16 ಜನರ ಮೇಲೆ ಅಪರಾಧ ಹೊರಿಸಿದ್ದು ನಾನಲ್ಲ; ಅವರನ್ನು ಬಿಬಿಎಂಪಿ ಮೊದಲೇ ಕೆಲಸದಿಂದ ತೆಗೆದಿತ್ತು- ಸಂಸದ ತೇಜಸ್ವಿ ಸೂರ್ಯ

16 ಜನರ ಮೇಲೆ ಅಪರಾಧ ಹೊರಿಸಿದ್ದು ನಾನಲ್ಲ; ಅವರನ್ನು ಬಿಬಿಎಂಪಿ ಮೊದಲೇ ಕೆಲಸದಿಂದ ತೆಗೆದಿತ್ತು- ಸಂಸದ ತೇಜಸ್ವಿ ಸೂರ್ಯ
ತೇಜಸ್ವಿ ಸೂರ್ಯ

Tejasvi surya On BBMP Bed Scam: ನಾನು ಈ ಮುನ್ನ ಘೋಷಣೆ ಮಾಡಿದಂತೆಯೇ ನೂರು ಗಂಟೆಗಳಲ್ಲಿ ಬಿಬಿಎಂಪಿ ಬೆಡ್ ಹಂಚಿಕೆ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ಮಾಡಿದ್ದೇವೆ ಎಂದು ಅವರು ತಿಳಿಸಿದರು.

guruganesh bhat

|

May 10, 2021 | 6:01 PM

ಬೆಂಗಳೂರು: ನಾವು ಮೇ 6ರಂದು 16 ಜನರ ಹೆಸರನ್ನು ಓದುವ ಮುನ್ನವೇ ಬಿಬಿಎಂಪಿ ಮತ್ತು ಏಜೆನ್ಸಿಯವರೇ ಆ ಹದಿನಾರು ಜನರನ್ನು ಕೆಲದಿಂದ ತೆಗೆದಿದ್ದರು. ನಾವು ಹೋಗುವ ಮುನ್ನವೇ ಆ 16 ಜನರನ್ನು ಕೆಲಸದಿಂದ ತೆಗೆದಿದ್ದರು. ಈ ಕುರಿತು ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ಅವರೇ ಇದನ್ನು ಖಚಿತಪಡಿಸಿದ್ದರು. ನಾವು ಒಂದು ಸಮುದಾಯದ 16 ಜನರ ಹೆಸರನ್ನು ಮಾತ್ರ ಓದಿದ್ದೇವೆ ಎಂದು ನನ್ನ ವಿರುದ್ಧ ಷಡ್ಯಂತ್ರ ನಡೆಸಲಾಯಿತು. ಆದರೆ ಆ 16 ಜನರ ಹೆಸರಿರುವ ಲಿಸ್ಟ್​ನ್ನು ಓರ್ವ ಉನ್ನತ ಅಧಿಕಾರಿ ಕೊಟ್ಟು ಆ ವ್ಯಕ್ತಿಗಳನ್ನು ಕೆಲಸದಿಂದ ತೆಗೆದಿದ್ದೇವೆ ಎಂದು ಹೇಳಿದರು. ನಾನು ಆ ಲಿಸ್ಟ್​ನ್ನು ನೋಡಿ ಅವರ ಹೆಸರನ್ನು ಓದಿದ್ದೇನೆ. ಬೆಡ್ ಹಂಚಿಕೆ ಅವ್ಯವಸ್ಥೆಯ ವಿರುದ್ಧ ಹೋರಾಡಿದ ನನ್ನ ವಿರುದ್ಧ ಕಾಂಗ್ರೆಸ್ ಮತ್ತು ಕೆಲವು ಬುದ್ಧಿಜೀವಿಗಳು ಷಡ್ಯಂತ್ರ ನಡೆಸಿ ಅಪಪ್ರಚಾರ ನಡೆಸಿದರು ಎಂದು ಸಂಸದ ತೇಜಸ್ವಿ ಸೂರ್ಯ ಪತ್ರಿಕಾಗೋಷ್ಠಿ ನಡೆಸಿ ತಿಳಿಸಿದರು.

