ತುಮಕೂರು: ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ ಕಾರು, ಒಂದೇ ಕುಟುಂಬದ ಮೂವರ ಸಾವು
ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ವೀರಾಪುರ ಗ್ರಾಮದ ಕುಟುಂಬ ಕಾರಿನಲ್ಲಿ ಧರ್ಮಸ್ಥಳಕ್ಕೆ ತೆರಳುತ್ತಿತ್ತು. ಬುಕ್ಕಾಪಟ್ಟಣದ ರಾಮಲಿಂಗಾಪುರ ಬಳಿ ಕಾರು ನಿಯಂತ್ರಣ ತಪ್ಪಿ ಕೆರೆಗೆ ಬಿದ್ದಿದೆ. ಘಟನೆಯಲ್ಲಿ ಕುಟುಂಬದ ಮೂವರು ಮೃತಪಟ್ಟಿದ್ದಾರೆ.
ತುಮಕೂರು ಅ.29: ನಿಯಂತ್ರಣ ತಪ್ಪಿ ಕಾರು (Car) ಕೆರೆಗೆ (Lake) ಬಿದ್ದ ಪರಿಣಾಮ ಒಂದೇ ಕುಟುಂಬದ ಮೂವರು ಮೃತಪಟ್ಟಿರುವ ಘಟನೆ ಶಿರಾ (Shira) ತಾಲೂಕಿನ ಬುಕ್ಕಾಪಟ್ಟಣದ ರಾಮಲಿಂಗಾಪುರ ಬಳಿ ನಡೆದಿದೆ. ವೀರಾಪುರ ಗ್ರಾಮದ ಯಮುನಾ, ದೊಡ್ಡಣ್ಣ, ಸಣ್ಣಮ್ಮ ಮೃತದುರ್ದೈವಿಗಳು. ಪ್ರವೀಣ ಎಂಬುವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪ್ರವೀಣ್ ಪತ್ನಿ ಯಮುನಾ, ಮಾವ ದೊಡ್ಡಣ್ಣ, ಅತ್ತೆ ಸಣ್ಣಮ್ಮ ಕುಟುಂಬ ಸಮೇತರಾಗಿ ಇಂದು (ಅ.29) ಮುಂಜಾನೆ ಮಾರುತಿ ಆಲ್ಟೋ ಕಾರಿನಲ್ಲಿ ಧರ್ಮಸ್ಥಳಕ್ಕೆ ತೆರಳುತ್ತಿದ್ದರು. ಬುಕ್ಕಾಪಟ್ಟಣದ ರಾಮಲಿಂಗಾಪುರ ಬಳಿ ಕಾರು ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ನುಗ್ಗಿದೆ. ಸ್ಥಳಕ್ಕೆ ಶಿರಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಗ್ನಿಶಾಮಕ ದಳ ಸಿಬ್ಬಂದಿ ಶೋಧ ಕಾರ್ಯಾಚರಣೆ ನಡೆಸಿದ್ದು, ದೊಡ್ಡಣ್ಣ, ಸಣ್ಣಮ್ಮ ಮತ್ತು ಯಮುನಾ ಮೃತದೇಹಗಳು ಪತ್ತೆಯಾಗಿವೆ.
ಧ್ವಜಸ್ತಂಭ ನೆಡುವ ವೇಳೆ ವಿದ್ಯುತ್ ಪ್ರವಹಿಸಿ ಯುವಕ ಸಾವು
ಬೆಳಗಾವಿ: ರಾಜ್ಯೋತ್ಸವ ಹಿನ್ನೆಲೆಯಲ್ಲಿ ಧ್ವಜಸ್ತಂಭ ನೆಡುವ ವೇಳೆ ವಿದ್ಯುತ್ ಪ್ರವಹಿಸಿ ಯುವಕ ಮೃತಪಟ್ಟಿರುವ ಘಟನೆ ಬೈಲಹೊಂಗಲ ತಾಲೂಕಿನ ವಕ್ಕುಂದ ಗ್ರಾಮದಲ್ಲಿ ನಡೆದಿದೆ. ಪ್ರಜ್ವಲ್ ಚನ್ನಗೌಡ ಮುನೇಪ್ಪನವರ (18) ಮೃತ ದುರ್ದೈವಿ. ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಪ್ರಜ್ವಲ್ ಮತ್ತು ಗೆಳೆಯರು ಬಸ್ ನಿಲ್ದಾಣದ ಮುಂದೆ ಧ್ವಜಸ್ತಂಭ ನೆಡಲು ತಯಾರಿ ನಡೆಸಿದ್ದರು.
ಇದನ್ನೂ ಓದಿ: ಬೆಂಗಳೂರು: ದ್ವಿಚಕ್ರ ವಾಹನಗಳ ನಡುವೆ ಅಪಘಾತ; ಇಬ್ಬರ ಸಾವು
ಈ ವೇಳೆ ಸರ್ವಿಸ್ ವೈಯರ್ಗೆ ಕಂಬ ತಾಗಿದ್ದರಿಂದ ಪ್ರಜ್ವಲ್ಗೆ ವಿದ್ಯುತ್ ಪ್ರವಹಿಸಿದೆ. ಕೂಡಲೇ ಸ್ಥಳೀಯರು ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಯುವಕ ಪ್ರಜ್ವಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಮೃತ ಪ್ರಜ್ವಲ್ ಅಗ್ನಿವೀರ್ಗೆ ಆಯ್ಕೆಯಾಗಿದ್ದನು. ಬೈಲಹೊಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:46 am, Sun, 29 October 23