
ಬೆಂಗಳೂರು, ಜುಲೈ.07: ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಡೆಂಗ್ಯೂ ಪ್ರಕರಣಗಳು ದಿನೇ ದಿನೇ ಏರಿಕೆ ಕಾಣುತ್ತಿದೆ. ಇದರ ನಡುವೆ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮದಲ್ಲಿ, (ಕೆಎಸ್‌ಎಂಎಸ್‌ಸಿಎಲ್) ರೋಗಿಗಳಿಗೆ ನೀಡಲಾಗುವ ಪ್ಯಾರಸಿಟಮಾಲ್ ಮಾತ್ರೆ (Paracetamol Tablets) ದಾಸ್ತಾನು ಮಾಡಿಕೊಂಡಿಲ್ಲ. ಇದರಿಂದ ಸರಕಾರಿ ಆಸ್ಪತ್ರೆಗಳಲ್ಲಿ ಪ್ಯಾರಸಿಟಮಾಲ್ ಕೊರತೆ ಉಂಟಾಗಿದೆ ಎಂಬ ಮಾತು ಕೇಳಿ ಬಂದಿತ್ತು. ಸದ್ಯ ಈಗ ಕೆಎಸ್‌ಎಂಎಸ್‌ಸಿಎಲ್ (KSMSCL )ಪ್ರತಿಕ್ರಿಯೆ ನೀಡಿದ್ದು ರಾಜ್ಯದಲ್ಲಿ ಪ್ಯಾರಸಿಟಮಾಲ್ ಮಾತ್ರೆ ಕೊರತೆ ಇಲ್ಲ ಎಂದು ಸ್ಪಷ್ಟನೆ ನೀಡಿದೆ.
ಡೆಂಗ್ಯೂ ಜ್ವರ ಹೆಚ್ಚಳ ಹಿನ್ನೆಲೆ ಪ್ಯಾರಸಿಟಮಾಲ್ ಮಾತ್ರೆ ಕೊರತೆ ಆರೋಪ ಕೇಳಿ ಬಂದಿತ್ತು. KSMSL ಸಂಸ್ಥೆಯು ಅವಶ್ಯಕ ಔಷಧಿಗಳನ್ನು ದಾಸ್ತಾನು ನೀಡಿದೆ. ವಾರ್ಷಿಕ ಬೇಡಿಕೆಯ ಟೆಂಡರ್ ಮಾಡಿ ಅವಶ್ಯಕ ಔಷಧಿ ದಾಸ್ತಾನು ನೀಡಿದೆ. ಆರೋಗ್ಯ ಉಪಕರಣ ಔಷಧ 27 ಉಗ್ರಾಣು ದಾಸ್ತಾನುಗಳಿಗೆ ತಲುಪಿಸಿದೆ. 2023-24ನೇ ಸಾಲಿನಲ್ಲಿ ರಾಜ್ಯದಲ್ಲಿ ಪ್ಯಾರಸಿಟಮಾಲ್ 650 ಎಂಜಿಗೆ ವಾರ್ಷಿಕ ಬೇಡಿಕೆ ಪ್ರಮಾಣ 8,72,20,40 ಮಾತ್ರೆಗಳಿಗೆ ಬಂದಿದ್ದು, 8.27 ಕೋಟಿ ಮೌಲ್ಯದ ಪ್ಯಾರಸಿಟಮಾಲ್ 650MG ಖರೀದಿಸಲಾಗಿದೆ. ಪ್ರಸ್ತುತ ಈ ಔಷಧವು ಎಲ್ಲಾ ಉಗ್ರಾಣಗಳಿಗೆ ಸರಬರಾಜು ಆಗಿದೆ. 2024 ಜು.4ರ ವೇಳೆಗೆ 3.7 ಕೋಟಿ ಮೌಲ್ಯದ ಮಾತ್ರೆಗಳು ಲಭ್ಯತೆ ಇದೆ. ಸದ್ಯ ಆರೋಗ್ಯ ಸಂಸ್ಥೆಗಳಲ್ಲಿ 3.18 ಕೋಟಿ ಮೌಲ್ಯದ ಮಾತ್ರೆಗಳು ಲಭ್ಯ ಇದೆ. ರಾಜ್ಯದ ವಿವಿಧ ಆರೋಗ್ಯ ಸಂಸ್ಥೆಗಳಲ್ಲಿ ಮಾತ್ರೆಗಳು ಲಭ್ಯ ಇದೆ ಎಂದು ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ತಿಳಿಸಿದೆ.
