ವಿಜಯಪುರ, ಜನವರಿ 4: ಬಿಜೆಪಿ ಆರ್ಎಸ್ಎಸ್ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡುತ್ತಿವೆ ಎಂಬ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ (Yathindra Siddaramaiah) ಹೇಳಿಕೆಗೆ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ (Vishwaprasanna Theertha Swamiji) ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ. ವಿಜಯಪುರ ನಗರದ ಜ್ಞಾನ ಯೋಗಾಶ್ರಮಕ್ಕೆ ಗುರುವಾರ ಭೇಟಿ ನೀಡಿ ಲಿಂಗೈಕ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಗದ್ದುಗೆ ದರ್ಶನ ಮಾಡಿದ ಬಳಿಕ ಮಾತನಾಡಿದ ಅವರು, ಯತೀಂದ್ರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದರು.
‘ಭಾರತವನ್ನು ಹಿಂದೂರಾಷ್ಟ್ರ ಮಾಡಿದರೆ ಪಾಕಿಸ್ತಾನ ಮಾಡಲು ಯಾರೋ ಸಿದ್ಧತೆ ನಡೆಸುತ್ತಿದ್ದಾರೋ ಏನೋ. ಅಂತಹ ಸಿದ್ಧತೆ ಇಲ್ಲಿ ನಡೆಯುತ್ತಿದೆ ಎಂಬುದರ ಮುನ್ಸೂಚನೆ ಕೊಡುತ್ತಿದ್ದಾರೆ ಅವರು. ಅವರ ಹೇಳಿಕೆ ಸರಿಯಲ್ಲ. ಭಾರತ ಹಿಂದಿನಿಂದಲೂ ಹಿಂದೂ ರಾಷ್ಟ್ರವಾಗಿ ಇದ್ದು, ಜಾತಿ ಧರ್ಮ ಪಂಗಡ ಎಂದು ಮೀಸಲಿರದೆ ಎಲ್ಲರನ್ನ ಅಪ್ಪಿ ಒಪ್ಪಿಕೊಂಡ ದೇಶ’ ಎಂದು ಶ್ರೀಗಳು ಹೇಳಿದರು.
ಮತ್ತೆ ಗೋಧ್ರಾದಂಥ ಘಟನೆ ನಡೆಯಬಹುದು ಎಂಬ ಕಾಂಗ್ರೆಸ್ ನಾಯಕ ಬಿಕೆ ಹರಿಪ್ರಸಾದ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅಂತಹ ಘಟನೆ ನಡೆಯುವ ಬಗ್ಗೆ ಸುಳಿವು ಇದ್ದರೆ ಪೊಲೀಸ್ ಇಲಾಖೆಗೆ ಹೋಗಿ ಯಾಕೆ ಹೇಳುತ್ತಿಲ್ಲ? ಇವರು ಯಾರನ್ನು ರಕ್ಷಣೆ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.
ವಿಧ್ವಂಸಕ ಕೃತ್ಯ ಮಾಡಲು ಹೊರಟಿರುವವರ ಬಗ್ಗೆ ಕೇಳಿದರೆ ಹೇಳುತ್ತೇವೆ ಎಂಬ ಹೇಳಿಕೆ ಸರಿಯಲ್ಲ. ಹಾಗೆ ಹೇಳುವುದು ವಿಧ್ವಂಸಕ ಕೃತ್ಯ ನಡೆಯಲಿ ಎಂಬ ಅರ್ಥ ಕೊಡುತ್ತದೆ. ಹಾಗಾದರೆ ಇವರು ಪ್ರಜೆಗಳನ್ನು ರಕ್ಷಣೆ ಮಾಡುತ್ತಿದ್ದಾರೋ ಅಥವಾ ವಿಧ್ವಂಸಕ ಕೃತ್ಯಗಳನ್ನ ಮಾಡುವವರನ್ನು ರಕ್ಷಣೆ ಮಾಡುತ್ತಿದ್ದಾರೋ? ಜವಾಬ್ದಾರಿ ಸ್ಥಾನದಲ್ಲಿರುವವರು ಇಂಥ ಮಾತನ್ನಾಡಬಾರದು. ಹಾಗಾದ್ರೆ ಇಲ್ಲಿ ಭಯೋತ್ಪಾದಕರು ಆಗಿದ್ದು ಯಾರು ಎಂದು ಪೇಜಾವರ ಶ್ರೀ ಪ್ರಶ್ನಿಸಿದರು.
