ಬೇರೆ ಸಮಾಜದವರು ಸಿಎಂ ಆಗಿದ್ದಾರೆ, ದಲಿತರು ಒಮ್ಮೆ ಆಗಲಿ: ಸಚಿವ ಕೆಎನ್ ರಾಜಣ್ಣ
ದಲಿತ ಸಿಎಂ ವಿಚಾರದಲ್ಲಿ ಹೈಕಮಾಂಡ್ ತೀರ್ಮಾನಕ್ಕೆ ನಾವೆಲ್ಲಾ ಬದ್ಧ. ದಲಿತ ಸಿಎಂ ವಿಚಾರದಲ್ಲಿ ನಮ್ಮ ಅಭಿಲಾಷೆ ಇದೆ, ಇಲ್ಲ ಅಂತಾ ಹೇಳಲ್ಲ. ಬೇರೆ ಸಮಾಜದವರು ಸಿಎಂ ಆಗಿದ್ದಾರೆ, ದಲಿತರು ಒಮ್ಮೆ ಸಿಎಂ ಆಗಲಿ ಎಂದು ಸಹಕಾರ ಇಲಾಖೆಯ ಸಚಿವ ಕೆ.ಎನ್.ರಾಜಣ್ಣ ಹೇಳಿದ್ದಾರೆ. ಆ ಮೂಲಕ ಮತ್ತೆ ದಲಿತ ಸಿಎಂ ಬೇಡಿಕೆ ಇಟ್ಟಿದ್ದಾರೆ.
ತುಮಕೂರು, ಸೆಪ್ಟೆಂಬರ್ 24: ದಲಿತ ಸಿಎಂ ವಿಚಾರದಲ್ಲಿ ಹೈಕಮಾಂಡ್ ತೀರ್ಮಾನಕ್ಕೆ ನಾವೆಲ್ಲಾ ಬದ್ಧ. ದಲಿತ ಸಿಎಂ ವಿಚಾರದಲ್ಲಿ ನಮ್ಮ ಅಭಿಲಾಷೆ ಇದೆ, ಇಲ್ಲ ಅಂತಾ ಹೇಳಲ್ಲ. ಬೇರೆ ಸಮಾಜದವರು ಸಿಎಂ ಆಗಿದ್ದಾರೆ, ದಲಿತರು ಒಮ್ಮೆ ಸಿಎಂ ಆಗಲಿ ಎಂದು ಸಹಕಾರ ಇಲಾಖೆಯ ಸಚಿವ ಕೆ.ಎನ್.ರಾಜಣ್ಣ (kn rajanna) ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾರನ್ನು ಸಿಎಂ ಮಾಡಬೇಕು, ಯಾರನ್ನು ಮಂತ್ರಿ ಮಾಡಬೇಕು, ಯಾರನ್ನು ಅಧ್ಯಕ್ಷರನ್ನಾಗಿ ಮಾಡಬೇಕು ಎನ್ನುವುದು ವರಿಷ್ಠರಿಗೆ ಬಿಟ್ಟದ್ದು. ಅಂತಿಮ ತೀರ್ಮಾನ ಹೈಕಮಾಂಡ್‌ನದ್ದು ಎಂದರು.
ಮಾದಿಗ ಸಮಾಜದ ಒಳಮೀಸಲಾತಿ ಬೇಡಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ಮಾದಿಗ ಸಮಾಜಕ್ಕೆ ಒಳಮೀಸಲಾತಿ ನೀಡಲು ನಾವು ಬದ್ಧರಾಗಿದ್ದೇವೆ. ಚುನಾವಣಾ ಪೂರ್ವದಲ್ಲಿ ಪರಮೇಶ್ವರ್ ನೇತೃತ್ವದಲ್ಲಿ ಸಮಿತಿ ಇತ್ತು. ಸಮಿತಿಯಲ್ಲಿ ಆ ಒಂದು ವಿಷಯವನ್ನ ಪ್ರಸ್ತಾಪ ಮಾಡಿದ್ದಾರೆ. ಮಾದಿಗ ಸಮಾಜಕ್ಕೆ ಒಳಮೀಸಲಾತಿ ನೀಡಲು ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ: ಬಂದ್ನಿಂದ ಬೆಂಗಳೂರಿಗೆ ಅಪಮಾನ ಮಾಡುತ್ತಿಲ್ಲ: ಡಿಕೆ ಶಿವಕುಮಾರ್ ವಿರುದ್ಧ ಕುರುಬೂರು ಶಾಂತಕುಮಾರ್ ವಾಗ್ದಾಳಿ
ಚುನಾವಣಾ ಪ್ರಣಾಳಿಕೆಯಲ್ಲಿ ಈ ವಿಚಾರವನ್ನ ಪ್ರಸ್ತಾಪ ಮಾಡಿದ್ದೆವು. ನುಡಿದಂತೆ ನಡೆದಿದ್ದೇವೆ ಅಂತಾ ಹೇಳುತ್ತೀವಲ್ಲಾ. ಅದೇ ರೀತಿ ಇದನ್ನು ಜಾರಿಗೊಳಿಸಿ ನಾವು ನುಡಿದಂತೆ ನಡೆಯುತ್ತೇವೆ ಎಂದು ಹೇಳಿದ್ದಾರೆ.
