ಮುಂಬೈ: ಆತ್ಮಹತ್ಯೆ ಅಪರಾಧಕ್ಕೆ ಸಂಬಂಧಿಸಿದಂತೆ (abetment of suicide) ಬಾಂಬೆ ಹೈಕೋರ್ಟ್ ಇತ್ತೀಚೆಗೆ ಒಂದು ಮಹತ್ವದ ತೀರ್ಪು ನೀಡಿದೆ. ಭಾರತೀಯ ದಂಡ ಸಂಹಿತೆ ಸೆಕ್ಷನ್ 306 ಅನುಸಾರ (Section 306 of the Indian Penal Code -IPC) ಆತ್ಮಹತ್ಯೆಗೆ ಪ್ರಚೋದನಕಾರಿಯಾಗಿ ಕಿರುಕುಳ ಕೊಟ್ಟಿರುವ (harassment) ಆರೋಪವನ್ನಷ್ಟೇ ಮಾಡಿದರೆ ಸಾಲದು. ಬದಲಿಗೆ ಅದಕ್ಕೆ ತಕ್ಷ ಸಾಕ್ಷ್ಯ ಅಂದರೆ ಮೃತನು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಪ್ರಚೋದನೆ ನೀಡಿದ ಆಪಾದನೆಯ ಬಗ್ಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಸೂಕ್ತ ಸಾಕ್ಷ್ಯ ಒದಗಿಸುವುದು ಕಡ್ಡಾಯವಾಗಿರುತ್ತದೆ ಎಂದು ತೀರ್ಪಿನಲ್ಲಿ ಸ್ಪಷ್ಟವಾಗಿ ತಿಳಿಸಿದೆ. ಕರ್ನಾಟಕದ ಉಡುಪಿಯಲ್ಲಿ ಇಂದು ನಡೆದ ಆತ್ಮಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ತೀರ್ಪಿಗೆ ಹೆಚ್ಚಿನ ಮಹತ್ವ ನೀಡಲಾಗಿದೆ.
ಕಳೆದ ಮಾರ್ಚ್ 23 ರಂದು ಅನಿಲ್ ಕಿಲೋರ್ ನೇತೃತ್ವದ ಬಾಂಬೆ ಹೈಕೋರ್ಟ್ ಏಕ ಸದಸ್ಯ ಪೀಠವು ಈ ಸಂಬಂಧ ತೀರ್ಪು ನೀಡಿದೆ. ಆತ್ಮಹತ್ಯೆ ಅಪರಾಧ ಪ್ರಕರಣವೊಂದರಲ್ಲಿ ಆತ್ಮಹತ್ಯೆಗೆ ಪ್ರಚೋದನ ನೀಡುವಂತೆ ಕಿರುಕುಳ ನೀಡಲಾಗಿದೆ ಎಂಬ ಆರೋಪದಲ್ಲಿ ಸೆಷನ್ಸ್ ಕೋರ್ಟ್ ಇಬ್ಬರ ವಿರುದ್ಧ ಪ್ರಕರಣ ಕೈಬಿಟ್ಟಿತ್ತು. ಅದನ್ನು ಎತ್ತಿ ಹಿಡಿದ ಅನಿಲ್ ಕಿಲೋರ್ ನೇತೃತ್ವದ ಬಾಂಬೆ ಹೈಕೋರ್ಟ್ ಏಕ ಸದಸ್ಯ ಪೀಠವು ಮೇಲ್ಮನವಿ ಅರ್ಜಿಯನ್ನು ವಜಾಗೊಳಿಸಿತು.
ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣಗಳಲ್ಲಿ ಪ್ರತ್ಯಕ್ಷ, ಪರೋಕ್ಷ ಅಥವಾ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದರ ಬಗ್ಗೆ ಸಾಕ್ಷ್ಯ ಇರಲೆಬೇಕು. ಕೇವಲ ಕಿರುಕುಳದ ಆರೋಪ ಮಾಡಿದರಷ್ಟೆ ಸಾಲದು. ಆರೋಪಿಯು ಕಿರುಕುಳ ಕೊಟ್ಟಿದ್ದರಿಂದಲೇ ಅದರಿಂದ ಪ್ರಭಾವಿತನಾಗಿ ಯಾವುದೇ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡರು ಎಂದು ಹೇಳಲಾಗದು. ಹಾಗಾಗಿ ಸಾಕ್ಷ್ಯಾಧಾರವಿಲ್ಲದೆ ಸೆಕ್ಷನ್ 306 ದಂಡ ಪ್ರಯೋಗಿಸಲು ಸಾಧ್ಯವಿಲ್ಲ ಎಂದು ಜಡ್ಜ್ ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ.
