ಬಸ್ ಅಪಘಾತದಲ್ಲಿ ಮೃತರ ಕುಟುಂಬಕ್ಕೆ ತಲಾ 5 ಲಕ್ಷ, ವೈಯಕ್ತಿಕವಾಗಿ 1 ಲಕ್ಷ ರೂ. ಪರಿಹಾರ ಘೋಷಿಸಿದ ಬಿ ಶ್ರೀರಾಮುಲು
Bus Accident: ಪ್ರಕರಣದ ಬಗ್ಗೆ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ತೇವೆ. ಬಸ್ ಪಲ್ಟಿಯಾದ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯುತ್ತೇನೆ ಎಂದು ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ದೇವತ್ಕಲ್ ಗ್ರಾಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.
ತುಮಕೂರು: ಇಲ್ಲಿನ ಪಳವಳ್ಳಿ ಕಟ್ಟೆ ಬಳಿ ಖಾಸಗಿ ಬಸ್ ಪಲ್ಟಿಯಾಗಿ ಅಪಘಾತ ಪ್ರಕರಣಕ್ಕೆ ಸಂಬಂಧಿಸಿ ಈವರೆಗೆ ಐವರು ಮೃತಪಟ್ಟಿದ್ದಾರೆ ಎಂದು ಟಿವಿ9ಗೆ ತುಮಕೂರು ಡಿಹೆಚ್ಒ ನಾಗೇಂದ್ರ ಪ್ರಸಾದ್ ಹೇಳಿಕೆ ನೀಡಿದ್ದಾರೆ. ಪಾವಗಡದ ಆಸ್ಪತ್ರೆಗೆ 35 ಗಾಯಾಳುಗಳು ಬಂದಿದ್ದರು. ಆ ಪೈಕಿ 21 ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ಕಳಿಸಲಾಗಿದೆ. ನಾಲ್ವರು ಗಾಯಾಳುಗಳನ್ನು ಬೆಂಗಳೂರಿಗೆ ರವಾನಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಪ್ರಕರಣದ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು. ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ತೇವೆ. ಬಸ್ ಪಲ್ಟಿಯಾದ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯುತ್ತೇನೆ ಎಂದು ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ದೇವತ್ಕಲ್ ಗ್ರಾಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.
ಪಾವಗಡ ತಾಲೂಕಿನ ಪಳವಳ್ಳಿ ಕಟ್ಟೆ ಬಳಿ ಖಾಸಗಿ ಬಸ್ ದುರಂತ ಹಿನ್ನೆಲೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ದು ಸಂತಾಪ ಸೂಚಿಸಿದ್ದಾರೆ. ಗಾಯಾಳುಗಳ ಶೀಘ್ರ ಚೇತರಿಕೆಗೆ ಹಾರೈಸಿದ್ದಾರೆ. ಉಪರಾಷ್ಟ್ರಪತಿ ಟ್ವೀಟ್ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ. ಘಟನಾ ಸ್ಥಳಕ್ಕೆ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಗೃಹ ಸಚಿವರೂ ಆಗಿರುವ ಆರಗ ಜ್ಞಾನೇಂದ್ರ ಭೇಟಿ ನೀಡಲಿದ್ದಾರೆ ಎಂದು ತಿಳಿದುಬಂದಿದೆ. ಅಪಘಾತದಲ್ಲಿ ಗಾಯಗೊಂಡವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಾವಗಡ ತಾಲೂಕು ಆಸ್ಪತ್ರೆಗೆ ಡಿಸಿ ವೈ.ಎಸ್. ಪಾಟೀಲ್ ಭೇಟಿ ನೀಡಿದ್ದಾರೆ. ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದ್ದಾರೆ.