ಕುಮಾರಸ್ವಾಮಿ ಅವರಿಗೆ ಕಾಂಗ್ರೆಸ್ ಶಾಸಕರ ಸಂಪರ್ಕ ಇರಬಹುದು
ಕಾಂಗ್ರೆಸ್ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂಬ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಇರಬಹುದು. 113 ಮೆಜಾರಿಟಿ, ಅಷ್ಟು ಇದ್ರು ಇರಬಹುದು, ನಮಗೆ ಗೊತ್ತಿಲ್ಲ. ಅವರು ರಾಜ್ಯದಲ್ಲಿ ಮುಖ್ಯಮಂತ್ರಿ ಆಗಿದ್ದವರು. ಹಿರಿಯ ರಾಜಕಾರಣಿ. ದೇವೆಗೌಡರ ಕುಟುಂಬದ ಕುಡಿ, ಅವರು ಏನ್ ಹೇಳುತ್ತಾರೆ ಅದನ್ನ ನಿರಾಕರಣೆ ಮಾಡುವುದಕ್ಕೆ ಆಗಲ್ಲ. ಆದರೂ ಕೂಡಾ ನಮ್ಮ ಮಾಹಿತಿ ಪ್ರಕಾರ, ಯಾರು ಕೂಡಾ ಅವರ ಸಂಪರ್ಕಕ್ಕೆ ಹೋಗುವುದಿಲ್ಲ ಎಂದರು.
ಇದನ್ನೂ ಓದಿ: ಕಾವೇರಿ ವಿಚಾರದಲ್ಲಿ ನಮ್ಮ ತಪ್ಪಿಲ್ಲ, ಮಳೆ ಬರದಿರುವುದು ನಮ್ಮ ತಪ್ಪಾ?: ರಾಮಲಿಂಗಾರೆಡ್ಡಿ
ಜಿಲ್ಲೆಯ ಹಲವು ನಾಯಕರು ಕಾಂಗ್ರೆಸ್ಗೆ ಬರುವ ವಿಚಾರಕ್ಕೆ ಪ್ರತಿಕ್ರಿಯಿಸಿದ್ದು, ಬರೋರು ಇರ್ತಾರೆ, ಹೋಗೋರು ಇರ್ತಾರೆ. ಚುನಾವಣಾ ಪೂರ್ವದಲ್ಲಿ ಸಾಕಷ್ಟು ರೀತಿಯಲ್ಲಿ ಆಯ್ತು. ಗೌರಿ ಶಂಕರ್ ಕಾಂಗ್ರೆಸ್ ಸೇರ್ಪಡೆ ಬಗ್ಗೆ ನನಗೆ ಗೊತ್ತಿಲ್ಲ. ನನಗೇನು ಭೇಟಿ ಮಾಡಿಲ್ಲ. ಅವರನ್ನ ಸೇರಿಕೊಳ್ಳೋದು ಬಿಡೋದು ಕಾಂಗ್ರೆಸ್ ಹೈಕಮಂಡ್ಗೆ ಬಿಟ್ಟಿದ್ದು. ನಾವು ಸೇರಿಸಿಕೊಳ್ಳೊರು ಅಲ್ಲ, ಬಿಡೋರು ಅಲ್ಲ ಎಂದು ಹೇಳಿದರು.
ಶಿವಮೊಗ್ಗಕ್ಕೆ ಲೋಕಾಸಭಾ ಚುನಾವಣೆಗೆ ಉಸ್ತುವಾರಿ ನೀಡಿರುವ ವಿಚಾರವಾಗಿ ಮಾತನಾಡಿ, ನನಗೆ ಶಿವಮೊಗ್ಗ ಉಸ್ತುವಾರಿ ವಹಿಸಿದ್ದಾರೆ. ಯಾರು ಯಾರನ್ನ ಅಭ್ಯರ್ಥಿ ಮಾಡಬೇಕು ಅನ್ನುದನ್ನ ಸ್ಥಳೀಯ ಮುಖಂಡರ ಜೊತೆ ಸಂಪರ್ಕ ಮಾಡಿ, ಅವರ ಸಲಹೆ ಮೇರಿಗೆ ಗೆಲ್ಲುವಂತಹ ಅಭ್ಯರ್ಥಿಯನ್ನ ಶಿಫಾರಸ್ಸು ಮಾಡಬೇಕು ಎಂದು ಸ್ಪಷ್ಟ ಜವಾಬ್ದಾರಿ ಕೊಟ್ಟಿದ್ದಾರೆ ಎಂದರು.
ರಾಜ್ಯದಲ್ಲಿ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:32 pm, Sun, 24 September 23