ಮಾಲ್ ಆಫ್ ಏಷ್ಯಾ-ಬೆಂಗಳೂರು ಪೊಲೀಸರ ನಡುವೆ ಜಟಾಪಟಿ; ಮಾಲ್​ನಿಂದ ಆಗುತ್ತಿರುವ ಸಮಸ್ಯೆಗಳನ್ನು ಬಿಚ್ಚಿಟ್ಟ ಸ್ಥಳೀಯರು

ಅಸಮರ್ಪಕ ಪಾರ್ಕಿಂಗ್ ವ್ಯವಸ್ಥೆ ಹಾಗೂ ಇದರಿಂದ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿರುವ ಹಿನ್ನೆಲೆ ಮಾಲ್ ಆಫ್ ಏಷ್ಯಾ ವಿರುದ್ಧ ಬೆಂಗಳೂರು ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ. ದುಬಾರಿ ಪಾರ್ಕಿಂಗ್ ಶುಲ್ಕ ಹಿನ್ನೆಲೆ ಮಾಲ್ ಸಿಬ್ಬಂದಿ ಸಹಿತ ಮಾಲ್​ಗೆ ಭೇಟಿ ನೀಡುವ ಸಾರ್ವಜನಿಕರು ತಮ್ಮ ವಾಹನಗಳನ್ನು ಸರ್ವಿಸ್ ರಸ್ತೆಯಲ್ಲಿ ಪಾರ್ಕ್ ಮಾಡುತ್ತಿದ್ದ ಹಿನ್ನೆಲೆ ಪೊಲೀಸರು 114 ಸೆಕ್ಷನ್ ಜಾರಿ ಮಾಡಿದ್ದಾರೆ. ಈ ನಡುವೆ ಮಾಲ್​ನಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಸ್ಥಳೀಯರು ಹೇಳಿಕೊಂಡಿದ್ದಾರೆ.

ಮಾಲ್ ಆಫ್ ಏಷ್ಯಾ-ಬೆಂಗಳೂರು ಪೊಲೀಸರ ನಡುವೆ ಜಟಾಪಟಿ; ಮಾಲ್​ನಿಂದ ಆಗುತ್ತಿರುವ ಸಮಸ್ಯೆಗಳನ್ನು ಬಿಚ್ಚಿಟ್ಟ ಸ್ಥಳೀಯರು
ಮಾಲ್ ಆಫ್ ಏಷ್ಯಾ
Follow us
Shivaprasad
| Updated By: Rakesh Nayak Manchi

Updated on: Jan 04, 2024 | 9:49 AM

ಬೆಂಗಳೂರು, ಜ.4: ಪಾರ್ಕಿಂಗ್ ವಿಚಾರವಾಗಿ ಮಾಲ್ ಆಫ್ ಏಷ್ಯಾ (Mall Of Asia) ಮತ್ತು ಬೆಂಗಳೂರು (Bengaluru) ನಗರ ಪೊಲೀಸರ ನಡುವೆ ಜಟಾಪಟಿ ನಡೆಯುತ್ತಿದೆ. ಈ ನಡುವೆ ಮಲ್ಟಿಫ್ಲೆಕ್ಸ್​ಗೆ ಅನುಮತಿ ಕೋರಿ ಪೊಲೀಸರಿಗೆ ಮನವಿ ಮಾಡಿದೆ. ಆದರೆ, ಟ್ರಾಫಿಕ್ ಸಮ್ಯೆ ಸರಿಮಾಡಿ ಬಳಿಕ ಅನುಮತಿ ನೀಡುತ್ತೇವೆ ಎಂದು ಪೊಲೀಸರು ಖಡಕ್ ಆಗಿ ಸೂಚಿಸಿದ್ದಾರೆ. ಈ ಜಟಾಪಟಿ ನಡುವೆ ಸ್ಥಳೀಯರು ಮಾಲ್​ನಿಂದ ಆಗುತ್ತಿರುವ ಸಮಸ್ಯೆಗಳನ್ನು ಬಿಚ್ಚಿಟ್ಟಿದ್ದಾರೆ.

