ಈ ಹಿಂದೆಯೂ ಎರಡು ಬಾರಿ ಸ್ಫೋಟಿಸಿದ್ದ ಡ್ರೋನ್ ಪ್ರತಾಪ್: ತನಿಖೆಯಿಂದ ಬಯಲಾಯ್ತು ಇನ್ನಷ್ಟು ಅಚ್ಚರಿಯ ಅಂಶ
ತುಮಕೂರು ಜಿಲ್ಲೆಯಲ್ಲಿ ಸೋಡಿಯಂ ಬಳಸಿ ಕೃಷಿ ಹೊಂಡದಲ್ಲಿ ಸ್ಫೋಟ ನಡೆಸಿದ ಆರೋಪದ ಮೇಲೆ ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್ ಅವರನ್ನು ಬಂಧಿಸಲಾಗಿದೆ.ಪೊಲೀಸರ ವಿಚಾರಣೆಯಲ್ಲಿ ಅವರು ಯೂಟ್ಯೂಬ್‌ನಲ್ಲಿ ಹಣ ಸಂಪಾದಿಸಲು ಎರಡು ಬಾರಿ ಸ್ಫೋಟ ನಡೆಸಿದ್ದೆ ಎಂದು ಒಪ್ಪಿಕೊಂಡಿದ್ದಾರೆ. ಸ್ಫೋಟಕ್ಕೆ ಜಮೀನು ಮಾಲೀಕರ ಅನುಮತಿ ಇರಲಿಲ್ಲ ಮತ್ತು ಯಾವುದೇ ಅಧಿಕೃತ ಅನುಮತಿಯನ್ನು ಪಡೆಯದೆ ಸ್ಫೋಟ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ತುಮಕೂರು, ಡಿಸೆಂಬರ್ 13: ಸೋಡಿಯಂ ಬಳಸಿ ಕೃಷಿ ಹೊಂಡದಲ್ಲಿ ಸ್ಫೋಟ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಿಗ್ಬಾಸ್ (Big Boss) 10ನೇ ಆವೃತ್ತಿಯ ಸ್ಪರ್ಧಿ ಡ್ರೋನ್ ಪ್ರತಾಪ್ನನ್ನು (Drone Pratap) ಪೊಲೀಸರು ಬಂಧಿಸಿದ್ದು, ವಿಚಾರಣೆ ವೇಳೆ ಒಳಪಡಿಸಿದ್ದಾರೆ. ವಿಚಾರಣೆ ವೇಳೆ ಡ್ರೋನ್ ಪ್ರತಾಪ್ ಹಲವು ಸಂಗತಿಯಗಳನ್ನು ಬಾಯಿಬಿಟ್ಟಿದ್ದಾರೆ. ಇದಕ್ಕೂ ಮುನ್ನ ಎರಡು ಬಾರಿ ಇದೇ ರೀತಿಯ ಸ್ಫೋಟಿಸಿದ್ದೆ. ಸ್ಫೋಟದ ದೃಶ್ಯವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದು ಯೂಟ್ಯೂಬ್‌ನಲ್ಲಿ ಅಪ್ಲೋಡ್ ಮಾಡಿದ್ದೆ ಎಂದು ಡ್ರೋನ್ ಪ್ರತಾಪ್ ಪೊಲೀಸರ ಮುಂದೆ ಹೇಳಿದ್ದಾರೆ.
ಯೂಟ್ಯೂಬ್ನಿಂದ 100 ಡಾಲರ್ ಬಂದಿತ್ತು. ಹೀಗಾಗಿ, ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಸೋಡಿಯಂ ಬಳಸಿ ಸ್ಫೋಟಿಸಿದೆ. ಸ್ಫೋಟದ ವಿಡಿಯೋವನ್ನು ಯೂಟ್ಯೂಬ್‌ನಲ್ಲಿ ಅಪ್ಲೋಡ್ ಮಾಡಿದೆ. ಇದರಿಂದ ಬರುವ ಹಣವನ್ನು ಸಮಾಜ ಕಾರ್ಯಕ್ಕೆ ಉಪಯೋಗಿಸಲು ನಿರ್ಧರಿಸಿದ್ದೇನೆ ಎಂದು ಬಾಯಿ ಬಿಟ್ಟಿದ್ದಾರೆ.
ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಸ್ಫೋಟವಾಗುತ್ತದೆ ಎಂದು ನನಗೆ ಅರಿವಿರಲಿಲ್ಲ. ಸ್ಫೋಟವಾದ ಬಳಿಕ ನನಗೆ ಅರಿವು ಆಗಿದೆ ಎಂದು ಪೊಲೀಸರ ಮುಂದೆ ಹೇಳಿದ್ದಾರೆ.
