ಮೃತ ವ್ಯಕ್ತಿಯ ಹೆಸರಿನಲ್ಲಿ ಮತದಾನ, ನಕಲಿ ಮತದಾನ; ನಗರಸಭೆ, ಪುರಸಭೆ ಚುನಾವಣೆ ನಡುವೆ ಗಲಾಟೆ

| Updated By: ganapathi bhat

Updated on: Dec 27, 2021 | 4:00 PM

ನಕಲಿ ಮತದಾನ ಮಾಡಲು ಬಂದ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೇರೆಯವರ ಹೆಸರಿನಲ್ಲಿ ಮತದಾನ ಮಾಡಲು ಬಂದ ಮಹಿಳೆ ಮತ್ತು ಇಬ್ಬರು ಪುರುಷರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಮೃತ ವ್ಯಕ್ತಿಯ ಹೆಸರಿನಲ್ಲಿ ಮತದಾನ, ನಕಲಿ ಮತದಾನ; ನಗರಸಭೆ, ಪುರಸಭೆ ಚುನಾವಣೆ ನಡುವೆ ಗಲಾಟೆ
ಸಾಂಕೇತಿಕ ಚಿತ್ರ
Follow us on

ತುಮಕೂರು: ತುಮಕೂರು ಜಿಲ್ಲೆಯ ಶಿರಾ ನಗರಸಭೆ ಚುನಾವಣೆ ವೇಳೆ ವ್ಯಕ್ತಿ ಒಬ್ಬರು ಮೃತ ವ್ಯಕ್ತಿಯ ಹೆಸರಿನಲ್ಲಿ ವೋಟ್ ಮಾಡಿದ ಘಟನೆ ನಡೆದಿದೆ. ಶಿರಾದ 23ನೇ ವಾರ್ಡ್ ಮತಗಟ್ಟೆಯಲ್ಲಿ ಮತದಾನ ಮಾಡಿದ್ದಾರೆ. ಮೃತ ಅಯೂಬ್ ಖಾನ್ ಹೆಸರಿನಲ್ಲಿ ಮತ ಚಲಾವಣೆ ಮಾಡಿದ್ದಾರೆ. ಇದೀಗ ಮತ ಚಲಾಯಿಸಿರುವ ವ್ಯಕ್ತಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಶಿರಾ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ನಕಲಿ ಮತದಾನ ಮಾಡಲು ಬಂದವರಿಗೆ ಬಿಜೆಪಿ ಕಾರ್ಯಕರ್ತರಿಂದ ಗೂಸಾ ಸಿಕ್ಕಿದೆ. ಆನೇಕಲ್ ತಾಲೂಕಿನ ಚಂದಾಪುರ ಪುರಸಭೆ ವಾರ್ಡ್ 20ರಲ್ಲಿ ಗಲಾಟೆ ನಡೆದಿದೆ. ನಕಲಿ ಮತದಾನ ಮಾಡಲು ಬಂದ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೇರೆಯವರ ಹೆಸರಿನಲ್ಲಿ ಮತದಾನ ಮಾಡಲು ಬಂದ ಮಹಿಳೆ ಮತ್ತು ಇಬ್ಬರು ಪುರುಷರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಮತದಾನಕ್ಕೆ ಬಂದಿದ್ದ ಕಾಂಗ್ರೆಸ್ ಅಭ್ಯರ್ಥಿ ತಾಯಿ ಸಾಮವ್ವ ಹೆಸರಿನಲ್ಲಿ ಅದಾಗಲೇ ಮತ್ತೊಬ್ಬ ಮಹಿಳೆ ಮತ ಹಾಕಿರುವ ಘಟನೆ ಯಾದಗಿರಿಯಲ್ಲಿ ನಡೆದಿದೆ. ಕಾಂಗ್ರೆಸ್ ಅಭ್ಯರ್ಥಿ ಪರಶುರಾಮ ತಾಯಿ ಸಾಮವ್ವ ಬರುವ ವೇಳೆ ಮತ್ತೊಬ್ಬ ಮಹಿಳೆ ಆಕೆಯ ಹೆಸರಿನಲ್ಲಿ ಮತ ಚಲಾಯಿಸಿದ್ದರು. ಯಾದಗಿರಿ ಜಿಲ್ಲೆಯ ಪುರಸಭೆಗೆ ನಡೆಯುತ್ತಿರುವ ಮತದಾನ ವೇಳೆ ಘಟನೆ ನಡೆದಿದೆ. ಇದನ್ನು ವಿರೋಧಿಸಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಮತದಾನ ಮಾಡಲು ಅವಕಾಶ ನೀಡುವಂತೆ ಒತ್ತಾಯ ಕೇಳಿಬಂದಿದೆ. ಆದರೆ, ಮತದಾನಕ್ಕೆ ಸಾಮವ್ವಗೆ ಅಧಿಕಾರಿಗಳು ಅವಕಾಶ ನೀಡಿಲ್ಲ.

