ತುಮಕೂರು: ಶಿಕ್ಷಣ ಸಚಿವ ಬಿ.ಸಿ.ನಾಗೇಶ್ (BC Nagesh) ಅವರ ತಿಪಟೂರು ನಿವಾಸಕ್ಕೆ ಮುತ್ತಿಗೆ ಹಾಕಿದ್ದ ಎನ್ಎಸ್ಯುಐ (NSUI) ಕಾರ್ಯಕರ್ತರು ಗುರುವಾರ ಜಾಮೀನಿನ ಮೇಲೆ ಬಿಡುಗಡೆಗೊಂಡರು. ಈ ಪ್ರಕರಣದಲ್ಲಿ ಪೊಲೀಸರು ಒಟ್ಟು 24 ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಬಂಧಿತರಿಗೆ ನಿನ್ನೆ (ಜೂನ್ 8) ನ್ಯಾಯಾಲಯವು ಜಾಮೀನು ನೀಡಿತ್ತು. ಜೈಲಿನ ಮುಂಭಾಗ ನೆರೆದಿದ್ದ ಎನ್ಎಸ್ಯುಐ ಕಾರ್ಯಕರ್ತರು ಬಿಡುಗಡೆಯಾದವರನ್ನು ಸಂಭ್ರಮದಿಂದ ಸ್ವಾಗತಿಸಿದರು. ಜೈಲಿನಿಂದ ಹೊರಗೆ ಬಂದ ಎನ್ಎಸ್ಯುಐ ರಾಜ್ಯ ಘಟಕದ ಅಧ್ಯಕ್ಷ ಕೀರ್ತಿ ಗಣೇಶ್ ಮಾತನಾಡಿ, ಆರ್ಎಸ್ಎಸ್ ಮಾತು ಕೇಳಿ ಅಂಬೇಡ್ಕರ್, ಬಸವಣ್ಣ, ಕುವೆಂಪು ಅವರ ವಿಚಾರ ಸುಟ್ಟು ಹಾಕಲು ರಾಜ್ಯ ಸರ್ಕಾರ ಪ್ರಯತ್ನಿಸುತಿತ್ತು. ಹಾಗಾಗಿ ನಾವು ಆರ್ಎಸ್ಎಸ್ ಚಡ್ಡಿ ಸುಟ್ಟು ಪ್ರತಿಭಟಿಸಿದೆವು ಎಂದರು.
ಈ ಹೋರಾಟದಲ್ಲಿ ಕಾಂಗ್ರೆಸ್ ನಾಯಕರು ಸದಾ ನಮ್ಮ ಜೊತೆ ಇದ್ದರು. ದೇಶಕ್ಕಾಗಿ ಹೋರಾಟ ನಡೆಸಿ, ಜೈಲಿಗೆ ಹೋಗಿದ್ದರ ಬಗ್ಗೆ ಖುಷಿ ಇದೆ. ನಾಡಿಗಾಗಿ ಜೈಲಿಗೆ ಹೋಗಿದ್ದಕ್ಕೆ ಹೆಮ್ಮೆ ಅನ್ನಿಸುತ್ತದೆ. ಮುಂದಿನ ಹೋರಾಟದ ರೂಪುರೇಷೆಗಳನ್ನು ಸದ್ಯದಲ್ಲೇ ರೂಪಿಸುತ್ತೇವೆ ಎಂದು ಕೀರ್ತಿ ಗಣೇಶ್ ಹೇಳಿದರು.
ಬಿ.ಸಿ.ನಾಗೇಶ್ ಮನೆಗೆ ಮುತ್ತಿಗೆ
ಕಳೆದ ಜೂನ್ 1ರಂದು ತಿಪಟೂರಿನಲ್ಲಿರುವ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರ ಮನೆಗೆ ಎನ್ಎಸ್ಯುಐ ಕಾರ್ಯಕರ್ತರು ಮುತ್ತಿಗೆ ಹಾಕಿದ್ದರು. ರೋಹಿತ್ ಚಕ್ರತೀರ್ಥ ನೇತೃತ್ವದಲ್ಲಿ ನಡೆದಿದ್ದ ಪಠ್ಯಪುಸ್ತಕ ಪರಿಷ್ಕರಣೆ ವಿರೋಧಿಸಿ ಎನ್ಎಸ್ಯುಐ ಕಾರ್ಯಕರ್ತರು ಸಚಿವರ ಮನೆಗೆ ಮುತ್ತಿಗೆ ಹಾಕಿ ಅವರ ಮನೆ ಮುಂದೆ ಆರ್ಎಸ್ಎಸ್ ಚಡ್ಡಿಯನ್ನು ಸುಡಲು ಯತ್ನಿಸಿದ್ದರು. ಪೊಲೀಸರು ಇವರನ್ನು ಬಂಧಿಸಿದರು.
ಈ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ್ದ ಗೃಹ ಸಚಿವ ಆರಗ ಜ್ಞಾನೇಂದ್ರ, ಕೆಲವರು ನಾಗೇಶ್ ಮನೆಗೆ ಬೆಂಕಿ ಹಾಕೋದಿಕ್ಕೆ ಮುಂದಾಗಿದ್ದರು ಎನ್ನುವ ಮಾಹಿತಿ ಇದೆ. ಪ್ರಕರಣ ಸಂಬಂಧ 15 ಜನರನ್ನು ಬಂಧಿಸಿರುವ ಪೊಲೀಸರು, ಎರಡು ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. ಈ ರೀತಿಯಾದ ಗುಂಡಾ ವರ್ತನೆ ನಮ್ಮಲ್ಲಿ ನಡೆಯಲ್ಲಾ ಎಂದು ಕಿಡಿ ಕಾರಿದ್ದರು.
ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:53 pm, Thu, 9 June 22