ಕನ್ನಡ ನಾಮಫಲಕ ಅಳವಡಿಕೆಗೆ ನಿರ್ಲಕ್ಷ್ಯ: ರೆನಾಲ್ಟ್ ಕಂಪನೆ ಶೋ ರೂಂಗೆ ಪರವಾನಗಿ ರದ್ದು
ಕನ್ನಡ ನಾಮಫಲಕ ಅಳವಡಿಸಲು ನಿರ್ಲಕ್ಷ್ಯ ತೋರಿದ ರೆನಾಲ್ಟ್ ಕಂಪನಿಯ ಶೋ ರೂಂ ಪರವಾನಗಿಯನ್ನು ತುಮಕೂರು ಮಹಾನಗರ ಪಾಲಿಕೆಯು ರದ್ದುಪಡಿಸಿದೆ.
ತುಮಕೂರು: ಕನ್ನಡ ನಾಮಫಲಕ ಅಳವಡಿಸಲು ನಿರ್ಲಕ್ಷ್ಯ ತೋರಿದ ರೆನಾಲ್ಟ್ ಕಂಪನಿಯ ಶೋ ರೂಂ ಪರವಾನಗಿಯನ್ನು ತುಮಕೂರು ಮಹಾನಗರ ಪಾಲಿಕೆಯು ರದ್ದುಪಡಿಸಿದೆ. ತುಮಕೂರು ಹೊರವಲಯದ ರಿಂಗ್ ರಸ್ತೆಯಲ್ಲಿರುವ ಶೋ ರೂಂನಲ್ಲಿ ಕನ್ನಡ ನಾಮಫಲಕ ಅಳವಡಿಸಲು ಎರಡು ತಿಂಗಳ ಹಿಂದೆಯೇ ವಿಶ್ವಮಾನವ ಹಕ್ಕುಗಳ ಸೇವಾ ಕೇಂದ್ರವು ಮನವಿ ಮಾಡಿತ್ತು. ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಕನ್ನಡ ಕಡೆಗಣಿಸಿದ್ದ ಹಿನ್ನೆಲೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ದೂರು ನೀಡಿ ಉಪವಾಸ ಸತ್ಯಾಗ್ರಹ ಆರಂಭಿಸಲಾಗಿತ್ತು. ಹೋರಾಟದ ಸ್ಥಳಕ್ಕೆ ಭೇಟಿ ನೀಡಿದ ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ, ತಾತ್ಕಾಲಿಕವಾಗಿ ರೆನಾಲ್ಟ್ ಕಂಪನಿ ಪರವಾನಗಿ ರದ್ದುಗೊಳಿಸಿ ಆದೇಶ ಮಾಡಿದರು.
ಕನ್ನಡ ಫಲಕ ಅಳವಡಿಸದ ಖಾಸಗಿ ಕಾಲೇಜಿಗೆ ದಂಡ ಹುಬ್ಬಳ್ಳಿ: ಕನ್ನಡ ನಾಮಫಲಕ ಅಳವಡಿಸದ ಹುಬ್ಬಳ್ಳಿಯ ವಿದ್ಯಾನಗರದ ಇಂಪಲ್ಸ್ ಕಾಲೇಜಿಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯು ₹ 10 ಸಾವಿರ ದಂಡದ ಜೊತೆಗೆ ನೊಟೀಸ್ ಜಾರಿ ಮಾಡಿದೆ.
ಬೈಕ್ಗಳಿಂದ ಪೆಟ್ರೋಲ್ ಕಳ್ಳತನ ಬಾಗಲಕೋಟೆ: ನಗರದ ವಿವಿಧೆಡೆ ಮನೆಗಳ ಮುಂದೆ ನಿಲ್ಲಿಸಿರುವ ಬೈಕ್ಗಳಿಂದ ಪೆಟ್ರೋಲ್ ಕಳವು ಮಾಡುವ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿವೆ. ಇಂಧನ ಬೆಲೆ ಏರಿಕೆಯ ನಂತರ ಈ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿವೆ. ಬಾಗಲಕೋಟೆಯ ನವನಗರದ ಸೆಕ್ಟರ್ ನಂಬರ್ 5ರಲ್ಲಿ ನಡೆದಿರುವ ಇಂಥದ್ದೇ ಘಟನೆಯೊಂದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇಬ್ಬರು ಯುವಕರು ನಸುಕಿನ 4.22ಕ್ಕೆ ಸಾಲಾಗಿ ನಿಲ್ಲಿಸಿದ್ದ ಎಲ್ಲ ಬೈಕ್ಗಳಿಂದಲೂ ಪೆಟ್ರೋಲ್ ಕಳವು ಮಾಡಿದ್ದಾರೆ.
