ತುಮಕೂರು: ಗರ್ಭಿಣಿಯಾಗಿದ್ದಾಗ್ಲೇ ಪರಪುರುಷನ ಜತೆ ಓಡಿಹೋಗಿದ್ದ ಮಹಿಳೆ, ಅಕ್ರಮ ಸಂಬಂಧಕ್ಕೆ ಅಡ್ಡಿಯೆಂದು ಮಗುವಿನ ಕೊಂದ ಮಲತಂದೆ

| Updated By: Ganapathi Sharma

Updated on: Mar 26, 2025 | 12:47 PM

ತುಮಕೂರಿನ ಸಿದ್ಧಲಿಂಗಯ್ಯನಪಾಳ್ಯದಲ್ಲಿ 4 ವರ್ಷದ ಮಗುವಿನ ಹತ್ಯೆಯ ಆರೋಪದ ಮೇಲೆ 24 ವರ್ಷದ ಚಂದ್ರಶೇಖರ್ ಬಂಧನವಾಗಿದೆ. ಮಗುವಿನ ಸಾವನ್ನು ಹಾವು ಕಚ್ಚಿದ್ದರಿಂದ ಎಂದು ಬಿಂಬಿಸಲು ಯತ್ನಿಸಲಾಗಿತ್ತು. ಆದರೆ, ಗ್ರಾಮಸ್ಥರೊಬ್ಬರು ತೆಗೆದ ಫೋಟೊದಿಂದ ಸತ್ಯ ಬಯಲಾಯಿತು. ತನಿಖೆಯಲ್ಲಿ ಮಗುವಿನ ತಾಯಿಯ ಪಾತ್ರವೂ ಅನುಮಾನಾಸ್ಪದವಾಗಿದೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ತುಮಕೂರು: ಗರ್ಭಿಣಿಯಾಗಿದ್ದಾಗ್ಲೇ ಪರಪುರುಷನ ಜತೆ ಓಡಿಹೋಗಿದ್ದ ಮಹಿಳೆ, ಅಕ್ರಮ ಸಂಬಂಧಕ್ಕೆ ಅಡ್ಡಿಯೆಂದು ಮಗುವಿನ ಕೊಂದ ಮಲತಂದೆ
ಆರೋಪಿ ಚಂದ್ರಶೇಖರ್
Follow us on

ತುಮಕೂರು, ಮಾರ್ಚ್ 26: ತುಮಕೂರು (Tumkur) ಜಿಲ್ಲೆ ಸಿದ್ಧಲಿಂಗಯ್ಯನಪಾಳ್ಯದಲ್ಲಿ 4 ವರ್ಷದ ಮಗುವನ್ನು ಹತ್ಯೆ ಮಾಡಿರುವ ಆರೋಪದಲ್ಲಿ 24 ವರ್ಷದ ಚಂದ್ರಶೇಖರ್ ಎಂಬ ವ್ಯಕ್ತಿಯನ್ನು ತುಮಕೂರು ಮಹಿಳಾ ಪೊಲೀಸರು ಬಂಧಿಸಿದ್ದಾರೆ. ಮಗು ಹಾವು ಕಚ್ಚಿ ಮೃತಪಟ್ಟಿದೆ ಎಂದು ಆರೋಪಿ ಬಿಂಬಿಸಿದ್ದ. ಆದರೆ, ಅಂತ್ಯಕ್ರಿಯೆಗೂ ಮುನ್ನ ಗ್ರಾಮಸ್ಥರೊಬ್ಬರು ತೆಗೆದಿದ್ದ ಫೋಟೊದಿಂದ ಅನುಮಾನ ವ್ಯಕ್ತವಾಗಿದ್ದು, ಚಂದ್ರಶೇಖರ್ ವಿರುದ್ಧ ಪೊಲೀಸರಿಗೆ (Tumkur Police) ದೂರು ನೀಡಲಾಗಿತ್ತು. ಅದರಂತೆ, ಆತನನ್ನು ಬಂಧಿಸಲಾಗಿದೆ. ಜತೆಗೆ, ಮಗುವಿನ ಸಾವಿನ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಗರ್ಭಿಣಿಯಾಗಿದ್ದಾಗಲೇ ಚಂದ್ರಶೇಖರ್ ಜತೆ ಓಡಿಹೋಗಿದ್ದ ಮಹಿಳೆ