ಮತಗಟ್ಟೆ ಒಳಗೆ ಹೋಗಲು ಅನುಮತಿ ನಿರಾಕರಣೆ ಹಿನ್ನೆಲೆ ಮತಗಟ್ಟೆಯ ಬಳಿ ಕಾಂಗ್ರೆಸ್ ಮುಖಂಡರಿಂದ ಗದ್ದಲ ಉಂಟಾಗಿದೆ. ಬೇಕಾಬಿಟ್ಟಿ ಹೋಗುತ್ತಿದ್ದವರನ್ನು ಪೊಲೀಸರು ತಡೆದಿದ್ದರು. ಪೊಲೀಸರು ತಡೆದಿದ್ದಕ್ಕೆ ‘ಕೈ’ ಮುಖಂಡರಿಂದ ಗಲಾಟೆ ನಡೆದಿದೆ. ಯಾದಗಿರಿ ಜಿಲ್ಲೆಯ ಕಕ್ಕೇರಾ ಸರ್ಕಾರಿ ಶಾಲೆಯ ಮತಗಟ್ಟೆಯಲ್ಲಿ ಘಟನೆ ನಡೆದಿದೆ.

ಚುನಾವಣಾ ಅಧಿಕಾರಿಗಳ ನಿರ್ಲಕ್ಷ್ಯ: ತಾಯಿಯನ್ನು ಎತ್ತಿಕೊಂಡು ಬಂದು ಮತದಾನ ಮಾಡಿದ ಮಗ
ಯಾದಗಿರಿ ಕೆಂಭಾವಿ ಪುರಸಭೆ ವಾರ್ಡ್ ನಂ.1 ರಲ್ಲಿ‌ ಮತದಾನ ವೇಳೆ ಚುನಾವಣಾ ಅಧಿಕಾರಿಗಳ ನಿರ್ಲಕ್ಷ್ಯ ಕಂಡುಬಂದಿದೆ. ಮಗ ತನ್ನ ತಾಯಿಯನ್ನು ಎತ್ತಿಕೊಂಡು ಬಂದು ಮತದಾನ ಮಾಡಿದ ಘಟನೆ ನಡೆದಿದೆ. ವ್ಹೀಲ್ ಚೇರ್ ವ್ಯವಸ್ಥೆ ಇಲ್ಲದಕ್ಕೆ ತಾಯಿಯನ್ನ ಎತ್ತಿಕೊಂಡು ಬಂದ ಮಗ ಮತದಾನ ಮಾಡಿಸಿದ್ದಾರೆ. ಮತಗಟ್ಟೆ ಕೇಂದ್ರದಲ್ಲಿ ತಾಯಿಯನ್ನ ಕೂರಿಸಿ ತಾಯಿಯ ಮತ ಚಲಾಯಿಸಲಾಗಿದೆ.