ಪಳವಳ್ಳಿ ಕಟ್ಟೆ ಬಳಿ ಖಾಸಗಿ ಬಸ್ ಪಲ್ಟಿಯಾಗಿ ನಾಲ್ವರು ಸಾವನ್ನಪ್ಪಿದ್ದಾರೆ. ಸ್ಥಳದಲ್ಲೇ ನಾಲ್ವರು ಮೃತಪಟ್ಟಿದ್ದಾರೆ ಎಂದು ಟಿವಿ9ಗೆ ತುಮಕೂರು ಎಸ್‌ಪಿ ರಾಹುಲ್‌ಕುಮಾರ್ ಹೇಳಿಕೆ ನೀಡಿದ್ದಾರೆ. ಇಬ್ಬರು ವಿದ್ಯಾರ್ಥಿಗಳು, ಇಬ್ಬರು ಇತರೆ ಪ್ರಯಾಣಿಕರ ಸಾವನ್ನಪ್ಪಿದ್ದಾರೆ. ಬಸ್‌ನಲ್ಲಿದ್ದ 25ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯವಾಗಿದೆ. ಅತಿ ವೇಗವೇ ಘಟನೆಗೆ ಕಾರಣವೆಂಬುದು ಪ್ರಾಥಮಿಕ ಮಾಹಿತಿ. ತನಿಖೆಯ ಬಳಿಕ ಪೂರ್ಣ ಮಾಹಿತಿ ಸಿಗಲಿದೆ ಎಂದು ತುಮಕೂರು SP ಹೇಳಿದ್ದಾರೆ.
ಪಾವಗಡದಲ್ಲಿ ಖಾಸಗಿ ಬಸ್ಗಳ ಪರವಾನಗಿ ರದ್ದು, ಸಾರಿಗೆ ಬಸ್ ಓಡಿಸಲು ಕ್ರಮ: ಬಿ ಶ್ರೀರಾಮುಲು
ಬಳ್ಳಾರಿಯಲ್ಲಿ ಅಪಘಾತದ ಬಗ್ಗೆ ಸಾರಿಗೆ ಸಚಿವ ಬಿ.ಶ್ರೀರಾಮುಲು ಹೇಳಿಕೆ ನೀಡಿದ್ದಾರೆ. ಅಪಘಾತದಲ್ಲಿ 8 ಜನ ಮೃತಪಟ್ಟು, 25 ಜನರಿಗೆ ಗಾಯವಾಗಿದೆ. ಪರವಾನಗಿಯನ್ನ ರದ್ದು ಮಾಡಲು ಸೂಚನೆ ನೀಡಿದ್ದೇನೆ. ಪಾವಗಡದಲ್ಲಿ ಖಾಸಗಿ ಬಸ್ಗಳ ಪರವಾನಗಿ ರದ್ದು ಮಾಡುವೆ. ಪಾವಗಡದಲ್ಲಿ ಸಾರಿಗೆ ಬಸ್ ಓಡಿಸಲು ಕ್ರಮ ಕೈಗೊಳ್ಳುತ್ತೇವೆ. ಆರ್ಟಿಒ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಂಡು ಅಮಾನತು ಮಾಡುತ್ತೇವೆ. ಮೃತರಿಗೆ ಪರಿಹಾರ ಕೊಡುವ ಕುರಿತು ಸಿಎಂ ಜೊತೆ ಚರ್ಚೆ ಮಾಡಲಿದ್ದೇವೆ. ಓವರ್ಲೋಡ್ನಿಂದ ಅಪಘಾತ ಸಂಭವಿಸಿದೆ. ಹೆಚ್ಚಿನ ಪ್ರಯಾಣಿಕರನ್ನು ಬಸ್‌ನಲ್ಲಿ ಹತ್ತಿಸಿಕೊಂಡಿದ್ದು ಹಾಗೂ ವೇಗವಾಗಿ ಚಾಲನೆ ಮಾಡಿದ್ದು ಅಪಘಾತಕ್ಕೆ ಕಾರಣವಾಗಿದೆ. ಮೇಲ್ನೋಟಕ್ಕೆ ಚಾಲಕನ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ. ಅಧಿಕಾರಿಗಳಿಂದ ಮಾಹಿತಿ ಪಡೆದು ನಂತರ ಸ್ಥಳಕ್ಕೆ ತೆರಳುವೆ ಎಂದು ಬಳ್ಳಾರಿಯಲ್ಲಿ ಸಾರಿಗೆ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.
