಟ್ಟಿದ್ದಾರೆ.
ಇದನ್ನೂ ಓದಿ
ಬಾಲಿವುಡ್ ನಟ ರಣಬೀರ್ ಕಪೂರ್ಗೆ ಕೊರೊನಾ ಪಾಸಿಟಿವ್; ಹೋಮ್ ಕ್ವಾರಂಟೈನ್ನಲ್ಲಿ ಇದ್ದಾರೆ ಎಂದ ನೀತು ಕಪೂರ್
ತಿರುಪತಿ ನೆಂಟ ತಂದ ಗಂಡಾಂತರ: ಥಣಿಸಂದ್ರದ ಒಂದೇ ಕುಟುಂಬದ 6 ಮಂದಿಗೆ ಕೊರೊನಾ
Published On - 1:21 pm, Wed, 10 March 21