AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈತ್ರಿ ಸರ್ಕಾರದಲ್ಲಿ ನಾನು ಕ್ಲರ್ಕ್‌ನಂತೆ ಇದ್ದೆ: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ

ಒಂದು ಕಡೆ ಸಿದ್ದರಾಮಯ್ಯ ಒತ್ತಡ ಇತ್ತು. ಇನ್ನೊಂದು ನೀರಾವರಿ ಹಳೆ ಯೋಜನೆ ಮುಂದುವರಿಸಲು ಒತ್ತಡವಿತ್ತು. ಹಾಗೆ ಮತ್ತೊಂದು ಕಡೆ ರೈತರ ಸಾಲಮನ್ನಾ ಬಗ್ಗೆ ಬಿಜೆಪಿಯವರಿಂದ ಒತ್ತಡವಿತ್ತು ಎಂದು ಹೆಚ್​ಡಿಕೆ ಹೇಳಿದ್ದಾರೆ.

ಮೈತ್ರಿ ಸರ್ಕಾರದಲ್ಲಿ ನಾನು ಕ್ಲರ್ಕ್‌ನಂತೆ ಇದ್ದೆ: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ
ಜೆಡಿಎಸ್ ಸಂಘಟನಾ ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ
preethi shettigar
| Edited By: |

Updated on: Jan 31, 2021 | 3:34 PM

Share

ಬಾಗಲಕೋಟೆ: ಕಾಂಗ್ರೆಸ್​ ಮೈತ್ರಿ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ನಿರಂತರವಾಗಿ ವಾಗ್ದಾಳಿ ನಡೆಸುತ್ತಲೇ ಇದ್ದಾರೆ. ಈಗ ಅವರು, ಮತ್ತೆ ಕಾಂಗ್ರೆಸ್​ ವಿರುದ್ಧ ಹರಿಹಾಯ್ದಿದಿದ್ದು, ಮೈತ್ರಿ ಸರ್ಕಾರದಲ್ಲಿ ನಾನು ಕ್ಲರ್ಕ್‌ನಂತೆ ಇದ್ದೆ ಎಂದಿದ್ದಾರೆ.

ಜಿಲ್ಲೆಯ ನವನಗರದ ಕಾಳಿದಾಸ‌ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಜೆಡಿಎಸ್ ಸಂಘಟನಾ ಸಮಾವೇಶಕ್ಕೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಭೇಟಿ ನೀಡಿದ್ದರು. ಉತ್ತರ ಕರ್ನಾಟಕ ಭಾಗದಲ್ಲಿ ಪಕ್ಷ ಸಂಘಟಿಸುವ ಸಲುವಾಗಿ ಕೋವಿಡ್ ಬಳಿಕ ಬಾಗಲಕೋಟೆಯಲ್ಲಿ ಮೊದಲ‌ ಬಾರಿಗೆ ಜೆಡಿಎಸ್ ಸಂಘಟನಾ ಸಮಾವೇಶ ನಡೆಯುತ್ತಿದ್ದು, ಸಮಾವೇಶದಲ್ಲಿ‌‌ ಮಾಜಿ ಸಚಿವ ಬಸವರಾಜ ಹೊರಟ್ಟಿ, ಬಂಡೆಪ್ಪ ಕಾಶಂಪೂರ್,ಮಾಜಿ ಶಾಸಕ ಕೋಣರೆಡ್ಡಿ, ಬಾಗಲಕೋಟೆ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಹನಮಂತ ಮಾವಿನಮರ ಸೇರಿದಂತೆ ರಾಜ್ಯ ಹಾಗೂ ಜಿಲ್ಲಾ ಮಟ್ಟದ ನಾಯಕರು, ಜಿಲ್ಲೆಯ ವಿವಿಧ ತಾಲೂಕುಗಳ‌ ಕಾರ್ಯಕರ್ತರು ಭಾಗಿಯಾಗಿದ್ದಾರೆ.

ಈ ಸಮಾವೇಶದಲ್ಲಿ ಬಿಜೆಪಿ ಶಾಸಕ ಯತ್ನಾಳ್ ಸಿಡಿ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ, ಯತ್ನಾಳ್ ಸಿಡಿಯಲ್ಲಿ ನಾನು ಪಾಲುದಾರನಲ್ಲ‌‌. ಯುಕೆಪಿಗೆ ಹಣ ನೀಡುವ ವಿಚಾರದಲ್ಲಿ ನಾನು ಏಕೆ ಕೆಲಸ ಮಾಡಲಿಲ್ಲ ಎಂದು ನೀವು ಕೇಳಬಹುದು. ಮೈತ್ರಿ ಸರ್ಕಾರದಲ್ಲಿ ನಾನು ಕ್ಲರ್ಕ್‌ನಂತೆ ಇದ್ದೆ. ಮೈತ್ರಿ ಸರ್ಕಾರದಲ್ಲಿ ನನಗೆ ಪೂರ್ಣ ಸ್ವಾತಂತ್ರ್ಯವಿರಲಿಲ್ಲ. ನಾನು ನಿರ್ಧಾರ ತೆಗೆದುಕೊಳ್ಳಲು ಆಗಿರಲಿಲ್ಲ ಎಂದು ಹೇಳಿದರು.