ಮಕ್ಕಳಿಗೆ ನೀಡಬಹುದಾದ ಪ್ಯಾರಸಿಟಮಾಲ್ ಮಾತ್ರೆ, ಸಿರಪ್ ಕೂಡಾ ಲಭ್ಯವಿದೆ. ಡೆಂಗ್ಯೂ ಚಿಕಿತ್ಸೆಗೆ ಬಳಸುವ (Analgesics, Anti-inflammatory, Anti-emetic, Gastro intestinal medicines & IV fluids) (Dengue Antigen Kits) ಮಾತ್ರೆಗಳು ಲಭ್ಯ ಇರುವಂತೆ ಕ್ರಮವಹಿಸಲಾಗಿದೆ. ಈ ಮೂಲಕ ಔಷಧಿ ಲಭ್ಯತೆ ಬಗ್ಗೆ ಸಾರ್ವಜನಿಕರಿಗೆ ಇಲಾಖೆ ಸ್ಪಷ್ಟನೆ ನೀಡಿದೆ.
ಇದನ್ನೂ ಓದಿ: Dengue Fever: ಕರ್ನಾಟಕದಲ್ಲಿ ಕಳೆದ 24 ಗಂಟೆಯಲ್ಲಿ 175 ಜನರಲ್ಲಿ ಡೆಂಗ್ಯೂ ಜ್ವರ ದೃಢ
ಆರೋಗ್ಯ ಇಲಾಖೆಯ ಅಧೀನಕ್ಕೆ ಬರುವ ಕೆಎಸ್‌ಎಂಎಸ್‌ಸಿಎಲ್ ಇಲಾಖೆಯು ಕಂಪನಿಗಳಿಂದ ಔಷಧಿಯನ್ನು ಖರೀದಿಸಿ ಸಾವಿರಾರು ಸರಕಾರಿ ಆಸ್ಪತ್ರೆಗಳಿಗೆ ಉಚಿತವಾಗಿ ಸರಬರಾಜು ಮಾಡುತ್ತದೆ. ಪ್ರತೀ ವರ್ಷ ಸರಕಾರ ನೀಡುವ ನೂರಾರು ಕೋಟಿ ರೂ. ಅನುದಾನ ಬಳಸಿಕೊಂಡು ಬ್ಯಾಂಡೇಜ್ ಕ್ಲಾತ್, ಕಾಟನ್, ಸರ್ಜಿಕಲ್ ಗ್ಲೌಸ್, ಗ್ಲೂಕೋಸ್ ಬಾಟಲ್, ಆ್ಯಂಟಿಬಯೋಟಿಕ್ ಮಾತ್ರೆ ಮತ್ತು ವೈದ್ಯಕೀಯ ಸಲಕರಣೆ ಸಹಿತ 300ಕ್ಕೂ ಅಧಿಕ ಬಗೆಯ ಔಷಧಿಯನ್ನು ಖರೀದಿಸಿ ದಾಸ್ತಾನು ಮಾಡಿಕೊಳ್ಳುತ್ತದೆ. ಸದ್ಯ ಇತ್ತೀಚೆಗೆ ಪ್ಯಾರಸಿಟಮಾಲ್ ಮಾತ್ರೆ ಕೊರತೆ ಇದೆ ಎಂಬ ಮಾತು ಕೇಳಿ ಬಂದಿದ್ದು ಕೆಎಸ್‌ಎಂಎಸ್‌ಸಿಎಲ್ ಸ್ಪಷ್ಟನೆ ನೀಡುವ ಮೂಲಕ ಗೊಂದಲ ಬಗೆಹರಿಸಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 7:44 am, Sun, 7 July 24