ಸಿಎಂ ಮುಂದೆ ಗಲಾಟೆ ಮಾಡಿದ 24 ಗಂಟೆಯಲ್ಲೇ ಮಹಿಳೆಗೆ ಸಿಕ್ತು ನಿವೇಶನ!

| Updated By: ರಮೇಶ್ ಬಿ. ಜವಳಗೇರಾ

Updated on: Dec 03, 2024 | 5:53 PM

ವಸತಿ ಯೋಜನೆಯಡಿ ಮನೆ ಸಿಗದ್ದಕ್ಕೆ ಸಿಎಂ ಸಿದ್ದರಾಮಯ್ಯ ಭಾಗಿಯಾಗಿದ್ದ ತುಮಕೂರು ಕಾರ್ಯಕ್ರಮಕ್ಕೆ ನುಗ್ಗಿ ಮಹಿಳೆಯೋರ್ವಳು ರಂಪಾಟ ಮಾಡಿದ್ದಳು. ಇದೀಗ ಒಂದೇ ದಿನದಲ್ಲಿ ಮಹಿಳೆಗೆ ನಿವೇಶನ ಸಿಕ್ಕಿದೆ.

ತುಮಕೂರು, (ಡಿಸೆಂಬರ್ 03): ವಸತಿ ಯೋಜನೆಯಡಿ ಮನೆ ಸಿಗದ್ದಕ್ಕೆ ಆಕ್ರೋಶಗೊಂಡು ಸಿಎಂ ಸಿದ್ದರಾಮಯ್ಯ ಮುಂದೆ ರಂಪಾಟ ಮಾಡಿದ್ದ ಮಹಿಳೆಗೆ ಇದೀಗ ನಿವೇಶನ ಸಿಕ್ಕಿದೆ. ಶಿರಾ ನಗರದ ರಾಬಿಯಾ ಎನ್ನುವ ಮಹಿಳೆ, ನಿನ್ನೆ(ಡಿಸೆಂಬರ್ 02) ತುಮಕೂರು ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಮುಂದೆ ಮನೆಗಾಗಿ ಗೋಳಾಡುತ್ತ ಅಳಲು ತೋಡಿಕೊಂಡಿದ್ದರು. ಇದಕ್ಕೆ ಸಿಎಂ ಸಹ ಸ್ಪಂದನೆ ಮಾಡಿದ್ದರು. ಈ ಘಟನೆ ನಡೆದು 24 ಗಂಟೆಯಲ್ಲೇ ರಾಬಿಯಾಗೆ ನಿವೇಶನ ಮಂಜೂರು ಮಾಡಲಾಗಿದೆ. ಮಹಿಳೆ ಗಲಾಟೆ ಬೆನ್ನಲ್ಲೇ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ ಹಾಗೂ ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಿವೇಶನ ಪತ್ರ ಹಂಚಿಕೆ ಮಾಡಲಾಗಿದೆ.

ಶಿರಾ‌ ಆಶ್ರಮ ಸಮಿತಿಯಲ್ಲಿ ಮಹಿಳೆ ಬೇಡಿಕೆ ಬಗ್ಗೆ ಪರಿಶೀಲನೆ ನಡೆಸಿ ನಗರದ ಸರ್ವೇ ನಂ.100ರಲ್ಲಿ ನಗರ ಆಶ್ರಯ ಯೋಜನೆಯಡಿ ರಚಿಸಲಾಗಿರುವ ನಿವೇಶನಗಳ ಪೈಕಿ 20*30 ಅಳತೆಯ ನಿವೇಶನ ಹಂಚಿಕೆ ಮಾಡಲಾಗಿದೆ. ರಾಜೀವ್ ಗಾಂಧಿ ವಸತಿ ನಿಗಮದಡಿ ಸೈಟ್ ಮಂಜೂರು ಮಾಡಿ ಶಿರಾ ನಗರಸಭಾ ಕಾರ್ಯಾಲಯ ಅಧಿಕೃತ ಆದೇಶ ಹೊರಡಿಸಿದ್ದು, ಮುಂದಿನ ದಿನಗಳಲ್ಲಿ ರಾಜೀವ್ ಗಾಂಧಿ ವಸತಿ ನಿಗಮದೊಂದಿಗೆ ಅರ್ಜಿದಾರರ ದಾಖಲೆ‌ ಸಲ್ಲಿಸಿ ನಿಯಮಾನುಸಾರ ಹಕ್ಕುಪತ್ರ ವಿತರಿಸಲಾಗುತ್ತದೆ.

