ಗ್ರಾಮ ಪಂಚಾಯತಿ ಚುನಾವಣೆಗೆ ಅಂಬರೀಶ್ ಅಭಿಮಾನಿ ಕುಟುಂಬದ ಮೂವರು ಸ್ಪರ್ಧೆ!
ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಹರಳಹಳ್ಳಿ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಒಂದೇ ಕುಟುಂಬದ ಮೂವರು ಸ್ಪರ್ಧೆ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಮಂಡ್ಯ: ರಾಜ್ಯದಲ್ಲೀಗ ಗ್ರಾಮ ಪಂಚಾಯತಿ ಚುನಾವಣೆ ವಿಚಾರವಾಗೇ ಚರ್ಚೆ. ಯಾವ ಹಳ್ಳಿಗೆ ಹೋದರೂ ಪಂಚಾಯತಿ ಚುನಾವಣೆಯದ್ದೇ ಮಾತು. ಇಂತಹ ಮಾತುಗಳಿಗೆ ಹೆಚ್ಚು ಕುತೂಹಲ ಹುಟ್ಟಿಸಿರುವುದು ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಹರಳಹಳ್ಳಿ ಗ್ರಾಮ.
ಒಂದೇ ಕುಟುಂಬದ ವಿವಿಧ ಸದಸ್ಯರು ಚುನಾವಣಾ ಕಣದಲ್ಲಿ ಭಾಗವಹಿಸುವುದು ರಾಜಕೀಯದಲ್ಲಿ ಸಾಮಾನ್ಯ ಎಂಬಂತೆ ನೀವು ನೋಡಿರುತ್ತೀರಿ. ಒಂದೇ ಕುಟುಂಬದ ಸದಸ್ಯರು ಪರಸ್ಪರ ವಿರೋಧ ಪಕ್ಷದಲ್ಲಿ ಕುಳಿತುಕೊಂಡದ್ದನ್ನೂ ನೀವು ಗಮನಿಸಿರಬಹುದು. ಇದು ರಾಷ್ಟ್ರ ರಾಜಕಾರಣಕ್ಕೋ, ರಾಜ್ಯ ರಾಜಕಾರಣಕ್ಕೋ ಸೀಮಿತ ಅಂತಾ ನೀವಂದುಕೊಂಡರೆ.. ನಿಮ್ಮ ಊಹೆ ತಪ್ಪು.
ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಹರಳಹಳ್ಳಿ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಒಂದೇ ಕುಟುಂಬದ ಮೂವರು ಸ್ಪರ್ಧೆ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಕೆನ್ನಾಳು ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಹರಳಹಳ್ಳಿಯ ಸುಬ್ರಹ್ಮಣ್ಯ ಎಂಬವರ ಕುಟುಂಬ ಪಂಚಾಯತಿ ಸ್ಪರ್ಧೆಯಲ್ಲಿ ತೊಡಗಿಕೊಂಡಿದೆ. ಮೂರು ಬೇರೆ ಬೇರೆ ವಾರ್ಡ್ನಿಂದ, ಮೂವರು ಕುಟುಂಬ ಸದಸ್ಯರು ಕಣಕ್ಕಿಳಿದಿದ್ದಾರೆ. ಸುಬ್ರಹ್ಮಣ್ಯ, ಅವರ ಪತ್ನಿ ಸುಮಿತ್ರಾ, ಮಗ ಅಭಿಷೇಕ್ ಚುನಾವಣೆಗೆ ಸ್ಪರ್ಧಿಸಿರುವ ಕುಟುಂಬಸ್ಥರು.