ನಾನು ಈ ಮುನ್ನ ಘೋಷಣೆ ಮಾಡಿದಂತೆಯೇ ನೂರು ಗಂಟೆಗಳಲ್ಲಿ ಬಿಬಿಎಂಪಿ ಬೆಡ್ ಹಂಚಿಕೆ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ಮಾಡಿದ್ದೇವೆ. ಯಾರ ಹೆಸರಲ್ಲಿ ಬೆಡ್ ಬುಕ್ ಆಗುತ್ತೋ ಅವರ ಮೊಬೈಲ್​ಗೆ ಆಟೋಮ್ಯಾಟಿಕ್ ಆಗಿ ಮೆಸೇಜ್ ಬರುತ್ತೆ. ಮೆಸೇಜ್​ನಲ್ಲಿ ಯಾವ ಆಸ್ಪತ್ರೆ, ಬೆಡ್ ಆಸ್ಪತ್ರೆ ಮತ್ತು ಅಗತ್ಯ ದಾಖಲಾತಿಗಳ ವಿವರ ಇರುತ್ತೆ. ಇದೇ ಮೆಸೇಜ್ ಇನ್ನು ಎರಡು ದಿನಗಳಲ್ಲಿ ಆಸ್ಪತ್ರೆಯ ನೋಡಲ್ ಅಧಿಕಾರಿಗೂ ಬರುತ್ತೆ. ಇದರಿಂದ ಬೆಡ್ ಇಲ್ಲ ಎನ್ನುವ ಸಮಸ್ಯೆ ಬಗೆಹರಿಯಲಿದೆ ಎಂದು ತಿಳಿಸಿದರು.

ಸಂಸದ ತೇಜಸ್ವಿ ಸೂರ್ಯ ಸುದ್ದಿಗೋಷ್ಠಿಯಲ್ಲಿ ಹೇಳಿದ ಪ್ರಮುಖ ಅಂಶಗಳು

1). ಈ 16 ಜನಕ್ಕೆ ಪೊಲೀಸರು ಕ್ಲೀನ್​ಚಿಟ್ ಕೊಟ್ಟಿದ್ದಾರೆ ಎಂದು ಸುದ್ದಿ ಹರಡಲಾಯಿತು. ಆದರೆ ನಾವು ಆ ವ್ಯಕ್ತಿಗಳ ವಿರುದ್ಧ ಯಾವುದೇ ಆರೋಪ ಮಾಡಿರಲಿಲ್ಲ.

2). ನಾವು ಒಂದು ಸಮುದಾಯವನ್ನು ಟಾರ್ಗೆಟ್ ಮಾಡಲು ಈ ಕೆಲಸ ಮಾಡಲಿಲ್ಲ.ಆದರೆ ನಾನು ಕೋಮುವಾದ ಮಾಡಿದೆ ಎಂದು ಬಿಂಬಿಸಲಾಯಿತು. ಆ 16 ಜನರ ಮೇಲೆ ನಾವು ಯಾವುದೇ ಅಪರಾಧವನ್ನು ಹೋರಿಸಲಿಲ್ಲ. ಅವರನ್ನು ಕೆಲಸಕ್ಕೆ ಸೇರಿಸಿಕೊಳ್ಳುವುದು, ತೆಗೆಯುವುದು ನನಗೆ ಸಂಬಂಧವಿಲ್ಲದ್ದು, ಅದು ಬಿಬಿಎಂಪಿಯ ಕೆಲಸ.

3). ಇದಕ್ಕಿಂತಲೂ ಒಂದು ದಿನ ಮೊದಲು ಈ ದಂದೆಯ ಹಿಂದಿದ್ದ ರೋಹಿತ್ ಮತ್ತು ನೇತ್ರಾರ ಮಾಹಿತಿ ನೀಡಿ ನಾವೇ ಅವರ ಬಂಧನಕ್ಕೆ ಕಾರಣರಾಗಿದ್ದೆವು. ನಾವು ಈ ವಿಷಯದಲ್ಲಿ ಯಾವುದೇ ಕೋಮುವಾದ ಮಾಡಲೇ ಇಲ್ಲ ಎಂಬುದಕ್ಕೆ ಈ ವಿಷಯವೇ ಸಾಕು.

4). ನಾವು ಬಿಬಿಎಂಪಿ ವಾರ್​ರೂಂಗೆ ಹೋಗಿ ಕ್ಷಮೆ ಕೋರಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಲಾಯಿತು. ಆದರೆ ನಾನು ತಪ್ಪನ್ನೇ ಮಾಡದಿದ್ದಾಗ ಏಕೆ ಕ್ಷಮೆ ಕೋರಬೇಕು. ಕಾಂಗ್ರೆಸ್ ಮತ್ತು ಕೆಲವು ಬುದ್ಧಿಜೀವಿಗಳು ನಾನು ಕೆಟ್ಟ ವ್ಯವಸ್ಥೆಯನ್ನು ವಿರೋಧಿಸಿದ್ದರ ವಿರುದ್ಧ ಕೋಮುವಾದದ ಹಣೆಪಟ್ಟಿ ನೀಡಿದರು.

5). ನಾನು ಅಲ್ಲಿ ಕೆಲಸ ಮಾಡುವ ಹೆಣ್ಣುಮಕ್ಕಳು ನಮಗೆ ತೊಂದರೆ ಆಗುತ್ತಿದೆ ಎಂದದ್ದಕ್ಕಾಗಿ ಅವರಿಗೆ ಆಗುತ್ತಿರುವ ತೊಂದರೆ ನಿವಾರಿಸಲು ಸೂಚಿಸಿದೆ.

