ಕರ್ನಾಟಕ ವಿಧಾನಸಭೆ ಚುನಾವಣೆ ಎಫೆಕ್ಟ್: ಮತದಾನ ದಿನ ಜೋಗ ಜಲಪಾತ ಸೇರಿ ರಾಜ್ಯದ ಹಲವು ಪ್ರವಾಸಿ ತಾಣಗಳು ಬಂದ್‌

|

Updated on: Apr 28, 2023 | 11:52 AM

ಮತದಾನ ದಿನವನ್ನು ಅನೇಕರು ರಜೆ ದಿನವನ್ನಾಗಿ ಮಾಡಿಕೊಂಡು ಮೋಜು-ಮಸ್ತಿ ಮಾಡಲು ಸಲುವಾಗಿ ಪ್ರವಾಸಿ ಕೇಂದ್ರಗಳಿಗೆ ತೆರಳುವುದು ಸಾಮಾನ್ಯವಾಗಿದ್ದು, ಈ ಬಾರಿ ಇದಕ್ಕೆ ಬ್ರೇಕ್‌ ಹಾಕಲು ಚುನಾವಣಾ ಆಯೋಗ ಮುಂದಾಗಿದೆ.

ಕರ್ನಾಟಕ ವಿಧಾನಸಭೆ ಚುನಾವಣೆ ಎಫೆಕ್ಟ್: ಮತದಾನ ದಿನ ಜೋಗ ಜಲಪಾತ ಸೇರಿ ರಾಜ್ಯದ ಹಲವು ಪ್ರವಾಸಿ ತಾಣಗಳು ಬಂದ್‌
ಜೋಗ ಜಲಪಾತ
Follow us on

ಬೆಂಗಳೂರು: ಬೇಸಿಗೆ ಎಂದರೆ ಮಕ್ಕಳೊಡನೆ ರಜೆಯ(Summer Holidays ಮಜ ಅನುಭವಿಸುವ ಕಾಲ. ಸ್ಕೂಲ್ ಬ್ಯಾಗ್ ಒಂದು ಮೂಲೆಯಲ್ಲಿಟ್ಟು ಎಂಜಾಯ್ ಮಾಡುವ ಸಮಯ. ಆದರೆ, ಕರ್ನಾಟಕದಲ್ಲಿ ಇದೀಗ ವಿಧಾನಸಭೆ ಚುನಾವಣೆ (Karnataka Assembly Elections 2023) ಎದುರಾಗಿದ್ದು, ಮಕ್ಕಳ ರಜಾ ಮಜಕ್ಕೆ ಅಡ್ಡಿಯಾಗಿದೆ. ಹೌದು..ಮೇ 10ರಂದು ಮತದಾನ ಇರುವುದರಿಂದ ಜನ ಎಲ್ಲೆಡೆ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ರಾಜಕೀಯ ನಾಯಕರು ಸಹ ಸ್ಥಳೀಯ ಜನರನ್ನು ಕರೆದುಕೊಂಡು ಮತಬೇಟೆ ನಡೆಸಿದ್ದಾರೆ. ಇದರಿಂದ ಕರ್ನಾಟಕದ ಪ್ರಮುಖ ಪ್ರವಾಸಿ ತಾಣಗಳೆಲ್ಲವೂ(Tourism) ಪ್ರವಾಸಿಗರಿಲ್ಲದೆ ಭಣಗುಡುತ್ತಿವೆ. ಇನ್ನು ಮತದಾನ ದಿನದಂದು ಅಂದರೆ ಮೇ 10ರಂದು ಕೆಲ ಪ್ರವಾಸಿ ತಾಣಗಳನ್ನು ಬಂದ್‌ ಮಾಡಲು ತೀರ್ಮಾನಿಸಲಾಗಿದೆ. ಹೌದು…ಮತದಾನ ದಿನವನ್ನು ಅನೇಕರು ರಜೆ ದಿನವನ್ನಾಗಿ ಮಾಡಿಕೊಂಡು ಮೋಜು-ಮಸ್ತಿ ಮಾಡಲು ಸಲುವಾಗಿ ಪ್ರವಾಸಿ ಕೇಂದ್ರಗಳಿಗೆ ತೆರಳುವುದು ಸಾಮಾನ್ಯವಾಗಿದ್ದು, ಈ ಬಾರಿ ಇದಕ್ಕೆ ಬ್ರೇಕ್‌ ಹಾಕಲು ಚುನಾವಣಾ ಆಯೋಗ ಮುಂದಾಗಿದೆ. ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು. ಈ ಮೂಲಕ ಮತದಾನದ ಪರ್ಸೆಂಟ್ ಹೆಚ್ಚಿಸುವ ಉದ್ದೇಶದಿಂದ ಈ ನಿರ್ಧಾರ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಜೋಗ ಜಲಪಾತ ಬಂದ್​