ಪ್ರಕರಣವೊಂದರಲ್ಲಿ ವ್ಯಕ್ತಿಯೊಬ್ಬರು 2015ರ ಮಾರ್ಚ್ 10 ರಂದು ಬಾವಿಗೆ ಹಾರಿ, ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಜೇಬಿನಲ್ಲಿ ಪ್ಲಾಸ್ಟಿಕ್ ಕವರ್ನಲ್ಲಿ ಸುತ್ತಿದ್ದ ಪತ್ರವೊಂದು ದೊರೆತಿತ್ತು. ಅದರಲ್ಲಿ ಇಬ್ಬರು ಆರೋಪಿಗಳ ಹೆಸರುಗಳನ್ನು ನಮೂದಿಸಿ, ತನ್ನ ಸಾವಿಗೆ ಇವರಿಬ್ಬರೇ ಕಾರಣ ಎಂದು ಮೃತ ವ್ಯಕ್ತಿ ಡೆತ್ ನೋಟ್ ಬರೆದಂತಿತ್ತು. ಅವರಿಬ್ಬರೂ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಗೆ 40 ಸಾವಿರ ರೂಪಾಯಿ ನೀಡಲಿಲ್ಲ ಮತ್ತು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯ ಮೆಡಿಕಲ್ ಸ್ಟೋರ್ ಅನ್ನು ಮುಚ್ಚುವ ಬೆದರಿಕೆಯೊಡ್ಡಿದ್ದರು. ಈ ಕಿರುಕುಳದಿಂದಾಗಿ ಸದರಿ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ಪ್ರಾಸಿಕ್ಯೂಷನ್ ವಾದ ಮಂಡಿಸಿತ್ತು.
ಆರೋಪಿಗಳಿಬ್ಬರೂ ಮೃತ ವ್ಯಕ್ತಿಯನ್ನು ಆತ್ಮಹತ್ಯೆಗೆ ಹೇಗೆ ಪ್ರಚೋದಿಸಿದರು ಎಂಬುದರ ಬಗ್ಗೆ ಅರ್ಜಿಯಲ್ಲಿ ಬಲವಾದ ಪುರಾವೆ ಒದಗಿಸಿಲ್ಲ. ಕೇವಲ ಮೃತನ ಪತ್ನಿ ಮತ್ತು ಚಿಕ್ಕಪ್ಪ ನೀಡಿರುವ ಬಾಯಿಮಾತಿನ ಹೇಳಿಕೆಗಳಿಂದ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ. ಜೊತೆಗೆ ಮೃತ ವ್ಯಕ್ತಿ ಬಾಯಿ ಮಾಡಿನಲ್ಲಿ ಹೇಳಿದ್ದನ್ನು ಇವರಿಬ್ಬರೂ ಉಲ್ಲೇಖಿಸಿದ್ದರು ಅಷ್ಟೆ ಎಂದು ವಿಚಾರಣಾ ನ್ಯಾಯಾಲಯವು ತನ್ನ ತೀರ್ಪಿನಲ್ಲಿ ತಿಳಿಸಿದೆ.
ಜೊತೆಗೆ ಆರೋಪಿಗಳಿಬ್ಬರ ವಿರುದ್ಧ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಮಾಡಿದ್ದ ಆಪಾದನೆಗಳಿಗೆ ಪ್ರತ್ಯಕ್ಷ ಸಾಕ್ಷಿಗಳೂ ಅಗಿರಲಿಲ್ಲಎಂಬ ವಿಚಾರಣಾ ನ್ಯಾಯಾಲಯದ ತೀರ್ಪನ್ನು ಹೈಕೋರ್ಟ್ ಪೀಠ ಎತ್ತಿಹಿಡಿದಿತ್ತು.
ಯಾವುದೆ ವ್ಯಕ್ತಿ ಮತ್ತೊಬ್ಬ ವ್ತಕ್ತಿಗೆ ನಿರಂತರವಾಗಿ ಕಿರುಕುಳ ನೀಡುತ್ತಾ ಅಥವಾ ಆತನಿಗೆ ಮಾನಸಿಕವಾಗಿ ಪ್ರಚೋದನೆ ಮಾಡುತ್ತಾ ಆತ ಆತ್ಮಹತ್ಯೆ ಮಾಡಿಕೊಳ್ಳುವವರೆಗೂ ಆ ಪ್ರವೃತ್ತಿ ಮುಂದುವರಿಸಿದ್ದರೆ ಅದನ್ನು ಆತ್ಮಹತ್ಯೆಗೆ ಪ್ರಚೋದನೆ ನೀಡಿರುವ ಪ್ರಕರಣವೆಂದು ಪರಿಗಣಿಸಬಹುದು ಎಂದೂ ಸೆಷನ್ಸ್ ಕೋರ್ಟ್ ಅಭಿಪ್ರಾಯಪಟ್ಟಿತ್ತು. ಇದನ್ನು ಗಮನಿಸಿದ ಬಾಂಬೆ ಹೈಕೋರ್ಟ್ ಏಕ ಸದಸ್ಯ ಪೀಠದ ಅನಿಲ್ ಕಿಲೋರ್ ಅವರು ಪ್ರತಿ ಪ್ರಕರಣದಲ್ಲೂ ಪ್ರಚೋದನೆ ಅಂಶದ ಸತ್ವದ ಆಧಾರ ಮೇಲೆ ಭಿನ್ನ ಭಿನ್ನವಾಗಿ ನೋಡಬೇಕಾಗುತ್ತದೆ ಎಂದು ಮೇಲ್ಮನವಿ ತಿರಸ್ಕರಿಸಿ, ಅಭಿಪ್ರಾಯಪಟ್ಟರು.