
ಬೆಂಗಳೂರು, (ನವೆಂಬರ್ 30): ಸಾಂಬಾರ್‌ಗೂ ಬೇಕು. ಸಾಗುಗೂ ಬೇಕು. ಥರಥರ ಚಳಿನಡುವೆ ಮಾಡಿಕೊಳ್ಳೋ ಬಿಸಿಬಿಸಿ ರಸಂನಲ್ಲೂ ಇದರ ಪಾತ್ರವೇ ದೊಡ್ಡದು.ವೆಜ್,ನಾನ್‌ವೆಜ್ ಅಂತಾ ಎಲ್ಲಾ ಬಗೆಯ ಅಡುಗೆಯಲ್ಲೂ ಮೇಲುಗೈ ಸಾಧಿಸಿರುವ ತರಕಾರಿ ಅಂದ್ರೆ ಅದು ಟೊಮೆಟೊ (Tomato). ಇದೀಗ ಅದೇ ಕೆಂಪು ಸುಂದರಿ ಟೊಮೆಟೊ ದರ ಈಗ ಮುಗಿಲು ಮುಟ್ಟಿದೆ. ಇನ್ನೊಂದೆಡೆ ಸಿಲಿಕಾನ್ ಸಿಟಿ ಜನರು ನುಗ್ಗೆಕಾಯಿ ಸಹವಾಸ ಬೇಡ ಅಂತಿದ್ದಾರೆ.ಇದರ ಜೊತೆಯಲ್ಲಿ ಉಳಿದಂತೆ ಅವರೆಕಾಯಿ, ಬೀನ್ಸ್, ತೊಂಡೆಕಾಯಿ, ಕ್ಯಾರೆಟ್, ಹಸಿಮೆಣಸಿನಕಾಯಿ ಸೇರಿದಂತೆ ಇತರೆ ಬಹುತೇಕ ತರಕಾರಿಗಳು (vegetables price) ನೂರರ ಗಡಿಯಲ್ಲೇ ಇವೆ
ಈಗಾಗಲೇ ಟೊಮೆಟೊ ಬೆಲೆ ಅರ್ಧ ಶತಕ ಬಾರಿಸಿದ್ದು, ಉಳಿದ ತರಕಾರಿಗಳು ನಿಧಾನವಾಗಿ ಶತಕಬಾರಿಸುತ್ತಿದೆ.ಬೆಂಗಳೂರಿಗೆ ಈ ಹಿಂದೆ ಪ್ರತಿದಿನ 100 ಟನ್ ನುಗ್ಗೆಕಾಯಿ ಸಪ್ಲೈ ಆಗ್ತಿತ್ತು. ಆದರೆ ಇದೀಗ ವಾತಾವರಣ ಬದಲಾವಣೆಯಿಂದ ನುಗ್ಗೆಕಾಯಿ ಬೆಳೆ ಸರಿಯಾಗಿ ಬಂದಿಲ್ವಂತೆ, ಇದರಿಂದ ಪ್ರತಿದಿನ ನಗರಕ್ಕೆ 30 ರಿಂದ 40 ಟನ್ ಮಾತ್ರ ನುಗ್ಗೆಕಾಯಿ ಸಪ್ಲೈ ಆಗ್ತಿದ್ಯಂತೆ.ಇತ್ತ ಒಂದು ಕೆಜಿ ನುಗ್ಗೆಕಾಯಿ 500 ರಿಂದ 600 ರುಪಾಯಿ ಆಗಿರುವ ಕಾರಣ ಗೃಹಿಣಿಯರು ನುಗ್ಗೆಕಾಯಿ ಸಹವಾಸ ಬೇಡ ಅಂತಿದ್ದಾರೆ.
ಆರಕ್ಕೇರೋ, ಮೂರಕ್ಕಿಳಿಯೋ ತರಕಾರಿ ಅಂತಾ ಕರೆಸಿಕೊಳ್ಳೋ ತರಕಾರಿ ಅಂದ್ರೆ ಟೊಮೆಟೊ. ಯಾಕಂದ್ರೆ ಒಮ್ಮೆ 1 ರೂಪಾಯಿಗೆ ಒಂದು ಕೆಜಿ ಆಗುತ್ತೆ, ಮತ್ತೊಮ್ಮೆ ಶತಕದ ಆಟ ಆಡುತ್ತೆ. ಹೀಗೆ ಆಟವಾಡ್ತಿರೋ ಟೊಮೆಟೊ ಈಗ ಶತಕದ ಸಮೀಪ ಬಂದು ನಿಂತಿದೆ. ರಾಜ್ಯದಲ್ಲಿ ಟೊಮೆಟೊಗೆ ಫೇಮಸ್ ಆಗಿರೋ ಕೋಲಾರದಲ್ಲೇ 15 ಕೆಜಿ ಒಂದು ಬಾಕ್ಸ್‌ನ ಬೆಲೆ 600 ರಿಂದ850 ಆಗಿದೆ. ಅಂದ್ರೆ ಹೋಲ್‌ಸೇಲ್ ದರವೇ ಪ್ರತೀ ಕೆಜಿಗೆ 50 ರಿಂದ 60 ರೂಪಾಯಿ ಆಗಿದೆ. ಗ್ರಾಹಕರಿಗೆ 70- 80 ರೂಪಾಯಿಗೆ ಸಿಗ್ತಿದೆ. ಹೊರ ರಾಜ್ಯಗಳಲ್ಲಿ ಟೊಮೆಟೊಗೆ ಬೇಡಿಕೆ ಹೆಚ್ಚಾಗಿದೆ. ಆದ್ರೆ ಬೇಡಿಕೆಯಂತೆ ಮಾರುಕಟ್ಟೆಗೆ ಟೊಮೆಟೊ ಬರ್ತಿಲ್ಲ. ಹೀಗಾಗೇ ಬೆಲೆ ಏರಿಕೆ ಆಗಿದೆ.
