ಕರ್ನಾಟಕ ಕಾಂಗ್ರೆಸ್ ಅಧಿಕಾರ ಹಂಚಿಕೆ ಗೊಂದಲ: ಸೋನಿಯಾ ಗಾಂಧಿ ನಿವಾಸದಲ್ಲಿ ಹೈವೋಲ್ಟೇಜ್ ಮೀಟಿಂಗ್, ಚರ್ಚೆ ಆಗಿದ್ದೇನು?
ಕರ್ನಾಟಕ ಕಾಂಗ್ರೆಸ್‌ನಲ್ಲಿ ಅಧಿಕಾರ ಹಂಚಿಕೆ ಬಿಕ್ಕಟ್ಟಿಗೆ ತಾತ್ಕಾಲಿಕ ವಿರಾಮ ಬಿದ್ದಿದೆ. ಆದಾಗ್ಯೂ ಹೈಕಮಾಂಡ್ ನಾಯಕರು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ದೆಹಲಿಗೆ ಕರೆಸಿ ಚರ್ಚಿಸುವ ಸಾಧ್ಯತೆಯಿದೆ. ರಾಜ್ಯ ರಾಜಕೀಯ ವಿಚಾರವಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ದೆಹಲಿಯಲ್ಲಿ ಸೋನಿಯಾ ಗಾಂಧಿ ಜೊತೆ ಚರ್ಚಿಸಿದ್ದು, ಗೊಂದಲಕ್ಕೆ ತೆರೆ ಎಳೆಯಲು ಮನವಿ ಮಾಡಿದ್ದಾರೆ.

ನವದೆಹಲಿ, ಡಿಸೆಂಬರ್ 1: ಕರ್ನಾಟಕ ಕಾಂಗ್ರೆಸ್ (Congress) ಅಧಿಕಾರ ಹಂಚಿಕೆ ಚರ್ಚೆಗೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ. ಅಧಿವೇಶನ ಮುಗಿದ ಬಳಿಕ ಮತ್ತೆ ಕುರ್ಚಿ ಕಿಚ್ಚು ಭುಗಿಲೇಳು ಸಾಧ್ಯತೆ ಇದೆ. ಅಷ್ಟರಲ್ಲಿ ಕಿತ್ತಾಟಕ್ಕೆ ಮದ್ದರೆಯಲು ಹೈಕಮಾಂಡ್ ಯೋಜನೆ ಹಾಕಿಕೊಳ್ಳುತ್ತಿದೆ. ಸದ್ಯಕ್ಕೆ ಬೀಸುವ ದೊಣ್ಣೆಯಿಂದ ಹೈಕಮಾಂಡ್ ಪಾರಾಗಿದ್ದು, ಇದೇ ವಾರದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ರನ್ನು ದೆಹಲಿಗೆ ಕರೆಸಿ ಮಾತಾಡುವ ಸಾಧ್ಯತೆ ಇದೆ. ಈಮಧ್ಯೆ ದೆಹಲಿಯಲ್ಲಿ ಸೋನಿಯಾ ಗಾಂಧಿ ನಿವಾಸದಲ್ಲಿ ಭಾನುವಾರ ಮಹತ್ವದ ಸಭೆ ನಡೆದಿದೆ. ಕಾಂಗ್ರೆಸ್ ಸಂಸದೀಯ ಸಭೆ ಬಳಿಕ ಸೋನಿಯಾ ಜೊತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೆಲ ಹೊತ್ತು ರಾಜ್ಯ ವಿದ್ಯಾಮಾನಗಳ ಬಗ್ಗೆ ಚರ್ಚಿಸಿದ್ದಾರೆ. ಸೋನಿಯಾಗೆ ವರದಿ ನೀಡಿರುವ ಮಲ್ಲಿಕಾರ್ಜುನ ಖರ್ಗೆ, ಗೊಂದಲಕ್ಕೆ ತೆರೆ ಎಳೆಯುವಂತೆ ಮನವಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕರ್ನಾಟಕ ಕಾಂಗ್ರೆಸ್ ಅಧಿಕಾರ ಹಂಚಿಕೆ ವಿಚಾರವಾಗಿ ಎರಡ್ಮೂರು ನಿಮಿಷಗಳ ಕಾಲ ಖೆರ್ಗೆ ಹಾಗೂ ಸೋನಿಯಾ ಚರ್ಚಿಸಿದ್ದಾರೆ. ಸೋನಿಯಾಗೆ ವರದಿ ನೀಡಿರುವ ಮಲ್ಲಿಕಾರ್ಜುನ ಖರ್ಗೆ, ಸದ್ಯ ಗೊಂದಲಕ್ಕೆ ತೆರೆ ಎಳೆಯುವಂತೆ ಮನವಿ ಮಾಡಿದ್ದಾರೆ.