ಜಮೀನು ಮಾಲೀಕನ ಅನುಮತಿ ಇಲ್ಲದೆ ಸ್ಫೋಟ
ಬೆಂಗಳೂರು ಮೂಲದ ವ್ಯಕ್ತಿಯೊಬ್ಬರು ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕು ಜನಕಲೋಟಿ ಗ್ರಾಮದ ಬಳಿ 40 ಎಕರೆ ಜಮೀನು ಹೊಂದಿದ್ದಾರೆ. ಇವರು, ತಮ್ಮ ಜಮೀನಿನ 10 ಗುಂಟೆ ಜಾಗದಲ್ಲಿ 10X10 ಕಾಟೇಜ್ ನಿರ್ಮಾಣ ಮಾಡಿ ಮಾರಾಟ ಮಾಡಲು ನಿರ್ಧರಿಸಿದ್ದರು. ಇದರ ಜಾಹಿರಾತುಗಾಗಿ ಡ್ರೋನ್ ಪ್ರತಾಪ್ ಅವರನ್ನು ಮಾಲೀಕ ಜಮೀನಿಗೆ ಕರೆಸಿದ್ದಾರೆ.
ಇದನ್ನೂ ಓದಿ: ಮಾಜಿ ಬಿಗ್ಬಾಸ್ ಸ್ಪರ್ಧಿ ಡ್ರೋನ್ ಪ್ರತಾಪ್ ಅರೆಸ್ಟ್
ಮೊದಲನೇ ಬಾರಿಗೆ ಶ್ರೀರಾಯರ ಬೃಂದಾವನ ಫಾರ್ಮ್ ಹೌಸ್ ಜಮೀನಿಗೆ ಬಂದ ಡ್ರೋನ್ ಪ್ರತಾಪ್ ಅಲ್ಲಿರುವ ಕೃಷಿ ಹೊಂಡವನ್ನು ವೀಕ್ಷಿಸಿ ತೆರಳಿದ್ದಾರೆ. ಬಳಿಕ ಡ್ರೋನ್ ಪ್ರತಾಪ್ ಸೋಡಿಯಂ, ವಿಡಿಯೋ ಚಿತ್ರಕರಣಕ್ಕೆ ಬೇಕಾದ ಸಾಮಾಗ್ರಿಗಳ ಸಹಿತ ಕಾರಿನಲ್ಲಿ ಜಮೀನಿಗೆ ಮತ್ತೊಮ್ಮೆ ಬಂದಿದ್ದಾರೆ. ಈ ವೇಳೆ ಜಮೀನು ಮಾಲೀಕ ಸ್ಥಳದಲ್ಲಿ ಇರಲಿಲ್ಲ.
ಜಮೀನು ಮಾಲೀಕನಿಗೆ ತಾನು ಸೋಡಿಯಂನಿಂದ ಸ್ಫೋಟಿಸುತ್ತಿರುವ ವಿಚಾರ ತಿಳಿಸದೆ, ಪ್ಲಾಸಿಕ್ ಕವರ್ನಲ್ಲಿ ಸೋಡಿಯಂ ಉಂಡೆಯನ್ನು ಹಾಕಿ ಕೃಷಿ ಹೊಂಡದಲ್ಲಿ ಡ್ರೋನ್ ಪ್ರತಾಪ್ ಎಸೆದಿದ್ದಾರೆ. ಆಗ, ದೊಡ್ಡ ಪ್ರಮಾಣದ ಸದ್ದಿನೊಂದಿಗೆ ಸೋಡಿಯಂ ಸ್ಫೋಟಗೊಂಡಿದೆ. ಇದರಿಂದ ಅಕ್ಕ-ಪಕ್ಕದ ತೋಟದಲ್ಲಿದ್ದ ಜನರು ಮತ್ತು ಮನೆಯವರು ಗಾಭರಿಗೊಂಡಿದ್ದರು.
ಸೋಡಿಯಂ ಸ್ಫೋಟದ ದೃಶ್ಯವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದು, ಯೂಟ್ಯೂಬ್‌ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಈ ವಿಡಿಯೋವನ್ನು ನೋಡಿದ ಪೊಲೀಸ್ ಇಲಾಖೆ ಗುಪ್ತಚರದವರು ಮಿಡಿಗೇಶಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸಿದಾಗ, 15 ದಿನಗಳ ಹಿಂದೆ ಸ್ಫೋಟಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.
ಸ್ಫೋಟಕ್ಕೆ ಅನುಮತಿ ಕಡ್ಡಾಯ
ಇಂತಹ ಪ್ರಯೋಗಗಳಿಗೆ ಕಡ್ಡಾಯವಾಗಿ ಅನುಮತಿ ಪಡೆದುಕೊಳ್ಳಬೇಕು. ಸ್ಥಳೀಯ ಪೊಲೀಸ್ ಠಾಣೆ ಹಾಗೂ ಸಂಬಂಧಿಸಿದ ಇಲಾಖೆ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಕೃಷಿ ಇಲಾಖೆ ಸೇರಿದಂತೆ ಹಲವು ಇಲಾಖೆಯ ಅನುಮತಿ ಪಡೆಯಬೇಕು. ಆದರೆ, ಡ್ರೋನ್ ಪ್ರತಾಪ್ ಯಾವುದೇ ಅನುಮತಿಯನ್ನು ಪಡೆದಿರಲಿಲ್ಲ ಎಂದು ಮಾಹಿತಿ ದೊರೆತಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