ತುಮಕೂರು, ಅ.02: ಕೈಗಾರಿಕಾ ಪ್ರದೇಶಕ್ಕೆ ಸೇರ್ಪಡೆಗೊಂಡ ಜಮೀನಿನ ಹಣ ಲಪಟಾಯಿಸಲು ಪ್ಲ್ಯಾನ್ ಮಾಡಿದ ಸಂಬಂಧಿಕರು, ಬದುಕಿರುವವನನ್ನ ಸತ್ತಿದ್ದಾನೆಂದು ತಿಥಿ ಕಾರ್ಡ್ ಹೊಡೆಸಿ ಗೋಲ್‌ಮಾಲ್ ಮಾಡಿದ ಘಟನೆ ತುಮಕೂರು ತಾಲೂಕಿನ ಸೊರೆಕುಂಟೆ ಗ್ರಾಮದಲ್ಲಿ ನಡೆದಿದೆ. ಇದಕ್ಕೆ ತುಮಕೂರಿನ ಹಿಂದಿನ ತಹಶೀಲ್ದಾರ್ ಸಿದ್ದೇಶ್ ಹಾಗೂ ಸಿಬ್ಬಂದಿ ಶಾಮೀಲಾಗಿರುವ ಆರೋಪ ಕೂಡ ಕೇಳಿಬಂದಿದೆ.
ಜಿಲ್ಲೆಯ ಶಿರಾ ತಾಲೂಕಿನ ಬಸರಿಹಳ್ಳಿಯ ನಿವಾಸಿ ಬಸವರಾಜು ಅವರ ನಾಲ್ಕು ಎಕರೆ ಜಮೀನು, ಸೊರೆಕುಂಟೆ ಗ್ರಾಮದ ಸರ್ವೆ ನಂಬರ್ 41/44ರಲ್ಲಿ ಇದೆ. 1977 ರಿಂದ 1978ರಲ್ಲಿ ಬಸವರಾಜು ಎಂಬುವವರಿಗೆ ಇದನ್ನು ಮಂಜೂರು ಮಾಡಲಾಗಿದೆ. ಈ ಜಮೀನಿನ ಪಕ್ಕದಲ್ಲಿ ತುಮಕೂರು ತಾಲೂಕಿನ ಬೊಮ್ಮೇಗೌಡನಪಾಳ್ಯದ ನಿವಾಸಿ ಹಾಗೂ ಬಸವರಾಜು ಸಂಬಂಧಿಯಾದ ಆರೋಪಿ ನಂಜಯ್ಯ ಅವರ ಜಮೀನಿದೆ. ಈ ಮಧ್ಯೆ ಜಮೀನು ಕೈಗಾರಿಕಾ ಪ್ರದೇಶಕ್ಕೆ ಸೇರ್ಪಡೆ ಹಿನ್ನೆಲೆ ಪರಿಹಾರ ಪಡೆಯಲು 1997ರಲ್ಲಿ ನಕಲಿ ದಾಖಲೆ ಸೃಷ್ಟಿಸಿರುವ ನಂಜಯ್ಯ, ನಮ್ಮ ಮನೆತನದಲ್ಲಿ ಬಸವರಾಜು ಇದ್ದ ಎಂದು ಜಮೀನಿನ ಪರಿಹಾರದ ಹಣ ಲಪಾಟಿಯಿಸಲು ನಕಲಿ ಬಸವರಾಜಯ್ಯನ ಸೃಷ್ಟಿ ಮಾಡಿದ್ದಾರೆ.
ಇದನ್ನೂ ಓದಿ:ದಾಯಾದಿಗಳ ನಡುವೆ ಜಮೀನು ಕಲಹ; 20 ವರ್ಷ ಹಳೆಯ ಸಪೋಟ ಮರಗಳ ನಾಶ
ಮೂಲ ಜಮೀನು ಮಾಲೀಕ ಬಸವರಾಜು ಬದುಕಿದ್ದರೂ ತಿಥಿ ಕಾರ್ಡ್ ಸೃಷ್ಟಿ ಮಾಡಿದ್ದು, ನಾನು ಬದುಕಿದ್ದರೂ ಸಾಯಿಸಿ ಹಣಕ್ಕಾಗಿ ಕೃತ್ಯವೆಂದು ರೈತ ಬಸವರಾಜು ಅಳಲು ತೋಡಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲ, ನಂಜಯ್ಯ ಮಕ್ಕಳಾದ ಈಶ್ವರಯ್ಯ, ರುದ್ರಯ್ಯ ಅವರು ಅಧಿಕಾರಿಗಳ ಕುಮ್ಮಕ್ಕಿನಿಂದ ನಕಲಿ ದಾಖಲಿ ಸೃಷ್ಟಿಸಿ ಗೋಲ್‌ಮಾಲ್ ಮಾಡಿದ್ದಾರೆ ಎಂದು ಜಮೀನಿನ ಮೂಲ ವಾರಸುದಾರ ಬಸವರಾಜು ಗಂಭೀರ ಆರೋಪ ಮಾಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 48ಕ್ಕೆ ಹೊಂದಿಕೊಂಡಿರುವ ನಾಲ್ಕು ಎಕರೆ ಜಮೀನು ಇದಾಗಿದ್ದು, ಎಕರೆಗೆ 30 ಲಕ್ಷದಂತೆ ಒಟ್ಟು 1 ಕೋಟಿ 20 ಲಕ್ಷ ಹಣ ಹೊಡೆಯಲು ಪ್ಲ್ಯಾನ್ ಮಾಡಿ, ತುಮಕೂರಿನಲ್ಲಿ ಈ ಹಿಂದೆ ತಹಶೀಲ್ದಾರ್ ಆಗಿದ್ದ ಸಿದ್ದೇಶ್ ಹಾಗೂ ಕಂದಾಯ ಇಲಾಖೆ ಸಿಬ್ಬಂದಿ ಸೇರಿಕೊಂಡು ಶಾಲಾ ದಾಖಲಾತಿ ಸೇರಿ ಹಲವು ನಕಲಿ ದಾಖಲೆ ಸೃಷ್ಟಿಸಿ ವಂಚಿಸಲು ಪ್ಲ್ಯಾನ್ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಇದೀಗ ನ್ಯಾಯಕ್ಕಾಗಿ ಮೂಲ ಜಮೀನುದಾರರ ಕುಟುಂಬ ಪರದಾಡುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