ನನ್ನ -ಸಿಎಂ ನಡುವೆ ಭಿನ್ನಾಭಿಪ್ರಾಯವಿಲ್ಲ: ಡಿಕೆ ಶಿವಕುಮಾರ್ ಪುನರುಚ್ಚಾರ
ಏತನ್ಮಧ್ಯೆ, ಬ್ರೇಕ್ಫಾಸ್ಟ್ ಮೀಟಿಂಗ್ ಕುರಿತು ಮತ್ತೆ ಪ್ರತಿಕ್ರಿಯೆ ನೀಡಿರುವ ಡಿಸಿಎಂ ಡಿಕೆ ಶಿವಕುಮಾರ್, ಸಿಎಂ ಹಾಗೂ ತಮ್ಮ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಪುನರುಚ್ಚರಿಸಿದ್ದಾರೆ. ನಾನು ಯಾವತ್ತೂ ಗುಂಪುಗಾರಿಕೆ ಮಾಡಲ್ಲ. ಏಳೆಂಟು ಶಾಸಕರನ್ನ ದೆಹಲಿಗೆ ಕರೆದುಕೊಂಡು ಹೋಗುವುದು ದೊಡ್ಡ ಕೆಲಸವಲ್ಲ. ನಾನು ಪಕ್ಷದ ಅಧ್ಯಕ್ಷ. 140 ಶಾಸಕರನ್ನು ಕರೆದುಕೊಂಡು ಒಟ್ಟಿಗೆ ಹೋಗುತ್ತೇನೆ ಎಂದಿದ್ದಾರೆ. ಇನ್ನು ದೆಹಲಿಗೆ ಹೋಗುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಡಿಕೆಶಿ, ಅದು ನಮ್ಮ ದೇವಸ್ಥಾನ ಎಂದರು.
ದೆಹಲಿ ಭೇಟಿ ಬಗ್ಗೆ ಡಿಕೆ ಶಿವಕುಮಾರ್ ಇನ್ನೂ ಗುಟ್ಟು ಉಳಿಸಿಕೊಂಡಿದ್ದರೆ, ಅತ್ತ ಡಿಕೆಶಿ ಪರ ಮತ್ತು ಸಿಎಂ ಪರ ಘೋಷಣೆಗಳು, ಪೂಜೆಗಳೂ ಜೋರಾಗಿವೆ. ಕುರುಬ ಸಮುದಾಯ ಸಿದ್ದರಾಮಯ್ಯ ಬೆನ್ನಿಗೆ ನಿಂತಿದ್ದು, ಕಲಬುರಗಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಸಿದ್ದರಾಮಯ್ಯ ಬದಲಿಸಿದ್ರೆ ಹುಷಾರ್ ಎನ್ನುವ ಎಚ್ಚರಿಕೆ ಕೊಟ್ಟಿದ್ದಾರೆ.
ಮತ್ತೊಂದೆಡೆ, ಡಿಕೆಶಿ ಸಿಎಂ ಆಗಲೆಂದು ಮೈಸೂರಿನಲ್ಲಿ ಮುಸ್ಲಿಮರು ಸಾಮೂಹಿಕವಾಗಿ ಪ್ರಾರ್ಥನೆ ಮಾಡಿದ್ದಾರೆ. ಹಜರತ್ ಸೈಯದ್ ಗುಮನ್ ಶಾ ಖಾದ್ರಿ ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸುವ ಮೂಲಕ ಡಿಕೆಶಿ ಪರ ನಿಂತಿದ್ದಾರೆ.
ಇದನ್ನೂ ಓದಿ: ಗೊಂದಲ ತಿಳಿಗೊಳಿಸಲು ಕರೆದ ಪತ್ರಿಕಾಗೋಷ್ಠಿಯಲ್ಲೇ ಹಲವು ಅನುಮಾನಗಳ ಉಳಿಸಿಹೋದ ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್!
ರಾಜ್ಯ ಸರ್ಕಾರ ಎರಡೂವರೆ ವರ್ಷ ಪೂರೈಸಿದ ಬೆನ್ನಲ್ಲೇ ಅನೇಕ ಬೆಳವಣಿಗೆಗಳು ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ನಡೆಯುತ್ತಲೇ ಇವೆ. ಏಕಾಏಕಿ ಬಿರುಗಾಳಿಯಂತೆ ಬೀಸಿದ್ದ ಬದಲಾವಣೆಯ ಚರ್ಚೆ ಕೊಂಚ ತಣ್ಣಗಾದಂತೆ ಕಾಣಿಸುತ್ತಿದೆ. ಆದರೆ ಅದ್ಯಾವಾಗ ಚಂಡಮಾರುತ ಬಂದಪ್ಪಳಿಸುತ್ತದೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲ.



