ಸಿದ್ದರಾಮಯ್ಯನವರು ತಾವು ಇಂಗ್ಲಿಷ್ ಮತ್ತು ಸೋನಿಯಾ ಗಾಂಧಿ ಗುಲಾಮ ಎಂಬುದನ್ನು ಘೋಷಣೆ ಮಾಡಿಕೊಳ್ಳಲಿ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು. ‘ಬಿಜೆಪಿ ನಾಯಕರೇ, ನೀವು ಅಮಿತ್ ಶಾ ಗುಲಾಮರಾಗಬೇಡಿ’ ಎಂಬ ಸಿದ್ದರಾಮಯ್ಯನವರ ಹೇಳಿಕೆ ತಿರುಗೇಟು ಕೊಟ್ಟ ಸಿ.ಟಿ.ರವಿ ಈ ಮಾತುಗಳನ್ನಾಡಿದರು. ತುಮಕೂರಿನಲ್ಲಿ ಖಾಸಗಿ ಕಾರ್ಯಕ್ರಮವೊಂದಕ್ಕೆ ಆಗಮಿಸಿದ್ದ ವೇಳೆ ಮಾತನಾಡಿ, ಸಿದ್ದರಾಮಯ್ಯನವರು ಮೊದಲು ತಾವು ಗುಲಾಮರು ಎಂಬುದನ್ನು ಒಪ್ಪಿಕೊಂಡು, ಬಳಿಕ ಮಾತನಾಡಲಿ ಎಂದು ಕಿಡಿಕಾರಿದ್ದಾರೆ.
ಮುಂದುವರಿದು ಮಾತನಾಡಿದ ಅವರು, ಸಿದ್ದರಾಮಯ್ಯ ನಮ್ಮ ದೇಶದಲ್ಲಿರುವ ಭಾಷೆಯನ್ನು ಒಪ್ಪಿಕೊಳ್ಳುತ್ತಾರೋ ಅಥವಾ ಆಕ್ರಮಣ ಮಾಡಿ ಹೇರಿದ ಗುಲಾಮಗಿರಿಯ ಭಾಷೆಗೆ ಆದ್ಯತೆ ಕೊಡುತ್ತಾರೋ ಎಂದು ಪ್ರಶ್ನಿಸಿದರು. ಹಾಗೇ, ಕರ್ನಾಟಕದಲ್ಲಿ ಕನ್ನಡವೇ ಶ್ರೇಷ್ಠ. ಕರ್ನಾಟಕದಲ್ಲಿ ಕನ್ನಡವೇ ಶ್ರೇಷ್ಠ. ನಾವೆಂದಿಗೂ ಗುಲಾಮರಾಗುವ ಪ್ರಶ್ನೆಯೇ ಇಲ್ಲ. ಅಮಿತ್ ಶಾ ಹೇಳಿದ್ದು, ಮಾತೃಭಾಷೆಗೆ ಮನ್ನಣೆ ಕೊಡಿ ಎಂದು. ಸಂಪರ್ಕ ಭಾಷೆಯಾಗಿ ಇಂಗ್ಲಿಷ್ ಭಾಷೆಯ ಬದಲಿಗೆ ಹಿಂದಿ ಬಳಸಿ ಎಂದು ಅವರು ಹೇಳಿದ್ದಾರೆಯೇ ಹೊರತು ಕನ್ನಡ ಬಿಡಿ ಎಂದಿಲ್ಲ. ಹಾಗೊಮ್ಮೆ ಅಮಿತ್ ಶಾ ಕನ್ನಡ ಬಿಡಿ ಎಂದು ಹೇಳಿದ್ದರೆ, ನಾವೂ ಧ್ವನಿ ಎತ್ತುತ್ತಿದ್ದೆವು ಎಂದು ಹೇಳಿದ್ದಾರೆ.
ಇಂಗ್ಲಿಷ್ ನಿಜಕ್ಕೂ ಗುಲಾಮತನದ ಭಾಷೆ. ಹಾಗೆ ಹೇಳುವುದಾದರೆ ಸಿದ್ದರಾಮಯ್ಯನವರು ತಾವು ಇಂಗ್ಲಿಷ್ ಗುಲಾಮ ಎಂಬುದನ್ನು ಒಪ್ಪಿಕೊಳ್ಳಲೇಬೇಕು. ಅಮಿತ್ ಶಾ ಮಾತುಗಳನ್ನು ಸಿದ್ದರಾಮಯ್ಯನವರು ತಿರುಚಿದ್ದಾರೆ. ತಮಗೆ ಬೇಕಾದಂತೆ ಅಂದುಕೊಂಡು ಹೇಳುತ್ತಿದ್ದಾರೆ. ಆದರೆ ಸಿದ್ದರಾಮಯ್ಯನವರು ನಮಗೆ ಪಾಠ ಮಾಡುವುದಕ್ಕೂ ಮೊದಲು ಅವರು ತಾವು ಗುಲಾಮ ಎಂಬುದನ್ನು ಒಪ್ಪಿಕೊಳ್ಳಬೇಕು ಎಂದು ಸಿಟಿ ರವಿ ಹೇಳಿದ್ದಾರೆ.
ಇದನ್ನೂ ಓದಿ: ಉತ್ತರ ಕರ್ನಾಟಕದ ಬಹುತೇಕ ರಾಜಕಾರಣಿಗಳು ಬೆಂಗಳೂರಿನಲ್ಲಿ ವೈಭವದ ಜೀವನ ನಡೆಸ್ತಿದಾರೆ -ಆಮ್ ಆದ್ಮಿ ಮುಖಂಡ ಭಾಸ್ಕರ್ ರಾವ್