
ಬೆಂಗಳೂರು, (ಜನವರಿ 21): ಚಿತ್ರದುರ್ಗ ಖಾಸಗಿ ಬಸ್ ಅಗ್ನಿದುರಂತ (Chitradruga Bus Accident) ಮತ್ತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸೂಚನೆ ಹಿನ್ನೆಲೆಯಲ್ಲಿ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ (Ramalinga Reddy) ಅವರು ಮಹತ್ವದ ಸಭೆ ನಡೆಸಿದ್ದಾರೆ. ರಾಜ್ಯದ ಖಾಸಗಿ ಬಸ್ ಮಾಲೀಕರು,ಬಸ್ ಕೋಚ್ ನಿರ್ಮಾಣ ಕಂಪನಿಗಳ ಮಾಲೀಕರು ಮತ್ತು ಸಾರಿಗೆ ಇಲಾಖೆಯ ಅಧಿಕಾರಿಗಳ ಜತೆ ಸಭೆ ಮಾಡಿದ್ದು, ಈ ಸಭೆಯಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಯಾವ ರೀತಿಯಲ್ಲಿ ಬಸ್ ಗಳ ಬಾಡಿ ಬಿಲ್ಡಿಂಗ್ ಮಾಡಬೇಕು? ಎಷ್ಟು ಎಮರ್ಜೆನ್ಸಿ ಡೋರ್ ಇಡಬೇಕು? ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚಿಸಿದ್ದು, ಅಂತಿಮವಾಗಿ 8 ನಿಯಮಗಳ ಕಡ್ಡಾಯ ಪಾಲನೆ ಮಾಡುವಂತೆ ಖಡಕ್ ಸೂಚನೆ ನೀಡಿದ್ದಾರೆ.
ಪ್ರಯಾಣಿಕರಿಗೆ ಯಾವ ರೀತಿಯಲ್ಲಿ ಮಾಹಿತಿ ನೀಡಬೇಕು? ಫೈರ್ ಎಸ್ಟಿಂಗ್ ವಿಷರ್ ಗಳನ್ನು ಅಳವಡಿಸುವ ಬಗ್ಗೆ,ಎಮರ್ಜೆನ್ಸಿ ಎಕ್ಸಿಟ್ ಡೋರ್ ಗಳ ಬಳಿ ಯುವಕರು ಮತ್ತು ಮಧ್ಯ ವಯಸ್ಕರಿಗೆ ಸೀಟ್ ನೀಡಬೇಕು, ಎಸಿ ಬಸ್ಸುಗಳಲ್ಲಿ ಬೆಂಕಿ ಕಾಣಿಸಿಕೊಂಡರೆ ಹೇಗೆ ನಂದಿಸಬೇಕು? ಹೊರಗೆ ಬರಲು ಗ್ಲಾಸ್ ಹೊಡೆಯಲು ಹ್ಯಾಮರ್ ಗಳನ್ನು ಇಡಬೇಕು? ಪ್ರಯಾಣಿಕರು ಡೋರ್ ಜಂಪ್ ಮಾಡಲು ಮೆಟ್ಟಿಲುಗಳ ವ್ಯವಸ್ಥೆ ಮಾಡಬೇಕು, ಬೆಂಕಿ ಕಾಣಿಸಿಕೊಂಡರೇ ಪ್ರಯಾಣಿಕರಿಗೆ ಡ್ರೈವರ್ ಅಲರಾಂ ನೀಡಬೇಕು. ಹೀಗೆ ಖಾಸಗಿ ಬಸ್ ಮಾಲೀಕರಿಗೆ ಮತ್ತು ಬಸ್ ಬಾಡಿ ಬಿಲ್ಡಿಂಗ್ ಮಾಡುವ ಕಂಪನಿಗಳಿಗೆ ಸಾರಿಗೆ ಸಚಿವರು ಖಡಕ್ ಆಗಿ ಸೂಚನೆ ನೀಡಿದ್ದಾರೆ.
ಇನ್ನೂ ಗುಜರಾತಿನ 41 ವಾಹನಗಳಿಗೆ ಕೋರಮಂಗಲ ಆರ್ಟಿಓ ಕಚೇರಿಯಲ್ಲಿ ಅಕ್ರಮವಾಗಿ ಫಿಟ್ನೆಸ್ ಸರ್ಟಿಫಿಕೇಟ್ ನೀಡಿದ ಬಗ್ಗೆ ಟಿವಿ9 ನಿನ್ನೆ ಸುದ್ದಿ ಪ್ರಸಾರ ಮಾಡಿತ್ತು. ರೂಲ್ಸ್ ಪ್ರಕಾರ ಕೇಂದ್ರ ಸರ್ಕಾರದ ಮೋಟಾರು ವಾಹನ ಕಾಯ್ದೆ ಪ್ರಕಾರ, ಯಾವುದೇ ರಾಜ್ಯದಲ್ಲಾದರೂ ವಾಹನಗಳ ಎಫ್‌ಸಿ ಮಾಡಿಸಿಕೊಳ್ಳಲು ಅವಕಾಶವಿದೆ. ಆದರೆ, ವಾಹನವವನ್ನು ಖುದ್ದು ಆರ್‌ಟಿಒ ಮುಂದೆ ಹಾಜರುಪಡಿಸಿದ ನಂತರ ಪರಿಶೀಲನೆ ನಡೆಸಿಯೇ ಎಫ್‌ಸಿ ನೀಡಬೇಕು ಎಂಬ ನಿಯಮವಿದೆ. ಆದರೆ, ಕೋರಮಂಗಲ ಆರ್‌ಟಿಒ ಅಧಿಕಾರಿಗಳು, ವಾಹನಗಳು ಇಲ್ಲಿಗೆ ಬಂದಿದ್ದವು, ನಾವು ಖುದ್ದಾಗಿ ಪರಿಶೀಲಿಸಿದ್ದೇವೆ ಎಂದು ಸುಳ್ಳು ಹೇಳಿ ಎಫ್‌ಸಿಗಳನ್ನು ನೀಡಿದ್ದರು.
ಆ ಸಮಯದಲ್ಲಿ ಆ ವಾಹನಗಳು ಗುಜರಾತ್‌ನಲ್ಲಿ ಸಂಚರಿಸುತ್ತಿರುವುದನ್ನು ಅಲ್ಲಿನ ಸಾರಿಗೆ ಇಲಾಖೆ ಅಧಿಕಾರಿಗಳು ದಾಖಲೆ ಸಮೇತ ಬಹಿರಂಗಪಡಿಸಿದ್ದರು. ಈ ಸಂಬಂಧ ಕೋರಮಂಗಲ ಆರ್‌ಟಿಒದ ಹಿರಿಯ ಮೋಟಾರು ನಿರೀಕ್ಷಕ ನಿಸಾರ್ ಅಹಮದ್ ಅವರನ್ನು ಅಮಾನತುಗೊಳಿಸಲಾಗಿದೆ. ಇತ್ತ ಸಾರಿಗೆ ಇಲಾಖೆಯ ಸೂಚನೆಗೆ ಖಾಸಗಿ ಬಸ್ ಮಾಲೀಕರ ಸಂಘ ನಾವು ಸಾರಿಗೆ ರೂಲ್ಸ್ ಅಳವಡಿಸಿಕೊಳ್ಳುತ್ತೇವೆ. ಆದರೆ ಅದಕ್ಕೆ 6 ತಿಂಗಳುಗಳ ಕಾಲಾವಕಾಶ ಬೇಕು ಎಂದು ಮನವಿ ಮಾಡಿದ್ದಾರೆ.