ತುಮಕೂರು, ಮಾರ್ಚ್ 20: ಲೋಕಸಭೆ ಚುನಾವಣೆ (Lok Sabha Election) ಟಿಕೆಟ್ ತಪ್ಪಿರುವುದರಿಂದ ತೀವ್ರ ಅಸಮಾಧಾನಗೊಂಡಿರುವ ಬಿಜೆಪಿ ನಾಯಕ ಜೆಸಿ ಮಾಧುಸ್ವಾಮಿ (JC Madhu Swamy) ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ (BS Yediyurappa) ವಿರುದ್ಧ ಆಕ್ರೋಶ ಹೊರ ಹಾಕಿದ್ದು, ತುಮಕೂರು ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣಗೆ ಬೆಂಬಲ ನೀಡುವುದಿಲ್ಲ ಎಂದು ಹೇಳಿದ್ದಾರೆ. ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಜೆಸಿ ಪುರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದಲ್ಲಿನ ನನ್ನ ಅಸಮಾಧಾನ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಹಾಗೂ ತುಮಕೂರು ಲೋಕಸಭಾ ಕ್ಷೇತ್ರದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದರು.
ನಾನು ಎರಡು ಮೂರು ವಿಷಯವನ್ನು ನಿಮ್ಮ ಬಳಿ ಹೇಳಿಕೊಳ್ಳುತ್ತಿದ್ದೇನೆ. ನಾನು ಕಾಂಗ್ರೆಸ್ ಸೇರಲಿದ್ದೇನೆ ಎಂದು ಎಲ್ಲೋ ಪತ್ರಿಕೆಯಲ್ಲಿ ವರದಿ ಮಾಡಿದ್ದಾರೆ. ಕಾಂಗ್ರೆಸ್ ನ ಬಿ ಫಾರಂ ಮಾಧುಸ್ವಾಮಿಗೆ ಸಿಗುತ್ತೆ ಎಂದು ಉಲ್ಲೇಖಿಸಿದ್ದಾರೆ. ಬಿ ಫಾರಂ ಬದಲಾಯಿಸಿ ಕಾಂಗ್ರೆಸ್ ಪಕ್ಷದವರು ಕರೆದರೂ ಚುನಾವಣೆಯಲ್ಲಿ ಸ್ಪರ್ಧಿಸಲಾರೆ. ಬಿಜೆಪಿಯವರು ಕರೆದರೂ ಚುನಾವಣೆಗೆ ನಿಲ್ಲುವುದಿಲ್ಲ. ಯಾರೋ ನೋಡಿ ಬಂದ ಹೆಣ್ಣನ್ನು ನಾನು ಮದುವೆ ಆಗಲ್ಲ ಎಂದು ಮಾಧುಸ್ವಾಮಿ ಮಾರ್ಮಿಕವಾಗಿ ಹೇಳಿದರು.
ಕಾಂಗ್ರೆಸ್ ಸೇರ್ಪಡೆ ಕುರಿತ ವರದಿಗಳ ಬಗ್ಗೆ ಪ್ರತಿಕ್ರಿಯಿಸಿ, ಯಾಕೆ ಹಾಗೆಲ್ಲ ಪತ್ರಿಕೆಯಲ್ಲಿ ಪ್ರಕಟಿಸುತ್ತಾರೋ ಗೊತ್ತಿಲ್ಲ. ನಾನು ಯಾರಿಗೂ ಕಾಂಗ್ರೆಸ್ಗೆ ಸೇರುತ್ತೇನೆ, ಬಂದೇ ಬರುತ್ತೇನೆ ಎಂದು ಹೇಳಿಲ್ಲ. ಮನೆಗೆ ಬಂದವರ ಬಳಿ ಸೌಜನ್ಯವಾಗಿ ಮಾತನಾಡಿದ್ದೇನೆ. ಹಾಗಂತ ಬರಲ್ಲ ಎಂದೂ ಎಲ್ಲೂ ಹೇಳಲ್ಲ. ಬಿಜೆಪಿಯಿಂದ ಅಶೋಕ್ ಬಂದಿದ್ದು ನಿಜ. ಯಾಕೆ ಬಂದಿದ್ದೀರಿ ಎಂದು ಕೇಳಿದೆ. ‘ಯಾಕೆ ನಾನು ಬರಬಾರದಾ? ಮಾತನಾಡರಬಾರದಾ’ ಎಂದು ಕೇಳಿದರು ಎಂದು ಮಾಧುಸ್ವಾಮಿ ತಿಳಿಸಿದರು.