ಒಂದು ಕಡೆ ಸಿದ್ದರಾಮಯ್ಯ ಒತ್ತಡ ಇತ್ತು. ಇನ್ನೊಂದು ನೀರಾವರಿ ಹಳೆ ಯೋಜನೆ ಮುಂದುವರಿಸಬೇಕಿತ್ತು. ಹಾಗೆ ಮತ್ತೊಂದು ಕಡೆ ರೈತರ ಸಾಲಮನ್ನಾ ಬಗ್ಗೆ ಬಿಜೆಪಿಯವರು ಒತ್ತಡ ಹೇರುತ್ತಿದ್ದರು. ಸಾಲ‌ಮನ್ನಾ ಮಾಡದೆ ಟೋಪಿ ಹಾಕುತ್ತಿದ್ದೀರಿ ಎಂದು ಬಿಜೆಪಿಯವರು ಹೇಳುತ್ತಿದ್ದರು ಎಂದು ಹೆಚ್​ಡಿಕೆ ತಿಳಿಸಿದರು.

ಗೊಂದಲಿಗರ ಹಾಡಿನೊಂದಿಗೆ ಹೆಚ್​.ಡಿ.ಕುಮಾರಸ್ವಾಮಿ ಅವರನ್ನು ಸ್ವಾಗತಿಸುತ್ತಿರುವ ದೃಶ್ಯ

ನಮ್ಮದು ಡಬಲ್ ಇಂಜಿನ್ ಸರ್ಕಾರ ಎಂದು ಬಿಜೆಪಿಯವರು ಹೇಳುತ್ತಾರೆ. ಮೋದಿ ಒಂದು ಇಂಜಿನ್ ಆದರೆ ಯಡಿಯೂರಪ್ಪ ಇನ್ನೊಂದು ಇಂಜಿನ್ ಅಂತೆ. ಆದರೆ ಡಬಲ್ ಇಂಜಿನ್ ಇಟ್ಟುಕೊಂಡು ಏಕೆ ಕೆಲಸ ಆಗುತ್ತಿಲ್ಲ. ಇಂಜಿನ್​ಗಳ ಬೋಗಿಗಳು ಏಕೆ ಎಲ್ಲೆಲ್ಲೋ ಹೋಗಿಬಿಟ್ಟಿವೆ. ಬರಿ ಇಂಜಿನ್ ಮಾತ್ರ ಇವೆ ಬೋಗಿಗಳಿಲ್ಲ. ಬರಿ ಇಂಜಿನ್ ಇಟ್ಟುಕೊಂಡು ಏನು ಮಾಡುವುದಕ್ಕೆ ಆಗುವುದಿಲ್ಲ ಎಂದು ಡಬಲ್ ಇಂಜಿನ್​ ಬಗ್ಗೆ ಹೆಚ್.ಡಿ ಕುಮಾರಸ್ವಾಮಿ ವ್ಯಂಗ್ಯ ಮಾಡಿದ್ದಾರೆ.

ಪ್ರಧಾನಿ ಮೋದಿ ಆತ್ಮನಿರ್ಭರ ಯೋಜನೆ ಬಗ್ಗೆ ವ್ಯಂಗ್ಯ ಮಾಡಿದ ಹೆಚ್​ಡಿಕೆ, ನಾನು ಈ ಹಿಂದೆ ಒಂಬತ್ತು ಕ್ಲಸ್ಟರ್​ನಲ್ಲಿ ಕಾಂಪಿಟ್ ವಿತ್ ಚೀನಾ ಯೋಜನೆ ಮಾಡಿದ್ದೆ. ಈಗ ಅದನ್ನೇ ಮೋದಿ ಆತ್ಮನಿರ್ಭರ ಎಂದು ಹೇಳುತ್ತಿದ್ದಾರೆ. ಕೊಪ್ಪಳ ಆಟಿಕೆ ವಸ್ತು ತಯಾರಿಕಾ ಘಟಕ‌ ಕಾರ್ಯಕ್ರಮಕ್ಕೆ ನನ್ನನ್ನು ಕರೆಯಲಿಲ್ಲ. ಅದಕ್ಕೆ ಆದೇಶ ಇನ್ಸೆಂಟಿವ್ ಕೊಟ್ಟವನೇ ನಾನು. ನನ್ನ ಕಾರ್ಯಕ್ರಮವನ್ನು ಮೋದಿ ಆತ್ಮನಿರ್ಭರ ಭಾರತ ಎಂದು ಕಾಪಿ ಮಾಡಿದ್ದಾರೆ ಎಂದು ತಿಳಿಸಿದರು.

