ತುಮಕೂರು: ರಾಜ್ಯದ ಜನರನ್ನು ದಾರಿ ತಪ್ಪಿಸುವ ಕೆಲಸ ಕಾಂಗ್ರೆಸ್ (Congress) ಮಾಡುತ್ತಿದೆ. ಜಾತಿ ಆಧಾರಿತವಾಗಿ ವೋಟ್ ಕೇಳುವ ಕಾಂಗ್ರೆಸ್ ಆಟ ಬಯಲಾಗಿದೆ. ಭ್ರಷ್ಟಾಚಾರದ ಗಂಗೋತ್ರಿ ಕಾಂಗ್ರೆಸ್ ಎಂದು ಸಿಎಂ ಬಸವರಾಜ ಬೊಮ್ಮಾಯಿ ವಾಗ್ದಾಳಿ ಮಾಡಿದರು. ಜಿಲ್ಲೆಯಲ್ಲಿ ನಡೆದ ಬಿಜೆಪಿ ಜನಸಂಕಲ್ಪ ಸಮಾವೇಶ ಉದ್ದೇಶಿಸಿ ಅವರು ಮಾತನಾಡಿ, ಸಿದ್ದರಾಮಯ್ಯ ಅವಧಿಯಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿದೆ. ಸಮಾಜ ಕಲ್ಯಾಣ ಇಲಾಖೆಯ ತಲೆದಿಂಬು ವಿತರಣೆಯಲ್ಲಿ ಅಕ್ರಮವಾಗಿದೆ. ಸಿದ್ದರಾಮಯ್ಯ ಹೇಳುವ ಯಾವುದೂ ಸತ್ಯ ಆಗುವುದಿಲ್ಲ. ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಮತ್ತು ಬಿಜೆಪಿ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ಸಿಎಂ ಆಗಲ್ಲ ಅಂತಾ ಹೇಳಿದ್ದರು. ಆದರೆ ಇಬ್ಬರೂ ನಾಯಕರು ಮುಖ್ಯಮಂತ್ರಿ ಆದರು ಎಂದು ಹೇಳಿದರು.
ಜನಸಂಕಲ್ಪ ಯಾತ್ರೆ ಮಧ್ಯಕರ್ನಾಟಕ, ಕಲ್ಯಾಣ ಕರ್ನಾಟಕ ಯಶಸ್ವಿಯಾಗಿ ನಡೆದಿದೆ. ಮೂರು ಬಾರಿ ಅರಳದ ಕಮಲ ಈ ಬಾರಿ ಕುಣಿಗಲ್‌ನಲ್ಲಿ ಗೆದ್ದು ಕಮಲ ಅರಳಿಸಲಿದೆ. ಹೋದ ಎಲ್ಲ ಕಡೆಯೂ ಕನಸಂಕಲ್ಪಕ್ಕೆ ಉತ್ತಮ ಸ್ಪಂದನೆ ಸಿಕ್ಕಿದೆ. ಕೇಂದ್ರ ಸರ್ಕಾರ, ರಾಜ್ಯ ಸರ್ಕಾರದ ಕಾರ್ಯಗಳಿಂದ ಜನ ಸ್ಪಂದನೆ ನೀಡುತ್ತಿದ್ದಾರೆ. ತುಮಕೂರಿನಲ್ಲಿ ಬಿಜೆಪಿಯ ಗಾಳಿ ಬೀಸುತ್ತಿದೆ. ಕೆಲ ಕ್ಷೇತ್ರಗಳಲ್ಲಿ ನಾವು ಕಳೆದ ಬಾರಿ ಕಡಿಮೆ ಅಂತರದಿಂದ ಸೋತಿದ್ದೇವೆ. ಬರೆದಿಟ್ಟುಕೊಳ್ಳಿ ಈ ಬಾರಿ ಈ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಲಿದೆ. ಸಾಕಷ್ಟು ವರ್ಷಗಳಿಂದ ಅಧಿಕಾರದಲ್ಲಿರುವ ಕಾಂಗ್ರೆಸ್ ಜನರಿಗೆ ಸುಳ್ಳು ಹೇಳಿಕೊಂಡು ಬಂತು. ಈಗ ಕಾಂಗ್ರೆಸ್‌ನ ಆಟ ಬಯಲಾಗಿದೆ ಎಂದರು.
