7 ವರ್ಷಗಳ ಹಿಂದೆ ತೀವ್ರ ನಷ್ಟದ ಸುಳಿಗೆ ಸಿಲುಕಿದ್ದ ಬ್ಯಾಂಕ್​ ಇಂದು ದೇಶದಲ್ಲೇ ನಂಬರ್​ ಒನ್ !

| Updated By: Lakshmi Hegde

Updated on: Jan 31, 2021 | 3:56 PM

7 ವರ್ಷಗಳ ಹಿಂದೆ ನಷ್ಟದಲ್ಲಿದ್ದ ಕೋಲಾರದ ಡಿ.ಸಿ.ಸಿ ಬ್ಯಾಂಕ್ ಇಂದು ದೇಶದಲ್ಲೇ ನಂಬರ್​ ಒನ್​ ಬ್ಯಾಂಕ್​ ಆಗಿ ಎಲ್ಲಡೆ ಹೆಸರು ಪಡೆದಿದೆ.

7 ವರ್ಷಗಳ ಹಿಂದೆ ತೀವ್ರ ನಷ್ಟದ ಸುಳಿಗೆ ಸಿಲುಕಿದ್ದ ಬ್ಯಾಂಕ್​ ಇಂದು ದೇಶದಲ್ಲೇ ನಂಬರ್​ ಒನ್ !
ಕೋಲಾರ ಡಿ.ಸಿ.ಸಿ ಬ್ಯಾಂಕ್​
Follow us on

ಕೋಲಾರ: ಏಳು ವರ್ಷಗಳ ಹಿಂದೆ ನಷ್ಟದಿಂದ ಬೀಗಹಾಕಲು ಚಿಂತನೆ ನಡೆಸಿದ್ದ ಬ್ಯಾಂಕ್​ ಇಂದು ದೇಶದಲ್ಲೇ ನಂಬರ್​ ಒನ್ ಬ್ಯಾಂಕ್​ ಆಗಿ ಹೊರಹೊಮ್ಮಿದೆ. ನಷ್ಟದ ಸುಳಿಯಲ್ಲಿದ್ದ ಕೋಲಾರದ ಡಿಸಿಸಿ ಬ್ಯಾಂಕ್   ಒಮ್ಮೆ ಮೈಕೊಡವಿ ಎದ್ದು ನಿಂತ ಪರಿಣಾಮ, ಇಂದು ಹಲವು ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ದೇಶದಲ್ಲೇ ನಂಬರ್​ ಒನ್​ ಸ್ಥಾನ ಪಡೆದುಕೊಂಡಿದೆ.

ಮನೆ ಮನೆಗೆ ಮೈಕ್ರೋ ಎಟಿಎಂ, ಮೊಬೈಲ್​ ಎಟಿಎಂ, ಮಹಿಳಾ ಸ್ತ್ರೀಶಕ್ತಿ ಸಂಘಗಳಿಗೆ ಸಾವಿರಾರು ಕೋಟಿ ರೂಪಾಯಿ ಶೂನ್ಯ ಬಡ್ಡಿ ದರದಲ್ಲಿ ಸಾಲ ವಿತರಣೆ ಮಾಡುವುದು, ಬೀದಿ ಬದಿ ವ್ಯಾಪಾರಿಗಳಿಗೆ ಕೈ ಸಾಲ, ಹೀಗೆ ಒಂದಲ್ಲ ಎರಡಲ್ಲ ಹತ್ತಾರು ಯೋಜನೆಗಳನ್ನು ದೇಶದಲ್ಲೇ ಮೊದಲು ಜಾರಿಗೆ ತಂದ ಕೀರ್ತಿ ಕೋಲಾರದ ಡಿಸಿಸಿ ಬ್ಯಾಂಕ್​ಗೆ ಸಲ್ಲುತ್ತದೆ. ಪ್ರಚಲಿತ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ರೈತರ, ಮಹಿಳೆಯರ ಹಾಗೂ ಗ್ರಾಮೀಣ ಭಾಗದ ಜನಸ್ನೇಹಿಯಾಗಿ ದೇಶದಲ್ಲೇ ಹೆಸರು ಮಾಡಿದೆ.