ಶ್ರೀಗಂಧದ ಮರ ಕಳವು ಮಾಡಿದ್ದ ಐವರ ಬಂಧನ ದೇವನಹಳ್ಳಿ: ಬೆಂಗಳೂರು ಉತ್ತರ ತಾಲ್ಲೂಕಿನ ಸಾದಹಳ್ಳಿ ಹಾಲಿವುಡ್ ಟೌನ್ ಸಮೀಪ ಶ್ರೀಗಂಧದ ಮರ ಕಳ್ಳತನ ಮಾಡಿದ್ದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರದಿಂದ 40 ಕೆಜಿ ತೂಕದ ₹ 50 ಸಾವಿರ ಮೌಲ್ಯದ ಶ್ರೀಗಂಧ ಮರದ ತುಂಡುಗಳನ್ನು ಜಪ್ತಿ ಮಾಡಲಾಗಿದೆ. ವೆಂಕಟೇಶ್, ವೆಂಕಟರಮಣ, ವೆಂಕಟೇಶ್, ಅನಿಲ್ ಕುಮಾರ್, ಕೃಷ್ಣಮೂರ್ತಿ ಬಂಧಿತರು. ವಿಮಾನ ನಿಲ್ದಾಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಹುಳಿಯಾರು ಪಪಂ ನೌಕರರ ಅಮಾನತು ಹುಳಿಯಾರು: ಕಚೇರಿಯಲ್ಲಿದ್ದ ಎಂಆರ್ ಪುಸ್ತಕ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹುಳಿಯಾರು ಪಟ್ಟಣ ಪಂಚಾಯಿತಿಯ ಇಬ್ಬರು ನೌಕರರನ್ನು ಅಮಾನತು ಮಾಡಲಾಗಿದೆ. ಎಂ.ಜಿ.ಕೃಷ್ಣಮೂರ್ತಿ, ಟಿ.ಎ.ವೆಂಕಟೇಶ್ ಅಮಾನತುಗೊಂಡವರು. ಕಚೇರಿಯಲ್ಲಿದ್ದ ಎಂ.ಆರ್.ಪುಸ್ತಕ ಕಾಣೆಯಾಗಿರುವ ಬಗ್ಗೆ ಕೆಲ ತಿಂಗಳ ಹಿಂದೆ ಸಾಮಾನ್ಯ ಸಭೆಯಲ್ಲಿ ಚರ್ಚೆಯಾಗಿತ್ತು. ಅಧ್ಯಕ್ಷ ಕಿರಣ್ ಕುಮಾರ್ ಮೇಲಧಿಕಾರಿಗಳಿಗೆ ವರದಿ ನೀಡಿದ್ದರು. ಪ್ರಕರಣ ಸಂಬಂಧ ತನಿಖೆಯ ನಂತರ ಎಸ್ಡಿಎ ಕೃಷ್ಣಮೂರ್ತಿ, ಬಿಲ್ ಕಲೆಕ್ಟರ್ ವೆಂಕಟೇಶ್ ಅವರ ಕರ್ತವ್ಯಲೋಪ ಸಾಬೀತಾಗಿತ್ತು. ಈ ವರದಿ ಆಧರಿಸಿ ತುಮಕೂರು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಅಮಾನತು ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ: Competition : ಕನ್ನಡದ ಕಥೆಗಾರರೇ ಇತ್ತ ಗಮನಿಸಿ; ‘ಬುಕ್ ಬ್ರಹ್ಮ’ ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