ಲಿಂಕ್ ಒತ್ತಿ ಬೆಂಗಳೂರಿನ ಆಸ್ಪತ್ರೆಗಳಲ್ಲಿ ಖಾಲಿಯಿರುವ ಬೆಡ್ಗಳ ಬಗ್ಗೆ ಮಾಹಿತಿ ಪಡೆಯಿರಿ
ಈ ಪೋರ್ಟಲ್ ಪ್ರತಿ 2 ನಿಮಿಷಗಳಿಗೊಮ್ಮೆ ನವೀಕರಣಗೊಳ್ಳುತ್ತಿರುತ್ತದೆ. ಅಂದರೆ ಪ್ರತಿ 2 ನಿಮಿಷಗಳಿಗೊಮ್ಮೆ ನಗರದ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಖಾಲಿ ಇರುವ ಬೆಡ್ಗಳ ಬಗ್ಗೆ ಮಾಹಿತಿ ನೀಡುತ್ತದೆ.
ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರು ಎದುರಿಸುತ್ತಿದ್ದ ಬೆಡ್ ಕೊರತೆಯನ್ನು ನೀಗಿಸಲು ಬಿಜೆಪಿ ಎಂ.ಪಿ ತೇಜಸ್ವಿ ಸೂರ್ಯ ಮುಂದಾಳತ್ವವಹಿಸಿ ಸೋಂಕಿತರಿಗೆ ಸಹಾಯವಾಗುವಂತಹ ಕೆಲಸವೊಂದನ್ನು ಮಾಡಿದ್ದಾರೆ. ತೇಜಸ್ವಿ ಸೂರ್ಯ ಹಾಗೂ ತಂಡ ಒಂದು ಪೋರ್ಟಲ್ ಅಭಿವೃದ್ಧಿಪಡಿಸಿದ್ದು, ಈ ಲಿಂಕ್ (www.covidblr.info) ಒತ್ತಿದ ಕೂಡಲೇ ನಿಮಗೆ ಬೆಂಗಳೂರಿನ ಎಲ್ಲಾ ಆಸ್ಪತ್ರೆಗಳಲ್ಲಿ ಖಾಲಿಯಿರುವ ಹಾಸಿಗೆಗಳ ಬಗ್ಗೆ ಮಾಹಿತಿ ಸಿಗಲಿದೆ. ಇದರಿಂದ ಸೋಂಕಿತರು ಆಸ್ಪತ್ರೆ ಸೇರಬೇಕೆಂದರೆ ತಕ್ಷಣವೇ ಈ ಲಿಂಕ್ ಮುಖಾಂತರ ಆಸ್ಪತ್ರೆಗಳಲ್ಲಿ ಖಾಲಿಯಿರುವ ಹಾಸಿಗೆಗೆಳ ಬಗ್ಗೆ ವಿವರಗಳನ್ನು ತಿಳಿದುಕೊಳ್ಳಬಹುದು. ಸದ್ಯ ಈಗ ತೇಜಸ್ವಿ ಸೂರ್ಯ ಮತ್ತು ತಂಡ ಅಭಿವೃದ್ಧಿಪಡಿಸಿದ ಈ ಪೋರ್ಟೆಲ್ ಅನ್ನು ಬಿಬಿಎಂಪಿ ನಿರ್ವಹಣೆ ಮಾಡುತ್ತಿದೆ.
ರಾಜ್ಯದಲ್ಲಿ ದಿನೇದಿನೇ ಕೊರೊನಾ ಪ್ರಕರಣಗಳು ಹೆಚ್ಚುತ್ತಿವೆ ಇದರಿಂದ ಸೋಂಕಿತರಿಗೆ ಸರಿಯಾದ ಚಿಕಿತ್ಸೆ ಸಿಗದೆ ಸಾವನ್ನಪ್ಪುತ್ತಿದ್ದಾರೆ. ಈ ವಿಚಾರದಲ್ಲಿ ರಾಜ್ಯ ರಾಜಧಾನಿಯ ಸ್ಥಿತಿಯನ್ನು ಹೇಳತೀರದಾಗಿದೆ. ರಾಜ್ಯದಲ್ಲಿ ಪ್ರತಿದಿನ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳಲ್ಲಿ ಬೆಂಗಳೂರಿನದ್ದೆ ಸಿಂಹಪಾಲಿದೆ. ಹೀಗಾಗಿ ರಾಜಧಾನಿಯಲ್ಲಿ ಸೋಂಕಿಗೀಡಾಗುವ ಜನರು ಸರಿಯಾದ ಸಮಯಕ್ಕೆ ಆಸ್ಪತ್ರೆಗಳಲ್ಲಿ ಬೆಡ್ ಸಿಗದೆ, ಬೆಡ್ ಸಿಕ್ಕರೂ ಆಕ್ಸಿಜನ್ ವ್ಯವಸ್ಥೆ ದೊರಕದೆ ಸಾವನ್ನಪ್ಪುತ್ತಿದ್ದಾರೆ. ಹೀಗಾಗಿ ಸಾರ್ವಜನಿಕರಿಂದ ಆಸ್ಪತ್ರೆಗಳಲ್ಲಿ ಬೆಡ್ ಸ್ಕ್ಯಾಮ್ ನಡೆಯುತ್ತಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ಇದಕ್ಕೆ ಸಾಕ್ಷಿ ಎಂಬಂತೆ ಬಿಜೆಪಿ ಎಂಪಿ ತೇಜಸ್ವಿ ಸೂರ್ಯ ಬೆಂಗಳೂರಿನಲ್ಲಿ ನಡೆಯುತ್ತಿರುವ ಬೆಡ್ ಸ್ಕ್ಯಾಮ್ ಅನ್ನು ಬಯಲಿಗೆಳಿದಿದ್ದರು.