ಕಾಂಗ್ರಸ್ 2 ಲಕ್ಷ ಕೋಟಿ ಸಾಲವನ್ನು ಕರ್ನಾಟಕದ ಮೇಲೆ ಹೇರಿದೆ
ಜಾತಿ, ಮತ, ಧರ್ಮ ಒಡೆಯುವ ಕೆಲಸ, ಉಪಜಾತಿ ಮಾಡುವ ಕೆಲಸ ಕಾಂಗ್ರೆಸ್ ಮಾಡಿದೆ. ಭಾಷಣ ಮಾಡಿ ದೀನದಲಿತರ ಉದ್ದಾರಕರ ಹಾಗೆ ಮಾತನಾಡಿದ್ದಾರೆ. ಆ ಸಮುದಾಯದವರು ಹಿಂದೆ ಉಳಿದಿದ್ದಾರೆ, ಭಾಷಣ ಮಾಡಿದವರು ಮಾತ್ರ ಮುಂದುವರೆದಿದ್ದಾರೆ. ಇಂದು ಆ ಸಮುದಾಯ ಹಿಂದೆ ಉಳಿದಿದೆ. ಸಿದ್ದರಾಮಯ್ಯ ಆಡಳಿತದಲ್ಲಿ ಯಾವುದೇ ಕೋವಿಡ್ ಇರಲಿಲ್ಲ. ಆದರೂ 2 ಲಕ್ಷ ಕೋಟಿ ಸಾಲವನ್ನು ಕರ್ನಾಟಕ ಮೇಲೆ ಹೇರಿದ್ದಾರೆ. ಕೇಂದ್ರದ ಚೀಲದ ಮೇಲೆ ಫೋಟೊ ಹಾಕಿಕೊಂಡು ಅಕ್ಕಿ ನಾವು ಕೊಟ್ವಿ ಎಂದು ಕಾಂಗ್ರೆಸ್ ಹೇಳುತ್ತಿದೆ. 30,40 ವರ್ಷದಿಂದಲೂ ಕೂಡ ರಾಜ್ಯದಲ್ಲಿ ಅಕ್ಕಿ ಕೊಡುತ್ತಿದ್ದಾರೆ. ಅನ್ನ ಭಾಗ್ಯದಲ್ಲೂ ಕೂಡ ಕನ್ನಭಾಗ್ಯ ಮಾಡಿದ್ರು. ಕಾಂಗ್ರೆಸ್ ಭ್ರಷ್ಟಾ ಯೋಜನೆ ಜನರಿಗೆ ಗೊತ್ತಾಗಿದೆ. ಹಾಗಾಗಿ ಇದು ದೌರ್ಭಾಗ್ಯ ಸರ್ಕಾರ ಎಂದು ಕಾಂಗ್ರೆಸ್‌ನ ಜನ ಕಿತ್ತೊಗೆದ್ರು.
ನೀರಾವರಿ ಯೋಜನೆಗೆ 5 ವರ್ಷದಲ್ಲಿ 32 ಸಾವಿರ ಕೋಟಿ ಖರ್ಚು
ನಮ್ಮ ಸರ್ಕಾರ ನೀರಾವರಿ ಯೋಜನೆಗಳಿಗೆ ಉತ್ತೇಜನ ನೀಡಿದೆ. ನೀರಾವರಿ ಯೋಜನೆಗೆ 5 ವರ್ಷದಲ್ಲಿ 32 ಸಾವಿರ ಕೋಟಿ ಖರ್ಚು ಮಾಡಲಾಗಿದೆ. 7 ಲಕ್ಷ ಎಕರೆಯನ್ನು ನೀರಾವರಿ ಪ್ರದೇಶವಾಗಿ ಮಾಡಲಾಗಿದೆ. ಅದೇ ಕಾಂಗ್ರೆಸ್ ಪಕ್ಷ 54 ಸಾವಿರ ಕೋಟಿ ಖರ್ಚು ಮಾಡಿ 2 ಲಕ್ಷ ಎಕರೆ ಮಾತ್ರ ನೀರಾವರಿ ಮಾಡಿದೆ. ಎಲ್ಲಿ ಹೋಯ್ತು ಆ ಹಣ, ಯಾರ ಕಿಸೆಗೆ ಹಣ ಹೋಗಿದೆ ಎಂದು ಸಿಎಂ ಬೊಮ್ಮಾಯಿ ಕಿಡಿಕಾರಿದರು.
ಇದನ್ನೂ ಓದಿ: ಮಹಾರಾಷ್ಟ್ರ ಲಾರಿಗಳ ಮೇಲೆ ಕರವೇ ಕಲ್ಲು ತೂರಾಟ: ನಾರಾಯಣಗೌಡ ಬಣದ ಕಾರ್ಯಕರ್ತರ ವಿರುದ್ಧ FIR
ತುಮಕೂರು ಮುಂದಿನ ದಿನಗಳಲ್ಲಿ ನಂ. 1 ಜಿಲ್ಲೆ ಆಗಲಿದೆ
ಎಸ್ಸಿ, ಎಸ್ಟಿ ಸಮಾಜದ ಮೀಸಲಾತಿ ಪ್ರಮಾಣ ಹೆಚ್ಚಿಸಿದ್ದೇವೆ. ನಿಮ್ಮ ಆಶೀರ್ವಾದದಿಂದ ನಮಗೆ ರಾಜಕೀಯ ಇಚ್ಛಾಶಕ್ತಿ ಇದೆ. ಬೆಂಗಳೂರು ನಗರದ ನಂತರ ತುಮಕೂರು ವೇಗ ಗತಿಯಲ್ಲಿ ಅಭಿವೃದ್ಧಿ ಆಗುತ್ತಿದೆ. ಮುಂಬರುವ ದಿನಗಳಲ್ಲಿ ಕರ್ನಾಟಕದ ನಂಬರ್-1 ಜಿಲ್ಲೆಯಾಗಲಿದೆ. ಸಾಕಷ್ಟು ಬಂಡವಾಳ ಹೂಡಿಕೆ ಆಗುತ್ತಿದೆ. ತುಮಕೂರು ಜಿಲ್ಲೆಯಲ್ಲಿ ಅಂತಾರಾಷ್ಟ್ರೀಯ ಏರ್ಪೋರ್ಟ್ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.