ಪಾವಗಡ ಬಳಿ ಖಾಸಗಿ ಬಸ್ ದುರಂತದ ಹಿನ್ನೆಲೆ, ಸರ್ಕಾರಿ ಆಸ್ವತ್ರೆ ಮುಂದೆ ಜನ ಜಮಾಯಿಸುತ್ತಿದ್ದಾರೆ. ಗಾಯಾಳುಗಳಿಗೆ ಸರ್ಕಾರಿ ಆಸ್ವತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಚಿಕಿತ್ಸೆ ಬಗ್ಗೆ ಡಿಹೆಚ್ಒ ನಾಗೇಂದ್ರಪ್ಪ ಅವರಿಂದ ಪರಿಶೀಲನೆ ಮಾಡಲಾಗಿದೆ. ಪಾವಗಡ ಸರ್ಕಾರಿ ಆಸ್ವತ್ರೆಯಲ್ಲಿ ಅಧಿಕಾರಿಗಳಿಂದ ಪರಿಶೀಲನೆ ಮಾಡಲಾಗಿದೆ. ಗಾಯಾಳುಗಳನ್ನ ಮಾತನಾಡಿಸಲು ಕುಟುಂಬಸ್ಥರು ಆಗಮಿಸಿದ್ದಾರೆ.
ಮೃತರ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ ಘೋಷಣೆ
ಪಳವಳ್ಳಿ ಕಟ್ಟೆ ಬಳಿ ಖಾಸಗಿ ಬಸ್ ಪಲ್ಟಿ ದುರಂತ ಪ್ರಕರಣದ ಮೃತರ ಕುಟುಂಬಸ್ಥರಿಗೆ ತಲಾ 5 ಲಕ್ಷ ಪರಿಹಾರ ಘೋಷಣೆ ಮಾಡಲಾಗಿದೆ. ಗಾಯಾಳುಗಳಿಗೆ ತಲಾ 50 ಸಾವಿರ ಪರಿಹಾರ ಘೋಷಣೆ ಮಾಡಲಾಗಿದೆ. ಸಾರಿಗೆ ಇಲಾಖೆಯ ಸಚಿವ ಬಿ. ಶ್ರೀರಾಮುಲು ಘೋಷಣೆ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಮೃತರ ಕುಟುಂಬಕ್ಕೆ ವೈಯಕ್ತಿಕವಾಗಿ ₹1 ಲಕ್ಷ ಪರಿಹಾರ ಘೋಷಿಸಿದ್ದಾರೆ.
ಇಡೀ ಜಿಲ್ಲಾಡಳಿತ ಸ್ಥಳದಲ್ಲಿ ಕೆಲಸ ಮಾಡುತ್ತಿದೆ: ಆರಗ ಜ್ಞಾನೇಂದ್ರ
ತೀರ್ಥಹಳ್ಳಿಯಲ್ಲಿ ಗೃಹ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ. ತುಮಕೂರು ಜಿಲ್ಲೆಯ ಪಾವಗಡದಲ್ಲಿ ಪ್ರಯಾಣಿಕರ ಬಸ್ ಅಪಘಾತವಾಗಿದೆ. ಬಸ್ ಅಪಘಾತ ಆದ ಸ್ಥಳಕ್ಕೆ ಡಿಸಿ ಹಾಗೂ ಎಸ್ಪಿಯವರನ್ನು ಕಳುಹಿಸಲಾಗಿದೆ. ಘಟನೆಯಲ್ಲಿ 7-8 ಸಾವನ್ನಪ್ಪಿದ್ದು, ಹಲವರಿಗೆ ತೀವ್ರ ತರಹದ ಗಾಯವಾಗಿದೆ. 13-14 ಆ್ಯಂಬುಲೆನ್ಸ್ ಗಳಲ್ಲಿ ಗಾಯಾಳುಗಳನ್ನು ತಾಲೂಕು ಆಸ್ಪತ್ರೆ, ಜಿಲ್ಲಾ ಆಸ್ಪತ್ರೆಗಳಿಗೆ ಕಳುಹಿಸಲಾಗುತ್ತಿದೆ. ಇಡೀ ಜಿಲ್ಲಾಡಳಿತ ಸ್ಥಳದಲ್ಲಿ ಕೆಲಸ ಮಾಡುತ್ತಿದೆ. ಸಾಧ್ಯವಾದರೆ ಬೆಂಗಳೂರಿನ ಆಸ್ಪತ್ರೆಗೆ ಗಾಯಾಳುಗಳನ್ನು ಶಿಪ್ಟ್ ಮಾಡುತ್ತೇವೆ. ಉತ್ತಮ ಚಿಕಿತ್ಸೆ ನೀಡುವಂತೆಯೂ ಸೂಚಿಸಿದ್ದೇನೆ. ಸಂಜೆ ವೇಳೆಗೆ ನಾನು ಸಹ ಅಪಘಾತ ಸ್ಥಳಕ್ಕೆ ಹೋಗುತ್ತೇನೆ. ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸುತ್ತೇನೆ ಎಂದು ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯಿಂದ ಅಪಘಾತದ ಬಗ್ಗೆ ಮಾಹಿತಿ
ತಿರುವಿನಲ್ಲೂ ಚಾಲಕ ಅತಿ ವೇಗವಾಗಿ ಬಸ್ ಓಡಿಸುತ್ತಿದ್ದರು. ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿಯಾಯಿತು. ಈ ವೇಳೆ ಟಾಪ್‌ನಲ್ಲಿ ಕುಳಿತಿದ್ದವರು ನೆಲಕ್ಕೆ ಉರುಳಿಬಿದ್ದಿದ್ದರು. ಡೋರ್‌ನಲ್ಲಿದ್ದವರು, ಬಸ್ ಎಡಬದಿಯಲ್ಲಿದ್ದವರು ಸಾವನ್ನಪ್ಪಿದ್ದಾರೆ. ನಾನು ಬಸ್‌ನ ಬಲಭಾಗದಲ್ಲಿದ್ದ ಕಾರಣ ನನಗೆ ಏನೂ ಆಗಿಲ್ಲ. ಖಾಸಗಿ ಬಸ್‌ನಲ್ಲಿ ಸುಮಾರು 150 ಜನರು ಪ್ರಯಾಣಿಸುತ್ತಿದ್ದರು. ಹಿಂದೆ, ಮುಂದೆ ಬಸ್ ಇಲ್ಲದ ಹಿನ್ನೆಲೆ ಒಂದೇ ಬಸ್‌ಗೆ ಹತ್ತಿದ್ದೆವು. 2 ಬಸ್ ಕ್ಯಾನ್ಸಲ್ ಆದ ಹಿನ್ನೆಲೆ ಈ ಬಸ್ ರಶ್ ಆಗಿತ್ತು. ನಾವು ಕಾಲೇಜಿಗೆ ಹೋಗುವ ಸಮಯಕ್ಕೆ ಸರ್ಕಾರಿ ಬಸ್ ಇಲ್ಲ. ಈ ಮಾರ್ಗದಲ್ಲಿ KSRTC ಎಕ್ಸ್‌ಪ್ರೆಸ್ ಬಸ್ ಮಾತ್ರ ಸಂಚರಿಸುತ್ತೆ. ಸರ್ಕಾರಿ ಬಸ್‌ಗಳು ಹಳ್ಳಿ ಹಳ್ಳಿಗೂ ಸ್ಟಾಪ್ ಕೊಡುವುದಿಲ್ಲ. ನಮ್ಮ ಮಾರ್ಗದಲ್ಲಿ ಅತಿ ಹೆಚ್ಚು ಖಾಸಗಿ ವಾಹನ ಸಂಚರಿಸುತ್ತೆ ಎಂದು ಟಿವಿ9ಗೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮುರಳಿ ಮಾಹಿತಿ ನೀಡಿದ್ಸಾರೆ.
ಇದನ್ನೂ ಓದಿ: ಭೀಕರ ಅಪಘಾತ: ತುಮಕೂರಿನ ಪಳವಳ್ಳಿ ಕಟ್ಟೆಯ ಬಳಿ ಖಾಸಗಿ ಬಸ್ ಪಲ್ಟಿ; 4 ಮಂದಿ ಸ್ಥಳದಲ್ಲೇ ಸಾವು
ಇದನ್ನೂ ಓದಿ: ಮಂಗಳೂರು: ಕೆಎಸ್ಆರ್ಟಿಸಿ ಬಸ್ ಮತ್ತು ಬೈಕ್ ನಡುವೆ ಡಿಕ್ಕಿ; ಸಹೋದರರಿಬ್ಬರ ಸಾವು
Published On - 12:57 pm, Sat, 19 March 22