ಮನೆಗಳ್ಳತನ ತಡೆಗೆ ಎಐ ಆಯ್ತು, ಈಗ ಮಹಿಳೆಯರು ಮಕ್ಕಳ ರಕ್ಷಣೆಗೆ ಸುರಕ್ಷಾ ಆ್ಯಪ್: ತುಮಕೂರಿನಲ್ಲಿ ವಿಭಿನ್ನ ಪ್ರಯತ್ನ
ಮನೆಗಳ್ಳತನ ತಡೆಗೆ ಎಐ ಆಧಾರಿತ ವ್ಯವಸ್ಥೆ ಜಾರಿಗೆ ತಂದು ಗಮನ ಸೆಳೆದಿದ್ದ ತುಮಕೂರು ಪೊಲೀಸರು ಈಗ ಮಹಿಳೆಯರು ಹಾಗೂ ಮಕ್ಕಳ ರಕ್ಷಣೆ ವಿಚಾರದಲ್ಲಿಯೂ ವಿಭಿನ್ನ ಕ್ರಮಕ್ಕೆ ಮುಂದಾಗಿದ್ದಾರೆ. ಬೆಂಗಳೂರು ಮಾದರಿಯಲ್ಲೇ ತುಮಕೂರಿನಲ್ಲೂ ಸುರಕ್ಷಾ ಆ್ಯಪ್ ಆಧಾರಿತ ವ್ಯವಸ್ಥೆ ಜಾರಿಗೆ ತರಲಾಗಿದ್ದು, ಹಳ್ಳಿ ಹಳ್ಳಿಯಲ್ಲೂ ಆ್ಯಪ್ ಮುಖಾಂತರ ಮಹಿಳೆಯರ ರಕ್ಷಣೆಗೆ ಪೊಲೀಸರು ಮುಂದಾಗಿದ್ದಾರೆ.

ತುಮಕೂರು, ಡಿಸೆಂಬರ್ 1: ತುಮಕೂರಿನಲ್ಲಿ (Tumkur) ಮಹಿಳೆಯರ ಸುರಕ್ಷತೆಯನ್ನು ಇನ್ನಷ್ಟು ಬಲಪಡಿಸಲು ಪೊಲೀಸರು ಮುಂದಾಗಿದ್ದಾರೆ. ಬೆಂಗಳೂರಿನ ನಂತರ ಇದೀಗ ತುಮಕೂರಿನಲ್ಲೂ ಸುರಕ್ಷಾ ಆ್ಯಪ್ (SOS) ಆ್ಯಪ್ ಅಧಿಕೃತವಾಗಿ ಆರಂಭವಾಗಿದ್ದು, ತುರ್ತು ಸಂದರ್ಭಗಳಲ್ಲಿ ಮಹಿಳೆಯರು ಬಳಸಬಹುದಾದ ಅತ್ಯಾಧುನಿಕ ರಕ್ಷಣಾ ವ್ಯವಸ್ಥೆಯಾಗಿ ಇದು ರೂಪುಗೊಂಡಿದೆ. ಕೆಲಸಕ್ಕೆ ತೆರಳುವ ಮಹಿಳೆಯರು, ಕಾಲೇಜು ಯುವತಿಯರು ಹಾಗೂ ನಿರ್ಜನ ಪ್ರದೇಶಗಳಲ್ಲಿ ಸಂಚರಿಸುವ ಸಂದರ್ಭಗಳಲ್ಲಿ ಎದುರಾಗುವ ಆತಂಕ, ಅಸಹಜ ಘಟನೆಗಳು ಮತ್ತು ಪುಂಡರ ಕಾಟಕ್ಕೆ ಈಗ ಭದ್ರತಾ ತಾಂತ್ರಿಕ ಅಸ್ತ್ರವಾಗಿದೆ.
ಸುರಕ್ಷಾ ಆ್ಯಪ್ ಹೇಗೆ ಕೆಲಸ ಮಾಡುತ್ತೆ?
