ಯಡಿಯೂರಪ್ಪ ಕುತ್ತಿಗೆ ಹಿಸುಕಿದ್ದಾರೋ, ಎತ್ತರಕ್ಕೆ ಬೆಳೆಸಿದ್ದಾರೋ ಚುನಾವಣೆ ಮುಗಿದ ಮೇಲೆ ಗೊತ್ತಾಗಲಿದೆ: ಈಶ್ವರಪ್ಪಗೆ ವಿಜಯೇಂದ್ರ ಟಾಂಗ್
ಬಿಎಸ್ ಯಡಿಯೂರಪ್ಪನವರು ಕುತ್ತಿಗೆ ಹಿಸುಕಿದ್ದಾರೋ ಇಲ್ಲ ಎತ್ತರಕ್ಕೆ ಬೆಳೆಸಿದ್ದಾರೋ ಎಂದು ಲೋಕಸಭೆ ಚುನಾವಣೆ ಮುಗಿದ ಮೇಲೆ ಗೊತ್ತಾಗಲಿದೆ. ಯಡಿಯೂರಪ್ಪ ಅವರಿಂದಲೇ ಕೆಲವರು ಮಂತ್ರಿ ಆಗಿದ್ದಾರೆ. ಯಡಿಯೂರಪ್ಪ ಅವರಿಂದಲೇ ಕೆಲವರು ಮಂತ್ರಿ ಆಗಿದ್ದಾರೆ ಎಂದು ಮಾಜಿ ಸಚಿವ ಕೆಎಸ್ ಈಶ್ವರಪ್ಪಗೆ ಬಿಜೆಪಿ ರಾಜ್ಯಾಧ್ಯಕ್ಷ, ಬಿವೈ ವಿಜಯೇಂದ್ರ ಟಾಂಗ್ ಕೊಟ್ಟರು.
ಶಿವಮೊಗ್ಗ, ಮಾರ್ಚ್ 18: ಮಾಜಿ ಸಚಿವ ಕೆಎಸ್ ಈಶ್ವರಪ್ಪ (KS Eshwarappa) ಬಿಎಸ್ ಯಡಿಯೂರಪ್ಪ (BS Yediyurappa) ಮತ್ತು ಪುತ್ರ ಬಿವೈ ವಿಜಯೇಂದ್ರ (BY Vijayendra) ಮೇಲೆ ಮುನಿಸಿಕೊಂಡು, ಅವರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಈ ವಿಚಾರವಾಗಿ ಬಿಜೆಪಿ (BJP) ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮಾತನಾಡಿ, ಎಲ್ಲವೂ ಸರಿಯಾಗುತ್ತದೆ, ಎಲ್ಲವನ್ನು ಸರಿಪಡಿಸುವ ಕೆಲಸ ವರಿಷ್ಠರು ಮಾಡುತ್ತಾರೆ. ಬಿಎಸ್ ಯಡಿಯೂರಪ್ಪನವರ ಕುಟುಂಬದ ಬಗ್ಗೆ ಮಾತನಾಡುವುದು ಅರ್ಥಹೀನ. ಸೈಕಲ್ನಲ್ಲಿ ರಾಜ್ಯಾದ್ಯಂತ ಸುತ್ತಾಡಿ ಪಕ್ಷ ಕಟ್ಟಿದ ಫಲವಾಗಿ ರಾಜ್ಯದಲ್ಲಿ ಇಂದು ಪಕ್ಷ ಬಲಿಷ್ಠವಾಗಿದೆ. ಯಡಿಯೂರಪ್ಪ ಅವರಿಂದಲೇ ಕೆಲವರು ಮಂತ್ರಿ ಆಗಿದ್ದಾರೆ ಎಂದು ಪರೋಕ್ಷವಾಗಿ ಕೆಎಸ್ ಈಶ್ವರಪ್ಪಗೆ ಟಾಂಗ್ ಕೊಟ್ಟರು.
ಬಿಎಸ್ ಯಡಿಯೂರಪ್ಪನವರು ಕುತ್ತಿಗೆ ಹಿಸುಕಿದ್ದಾರೋ ಇಲ್ಲ ಎತ್ತರಕ್ಕೆ ಬೆಳೆಸಿದ್ದಾರೋ ಎಂದು ಲೋಕಸಭೆ ಚುನಾವಣೆ ಮುಗಿದ ಮೇಲೆ ಗೊತ್ತಾಗಲಿದೆ. ಎಲ್ಲವನ್ನೂ ಎದುರಿಸುವ ಧಮ್ ಮತ್ತು ತಾಕತ್ತು ನಮ್ಮ ಕಾರ್ಯಕರ್ತರಿಗೆ ಇದೆ. ಸಾಮೂಹಿಕವಾಗಿ ಚರ್ಚಿಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದಾರೆ. ಗೆಲ್ಲುವ ಪಕ್ಷಕ್ಕೆ ಸಮಸ್ಯೆ ಬಹಳ. ಕಾಂಗ್ರೆಸ್ಗೆ ಸಮಸ್ಯೆ ಯಾಕೆ ಇಲ್ಲ ಅಂದರೇ ಅಲ್ಲಿ ಹೋದರೆ ಠೇವಣಿ ಸಿಗುವುದಿಲ್ಲ ಎನ್ನುವುದು ಗೊತ್ತಿದೆ ಅದಕ್ಕೆ ಸಮಸ್ಯೆ ಇಲ್ಲ ಎಂದು ವ್ಯಂಗ್ಯವಾಡಿದರು.
