ತುಮಕೂರು, ಜೂ.02: ತುಮಕೂರು(Tumakuru) ಜಿಲ್ಲೆಯ ಶಿರಾ ನಗರದ ವಾರ್ಡ್ ನಂ.12 ಶಿರಾನಿಮೊಹಲ್ಲಾದಲ್ಲಿ ನಿನ್ನೆ(ಜೂ.01)ಯಿಂದ ಇಂದಿನವರೆಗೆ ಸುಮಾರು ಆರು ಮಕ್ಕಳ ಮೇಲೆ ಬೀದಿನಾಯಿ (Stray dogs) ದಾಳಿ ಮಾಡಿದೆ. ಮನೆ ಮುಂದೆ ಮಕ್ಕಳು ಆಟವಾಡುತ್ತಿರುವಾಗ ದಾಳಿ ಮಾಡಿರುವ ಬೀದಿ ನಾಯಿ, ಸಿಕ್ಕ ಸಿಕ್ಕ ಕಡೆ ಕಚ್ಚಿ ಮಕ್ಕಳಿಗೆ ಗಾಯಗೊಳಿಸಿದೆ. ಈ ರಾಕ್ಷಸ ನಾಯಿಯ ಕಾಟಕ್ಕೆ ಮಕ್ಕಳ ತಲೆ, ಕೈ, ಎದೆಭಾಗಕ್ಕೆ ಗಂಭೀರ ಗಾಯಗಳಾಗಿದ್ದು, ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ವಾಪಾಸ್ ಆಗಿದ್ದಾರೆ.
ಅಂದಹಾಗೇ ನಿನ್ನೆಯಿಂದ ಬೀದಿನಾಯಿಯೊಂದು ಮನೆ ಮುಂದೆ ಆಟವಾಡುತ್ತಿರುವ ಮಕ್ಕಳನ್ನ ಟಾರ್ಗೆಟ್ ಮಾಡಿ ಉಗ್ರವಾಗಿ ಕಚ್ಚಿ ತಿನ್ನಲು ಯತ್ನಿಸಿದೆ. ಈ ವೇಳೆ ಬಿಡಿಸಲು ಹೋದ ಪೋಷಕರಿಗೂ ದಾಳಿ ಮಾಡಿ ಗಾಯಗೊಳಿಸಿದೆ. ಇನ್ನು ಮಕ್ಕಳಾದ ಜಿಯಾವುಲ್ಲಾ ಖಾನ್, ತಸ್ಮಿಯಾ ಖಾನ್, ಹಿಬಾದ್ ಹುಲ್ಲಾ ಖಾನ್ ಸೇರಿದಂತೆ ಒಟ್ಟು ಆರು ಜನರ ಮೇಲೆ ಬೀದಿ ನಾಯಿ ದಾಳಿ ಮಾಡಿದ್ದು ಪೋಷಕರು ತೀವ್ರ ಕಂಗಾಲಾಗಿದ್ದಾರೆ.
ಈ ಏರಿಯಾದಲ್ಲಿ ಬೀದಿನಾಯಿಗಳ ದಾಳಿ ಇದೇ ಮೊದಲಲ್ಲ ಎನ್ನಲಾಗಿದೆ. ಕಳೆದ ಏಳೆಂಟು ತಿಂಗಳಿನಿಂದ ಕೂಡ ನಾಯಿಗಳು ದಾಳಿ ಮಾಡುತ್ತಿದ್ದರೂ ಶಿರಾ ನಗರಸಭೆ ಮಾತ್ರ ನಿರ್ಲಕ್ಷ್ಯ ತೋರುತ್ತಿದೆ. ಇಲ್ಲಿನ ಜನರು ನಗರಸಭೆ ಸದಸ್ಯರು ಈ ಹಿಂದೆಯೇ ನಗರಸಭೆ ಸಭೆಯಲ್ಲಿ ಹಲವು ಬಾರಿ ಮನವಿ ಮಾಡಿದರೂ ಕೂಡ ಕೇರ್ ಮಾಡಿಲ್ಲವಂತೆ. ಚಿಕ್ಕ ಚಿಕ್ಕ ಮಕ್ಕಳ ಮೇಲೆ ನಿರಂತರವಾಗಿ ನಾಯಿಗಳು ದಾಳಿಮಾಡುತ್ತಿದ್ದರೂ ಅವುಗಳನ್ನು ಹಿಡಿಯದೇ ನಗರಸಭೆ ಗಮನವೇ ಹರಿಸದೇ ಬೇಜವಾಬ್ದಾರಿ ವರ್ತನೆ ತೋರಿದೆ.
ಕಳೆದ ನಾಲ್ಕು ದಿನಗಳ ಹಿಂದೆ ಬೈಕಿಗೆ ಅಡ್ಡ ಬಂದ ನಾಯಿಗಳು, ಬೈಕ್ ಸವಾರನ ಮೇಲೆ ದಾಳಿ ಮಾಡಿ ಕಾಲಿಗೆ ಕಚ್ಚಿವೆ. ಬೈಕ್ ನಿಂದ ಬಿದ್ದ ವ್ಯಕ್ತಿಗೆ ಗಂಭೀರ ಗಾಯವಾಗಿ ನರಳಾಡುತ್ತಿದ್ದಾನೆ. ಇನ್ನು ನಾಯಿಗಳನ್ನು ಸ್ಥಳಿಯರೇ ಸಾಯಿಸಿದರೇ ಅದಕ್ಕೂ ಕೇಸ್ ಹಾಕ್ತಾರೆ, ಇತ್ತ ಅವುಗಳಿಂದ ನಾವು ಕಾಪಾಡಿಕೊಳ್ಳೋದು, ಮಕ್ಕಳನ್ನು ನೋಡಿಕೊಳ್ಳೊದು ಕಷ್ಟಕರವಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಹುಲಿ,ಸಿಂಹ, ಕರಡಿ ಎಂದು ಹೆದರುವ ಜನರಿಗೆ ಇಲ್ಲಿ ನಾಯಿಗಳಿಗೆ ಹೆದರುವ ಪರಿಸ್ಥಿತಿ ಬಂದಿದೆ. ಇನ್ನು ನಾಯಿಯ ದಾಳಿಗೊಳಗಾದ ಮಕ್ಕಳನ್ನ ಕೂಡಲೇ ತೆಗೆದುಕೊಂಡು ಶಿರಾ ಸಾರ್ವಜನಿಕ ಆಸ್ಪತ್ರೆಗೆ ಹೋದರೆ, ಚಿಕಿತ್ಸೆ ನೀಡದೇ ತುಮಕೂರು ಜಿಲ್ಲಾ ಆಸ್ಪತ್ರೆಗೆ ಕಳಿಸಿದ್ದಾರೆ.ಅಲ್ಲಿಯೂ ಸರಿಯಾಗಿ ಚಿಕಿತ್ಸೆ ನೀಡಿಲ್ಲ ಅಂತಾ ಸ್ಥಳೀಯರು ಅಸಮಾಧಾನ ತೋಡಿಕೊಂಡಿದ್ದಾರೆ. ಪ್ರಮುಖವಾಗಿ ಶಿರಾ ನಗರಸಭೆ ನಾಯಿಗಳನ್ನ ಹಿಡಿದು ಹೊರಹಾಕಿ, ಮುಂದೆ ಆಗುವ ಅನಾಹುತ ತಪ್ಪಿಸಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:53 pm, Sun, 2 June 24