ಮೇ 10ರಂದು ಮತದಾನ ಇರುವುದರಿಂದ ಅಂದು ವಿಶ್ವ ವಿಖ್ಯಾತ ಜೋಗ ಜಲಪಾತ(Jog falls)ದಲ್ಲಿ ಪ್ರವಾಸಿಗರಿಗೆ ಪ್ರವೇಶ ನಿಷೇಧ ಇದೆ. ಮತದಾನ ದಿನದಂದು ಬಹಳಷ್ಟುಮಂದಿ ಮತದಾರರು ತಮ್ಮ ಹಕ್ಕು ಚಲಾಯಿಸುವುದನ್ನುಬಿಟ್ಟು ರಜಾ ಮಜಾ ಸವಿಯಲು ವಿವಾಸಿ ತಾಣಗಳಿಗೆ ಹೋಗುವ ಪರಿಪಾಠ ಬೆಳೆಸಿಕೊಂಡು ಬಂದಿದ್ದಾರೆ. ಇದಕ್ಕೆ ಬ್ರೇಕ್‌ ಹಾಕುವ ಉದ್ದೇಶದಿಂದ ಚುನಾವಣೆ ದಿನದಂದು ಜೋಗ ಜಲಪಾತ ವೀಕ್ಷಣೆಗೆ ಜಿಲ್ಲಾಧಿಕಾರಿ ಡಾ.ಆರ್‌.ಸೆಲ್ವಮಣಿ ನಿರ್ಬಂಧ ವಿಧಿಸಿದ್ದಾರೆ.

ಮತದಾನದಿಂದ ಪ್ರವಾಸಿ ತಾಣಗಳಿಗೆ ನಿರ್ಬಂಧ ಹೇರದೆ ಇದ್ದರೆ ಬರುವ ಪ್ರವಾಸಿಗರಿಗಾಗಿ ನಿರ್ವಹಣಾ ಪ್ರಾಧಿಕಾರ ಸಿಬ್ಬಂದಿ ಕರ್ತವ್ಯಪಾಲನೆ ಮಾಡಬೇಕಾಗುತ್ತದೆ. ಇವರಿಗೆ ಪೂರಕವಾಗಿ ಸ್ಥಳೀಯವಾಗಿರುವ ವ್ಯಾಪಾರಸ್ಥರು, ಛಾಯಚಿತ್ರಗಾರರು, ಬೀದಿ ಬದಿ ವ್ಯಾಪಾರಿಗಳು, ಗೈಡ್‌ಗಳು, ಆಟೋಚಾಲಕರು, ಟ್ಯಾಕ್ಸಿ ಚಾಲಕರು ಭದ್ರತಾ ಸಿಬ್ಬಂದಿ ಸೇರಿದಂತೆ ಅನೇಕರು ಮತದಾನದಿಂದ ಹೊರಗುಳಿಯುವ ಸಾಧ್ಯತೆ ಇದೆ. ಈ ಹಿಂದೆ ಮತದಾನ ದಿನಗಳಂದು ಜೋಗ ನಿರ್ವಹಣಾ ಪ್ರಾಧಿಕಾರದಲ್ಲಿ ದಾಖಲಾದ ಪ್ರವಾಸಿಗರ ಸಂಖ್ಯೆ ಅಂಕಿ ಅಂಶಗಳನ್ನು ಪರಿಗಣಿಸಿ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಇದಕ್ಕೆ ಪೂರಕವಾಗಿ ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮದಲ್ಲೂ ನಿಷೇಧ ಇರಲಿದೆ ಎಂದು ಅಲ್ಲಿನ ಸಿಬ್ಬಂದಿ ತಿಳಿಸಿದ್ದಾರೆ. ಇನ್ನು ಸಕ್ರೆಬೈಲು ಆನೆ ಬಿಡಾರದಲ್ಲಿ ನಿಷೇಧ ಬಗ್ಗೆ ಅಧಿಕಾರಿಗಳು ಈವರೆಗೆ ತೀರ್ಮಾನ ಮಾಡಿಲ್ಲ. ಆದರೆ, ಇಲ್ಲಿಯೂ ನಿಷೇಧ ಹೇರುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಅತ್ಯಧಿಕ ಬಿಸಿಲು ಮತ್ತು ಚುನಾವಣೆಯ ಹಿನ್ನೆಲೆಯಲ್ಲಿ ಬೇಸಿಗೆ ವೇಳೆ ಪ್ರವಾಸಿ ತಾಣಗಳಿಗೆ ಭೇಟಿ ನೀಡುವವರ ಸಂಖ್ಯೆಯಲ್ಲಿಯೂ ಗಣನೀಯ ಇಳಿಕೆ ಕಂಡು ಬಂದಿದೆ. ಅಲ್ಲದೇ ಯುವಕರು ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಹೀಗಾಗಿ ದಕ್ಷಿಣ ಕನ್ನಡ, ಚಿಕ್ಕಮಗಳೂರು, ಉತ್ತರ ಕನ್ನಡ, ಶಿವಮೊಗ್ಗ, ಉತ್ತರ ಕರ್ನಾಟಕ ಭಾಗದ ವಿಜಯಪುರ, ಬಾದಾಮಿ, ಹಂಪಿ, ಮೈಸೂರು ಹೀಗೆ ರಾಜ್ಯದ ಹಲವು ಜಿಲ್ಲೆಗಳಲ್ಲಿನ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರಿಲ್ಲದೇ ಭಣಗುಡುತ್ತಿವೆ.