ಅಪ್ಪ-ಮಕ್ಕಳು ವರ್ಸಸ್ ಹಿಂದುತ್ವದ ಚುನಾವಣೆ ಎಂಬ ಈಶ್ವರಪ್ಪ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಬಿಜೆಪಿಯಲ್ಲಿ ಹಿಂದುತ್ವದ ನಾಯಕರು ಬಹಳ ಇದ್ದಾರೆ. ಎಲ್ಲವನ್ನು ಸರಿದೂಗಿಸುವ ಕೆಲಸ ವರಿಷ್ಠರು ಮಾಡುತ್ತಾರೆ. ಇದು ಚುನಾವಣೆಯಲ್ಲಿ ಯಾವುದೇ ಪರಿಣಾಮ ಬೀರಲ್ಲ. ಎಲ್ಲವೂ ಸರಿ ಹೋಗುತ್ತೆ ಎಂದರು.
ಇದನ್ನೂ ಓದಿ: ಮನವೊಲಿಕೆಗೆ ಸಂಘ ಪರಿವಾರ ಕರೆ, ಚುನಾವಣೆಯಿಂದ ಹಿಂದೆ ಸರಿಯಲ್ಲ, ಮೋದಿ ಕಾರ್ಯಕ್ರಮದಲ್ಲಿ ಭಾಗಿಯಾಗಲ್ಲ ಎಂದ ಈಶ್ವರಪ್ಪ
ಟಿಕೆಟ್ ತಪ್ಪಿದಾಗ ನೋವಾಗುವುದು ಸರ್ವೇ ಸಾಮಾನ್ಯ. ಏನೇ ಆಗಿದ್ದರೂ ಅದು ಪಕ್ಷದ ವರಿಷ್ಠರ ತೀರ್ಮಾನ. ಕೆ.ಎಸ್.ಈಶ್ವರಪ್ಪನವರ ಪ್ರಶ್ನೆಗಳಿಗೆ ಉತ್ತರ ಸಿಗಲಿವೆ. ಸೂಕ್ತ ಸಮಯದಲ್ಲಿ ಅವರ ಪ್ರಶ್ನೆಗಳಿಗೆ ಉತ್ತರ ಸಿಗುತ್ತದೆ. ಲೋಕಸಭೆಗೆ ಅಭ್ಯರ್ಥಿಗಳ ಆಯ್ಕೆಯಲ್ಲಿ ನನ್ನ ಪಾತ್ರವಿಲ್ಲ. ಅದು ರಾಷ್ಟ್ರೀಯ ನಾಯಕರ ತೀರ್ಮಾನ. ಎಲ್ಲದಕ್ಕೂ ಕಾಲ ಉತ್ತರ ಕೊಡಲಿದೆ. ಪಕ್ಷಾತೀತವಾಗಿ ರಾಘವೇಂದ್ರ ಅವರಿಗೆ ಬೆಂಬಲ ಸಿಗುತ್ತಿದೆ. ಶಿವಮೊಗ್ಗದಲ್ಲಿ ದೊಡ್ಡ ಅಂತರದಲ್ಲಿ ರಾಘವೇಂದ್ರ ಗೆಲ್ಲುತ್ತಾರೆ. ಮಾಜಿ ಸಚಿವ ಈಶ್ವರಪ್ಪನವರಿಗೆ ತಪ್ಪು ಮಾಹಿತಿ ಹೋಗಿವೆ. ಎಲ್ಲ ಸರಿ ಹೋಗುತ್ತೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.
ಬಿಎಸ್ ಯಡಿಯೂರಪ್ಪ ಮಗ ಅಂತ ನನ್ನ ರಾಜ್ಯಧ್ಯಕ್ಷ ಮಾಡಿಲ್ಲ. ರಾಷ್ಟ್ರೀಯ ನಾಯಕರು ನನ್ನ ಅಧ್ಯಕ್ಷರನ್ನಾಗಿ ಮಾಡಿದ್ದು. ಅಭ್ಯರ್ಥಿಗಳಾಗಿ ಘೋಷಣೆ ಆಗಿದ್ದು ರಾಷ್ಟ್ರೀಯ ನಾಯಕರ ತೀರ್ಮಾನ. ನನಗೆ ಟಿಕೆಟ್ ತಪ್ಪಿದಾಗ ಪರಿಪಾಲನೆ ಮಾಡಿದ್ದೆ. ಅದು ರಾಷ್ಟ್ರೀಯ ನಾಯಕರ ತೀರ್ಮಾನ ಆಗಿತ್ತು. ನಾನು ಅವರ ಹಾಗೆ ಮಾತಾಡಿದರೆ ಅವರಿಗೂ ನನಗೂ ವ್ಯತ್ಯಾಸ ಇರಲ್ಲ ಎಂದು ವರುಣಾ ಟಿಕೆಟ್ ತಪ್ಪಿರೋದನ್ನು ನೆನಪಿಸಿ ಟಾಂಗ್ ಕೊಟ್ಟರು.
ಇವತ್ತು ಶಿವಮೊಗ್ಗಕ್ಕೆ ಪ್ರಧಾನಿ ಮೋದಿ ಬರುತ್ತಿದ್ದಾರೆ. ನರೇಂದ್ರ ಮೋದಿಯವರ ಇಂದಿನ ಕಾರ್ಯಕ್ರಮ, ಮೂರು ಲೋಕಸಭಾ ಕ್ಷೇತ್ರದ ಚುನಾವಣಾ ಪ್ರಚಾರವಾಗಿದೆ. ಮೂರು ಲೋಕಸಭಾ ಕ್ಷೇತ್ರದ ಕಾರ್ಯಕರ್ತರಲ್ಲಿ ಉತ್ಸಾಹ ಇದೆ. ಇಡೀ ರಾಜ್ಯಕ್ಕೆ ಒಂದು ಸಂದೇಶ ಹೋಗಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