ತುಮಕೂರು: ತುಮಕೂರು ಜಿಲ್ಲೆಯ ಶಿರಾ ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಹೈವೇ ಗಸ್ತು ಪೊಲೀಸರು ಆಡಿದ್ದೇ ಆಟ, ವಸೂಲಿ ಮಾಡಿದಷ್ಟೂ ಕಾಸೋ ಕಾಸು ಎಬಂತಾಗಿದೆ ಅವರ ವಸೂಲಿ ದಂಧೆ! ವಾಹನ ತಪಾಸಣೆ ನೆಪದಲ್ಲಿ ವಸೂಲಿಗಿಳಿದ ಹೈವೇ ಗಸ್ತು ಪೊಲೀಸರು ಪ್ರತಿ ವಾಹನದಿಂದ ತಲಾ 500 ರೂಪಾಯಿ ಪಡೆದು ರಶೀದಿ ನೀಡದೆ, ಅತ್ತ ಇಲಾಖೆಗೂ ವಂಚಿಸುತ್ತಿದ್ದಾರೆ ಈ ಹೆದ್ದಾರಿ ಪೊಲೀಸರು.
ದ್ವಿಚಕ್ರ ವಾಹನ, ಟ್ರ್ಯಾಕ್ಟರ್, ಗೂಡ್ಸ್ ವಾಹನ ತಡೆದು ಹಗಲು ದರೋಡೆಗೆ ಇಳಿದಿದ್ದಾರೆ. ಕೇಸ್ ಹಾಕದೆ, ರಶೀದಿಯನ್ನೂ ನೀಡದೆ ಪೊಲೀಸರ ಈ ಹಗಲು ದರೋಡೆಯಿಂದ ಬಸವಳಿದಿದ್ದೇವೆ ಎಂದು ವಾಹನ ಮಾಲೀಕರು ಬಿರುಬಿಸಿಲಿನಲ್ಲಿ ತಲೆಯ ಮೇಲೆ ಕೈಹೊತ್ತು ಕುಳಿತಿದ್ದಾರೆ.
ಅಲ್ಲಿಗೂ ವಾಹನ ಮಾಲೀಕರೊಬ್ಬರು ಹೈವೇ ಪೆಟ್ರೋಲಿಂಗ್ ಪೊಲೀಸರ ಹಗಲು ದರೋಡೆಯನ್ನು ಸಾದ್ಯಂತವಾಗಿ ವಿಡಿಯೋ ಮಾಡಿಕೊಂಡಿದ್ದು, ಅದೀಗ ವೈರಲ್ ಆಗಿದೆ. ವಿಡಿಯೋದಲ್ಲಿ ಪೊಲೀಸರ ಅಸಲಿಯತ್ತು ಜಗಜ್ಜಾಹೀರಾಗಿದೆ. ಇದು ಒಂದು ದಿನ ಕತೆಯಲ್ಲ. ವಾಹನ ತಪಾಸಣೆ ನೆಪದಲ್ಲಿ ಪ್ರತಿನಿತ್ಯವೂ ಸವಾರರಿಗೆ ಪೊಲೀಸರು ಕಿರಿಕಿರಿ ಕೊಡ್ತಿದ್ದಾರೆ. ಹೈವೈ ಪೆಟ್ರೋಲಿಂಗ್ ಪೊಲೀಸರ ವಿರುದ್ಧ ಸಾರ್ವಜನಿಕರು ಆಕ್ರೋಶಗೊಂಡಿದ್ದಾರೆ. ಇನ್ನಾದರೂ ಹಗಲು ದರೋಡೆಗೆ ಬ್ರೇಕ್ ಹಾಕಿ, ಹೆದ್ದಾರಿ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ವಾಹನ ಮಾಲೀಕರು ಒತ್ತಾಯ ಮಾಡುತ್ತಿದ್ದಾರೆ.
ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದು ತಂದೆ, ಮಗ ದುರ್ಮರಣ
ರಾಮನಗರ: ಕುಂಬಾಪುರ ಗೇಟ್ ಬಳಿ ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದು ತಂದೆ, ಮಗ ಮೃತಪಟ್ಟಿದ್ದಾರೆ. ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಅಗಸನಪುರ ಗ್ರಾಮದ ಸುದರ್ಶನ್(40), ತನ್ಮಯ್(2) ಮೃತಪಟ್ಟವರು. ಕುಟುಂಬ ಸಮೇತ ಹಬ್ಬಕ್ಕೆ ಊರಿಗೆ ತೆರಳಿದ್ದ ಸುದರ್ಶನ್, ಕಾರಿನಲ್ಲಿ ಬೆಂಗಳೂರಿಗೆ ಹಿಂದಿರುಗುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ. ಸುದರ್ಶನ್ ಪತ್ನಿ ಶೀಲಾ ಸ್ಥಿತಿ ಗಂಭೀರವಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಾರಿನಲ್ಲಿದ್ದ ಮತ್ತಿಬ್ಬರು ಹೆಣ್ಣುಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಾಮನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲಾರಿ ಚಾಲಕನ ನಿರ್ಲಕ್ಷ್ಯ ಫುಟ್ ಪಾತ್ ಮೇಲೆ ಹರಿದ ಲಾರಿ
ರಾಯಚೂರು: ನಗರದ ಸ್ಟೇಷನ್ ರಸ್ತೆಯಲ್ಲಿ ಅಕ್ಕಿ ಸಾಗಣೆ ಲಾರಿ ಫುಟ್ಪಾತ್ ಮೇಲೆ ಚಲಿಸಿ ಲೋಕಾಯುಕ್ತ ಕಚೇರಿ ಕಾಂಪೌಂಡ್ಗೆ ಡಿಕ್ಕಿ ಹೊಡೆದಿದೆ. ಮದ್ಯದ ಅಮಲಿನಲ್ಲಿ ಲಾರಿ ಚಲಾಯಿಸುತ್ತಿದ್ದ ಚಾಲಕನಿಂದ ಕೃತ್ಯ. ನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೃಷಿ ಹೊಂಡದಲ್ಲಿ ಈಜಲು ಹೋಗಿ ನೀರು ಪಾಲು
ದಾವಣಗೆರೆ: ಜಗಳೂರು ತಾಲೂಕಿನ ಚಿಕ್ಕಾರಕೆರೆ ಹೊಸೂರು ಗ್ರಾಮದ ಬಳಿ ಕೃಷಿ ಹೊಂಡದಲ್ಲಿ ಈಜಲು ಹೋಗಿದ್ದ ಪ್ರಜ್ವಲ್(11) ನೀರುಪಾಲಾಗಿದ್ದಾರೆ. ಬಿಳಿಚೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Published On - 1:48 pm, Mon, 25 April 22