ಬ್ಯಾಂಕೋ ಬ್ಲ್ಯೂ ರಿಬ್ಬನ್​-2020 ಅವಾರ್ಡ್​ ಪಡೆದ ಬ್ಯಾಂಕ್​
ಕಳೆದ ಏಳು ವರ್ಷಗಳಿಂದ ಹಣಕಾಸು, ಆಡಳಿತ, ತಾಂತ್ರಿಕತೆ, ಗಣಕೀಕರಣ, ಸಾಲ ವಸೂಲಾತಿಗೆ ವಿನೂತನ ಕ್ರಮ ಹೀಗೆ ಹಲವು ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಯಶಸ್ವಿಯಾದ ಬ್ಯಾಂಕ್  ಮಹಾರಾಷ್ಟ್ರದ ಎವಿಐಇಎಸ್ ಪಬ್ಲಿಕೇಷನ್ ಎನ್ನುವ ಸಂಸ್ಥೆ ನೀಡುವ ‘ಬ್ಯಾಂಕೋ ಬ್ಲ್ಯೂ ರಿಬನ್-2020′ ಪ್ರಶಸ್ತಿಯನ್ನು ಈ ಬಾರಿ ಕೋಲಾರ ಡಿಸಿಸಿ ಬ್ಯಾಂಕ್​ ತನ್ನದಾಗಿಸಿಕೊಂಡಿದೆ. ಇದಕ್ಕೂ ಮೊದಲು ದೇಶದಲ್ಲೆ ಮೊದಲ ಬಾರಿಗೆ ಕೋಲಾರ ಡಿಸಿಸಿ ಬ್ಯಾಂಕ್ ಮೊಬೈಲ್ ಎಟಿಎಂ ಜಾರಿಗೆ ತಂದಿತ್ತು. ಇತ್ತೀಚೆಗೆ ಮೊಬೈಲ್ ವ್ಯಾನ್ ಬ್ಯಾಂಕಿಂಗ್ ಸೇವೆಗಳನ್ನ ಆರಂಭ ಮಾಡಿತ್ತು. ಆ ಮೂಲಕ ವಿನೂತನ ಯೋಜನೆಗಳನ್ನ ಜನರಿಗೆ ತಲುಪಿಸಿ ಕೋಲಾರ ಚಿಕ್ಕಬಳ್ಳಾಪುರ ಅವಳಿ ಜಿಲ್ಲೆಯಲ್ಲಿ ಜನಸ್ನೇಹಿಯಾಗಿದ್ದ ಕೋಲಾರ ಡಿಸಿಸಿ ಬ್ಯಾಂಕ್ ಈಗ ಮತ್ತೊಂದು ಹೊಸ ಗರಿಮೆ ಸಿಕ್ಕಿದೆ.