ಜಯರಾಮ್ರನ್ನು ಕರೆದುಕೊಂಡು ಗೋಪಾಲಯ್ಯ ಅವರೆಲ್ಲ ಬಂದು ಹೋದರು. ನನಗೆ ಅಸಮಾಧಾನ ಇರುವುದು ಯಡಿಯೂರಪ್ಪನವರ ಮೇಲೆ. ನೀವೆಲ್ಲ ಅದಕ್ಕೆ ಉತ್ತರ ಕೊಡೋಕಾಗಲ್ಲ. ಯಡಿಯೂರಪ್ಪನವರೇ ಉತ್ತರ ಕೊಡಬೇಕು. ಅವರು ಮಾತನಾಡಬೇಕಿತ್ತು, ಆದ್ರೆ ಅವರು ಮಾತನಾಡುವ ಸೌಜನ್ಯ ತೋರಿಸಿಲ್ಲ ಎಂದು ಹೇಳಿದೆ. ಇದನ್ನೇ ಅಶೋಕ್ಗೂ ಹೇಳಿದ್ದೇನೆ. ನಿಮ್ಮ ಬಗ್ಗೆ ಯಾಕೆ ನಂಗೆ ಬೇಜಾರು, ಪಕ್ಷದ ಬಗ್ಗೆ ನನಗೆ ಯಾಕೆ ಬೇಜಾರು ಎಂದು ತಿಳಿಸಿದ್ದೇನೆ ಎಂದು ಮಾಧುಸ್ವಾಮಿ ಹೇಳಿದರು. ನಿಮ್ಮ ನೋವು ನನಗೆ ಅರ್ಥ ಆಗುತ್ತೆ, ದಯವಿಟ್ಟು ಬಿಜೆಪಿ ಬಿಡಬೇಡಿ ಎಂದು ಅಶೋಕ್ ಮನವಿ ಮಾಡಿದ್ದರು ಎಂಬುದನ್ನೂ ಅವರು ಬಹಿರಂಗಪಡಿಸಿದರು.
ತುಮಕೂರಿನಲ್ಲಿ ಬೆಳೆದವನಾಗಿ ಹೊರಗಿನವರಿಗೆ ಟಿಕೆಟ್ ಕೊಡುವುದಕ್ಕೆ ನನ್ನ ಒಪ್ಪಿಗೆ ಇಲ್ಲ. ನನಗೆ ಕೊಡಬೇಕು ಅಂತಲ್ಲ, ಜಿಲ್ಲೆಯ ಯಾರಿಗೆ ಕೊಟ್ಟರೂ ತೊಂದರೆ ಇರಲಿಲ್ಲ. ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ ಮೇಲೆ ನನಗೆ ಯಾವುದೇ ಬೇಜಾರಿಲ್ಲ. ಅವರು ರಾಜ್ಯಸಭೆಗೆ ಹೋಗುತ್ತಾರೆ ಎಂದಾಗ ನಾನು ಸಂತೋಷಪಟ್ಟಿದ್ದೆ. ಆದರೆ, ಅವರು ಜಾತಿ ಇದೆ ಎಂಬ ಕಾರಣಕ್ಕೆ ಎಲ್ಲಾ ಕಡೆ ಹೋಗುತ್ತಿದ್ದರೆ ಸ್ಥಳೀಯರ ಸ್ಥಿತಿ ಏನು? ಹೊರಗಿನವರಿಗೆ ಪ್ರೋತ್ಸಾಹ ನೀಡುವ ಮನಸ್ಥಿತಿ ನನ್ನಲ್ಲಿಲ್ಲ. ಈಗ ತುಮಕೂರಿನ ಅಭಿವೃದ್ಧಿ ಎಂಬ ಕಾರಣ ಕೊಡುತ್ತಿದ್ದಾರೆ. ಎಂಪಿ ಬಂದು ಸಮಗ್ರ ಅಭಿವೃದ್ಧಿ ಮಾಡುತ್ತಾರೆ ಎಂಬುದೆಲ್ಲ ಸುಳ್ಳು. ಎಂಪಿ ಆದವರಿಗೆ ಅವರದ್ದೇ ಆದ ಲಿಮಿಟೇಷನ್ ಇರುತ್ತದೆ. ಯಾತಕ್ಕೆ ಇವೆಲ್ಲ ಬೊಗಳೆ ಮಾತು ಅಂತಾ ನನಗೆ ಗೊತ್ತಾಗಲ್ಲ. ಯಾರೋ ಬಂದು ಇಲ್ಲಿ ದುಡ್ಡು ತಂದು ಎಲೆಕ್ಷನ್ ನಿಲ್ತಾರೆ ಅಂದ್ರೆ ಹೇಗೆ ಒಪ್ಪೋದು ಎಂದು ಮಾಧುಸ್ವಾಮಿ ಪ್ರಶ್ನಿಸಿದರು.
