ಪಾವಗಡ ಬಸ್ ಅಪಘಾತ: ವಿಧಿಯಾಟಕ್ಕೆ ಅಕ್ಕ- ತಂಗಿ ಇಬ್ಬರೂ ಬಲಿ; ಮೃತರ ಸಂಖ್ಯೆ 6ಕ್ಕೆ ಏರಿಕೆ
ಶನಿವಾರ ಅಪಘಾತ ನಡೆದ ಸ್ಥಳದಲ್ಲೇ ತಂಗಿ ಅಮೂಲ್ಯ ಸಾವನಪ್ಪಿದ್ದರು. ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಅಕ್ಕ ಹರ್ಷಿತಾ ಕೂಡ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಪಿಯುಸಿ ಓದುತ್ತಿದ್ದ ಅಮೂಲ್ಯ ಹಾಗೂ ಪದವಿ ಓದುತ್ತಿದ್ದ ಹರ್ಷಿತಾ ಅಪಘಾತಕ್ಕೆ ಬಲಿಯಾಗಿದ್ದಾರೆ.
ತುಮಕೂರು: ಖಾಸಗಿ ಬಸ್ ಪಲ್ಟಿ ದುರಂತದಲ್ಲಿ ಮೃತರ ಸಂಖ್ಯೆ 6 ಕ್ಕೆ ಏರಿಕೆ ಆಗಿದೆ. 40 ಕ್ಕೂ ಹೆಚ್ಚು ಗಾಯಾಳುಗಳಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 7 ಗಾಯಾಳುಗಳಿಗೆ ವಿಕ್ಟೋರಿಯಾ, ನಿಮ್ಹಾನ್ಸ್‌ನಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ. ದುರಂತ ಸಂಭವಿಸಿದ ಸ್ಥಳದಲ್ಲಿಯೇ ನಾಲ್ವರು ಮೃತಪಟ್ಟಿದ್ದರು, ಬಳಿಕ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಒಬ್ಬರು ಮೃತಪಟ್ಟಿದ್ದರು. ಚಿಕಿತ್ಸೆ ಫಲಿಸದೆ ರಾತ್ರಿ ವಿಕ್ಟೋರಿಯಾದಲ್ಲಿ ಮತ್ತೊಬ್ಬರು ಸಾವನ್ನಪ್ಪಿದ್ದಾರೆ. ಅಜಿತ್, ಕಲ್ಯಾಣ್, ಶಾನವಾಜ್, ಬಾಬು ವಲಿ ಹಾಗೂ ಒಂದೇ ಕುಟುಂಬದ ಅಮೂಲ್ಯ, ಹರ್ಷಿತಾ ಸಾವನ್ನಪ್ಪಿದ್ದಾರೆ. ಒಂದೇ ಮನೆಯ ಇಬ್ಬರು ಸಾವನ್ನಪ್ಪಿರುವುದು ಕುಟುಂಬಸ್ಥರನ್ನು ಕಂಗಾಲು ಮಾಡಿದೆ. ಅಪಘಾತದಲ್ಲಿ ಅಕ್ಕ- ತಂಗಿ ಇಬ್ಬರ ಸಾವು ಸಂಭವಿಸಿದೆ.
ಶನಿವಾರ ಅಪಘಾತ ನಡೆದ ಸ್ಥಳದಲ್ಲೇ ತಂಗಿ ಅಮೂಲ್ಯ ಸಾವನಪ್ಪಿದ್ದರು. ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಅಕ್ಕ ಹರ್ಷಿತಾ ಕೂಡ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಪಿಯುಸಿ ಓದುತ್ತಿದ್ದ ಅಮೂಲ್ಯ ಹಾಗೂ ಪದವಿ ಓದುತ್ತಿದ್ದ ಹರ್ಷಿತಾ ಅಪಘಾತಕ್ಕೆ ಬಲಿಯಾಗಿದ್ದಾರೆ. ಇಬ್ಬರೂ ಕಾಲೇಜಿಗೆ ಹೋಗಲು ಬಸ್ನಲ್ಲಿ ಬರುತ್ತಿದ್ದರು ಎಂದು ತಿಳಿದುಬಂದಿದೆ. ಮೃತರ ಅಂತ್ಯಕ್ರಿಯೆ ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನ ಪೋತಗಾನಹಳ್ಳಿಯಲ್ಲಿ ಇಂದು ನರೆವೇರಲಿದೆ.
