ಬೆಂಗಳೂರು: ಆರೋಗ್ಯ ಇಲಾಖೆಗೆ ಫುಲ್ ಟೆನ್ಶನ್ ಶುರುವಾಗಿದೆ. ಯಾಕಂದ್ರೆ ರಾಜ್ಯ ಸರ್ಕಾರ ಮೂರನೇ ಹಂತದ ಲಾಕ್ಡೌನ್ ಸಡಲಿಕೆ ಮಾಡಿದೆ. ಇದರಿಂದ ಜನರು ರಸ್ತೆಗಿಳೀತಿದ್ದಾರೆ. ಕೊರೊನಾ ಭೀತಿ ಇದ್ದರೂ ತಿರುಗಾಡುತ್ತಿದ್ದಾರೆ.
ಮದ್ಯದಂಗಡಿಗಳ ಮುಂದೆ ಅಂಗಡಿ ಮುಗ್ಗಟ್ಟುಗಳ ಮುಂದೆ ಸಾಮಾಜಿಕ ಅಂತರ ಮರೆತು ಖರೀದಿಗೆ ಮುಂದಾಗಿದ್ದಾರೆ. ಒಬ್ಬ ಕೊರೊನಾ ಸೋಂಕಿತನಿಂದ 30 ಜನರಿಗೆ ಸೋಂಕು ಹರಡುತ್ತೆ. ಹೀಗಾಗಿ ಕೊರೊನಾ ಸೋಂಕಿತರನ್ನ ಪತ್ತೆಹಚ್ಚಲು ಹರಸಾಹಸ ಮಾಡಬೇಕಾಗುತ್ತೆ.
ಇನ್ನು ಕೊರೊನಾ ಸಂಪೂರ್ಣ ನಿಯಂತ್ರಣಕ್ಕೆ ಬರದಿದ್ರೂ ಲಾಕ್ಡೌನ್ ಸಡಿಲಿಕೆ ಮಾಡಲಾಗಿದೆ. ಇದರಿಂದ ಸೋಂಕು ಸಮುದಾಯಕ್ಕೆ ಹರಡುತ್ತೇನೋ ಅನ್ನೋ ಭೀತಿ ಶುರುವಾಗಿದೆ. ಸಮುದಾಯಕ್ಕೆ ಹರಡಿದ್ರೆ ಮೆಡಿಕಲ್ ವಾರಿಯರ್ಸ್ ಮೇಲೆ ತೀವ್ರ ಒತ್ತಡ ಬೀಳಲಿದೆ.
ಈಗಾಗಲೇ ಕಳೆದೆರೆಡು ತಿಂಗಳಿಂದ ಹೆಲ್ತ್ ವಾರಿಯರ್ಸ್ ರೆಸ್ಟ್ ಮಾಡದೆ ಕೆಲಸ ಮಾಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ವೈದ್ಯರು, ನರ್ಸ್ಗಳ ಮೇಲೆ ಹೆಚ್ಚು ಒತ್ತಡ ಬಿದ್ರೆ ಸೋಂಕಿತರನ್ನ ಕಂಟ್ರೋಲ್ ಮಾಡೋದು ಕಷ್ಟ. ಸೋಂಕಿತರು ಹೆಚ್ಚಾದ್ರೆ ಸಾವು ನೋವುಗಳು ಕೂಡ ಹೆಚ್ಚಾಗುವ ಸಾಧ್ಯತೆ ಇದೆ.
ಇದೇ ರೀತಿ ಸಾಮಾಜಿಕ ಅಂತರ ಮರೆತು ಬೇಕಾಬಿಟ್ಟಿ ಮಾಸ್ಕ್ ಧರಿಸದೆ ಓಡಾಡಿದ್ರೆ ಅಪಾಯ ಕಟ್ಟಿಟ್ಟಬುತ್ತಿ. ಹೀಗಾಗಿ ಜನ ಯಾಮಾರಬೇಡಿ ಕೊರೊನಾ ಇನ್ನು ಮಾಯವಾಗಿಲ್ಲ ಎಂದು ಆರೋಗ್ಯ ಇಲಾಖೆಯ ಹಿರಿಯ ವೈದ್ಯರು ಎಚ್ಚರಿಸಿದ್ದಾರೆ.