ಏನಿದು ಬ್ಯಾಂಕೋ ಬ್ಲ್ಯೂ ರಿಬ್ಬನ್​ ಪ್ರಶಸ್ತಿ
ಮಹಾರಾಷ್ಟ್ರದ ಕೊಲ್ಲಾಪುರ ಮೂಲದ ಎವಿಐಇಎಸ್ ಪಬ್ಲಿಕೇಷನ್ ಎನ್ನುವ ಸಂಸ್ಥೆ ದೇಶದಲ್ಲಿರುವ ಎಲ್ಲಾ ತಾಲೂಕು ಮಟ್ಟದ ಹಾಗೂ ಜಿಲ್ಲಾ ಮಟ್ಟದ ಬ್ಯಾಂಕ್​ಗಳ ಕಾರ್ಯವೈಖರಿ ತಂತ್ರಜ್ಞಾನ ಅಳವಡಿಕೆ, ವಹಿವಾಟು, ಲಾಭ ಇದೆಲ್ಲದರ ಮಾಹಿತಿ ಪಡೆದುಕೊಂಡು ಈ ಪ್ರಶಸ್ತಿಯನ್ನು ನೀಡುತ್ತದೆ. 2018-19 ಹಾಗೂ 2019-20ನೇ ಸಾಲಿನಲ್ಲಿ ಬ್ಯಾಂಕಿನ ಹಣಕಾಸು ಪ್ರಗತಿ, ಆಡಳಿತ ಸಾಧನೆ, ತಾಂತ್ರಿಕತೆ, ಗಣಕೀಕರಣ ಅಂಶಗಳ ಆಧಾರದ ಮೇಲೆ ಈ ಬಾರಿ ಕೋಲಾರ ಡಿಸಿಸಿ ಬ್ಯಾಂಕ್​ಗೆ ದೇಶದ ನಂ-1 ಪಟ್ಟ ನೀಡಲಾಗಿದೆ. ಇನ್ನು ಈ ಪ್ರಶಸ್ತಿಯನ್ನು ಮಾರ್ಚ್​ ತಿಂಗಳಲ್ಲಿ ಮೈಸೂರಿನಲ್ಲಿ ನಡೆಯುವ ಬ್ಯಾಂಕೋ ಬ್ಲ್ಯೂ ರಿಬ್ಬನ್-2020 ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಬ್ಯಾಂಕ್​​ನ​ ಸಾಧನೆ
ಈ ಹಿಂದೆ ಕೋಲಾರ ಡಿಸಿಸಿ ಬ್ಯಾಂಕ್​ 44 ಕೋಟಿ ನಷ್ಟದಿಂದ ಹಾಗೂ ಶೇ.95 ರಷ್ಟು ಎನ್‌ಪಿಎನಿಂದಾಗಿ ಸಾಕಷ್ಟು ನಷ್ಟದ ಸುಳಿಗೆ ಸಿಲುಕ್ಕಿದ್ದ ಪರಿಣಾಮ ಬೆಂಗಳೂರು ಗ್ರಾಮಾಂತರ ಡಿಸಿಸಿ ಬ್ಯಾಂಕ್​ನೊಂದಿಗೆ ವಿಲೀನ ಮಾಡೋದಕ್ಕೆ ಚಿಂತನೆ ನಡೆಸಲಾಗಿತ್ತು. ಆದರೆ ಅಂದು ಒಂದು ಅವಕಾಶ ನೀಡಿ ಸಿದ್ದರಾಮಯ್ಯ ಸರ್ಕಾರದಲ್ಲಿ ಬ್ಯಾಂಕ್​ ಪುನಶ್ಚೇತನಕ್ಕೆ ನೆರವು ನೀಡಿದ್ದರು. ಅಂದಿನಿಂದ ಮತ್ತೆ ಮೈಕೊಡವಿ ನಿಂತ ಬ್ಯಾಂಕ್​ನಲ್ಲಿ ಸಾಧನೆಗಳ ಪಟ್ಟಿ ದೊಡ್ಡದಿದೆ. ಹಲವು ಸಾಧನೆಗಳ ಮೂಲಕ ಉತ್ತುಂಗಕ್ಕೇರಿದೆ. ಸದ್ಯ 7 ಕೋಟಿ ಲಾಭದಲ್ಲಿದೆ. ಜೊತೆಗೆ ಬ್ಯಾಂಕಿನ ಎನ್​ಪಿಎ ಕೂಡಾ ಶೇ.2 ರಷ್ಟಿದೆ.

ಇದು ಜನರು ನಮಗೆ ಕೊಟ್ಟ ಸಹಕಾರದಿಂದ ಮಾತ್ರ ಸಾಧ್ಯವಾಯಿತು. ಈ ಪ್ರಶಸ್ತಿ ನಮ್ಮ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಡಿಸಿಸಿ ಬ್ಯಾಂಕ್​ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದ ಗೌಡ  ಅಭಿಪ್ರಾಯ ಪಟ್ಟಿದ್ದಾರೆ.

ಡಿಸಿಸಿ ಬ್ಯಾಂಕ್ ಮೇಲೆ ಬಿಜೆಪಿ ಕಣ್ಣು, ಸಂಖ್ಯಾಬಲ ಇಲ್ಲದಿದ್ದರು ಕೂಡಾ ಅಧಿಕಾರದ ಗದ್ದುಗೆ ಏರಲು ಕಸರತ್ತು