ಆದರೆ ತೇಜಸ್ವಿಯವರು ಅಂದು ಪ್ರಕರಣವನ್ನು ಬಯಲಿಗೆಳೆಯುವ ಸಂದರ್ಭದಲ್ಲಿ ಕೇವಲ ಒಂದು ಧರ್ಮದ ಜನರ ಹೆಸರನ್ನು ಮಾತ್ರ ಹೇಳಿದ್ದಾರೆ ಎಂದು ಈ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿತ್ತು. ಇದರಿಂದ ಪ್ರತಿಪಕ್ಷಗಳು ತೇಜಸ್ವಿ ಸೂರ್ಯ ಅವರನ್ನು ಗುರಿಯಾಗಿಸಿಕೊಂಡು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದವು. ಆದರೆ ಈಗ ತೇಜಸ್ವಿ ಸೂರ್ಯ ಹಾಗೂ ಅವರ ತಂಡ ಬೆಂಗಳೂರಿನ ಸೋಂಕಿತರಿಗೆ ನೆರವಾಗಲೆಂದು ಪೋರ್ಟಲ್ ಒಂದನ್ನು ಅಭಿವೃದ್ಧಿ ಪಡಿಸಿದ್ದು ಈ ಮೂಲಕ ಸೋಂಕಿತರು ಕೂಡಲೇ ಆಸ್ಪತ್ರೆಗಳಲ್ಲಿ ಖಾಲಿಯಿರುವ ಬೆಡ್ಗಳ ಬಗ್ಗೆ ಮಾಹಿತಿ ಪಡೆಯಬಹುದಾಗಿದೆ.
ಪೋರ್ಟಲ್ ಬಗೆಗಿನ ವಿವರಗಳು ಈ ಪೋರ್ಟಲ್ ಪ್ರತಿ 2 ನಿಮಿಷಗಳಿಗೊಮ್ಮೆ ನವೀಕರಣಗೊಳ್ಳುತ್ತಿರುತ್ತದೆ. ಅಂದರೆ ಪ್ರತಿ 2 ನಿಮಿಷಗಳಿಗೊಮ್ಮೆ ನಗರದ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಖಾಲಿ ಇರುವ ಬೆಡ್ಗಳ ಬಗ್ಗೆ ಮಾಹಿತಿ ನೀಡುತ್ತದೆ. ಜೊತೆಗೆ ಎಷ್ಟು ಜನರಲ್ ಬೆಡ್ಗಳಿವೆ, ಎಷ್ಟು ಆಕ್ಸಿಜನ್ ಸಹಿತ ಬೆಡ್ಗಳಿವೆ ಎಂಬುದನ್ನು ಈ ಲಿಂಕ್ನಲ್ಲಿ www.covidblr.info ನೀವು ತಿಳಿಯಬಹುದಾಗಿದೆ. ಈ ಮೂಲಕ ಬೆಂಗಳೂರಿನ ನಾಗರೀಕರು ತಮಗೆ ಅವಶ್ಯಕವಿರುವ ಬೆಡ್ಗಳಿಗೆ ಅನುಗುಣವಾಗಿ ಆಸ್ಪತ್ರೆಗಳಿಗೆ ಹೋಗಬಹುದಾಗಿದೆ. ಆದರೆ ಈ ಪೋರ್ಟಲ್ ಕೇವಲ ಬೆಂಗಳೂರಿಗರಿಗೆ ಮಾತ್ರ ಸೀಮಿತವಾಗಿದೆ.
Published On - 9:14 pm, Sun, 16 May 21