ಬೆಂಗಳೂರು, ಮಾರ್ಚ್ 9: ಲೋಕಸಭೆ ಚುನಾವಣೆಗೆ (Lok Sabha Elections) ಕರ್ನಾಟಕದ 28 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆ ಮಾಡುವ ವಿಚಾರವಾಗಿ ಮತ್ತೊಂದು ಸುತ್ತಿನ ಮಾತುಕತೆ ನಡೆಸಲು ಬಿಜೆಪಿ (BJP) ಹೈಕಮಾಂಡ್ ರಾಜ್ಯ ನಾಯಕರಿಗೆ ಮತ್ತೆ ಬುಲಾವ್ ಕಳಿಸಿದೆ. ಇದರಂತೆ ಪ್ರತಿಪಕ್ಷ ನಾಯಕ ಆರ್ ಅಶೋಕ್, ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಇಂದು ಸಂಜೆ ಅಥವಾ ನಾಳೆ ಬೆಳಗ್ಗೆ ದೆಹಲಿಗೆ ತೆರಳಲಿದ್ದಾರೆ. ನಾಳೆ ಸಂಜೆ ದೆಹಲಿಯಲ್ಲಿ ಬಿಜೆಪಿ ಸಿಇಸಿ ಸಭೆ (BJP CEC Meeting) ನಡೆಯಲಿದ್ದು ಅದಕ್ಕೂ ಮುನ್ನ ರಾಜ್ಯ ನಾಯಕರ ಜೊತೆ ಮೂರನೇ ಸುತ್ತಿನ ಚರ್ಚೆ ನಡೆಸುವುದು ಹೈಕಮಾಂಡ್ ಉದ್ದೇಶವಾಗಿದೆ.
ಕೆಲವು ದಿನಗಳ ಹಿಂದಷ್ಟೇ ಬಿಜೆಪಿ ಸಂಸದೀಯ ಮಂಡಳಿ ಸದಸ್ಯರೂ ಆಗಿರುವ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಆರ್ ಅಶೋಕ್, ಬಿವೈ ವಿಜಯೇಂದ್ರ ಮತ್ತಿತರ ರಾಜ್ಯ ನಾಯಕರು ದೆಹಲಿಗೆ ತೆರಳಿ ರಾಜ್ಯದ ಅಭ್ಯರ್ಥಿಗಳ ಆಯ್ಕೆ ಸಂಬಂಧ ವರಿಷ್ಠರ ಜೊತೆ ಮಾತುಕತೆ ನಡೆಸಿ ವಾಪಸಾಗಿದ್ದರು.
ನಂತರದ ಬೆಳವಣಿಗೆಯಲ್ಲಿ, ರಾಜ್ಯದ ಕೆಲವು ಕ್ಷೇತ್ರಗಳ ಹಾಲಿ ಸಂಸದರಿಗೆ ಟಿಕೆಟ್ ಕೈತಪ್ಪುವ ಸಾಧ್ಯತೆ ಇದೆ ಎಂದು ಬಿಜೆಪಿಯ ಉನ್ನತ ಮೂಲಗಳು ತಿಳಿಸಿದ್ದವು. ರಾಜ್ಯದ ಕೆಲವು ಕ್ಷೇತ್ರಗಳಲ್ಲಿ ಹಾಲಿ ಸಂಸದರ ಪರ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಪಕ್ಷದ ಅನೇಕ ಕಾರ್ಯಕರ್ತರು ಅಭ್ಯರ್ಥಿ ಬದಲಾವಣೆಗೆ ಪಟ್ಟು ಹಿಡಿದಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಲವು ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ವರಿಷ್ಠರಿಗೆ ಸವಾಲಾಗಿ ಪರಿಣಮಿಸಿದೆ.
ಇದನ್ನೂ ಓದಿ: ಟಿಕೆಟ್ ತಪ್ಪಿಸಲು ಉಡುಪಿ ಚಿಕ್ಕಮಗಳೂರಿನಲ್ಲಿ ಪಿತೂರಿ: ಬೆಳಗಾವಿಯಲ್ಲಿ ಶೋಭಾ ಕರಂದ್ಲಾಜೆ ಗಂಭೀರ ಆರೋಪ
ಈ ಮಧ್ಯೆ, ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹಗೆ ಈ ಬಾರಿ ಟಿಕೆಟ್ ಕೈತಪ್ಪಲಿದೆ ಎಂಬ ಊಹಾಪೋಹಗಳು ಹರಡಿವೆ. ಈ ವಿಚಾರವಾಗಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ವಿಜಯೇಂದ್ರ, ನಾಲ್ಕು ಗೋಡೆಗಳ ಮಧ್ಯೆ ಅನೇಕ ವಿಚಾರಗಳ ಬಗ್ಗೆ ಚರ್ಚೆ ನಡೆದಿರುತ್ತದೆ.ಆ ಎಲ್ಲ ಮಾಹಿತಿಗಳನ್ನು ಮಾಧ್ಯಮದವರ ಮುಂದೆ ಬಹಿರಂಗಪಡಿಸಲಾಗದು ಎಂದು ಹೇಳಿದ್ದಾರೆ. ಇದು ಪ್ರತಾಪ್ ಸಿಂಹಗೆ ಟಿಕೆಟ್ ಕೈತಪ್ಪುವ ಬಗ್ಗೆ ಹಬ್ಬಿರುವ ವದಂತಿಗಳಿಗೆ ಮತ್ತಷ್ಟು ಪುಷ್ಟಿ ನೀಡಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