ಟಿವಿ9 ಜೊತೆ ಮಾತನಾಡಿದ ನಿವಾಸಿಗಳು, ಅಪಾರ್ಟ್ಮೆಂಟ್​ನಲ್ಲಿ ನೆಲೆಸಿರುವ ನಮಗೆ ಮಾಲ್​ನಿಂದ ಹಲವು ತೊಂದರೆಗಳು ಆಗುತ್ತಿವೆ. ಮಾಲ್​ನಿಂದ ಬರುವ ಜನರೇಟರ್ ಶಬ್ದದಿಂದ ಮಾಲಿನ್ಯವಾಗುತ್ತಿದೆ. ಮಕ್ಕಳ ವಿದ್ಯಾಭ್ಯಾಸಕ್ಕೂ ತೊಂದರೆ ಆಗುತ್ತಿದೆ. ಮಾಲ್ ಲೈಟಿಂಗ್ಸ್ ಅಪಾರ್ಟ್ಮೆಂಟ್ ನಿವಾಸಿಗಳ ನಿದ್ದೆಗೂ ಸಮಸ್ಯೆ ಉಂಟುಮಾಡುತ್ತಿದೆ ಎಂದಿದ್ದಾರೆ.

ಬಳ್ಳಾರಿ ರಸ್ತೆ ಕೆಂಪೇಗೌಡ ಏರ್ಪೋರ್ಟ್ ರಸ್ತೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಾಗಿದೆ. ಮಾಲ್​ಗೆ ಬರುವವರು ರಸ್ತೆಯಲ್ಲೇ ಪಾರ್ಕಿಂಗ್ ಮಾಡಿ ತೆರಳುತ್ತಾರೆ. ಸರ್ವಿಸ್ ರಸ್ತೆ ಮೂಲಕ ಹೆಬ್ಬಾಳ, ಸಹಕಾರನಗರ, ಜಕ್ಕೂರು,ಅಮೃತಹಳ್ಳಿ ನಿವಾಸಿಗಳು ತೆರಳಲು ಕಷ್ಟವಾಗುತ್ತಿದೆ. ಆಸ್ಪತ್ರೆಗೆ ತೆರಳುವ ಹಿರಿಯ ನಾಗರೀಕರಿಗೆ, ರೋಗಿಗಳಿಗೆ ಅನಾನುಕೂಲವಾಗುತ್ತಿದೆ ಎಂದಿದ್ದಾರೆ.

ಮಾಲ್ ಆಫ್ ಏಷ್ಯಾ ಬಳಿ 144 ಸೆಕ್ಷನ್ ಜಾರಿ ಮಾಡಲು ಕಾರಣ

ನಗರ ಪೊಲೀಸರು ಮಾಲ್ ಬಳಿ 144 ಸೆಕ್ಷನ್ ಜಾರಿ ಮಾಡಿದ್ದಾರೆ. ರಸ್ತೆಗೆ ಬೈಕ್ ನಿಲ್ಲಿಸದಂತೆ ಅನೇಕ ಬಾರಿ ಪೊಲೀಸರು ಎಚ್ಚರಿಸಿದ್ದರು. ದುಬಾರಿ ಶುಲ್ಕ ಹಿನ್ನೆಲೆ ದ್ವಿಚಕ್ರ ವಾಹನ ಸವಾರರು ತಮ್ಮ ಬೈಕ್​ಗಳನ್ನು ಮಾಲ್ ಆವರಣದಲ್ಲಿ ಪಾರ್ಕ್ ಮಾಡದೆ ಸರ್ವಿಸ್ ರಸ್ತೆಯಲ್ಲಿ ಪಾರ್ಕಿಂಗ್ ಮಾಡುತ್ತಿದ್ದರು. ಮಾಲ್ ಸಿಬ್ಬಂದಿಯೂ ಪಾರ್ಕ್ ಮಾಡುತ್ತಿದ್ದರು.

ಮಾಲ್ ಬೇಸ್ಮೆಂಟ್​ನಲ್ಲಿ 230 ಕಾರುಗಳು ಹಾಗೂ 800 ಬೈಕ್​ಗಳನ್ನು ನಿಲ್ಲಿಸುವಷ್ಟು ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಆದರೆ, ಪಾರ್ಕಿಂಗ್​ಗೆ ದುಬಾರಿ ಶುಲ್ಕ ವಿಧಿಸಲಾಗುತ್ತಿದೆ. ಕಾರಿಗೆ ಗಂಟೆಗೆ 150 ರೂ. ಹಾಗೂ ಬೈಕ್​ಗೆ ಗಂಟೆಗೆ 100 ರೂ. ಚಾರ್ಜ್ ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ಮಾಲ್​ನ 300 ಸಿಬ್ಬಂದಿ ಸಹಿತ ಮಾಲ್​ಗೆ ಬರುವ ಜನರು ಸರ್ವೀಸ್ ರಸ್ತೆಯಲ್ಲೇ ತಮ್ಮ ವಾಹನಗಳನ್ನು ಪಾರ್ಕ್ ಮಾಡುತ್ತಿದ್ದರು.