ಉತ್ತರ ಕರ್ನಾಟಕಕ್ಕೆ ಇದೇ ರೀತಿ ಅನ್ಯಾಯವಾದರೆ ಉತ್ತರ ಕರ್ನಾಟಕ ಪ್ರತ್ಯೇಕ ಅನಿವಾರ್ಯ ಎಂಬ ಪ್ರಭಾಕರ್ ಕೋರೆ ಹೇಳಿಕೆ ವಿಚಾರವಾಗಿ ಮಾತನಾಡಿದ ಹೆಚ್​ಡಿಕೆ, ನಾನು ಈ ಭಾಗದ ಜನಪ್ರತಿನಿಧಿಗಳಿಗೆ ಕೇಳುತ್ತೇನೆ. ಈ ಭಾಗದ ಜನತೆಗೆ ಯಾರಿಂದ ಉತ್ತರ ಕರ್ನಾಟಕಕ್ಕೆ ಅನ್ಯವಾಗಿದೆ. ಹಳೆ ಕರ್ನಾಟಕದ ಜನಪ್ರತಿನಿಧಿಗಳಿಂದ ನಿಮಗೆ ಅನ್ಯಾಯವಾಗಿದೆಯಾ? ಹಳೇ ಕರ್ನಾಟಕದವರು ಮುಖ್ಯಮಂತ್ರಿ ಅಧಿಕಾರ ನಡೆಸಿದಾಗ ನಿಮಗೆ ಅನ್ಯಾಯ ಮಾಡಿದ್ದಾರಾ? ಕಡೆಗೆಣಿಸಿದ್ದಾರಾ? ಈಗ ಯಾರ ಮೇಲೆ ಹಾಗೂ ಯಾರಿಂದ ತಪ್ಪುಗಳಾಗಿದೆ ಅದರ ವಿರುದ್ಧ ನೀವು ಹೋರಾಟ ಮಾಡಿಕೊಂಡು ನೀವು ಪ್ರತ್ಯೇಕ ರಾಜ್ಯ ಕೇಳುತ್ತಿರಿ ಎಂದು ಪ್ರಶ್ನೆ ಹಾಕಿದ್ದಾರೆ.

ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳಿಂದ ಈ ಭಾಗಕ್ಕೆ ಕೊಟ್ಟ ಕೊಡುಗೆಗಳೇನು ಎನ್ನುವ ವಿಚಾರವಾಗಿ ಹೆಚ್​ಡಿಕೆ ಮಾತನಾಡಿದ್ದು, ಇವತ್ತು ಬಿಜೆಪಿಯವರು ಸ್ವತಂತ್ರವಾಗಿ ಅಧಿಕಾರ ನಡೆಸುತ್ತಿದ್ದಾರೆ. ಉತ್ತರ ಕರ್ನಾಟಕದವರೆ ಜಲಸಂಪನ್ಮೂಲ ಮಂತ್ರಿಗಳಿದ್ದಾರೆ. ಎಷ್ಟರ ಮಟ್ಟಿಗೆ ಆ ನೀರಾವರಿ ಮಂತ್ರಿಗಳು ಕೆಲಸ ಮಾಡುತ್ತಿದ್ದಾರೆ. ಅದನ್ನು ನಿಮ್ಮ ಗಮನಕ್ಕೆ ಬಿಟ್ಟುಬಿಟ್ಟಿದ್ದೀನಿ ಎಂದು ಸಚಿವ ರಮೇಶ್ ಜಾರಕಿಹೊಳಿ ಕಾರ್ಯವೈಖರಿ ಬಗ್ಗೆ ಹೆಚ್​ಡಿಕೆ ವ್ಯಂಗ್ಯ ಮಾಡಿದ್ದಾರೆ.

ಇಬ್ಬರೂ ಜತೆಗಿರುವ ವಿಡಿಯೋ ನೋಡಿದ್ದೀರಾ, ಈಗ ಅವರು ಯಾರೆಂಬುದು ಗೊತ್ತಿಲ್ಲ ಅಂದ್ರೆ ಏನು?: HDKಗೆ ಚಲುವರಾಯಸ್ವಾಮಿ ಟಾಂಗ್