ಇವರು ಅಂಬಿ ಸುಬ್ಬಣ್ಣ ಎಂದೇ ಹೆಸರುವಾಸಿ! ಗ್ರಾಮದಲ್ಲಿ ಕೂಲಿನಾಲಿ ಮಾಡಿಕೊಂಡು ಜೊತೆಗೆ ಪಟ್ಟಣದಲ್ಲಿ ಒಂದು ಟೀ ಅಂಗಡಿ ಇಟ್ಟುಕೊಂಡು ಬದುಕು ಸಾಗಿಸುತ್ತಿರುವ ಸುಬ್ರಹ್ಮಣ್ಯ ಕುಟುಂಬಸ್ಥರು ರೆಬಲ್ ಸ್ಟಾರ್ ಅಂಬರೀಶ್ ಅಭಿಮಾನಿಗಳಾಗಿದ್ದಾರೆ. ಅದೇ ಕಾರಣದಿಂದ ತಮ್ಮ ಮಗನಿಗೂ ಅಭಿಷೇಕ್ ಎಂದು ಹೆಸರು ಇಟ್ಟುಕೊಂಡಿದ್ದಾರೆ.
ಹಾಗಾಗಿ, ಗ್ರಾಮದಲ್ಲಿ ಸುಬ್ರಹ್ಮಣ್ಯ.. ಅಂಬಿ ಸುಬ್ಬಣ್ಣ ಎಂದೇ ಗುರುತಿಸಕೊಂಡಿದ್ದಾರೆ. ಸದ್ಯ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅವರು, ನನ್ನ ಬಳಿ ಹಣ ಇಲ್ಲ. ಗ್ರಾಮದ ಜನರೇ ನನ್ನ ದೇವರು. ಈಗ ಜನ ಸೇವೆ ಮಾಡಲು ನನ್ನನ್ನು ಗೆಲ್ಲಿಸುವ ಮೂಲಕ ಅವರೇ ಆಶೀರ್ವಾದ ಮಾಡುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ.

ಅಂಬಿ ಸುಬ್ಬಣ್ಣ ಚಹಾ ಅಂಗಡಿ

ಚಹಾ ಅಂಗಡಿ ಗೋಡೆಗೆ ಅಂಬರೀಶ್ ಚಿತ್ರ
ಈಗಾಗಲೇ ಒಂದು ಬಾರಿ ಗ್ರಾಮ ಪಂಚಾಯ್ತಿ ಚುನಾವಣೆಗೆ ನಿಂತು ಗೆಲುವು ಪಡೆದಿರುವ ಸುಬ್ರಹ್ಮಣ್ಯ ಈಗ ಎರಡನೇ ಬಾರಿಗೆ ಹರಳಹಳ್ಳಿ ಗ್ರಾಮದ 1ನೇ ವಾರ್ಡ್ನಿಂದ ಸಾಮಾನ್ಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿದ್ದಾರೆ. ಅದೇ ಗ್ರಾಮದ 2ನೇ ವಾರ್ಡ್ನಿಂದ ಮಗ ಅಭಿಷೇಕ್ ಹಾಗೂ 3ನೇ ವಾರ್ಡ್ನಿಂದ ಪತ್ನಿ ಸುಮಿತ್ರಾ ಅವರು ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕೆ ಇಳಿದಿದ್ದಾರೆ.
ಇವರ ಕುಟುಂಬಕ್ಕೆ ಬೆಂಬಲ ವ್ಯಕ್ತಪಡಿಸುತ್ತಿರುವ ಗ್ರಾಮಸ್ಥರು ಚುನಾವಣೆಯಲ್ಲಿ ಗೆಲ್ಲಿಸುವ ಭರವಸೆ ನೀಡಿದ್ದಾರೆ. ಅಂಬಿ ಅಭಿಮಾನಿ ಎಂಬ ಹೆಸರಿನಲ್ಲಿ ಚುನಾವಣೆಗೆ ಸ್ಪರ್ಧೆ ಮಾಡಿರುವ ಸುಬ್ರಹ್ಮಣ್ಯರ ಕುಟುಂಬವನ್ನ ಗ್ರಾಮಸ್ಥರು ಕೈ ಹಿಡಿಯಲಿದ್ದಾರಾ ಅನ್ನೋದು ಕುತೂಹಲ ಉಂಟು ಮಾಡಿದೆ.

-ರವಿ ಲಾಲಿಪಾಳ್ಯ
ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಭಾಗ್ಯ ನನ್ನದಾಯಿತಲ್ಲ; ಸುಮಲತಾ ಅಂಬರೀಶ್ ಹೀಗೆ ಹೇಳಿದ್ದೇಕೆ?
Published On - 1:39 pm, Fri, 18 December 20