ಪಾವಗಡ ತಾಲೂಕಿನ ಪಳವಳ್ಳಿ ಬಸ್ ಅಪಘಾತ ಪ್ರಕರಣದಲ್ಲಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವ ಹರ್ಷಿತಾ (20) ಅವರ ಮೃತದೇಹದ ಮರಣೋತ್ತರ ಪರೀಕ್ಷೆ 10 ಗಂಟೆ ನಂತರ ನಡೆಯಲಿದೆ. ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರ ಮಾಡಲಾಗುತ್ತದೆ. ನಿನ್ನೆ ರಮ್ಯಾ ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಮೃತದೇಹ ಮನೆಯಿಂದ ತೆಗೆದುಕೊಂಡು ಹೋಗಲಾಗ್ತಿತ್ತು. ಈ ವೇಳೆ ಹರ್ಷಿತಾ ಸಾವಿನ ಸುದ್ದಿ ಕೂಡ ಬಂದಿದೆ. ಹಾಗಾಗಿ ಅಂತ್ಯಕ್ರಿಯೆ ಕಾರ್ಯ ನಿಲ್ಲಿಸಲಾಗಿತ್ತು. ಇಂದು ಒಟ್ಟಿಗೆ ಅಕ್ಕ, ತಂಗಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ತಿಳಿಸಲಾಗಿದೆ. ವಿಧಿಯಾಟಕ್ಕೆ ಅಕ್ಕ ತಂಗಿ ಇಬ್ಬರು ಸಾವನ್ನಪ್ಪಿದ್ದಾರೆ.
ತುಮಕೂರು ಜಿಲ್ಲೆಯ ಪಳವಳ್ಳಿ ಬಳಿ ಬಸ್ ದುರಂತ ಕೇಸ್ ಸಂಬಂಧಿಸಿ ತುಮಕೂರು ಜಿಲ್ಲಾಸ್ಪತ್ರೆಗೆ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಗೃಹ ಖಾತೆ ಸಚಿವ ಆರಗ ಜ್ಞಾನೇಂದ್ರ ಭೇಟಿ ನೀಡಿದ್ದಾರೆ. ಗಾಯಾಳುಗಳನ್ನು ಭೇಟಿಯಾಗಿ ಸಾಂತ್ವನ ಹೇಳಿದ್ದಾರೆ. ದುರ್ಘಟನೆ ಸಂಬಂಧ ಸರ್ಕಾರದಿಂದ ಪರಿಹಾರದ ಭರವಸೆ ನೀಡಿದ್ದಾರೆ. ಗೃಹ ಸಚಿವರಿಗೆ ಶಾಸಕ ಜ್ಯೋತಿಗಣೇಶ್, ಮಾಜಿ ಸಚಿವ ಸೊಗಡು ಶಿವಣ್ಣ ಸಾಥ್ ನೀಡಿದ್ದಾರೆ.
ಇದನ್ನೂ ಓದಿ: Bus Accident: ಪಾವಗಡದ ಭೀಕರ ಬಸ್ ಅಪಘಾತಕ್ಕೆ ನಾಲ್ಕು ಮುಖ್ಯ ಕಾರಣಗಳು; ಏನದು?
ಇದನ್ನೂ ಓದಿ: ಬಸ್ ಅಪಘಾತದಲ್ಲಿ ಮೃತರ ಕುಟುಂಬಕ್ಕೆ ತಲಾ 5 ಲಕ್ಷ, ವೈಯಕ್ತಿಕವಾಗಿ 1 ಲಕ್ಷ ರೂ. ಪರಿಹಾರ ಘೋಷಿಸಿದ ಬಿ ಶ್ರೀರಾಮುಲು
Published On - 9:50 am, Sun, 20 March 22