ಸಿಎಂ ಕಾರ್ಯಕ್ರಮದಲ್ಲಿ ಮಹಿಳೆ ಮಾಡಿದ್ದೇನು?

ಸ್ಲಂ ಬೋರ್ಡ್ ನಿಂದ ಮನೆಗಾಗಿ ಅರ್ಜಿ ಹಾಕಿದ್ದರು. ಸಾಕಷ್ಟು ಬಾರಿ ಸಂಬಂಧ ಪಟ್ಟ ಅಧಿಕಾರಿಗಳನ್ನ ಭೇಟಿ ಮಾಡಿದ್ದರೂ ಮನೆ ಇನ್ನೂ ಮಂಜೂರು ಆಗಿರಲಿಲ್ಲ. ಸಾಲದ್ದಕ್ಕೆ ಶಿರಾ ಶಾಸಕ ಟಿಬಿ ಜಯಚಂದ್ರ ಗಮನಕ್ಕೆ ತಂದರೂ ಪ್ರಯೋಜನವಾಗಿರಲಿಲ್ಲ. ಇದೆಲ್ಲದರಿಂದ ಬೇಸತ್ತು ಮೂರು ವರ್ಷದ ಮಗು ಎತ್ತಿಕೊಂಡು ತುಮಕೂರು ನಗರದ ಸರ್ಕಾರಿ ಜೂನಿಯರ್ ಕಾಲೇಜು ಆವರಣದಲ್ಲಿ ನಡೆಯುತ್ತಿದ್ದ ಸಿಎಂ ಸಿದ್ದರಾಮಯ್ಯನವರ ಕಾರ್ಯಕ್ರಮಕ್ಕೆ ಬಂದಿದ್ದಳು. ಕಾರ್ಯಕ್ರಮ ಮುಗಿದು ಸಿಎಂ ಸಿದ್ದರಾಮಯ್ಯ ಹೊಡುವಾಗ ಈ ಮಹಿಳೆ ಕೂಗಾಡಿದ್ದಳು.

ಪ್ರತಿವರ್ಷವೂ ಅರ್ಜಿ ಸಲ್ಲಿಸುತ್ತಾ ಬಂದಿದ್ದೇನೆ, ಇವತ್ತಿನವರೆಗೂ ಮನೆ ಮಂಜೂರು ಮಾಡುತ್ತಿಲ್ಲ ಎಂದು ರಾಬಿಯಾ ಸಿಎಂ ಮುಂದೆ ಸಮಸ್ಯೆ ಹೇಳಿಕೊಳ್ಳಲು ವೇದಿಕೆಯತ್ತ ಓಡಿ ಹೋಗಿದ್ದಳು. ಈ ವೇಳೆ ಮಹಿಳೆಯನ್ನು ಪೊಲೀಸರು ತಡೆದಿದ್ದರು. ಇದರಿಂದ.ಮತ್ತಷ್ಟು ಆಕ್ರೋಶಗೊಂಡ ರಾಬಿಯಾ, ನಮ್ಮ ಸರ್ಕಾರ ಮಹಿಳೆಯರ ಪರ ಅಂತೀರಾ, ಬಡವರ ಪರ ಅಂತೀರಾ ಆದರೆ ಸಮಸ್ಯೆ ಹೇಳಿಕೊಳ್ಳಲು ಬಂದ್ರೆ ನಮ್ಮನ್ನ ನಿಮ್ಮ ಬಳಿ ಬಿಡಲ್ಲ ಎಂದು ಪೊಲೀಸರ ವಿರುದ್ಧ ಕೂಗಾಡಿದ್ದಳು. ಮಹಿಳೆಯ ಕೂಗಾಟ ಕಂಡು ಓಡೋಡಿ ಬಂದ ಪರಮೇಶ್ವರ್ ಸಮಧಾನಪಡಿಸಿದರು. ಬಳಿಕ ಸಿಎಂ ಸಿದ್ದರಾಮಯ್ಯ ಅವರು ಮಹಿಳೆಯ ಸಮಸ್ಯೆ ಆಲಿಸಿ, ಪರಿಹರಿಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದ್ದರು. ಅದರಂತೆ ಇದೀಗ ಒಂದೇ ದಿನದಲ್ಲಿ ರಾಬಿಯಾಗೆ ನಿವೇಶನ ಸಿಕ್ಕಿದೆ.