ಹೀಗೆ ಮಾತನಾಡುವ ಇವರೇ ಭಯೋತ್ಪಾದಕರು. ರಾಮ ಭಕ್ತರನ್ನ ಹೆದರಿಸುವ ಭರದಲ್ಲಿ ದೇಶವನ್ನೇ ಹೆದರಿಸುತ್ತಿದ್ದಾರೆ. ಈ ರೀತಿ ಯಾರು ಕೂಡ ಮಾತನಾಡಬಾರದು. ಕೃತ್ಯಗಳ ಮಾಹಿತಿ ಇದ್ದರೆ ಅದನ್ನು ಪರಿಹರಿಸುವ ಕೆಲಸ ಮಾಡಬೇಕು ಎಂದು ಪೇಜಾವರ ಸ್ವಾಮೀಜಿ ಹೇಳಿದರು.
ರಾಮಮಂದಿರ ಉದ್ಘಾಟನೆಗೆ ನಮಗೆ ಆಹ್ವಾನ ಬಂದಿಲ್ಲ ಎಂಬ ವಿರೋಧ ಪಕ್ಷಗಳ ಹೇಳಿಕೆಗೆ ಪ್ರತಿಕ್ರಿಯಿಸಿದ ಸ್ವಾಮೀಜಿ, ಇಂಥ ನಡವಳಿಕೆ ಸರಿಯಲ್ಲ. ರಾಮ ರಾಜಕೀಯ ವಸ್ತುವಾಗಿಲ್ಲ. ಶ್ರೀರಾಮ ಮಂದಿರ ವ್ಯಾಜ್ಯ ಹುಟ್ಟಿಕೊಂಡಿದ್ದು 500 ವರ್ಷಗಳ ಹಿಂದೆ. ಸ್ವಾತಂತ್ರ್ಯ ಬಂದು 75 ವರ್ಷಗಳಾಯಿತು. ದೇಶದಲ್ಲಿ ಅತಿ ಹೆಚ್ಚು ವರ್ಷಗಳ ಕಾಲ ಸರ್ಕಾರ ಮಾಡಿದ್ದು ಯಾರು ಎಂದು ಶ್ರೀಗಳು ಪ್ರಶ್ನಿಸಿದರು.
ಶ್ರೀರಾಮ ಮಂದಿರ ಮಾಡಿಕೊಡಿ ಎಂದು ಅವರ ಬಳಿ ಹಲವಾರು ಬಾರಿ ಕೇಳಲಾಗಿತ್ತು. ತಾವು ಮಾಡಲ್ಲ, ಯಾರಾದರೂ ಮಾಡಿದರೆ ಅದಕ್ಕೂ ಅಡ್ಡಗಾಲು ಹಾಕುತ್ತಾರೆ ಎಂದು ಪರೋಕ್ಷವಾಗಿ ಕಾಂಗ್ರೆಸ್ ವಿರುದ್ಧ ಗುಡುಗಿದರು. ಪೇಜಾವರ ಸ್ವಾಮೀಜಿ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಟ್ರಸ್ಟಿಯೂ ಆಗಿದ್ದಾರೆ.
ಇದನ್ನೂ ಓದಿ: ರಾಮಲಲ್ಲಾ ವಿಗ್ರಹ ಆಯ್ಕೆ ಅಧಿಕೃತ ಘೋಷಣೆ ಇನ್ನೂ ಆಗಿಲ್ಲ: ಪೇಜಾವರ ಶ್ರೀ
ವಿವಾದಿತ ಸ್ಥಳದಲ್ಲಿ ಶ್ರೀರಾಮನ ಪೂಜೆಗೆ ಅವಕಾಶ ಕೊಟ್ಟಿದ್ದೇ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಎಂಬ ಕಾಂಗ್ರೆಸ್ಸಿಗರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅದರಿಂದ ಏನು ಇವಾಗ? ರಾಮ ರಾಜ್ಯ ಮಾಡದೆ ಇರುವ ಅಪವಾದವನ್ನು ಅವರು ಹಂಚಿಕೊಳ್ಳಲು ತಯಾರಿದ್ದಾರಾ? ಲಾಭ ಇದ್ದರೆ ನಮಗೆ, ತಪ್ಪುಗಳಿದ್ದರೆ ಅವರಿಗೆ ಮಾತ್ರ ಎಂದು ಪರೋಕ್ಷವಾಗಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಹುಬ್ಬಳ್ಳಿಯಲ್ಲಿ ಕರಸೇವಕರ ಬಂಧನ ವಿಚಾರವಾಗಿ ಮಾತನಾಡಿದ ಅವರು, ತಪ್ಪು ಮಾಡಿದರೆ ಅಥವಾ ತಪ್ಪಿತಸ್ಥರಾದರೆ ಶಿಕ್ಷೆ ಕೊಡುವುದು ಸರಿ. ಆದರೆ ಇಂತಹ ಸಮಯ ಸಂದರ್ಭದಲ್ಲಿ ಈ ಘಟನೆ ನಡೆಯುತ್ತಿರುವಂತಹದು ಸರಿಯಲ್ಲ. ಇದು ತಪ್ಪು ಸಂದೇಶ ಕೊಡುತ್ತದೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:32 am, Thu, 4 January 24