6). ಬಿಜೆಪಿಯವರೇ ಬಿಬಿಎಂಪಿ ಬೆಡ್ ಹಗರಣ ನಡೆಸುತ್ತಿದೆ ಎಂದು ಆರೋಪಿಸಲಾಯಿತು. ನಾನು ಯಾವುದೇ ಪಕ್ಷದವರು ಹಗರಣ ನಡೆಸಿದರೂ ಶಿಕ್ಷೆಯಾಗಲಿ ಎಂದೇ ಹೇಳುತ್ತೇನೆ. ಯಾರನ್ನೂ ರಕ್ಷಿಸುವುದಿಲ್ಲ.

7). ನನ್ನನ್ನು ಅಜ್ಮಲ್ ಕಸಬ್​ಗಿಂತ ದೊಡ್ಡ ಭಯೋತ್ಪಾದಕ ಎಂದು ಕರೆಯಲಾಯಿತು. ಈಮೂಲಕ ಬೆಡ್ ಹಂಚಿಕೆ ಹಗರಣವನ್ನು ಕೋಮುವಾದಕ್ಕೆ ತಿರುಗಿಸಲಾಯಿತು. ಆದರೆ ತಪ್ಪುಮಾಡಿದ ಆ 16 ಜನರ ಹೆಸರನ್ನು ನಾನು ಓದಿದ್ದು ಬಿಟ್ಟರೆ ಮತ್ತೇನೂ ಮಾಡಿರಲಿಲ್ಲ.

ಬೆಡ್ ಅಗತ್ಯವಿರುವವರಿಗೆ ಬೆಡ್ ನೀಡುವ ಸಮರ್ಪಕ ಪದ್ಧತಿ ಇರಲಿಲ್ಲ. ಇದರಿಂದ ಕೆಲವು ಹಣ ಮಾಡಿಕೊಳ್ಳುತ್ತಿದ್ದರು. ಮುಂದಿನ ನೂರು ಗಂಟೆಗಳಲ್ಲಿ ಬೆಡ್ ಅಗತ್ಯವಿದೆ ಎಂದು ಬಿಬಿಎಂಪಿಗೆ ಮನವಿ ಮಾಡಿದ ನಂತರ ನಿಮ್ಮ ಬಿಯು ಸಂಖ್ಯೆ ಸಾರ್ವಜನಿಕವಾಗಿ ಕ್ಯೂ ಪದ್ಧತಿಯಲ್ಲಿ ಬರಲಿದೆ. ಹೋಂ ಐಸೋಲೇಶನ್​ನಲ್ಲಿ ಇರುವವರಿಗೆ ಬೆಡ್ ಬುಕ್ ಮಾಡಲು ಆಗುವುದಿಲ್ಲ. ಹೋಂ ಐಸೋಲೇಶನ್​ನಿಂದ ಹೊರಬಂದು ವೈದ್ಯರಿಂದ ಬೆಡ್ ಅಗತ್ಯವಿದೆ ಎಂದು ಹೇಳಿದರೆ ಮಾತ್ರ ಬೆಡ್ ಸಿಗಲಿದೆ. ಡಿಸ್ವಾರ್ಚ್ ಆದವರ ಬಿಯು ಸಂಖ್ಯೆ ಬಳಸಿ ಬೆಡ್ ಪಡೆಯಲು ಆಗುವುದಿಲ್ಲ ಎಂದು ಅವರು ನೂತನ ಬದಲಾವಣೆಗಳನ್ನು ತಿಳಿಸಿದರು.

ಇದನ್ನೂ ಓದಿ: ಬೆಂಗಳೂರು ದಕ್ಷಿಣ ಭಾಗದವರು ಆಕ್ಸಿಜನ್ ಬೇಕಿದ್ದಲ್ಲಿ 080- 61914960ಕ್ಕೆ ಕರೆ ಮಾಡಿ: ಸಂಸದ ತೇಜಸ್ವಿ ಸೂರ್ಯ

ಕೋಮು ವೈಷಮ್ಯ ಆರೋಪ; ತೇಜಸ್ವಿ ಸೂರ್ಯ ಹಾಗೂ ಮೂವರು ಶಾಸಕರ ವಿರುದ್ಧ ಜೆಡಿಎಸ್​ ಯುವ ನಾಯಕಿಯಿಂದ ದೂರು

(Tejasvi Surya Bangalore South MP says that he did not alleging on culprits of Bangalore bed scam and Senior officer only dismissed them)

Follow us on

Related Stories

Most Read Stories

Click on your DTH Provider to Add TV9 Kannada