ಯಾವುದೇ ತುರ್ತು ಸಂದರ್ಭದಲ್ಲಿ ಮಹಿಳೆಯರು ಸುರಕ್ಷಾ ಆ್ಯಪ್ ಪ್ಯಾನಿಕ್ ಬಟನ್ ಒತ್ತಿದರೆ ತಕ್ಷಣವೇ ಅಲರ್ಟ್ ಸಂದೇಶ ಸೆಂಡ್ ಆಗುತ್ತದೆ. ಇದು ಸ್ಮಾರ್ಟ್ ಸಿಟಿ ಕಚೇರಿ ಮುಖಾಂತರವಾಗಿ ಕಂಟ್ರೋಲ್ ರೂಮ್ಗೆ ತಲುಪುತ್ತದೆ. ಆ ಬಳಿಕ ಜಿಪಿಎಸ್ ಆಧಾರದ ಮೇಲೆ ಮಹಿಳೆಯಿರುವ ಸ್ಥಳವನ್ನು ನಿಖರವಾಗಿ ಪತ್ತೆಹಚ್ಚಿ, ಅತೀ ಸಮೀಪದ ಗಸ್ತು ಸಿಬ್ಬಂದಿಗೆ ಮಾಹಿತಿ ನೀಡುತ್ತಾರೆ. ಅವರು ತಕ್ಷಣವೇ ಸ್ಥಳಕ್ಕೆ ನೆರವಿಗೆ ಧಾವಿಸುತ್ತಾರೆ.
ಜಿಲ್ಲೆಯಾದ್ಯಂತ ಮಹಿಳೆಯರ ರಕ್ಷಣೆಗಾಗಿ ಈ ಆ್ಯಪ್ ಅಭಿವೃದ್ಧಿ ಪಡಿಸಲಾಗಿದೆ. SOS ಆ್ಯಪ್ನಲ್ಲಿ ಪ್ಯಾನಿಕ್ ಬಟನ್ ಒತ್ತುವ ಮೂಲಕ ತ್ವರಿತ ಸ್ಪಂದನೆ ನೀಡಲು ಸ್ಪಾರ್ಟ್ ಸಿಟಿ ಕಚೇರಿಯಲ್ಲಿ ಸಿಬ್ಬಂದಿಗಳ ನೇಮಿಸಲಾಗಿದೆ. ಮಹಿಳಾ ಭದ್ರತೆಯನ್ನು ಪ್ರಾಮುಖ್ಯವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರದ ಯೋಜನೆಯಡಿ ಜಿಲ್ಲೆಯ ಸ್ಪಾರ್ಟ್ ಸಿಟಿ ಮೂಲಕ ಅಭಿವೃದ್ಧಿಪಡಿಸಿರುವ ಈ ಆ್ಯಪ್‌ಗೆ ಗೃಹ ಸಚಿವರು ಚಾಲನೆ ನೀಡಿ ಸಾರ್ವಜನಿಕ ಬಳಕೆಗೆ ಬಿಡುಗಡೆ ಮಾಡಿದ್ದಾರೆ. ತುಮಕೂರು ನಗರದಲ್ಲಿ ರಾತ್ರಿ ವೇಳೆ, ಒಂಟಿ ರಸ್ತೆಗಳಲ್ಲಿ ಅಥವಾ ಅಸುರಕ್ಷಿತ ಪರಿಸ್ಥಿತಿಯಲ್ಲಿ ಸಂಚರಿಸುವ ಮಹಿಳೆಯರಿಗೆ ಈಗ SOS ಆ್ಯಪ್ ನೆರವಾಗಲಿದೆ.
ಇದನ್ನೂ ಓದಿ: ಮನೆಗಳ್ಳತನ ತಡೆಗೆ ತುಮಕೂರು ಪೊಲೀಸರ ಮಾಸ್ಟರ್ ಪ್ಲ್ಯಾನ್: ತಂತ್ರಜ್ಞಾನ ಬಳಸಿ ಹೊಸ ವ್ಯವಸ್ಥೆ ಜಾರಿ
ಒಟ್ಟಾರೆ ತುಮಕೂರು ಪೊಲೀಸರ ಈ ಹೊಸ ಪ್ರಯತ್ನಕ್ಕೆ ಪ್ರಶಂಸೆ ವ್ಯಕ್ತವಾಗಿದ್ದು, ಮುಂದಿನ ದಿನಗಳಲ್ಲಿ ಮಹಿಳೆಯರ ರಕ್ಷಣೆಗೆ ಈ ಆ್ಯಪ್ ಎಷ್ಟರ ಮಟ್ಟಿಗೆ ಸಹಕಾರಿಯಾಗಲಿದೆ ಎಂಬದನ್ನು ಕಾದು ನೋಡಬೇಕಿದೆ.