ಇದನ್ನೂ ಓದಿ: ಮಾಲ್ ಆಫ್ ಏಷ್ಯಾಗೆ ಜನರ ಪ್ರವೇಶ ನಿರ್ಬಂಧ ಪ್ರಶ್ನಿಸಿ ರಿಟ್​ ಅರ್ಜಿ: ತುರ್ತು ವಿಚಾರಣೆ ನಡೆಸಿದ ಹೈಕೋರ್ಟ್​​

ಜನರು ಸರ್ವಿಸ್ ರಸ್ತೆಯ ಎರಡೂ ಬದಿಯಲ್ಲಿ ಪಾರ್ಕಿಂಗ್ ಮಾಡುತ್ತಿದ್ದಿದ್ದರಿಂದ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿತ್ತು. ಜೊತೆಗೆ ಆಂಬುಲೆನ್ಸ್​ಗಳ ಓಡಾಟಕ್ಕೂ ತೊಂದರೆ ಆಗುತ್ತಿತ್ತು. ವಿಮಾನ ನಿಲ್ದಾಣಕ್ಕೆ ಸರಿಯಾದ ಸಮಯಕ್ಕೆ ಹೋಗಲಾದೆ ಅನೇಕರು ಪರದಾಟ ನಡೆಸಿದ್ದಾರೆ.

ಸಂಚಾರ ದಟ್ಟಣೆಯಿಂದ ವಿಮಾನ ಮಿಸ್ ಮಾಡಿಕೊಂಡವರು ಪೊಲೀಸರಿಗೆ ದೂರು ನೀಡಿದ್ದರು. ಪ್ರಯಾಣಿಕರ ಸಮಸ್ಯೆ ಅರಿತುಕೊಂಡ ಕೆಂಪೇಗೌಡ ವಿಮಾನ ನಿಲ್ದಾಣದ ಅಧಿಕಾರಿಗಳು ಘಟನೆ ಬಗ್ಗೆ ಪರಿಶೀಲನೆ ಮಾಡುವಂತೆ ಪೊಲೀಸರಿಗೆ ಮನವಿ ಮಾಡಿದ್ದರು. ಹೀಗಾಗಿ ಮಾಲ್​ಗೆ ಬರುವ ಎಲ್ಲಾ ಬೈಕ್​ಗಳಿಗೂ ಒಳಗಡೆ ಬೈಕ್ ಪಾರ್ಕಿಂಗ್ ವ್ಯವಸ್ಥೆ ಮಾಡುವಂತೆ ಪೊಲೀಸರು ಹಲವು ಬಾರಿ ಮನವಿ ಮಾಡಿದ್ದರು. ಆದರೆ ಮಾಲ್​ ಆಡಳಿತ ಮಂಡಳಿಯಿಂದ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಹೀಗಾಗಿ ಪೊಲೀಸರು ಮಾಲ್ ಬಳಿ 144 ಜಾರಿ ಮಾಡಿದ್ದಾರೆ.

ಮಲ್ಟಿಫ್ಲೆಕ್ಸ್​ಗೆ ಅನುಮತಿ ಕೋರಿದ ಮಾಲ್ ಆಫ್ ಏಷ್ಯಾ

ಈಗ ಮತ್ತೆ ಮಲ್ಟಿಫ್ಲೆಕ್ಸ್​ಗೆ ಅನುಮತಿ ಕೋರಿ ಮಾಲ್ ಆಫ್ ಏಷ್ಯಾ ಪೊಲೀಸರಿಗೆ ಮನವಿ ಮಾಡಿದೆ. ಮಲ್ಟಿಫ್ಲೆಕ್ಸ್ ಮಾಡಲು ಯಾವುದೇ ಮಾಲ್​ಗೆ ಪೊಲೀಸರಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಆದರೆ, ಮೊದಲು ಟ್ರಾಫಿಕ್ ಸಮಸ್ಯೆ ಸರಿ ಮಾಡಿ. ಬಳಿಕ ಅನುಮತಿ ನೀಡುತ್ತೇವೆ ಎಂದು ಪೊಲೀಸರು ಖಡಕ್ ಸೂಚನೆ ನೀಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