ನಾವು ದುಡ್ಡಲ್ಲಿ ರಾಜಕಾರಣ ಮಾಡಿದವರಲ್ಲ. ಮಧ್ಯಮ ವರ್ಗದ ಕುಟುಂಬದಿಂದ ಬಂದವರು. ಕಾರ್ಯಕರ್ತರ ಜೊತೆ ಮಾತನಾಡುತ್ತೇನೆ. ಅವರ ಬಳಿಯೂ ಎಲ್ಲಾ ವಿಚಾರ ಮಾತನಾಡುತ್ತೇನೆ. ಅವರು ಏನು ಹೇಳುತ್ತಾರೆ ಅದಕ್ಕೆ ನಾನು ಬದ್ಧನಗಿರುತ್ತೇನೆ. ತುಮಕೂರಿನಲ್ಲಿ ನನಗೆ ಅನ್ಯಾಯ ಆಗಿದೆ. ಲಿಂಗಾಯತ ಟಿಕೆಟ್ ಕೊಡಿ ಅಂತಾ ನಾನು ಕೇಳಿಲ್ಲ. ಲಿಂಗಾಯತರಿಗೆ ಟಿಕೆಟ್ ಕೊಟ್ಟರೆ ನೊಣಂಬರಿಗೆ ಕೊಡಿ, ಅದನ್ನ ತಪ್ಪಿಸಬೇಡಿ ಅಂತಾ ಕೇಳಿದ್ದೇವೆ. ಐದಾರು ಜಿಲ್ಲೆಯಲ್ಲಿ ನಮ್ಮ ಸಮುದಾಯದವರು ವೋಟ್ ಹಾಕಬೇಕಿದೆ. ನಂಗೆ ಎಂಪಿ ನಿಲ್ಲು ಅಂದೋರು ಯಡಿಯೂರಪ್ಪನವರೇ. ಎರಡು ಮೂರು ಸಾರಿ ನಾನು ಬೇಡ ಅಂದಾಗ ನಿಲ್ಲು ಎಂದವರು ಯಡಿಯೂರಪ್ಪ. ಇದು ಬಹಿರಂಗ ಆಗಬೇಕು ಎಂದು ಮಾಧುಸ್ವಾಮಿ ಹೇಳಿದರು.
ನಾನು ಯಡಿಯೂರಪ್ಪ ಫೋನ್ ಸ್ವೀಕರಿಸದಿದ್ದಾಗ ಜ್ಯೋತಿ ಗಣೇಶ್ ಮೂಲಕ ಕರೆ ಮಾಡಿಸಿದರು. ಶಿವಮೊಗ್ಗದಲ್ಲಿ ನೊಣಂಬರು ಬಹಳಷ್ಟು ಮತದಾರರಿದ್ದಾರೆ. ಹಾವೇರಿಯಲ್ಲಿದ್ದಾರೆ, ದಾವಣಗೆರೆಯಲ್ಲಿದ್ದಾರೆ, ಚಿತ್ರದುರ್ಗದಲ್ಲಿದ್ದಾರೆ. ಎಲ್ಲಾ ಕಡೆ ಇರುವವರಿಗೆ ಎಲ್ಲಾದರೂ ಒಂದು ಕಡೆ ಟಿಕೆಟ್ ಕೊಡಬೇಕಿತ್ತು. ನಾನು ಎರಡು ಮೂರು ದಿನದಲ್ಲಿ ಮಾತನಾಡೋಕೆ ಹೊರಟಿದ್ದೀನಿ. ಕಾರ್ಯಕರ್ತರು ಏನು ಹೇಳ್ತಾರೆ ಕೇಳಿಕೊಂಡು ತೀರ್ಮಾನ ಮಾಡುತ್ತೇನೆ ಎಂದು ಅವರು ತಿಳಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