ಇನ್ನು ಟೊಮೆಟೊ ಜತೆ ನುಗ್ಗೆಕಾಯಿ ಕೂಡಾ ಭರ್ಜರಿ ಬೆಲೆ ಹೆಚ್ಚಿಸಿಕೊಂಡಿದೆ. ಬೆಂಗಳೂರಿನಿಗೆ ನಿತ್ಯ 100 ಟನ್ ನುಗ್ಗೆಕಾಯಿ ಬರ್ತಿತ್ತು. ಆದ್ರೀಗ ಅದು 40 ರಿಂದ 30 ಟನ್‌ಗೆ ಇಳಿದಿದೆ. ಹೀಗೆ ಆವಕ ಕುಸಿತ ಆಗ್ತಿದ್ದಂತೆ ಬೆಲೆ ಏರಿಕೆ ಆಗಿದೆ. ಒಂದು ಕೆಜಿ ನುಗ್ಗೆಕಾಯಿ ಬೆಲೆ ಬರೋಬ್ಬರಿ 600 ರೂಪಾಯಿಗೆ ಏರಿಕೆ ಆಗಿದೆ. ತಮಿಳುನಾಡಿನಲ್ಲಿ ನುಗ್ಗೆಕಾಯಿ ಹೆಚ್ಚಾಗಿ ಬೆಳೆಯಲಾಗ್ತಿದ್ದು, ಅಲ್ಲಿನ ಬೆಳೆ ಬರೋವರೆಗೂ ಇದೇ ದರ ಮುಂದುವರಿಯಲಿದೆ .ದರ ಹೆಚ್ಚಾಗ್ತಿದ್ದಂತೆ ಗೃಹಿಣಿಯರು ನುಗ್ಗೆಕಾಯಿ ಬಳಕೆಯನ್ನೇ ನಿಲ್ಲಿಸಲು ಮುಂದಾಗಿದ್ದಾರೆ.
ಇನ್ನೂ ಹೋಲ್ ಸೇಲ್ ನಲ್ಲಿ 500 ರುಪಾಯಿ ಕೆಜಿಗೆ ಮಾರಾಟವಾಗುತ್ತಿರುವ ನುಗ್ಗೆಕಾಯಿ, ರಿಟೇಲ್ ನಲ್ಲಿ 600 ಗೆ ಮಾರಾಟವಾಗ್ತಿದೆ. ಶೇಕಡ 60% ರಷ್ಟು ನುಗ್ಗೆಕಾಯಿ ಪೊರೈಕೆ ಕುಸಿತ ಕಂಡಿದ್ಯಂತೆ. ತಮಿಳುನಾಡಿನಿಂದ ನುಗ್ಗೆಕಾಯಿ ಸಪ್ಲೈ ಬರುವವರೆಗೂ ದರದಲ್ಲಿ ಕಡಿಮೆ ಆಗೋದಿಲ್ವಂತೆ. ಈಗಾಗಲೇ ತಮಿಳುನಾಡಿನಲ್ಲಿ ರೈತರು ಹೆಚ್ಚಾಗಿ ಬೆಳೆ ಬೆಳೆದಿದ್ದು, ಜನವರಿ ಫೆಬ್ರವರಿಯಲ್ಲಿ ಒಂದಷ್ಟು ಬೆಲೆ ಕಡಿಮ ಆಗಲಿದ್ಯಂತೆ. ಈ ಹಿಂದೆ ನುಗ್ಗೆಕಾಯಿ ಬೆಲೆ ಕಡಿಮೆ ಇದ್ದಾಗ ಮಾರಾಟ ಮಾಡ್ತಿದ್ವಿ ದರ ಏರಿಕೆ ಆದ ಮೇಲೆ ನುಗ್ಗೆಕಾಯಿ ಮಾರಾಟ ಮಾಡುವುದನ್ನು ಬಿಟ್ಟಿದ್ದೇವೆ ಅಂತಾರೇ ತರಕಾರಿ ವ್ಯಾಪಾರಿ ಅಜಯ್.
ಒಟ್ಟಿನಲ್ಲಿ ಅಕಾಲಿಕ ಮಳೆ ಮತ್ತು ಚಂಡಮಾರುತದ ಎಫೆಕ್ಟ್ ನಿಂದ ನುಗ್ಗೆಕಾಯಿ ಸೇರಿದಂತೆ ತರಕಾರಿ ದರ ಗಗನಕ್ಕೇರಿದ್ದು, ಡಿಸೆಂಬರ್ ನಲ್ಲೂದರೂ ದರ ಕಡಿಮೆ ಆಗಲಿದ್ಯಾ ಎಂದು ಕಾದು ನೋಡಬೇಕಿದೆ.
Published On - 9:57 pm, Sun, 30 November 25