ಹಸಮಣೆ ಏರಿದ ಬಳಿಕ ಮತದಾನ ಮಾಡಿದ ನವ ವಧುವರರು
ಹಸಮಣೆ ಏರಿದ ಬಳಿಕ ನವ ವಧುವರರು ಮತದಾನ ಮಾಡಿದ ಘಟನೆ ರಾಯಚೂರು ಜಿಲ್ಲೆಯ ಮಸ್ಕಿ ಪುರಸಭೆಯಗೆ ನಡೆದ ಚುನಾವಣೆ ವೇಳೆ ನಡೆದಿದೆ. ಮಸ್ಕಿಯ ಪ್ರಾಥಮಿಕ ಶಾಲೆಯ ವಾರ್ಡ್ ನಂ 5ರ ಮತಗಟ್ಟಿಯಲ್ಲಿ ಮತದಾನ ಮಾಡಲಾಗಿದೆ. ನವ ದಂಪತಿಗಳಾದ ಮಂಜುನಾಥ- ಸವಿತಾ ಹಾಗೂ ಮಹೇಶ್- ಶಾಂತರಿಂದ ಮತ ಚಲಾವಣೆ ಮಾಡಲಾಗಿದೆ. ಮತ ಮಾರಿಕೊಳ್ಳದಂತೆ ಮದುವೆಗೆ ಬಂದವರಿಗೆ ನವ ವಧುವರರು ಶಪಥ ಮಾಡಿಸಿದ್ದಾರೆ.

ಬಿಜೆಪಿ ಅಭ್ಯರ್ಥಿ ಸಂಬಂಧಿಗೆ ಚಪ್ಪಲಿಯಿಂದ ಹೊಡೆದ ಆರೋಪ ಕೇಳಿಬಂದಿದೆ. ರಾಯಚೂರು ಜಿಲ್ಲಾ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆಯಿಂದ ಸಿರವಾರ ಪಟ್ಟಣ ಪಂಚಾಯಿತಿ ಮತದಾನ ವೇಳೆ ಹಲ್ಲೆ ಆರೋಪ ಕೇಳಿಬಂದಿದೆ. ನಿರ್ಮಲಾ ಬೆಣ್ಣೆ ವಿರುದ್ಧ ಬಿಜೆಪಿ ಅಭ್ಯರ್ಥಿ ಬೆಂಬಲಿಗರ ಆರೋಪ ವ್ಯಕ್ತವಾಗಿದೆ. ಬಿಜೆಪಿ ಅಭ್ಯರ್ಥಿ ಪರ ಚನ್ನಪ್ಪ ಮತಯಾಚನೆ ಆರೋಪ ಕೇಳಿಬಂದಿತ್ತು. ಇದನ್ನು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ನಿರ್ಮಲಾ ಬೆಣ್ಣೆ ಪ್ರಶ್ನಿಸಿದ್ದರು. ಈ ವೇಳೆ, ಮಾತಿಗೆಮಾತು ಬೆಳೆದು ಚಪ್ಪಲಿಯಿಂದ ಹೊಡೆದಿರುವ ಆರೋಪ ಕೇಳಿಬಂದಿದೆ.

ರಾಮನಗರ ತಾಲೂಕಿನ ಬಿಡದಿ ಪುರಸಭೆ ಚುನಾವಣೆ, ವಾರ್ಡ್ ನಂ.7ರ ಮತಗಟ್ಟೆಯಲ್ಲಿ ಜೆಡಿಎಸ್ ನಾಯಕ ಹೆಚ್‌.ಡಿ. ಕುಮಾರಸ್ವಾಮಿ ಮತದಾನ ಮಾಡಿದ್ದಾರೆ. ಕೇತಗಾನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹಕ್ಕು ಚಲಾವಣೆ ಮಾಡಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯ ಕ್ಷೇತ್ರದಲ್ಲಿ ಗ್ರಾಮ ಪಂಚಾಯಿತಿ ಉಪಚುನಾವಣೆ ಬಹಿಷ್ಕರಿಸಿದ ಗ್ರಾಮಸ್ಥರು! ಕಾರಣ ಇಲ್ಲಿದೆ

ಇದನ್ನೂ ಓದಿ: ಕೆಲವೇ ತಿಂಗಳಲ್ಲಿ 5ರಾಜ್ಯಗಳ ವಿಧಾನಸಭಾ ಚುನಾವಣೆ; ಇಂದು ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿಯೊಂದಿಗೆ ಚುನಾವಣಾ ಆಯೋಗದ ಸಭೆ

Published On - 3:57 pm, Mon, 27 December 21