ಬಂಧಿತ ಚಂದ್ರಶೇಖರ್ ಮೂಲತಃ ಚಾಮರಾಜನಗರದವನು. ಕ್ರಷರ್​​ನಲ್ಲಿ ಲಾರಿ ಚಾಲಕನಾಗಿದ್ದಾನೆ. ಮತ್ತೊಂದೆಡೆ, ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ ಕಾವ್ಯಾ ಎಂಬ ಮಹಿಳೆ ಮೊದಲೇ ಅಶೋಕ್ ಎಂಬಾತನನ್ನು ವಿವಾಹವಾಗಿದ್ದಳು. ಆದರೆ, ಗರ್ಭಿಣಿಯಾಗಿದ್ದಾಗಲೇ ಚಂದ್ರಶೇಖರ್ ಜೊತೆ ಓಡಿ ಹೋಗಿದ್ದಳು. ಬಳಿಕ ಮಗುವಿಗೆ ಜನ್ಮ ನೀಡಿದ್ದಳು. ನಂತರ ಮಗುವಿನ ವಿಚಾರವಾಗಿ ಈ ಜೋಡಿ ಮಧ್ಯೆ ಜಗಳವಾಗುತ್ತಿತ್ತು. ಮಗುವಿನ ವಿಷಯವಾಗಿ ಇಬ್ಬರ ನಡುವೆ ಕಲಹ ನಡೆಯುತ್ತಿತ್ತು ಎನ್ನಲಾಗಿದೆ.

ಮಾರ್ಚ್ 20ರಂದು, ಕಾವ್ಯ ಕೆಲಸಕ್ಕೆ ಹೋದ ಸಮಯದಲ್ಲಿ ಚಂದ್ರಶೇಖರ್ ಮಗುವಿಗೆ (ಮಿಥುನ್ ಗೌಡ) ಹಲ್ಲೆ ನಡೆಸಿದ್ದ. ಇದರಿಂದ, ತೀವ್ರ ಗಾಯಗೊಂಡ ಮಿಥುನ್ ಪ್ರಜ್ಞೆ ತಪ್ಪಿಬಿದ್ದಿದ್ದ. ಇದನ್ನು ಮುಚ್ಚಿಹಾಕಲು, ಮಗುವಿಗೆ ಹಾವು ಕಚ್ಚಿದೆ ಎಂದು ಸುಳ್ಳು ಹೇಳಿ ಸ್ಥಳೀಯರನ್ನು ನಂಬಿಸಲು ಪ್ರಯತ್ನಿಸಿದ್ದ. ತಕ್ಷಣವೇ ಗ್ರಾಮಸ್ಥರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಿಥುನ್​ನನ್ನು ಊರ್ಡಿಗೆರೆ ಕ್ಲಿನಿಕ್‌ಗೆ ಕರೆದೊಯ್ದಿದ್ದರು. ಆದರೆ, ವೈದ್ಯರು ಪರೀಕ್ಷೆ ನಡೆಸಿದಾಗ ಮಿಥುನ್ ಮೃತಪಟ್ಟಿರುವುದು ದೃಢಪಟ್ಟಿತ್ತು.

ಇದನ್ನೂ ಓದಿ
ಸರ್ಕಾರಿ ನೌಕರರೇ ಎಚ್ಚರ, ಕೇಡರ್​ ವರ್ಗಾವಣೆ ಮಾಡಿಕೊಂಡ್ರೆ ಹೊಡೆತ ಗ್ಯಾರೆಂಟಿ
ಕರ್ನಾಟಕದಲ್ಲಿ ಏಪ್ರಿಲ್​ನಿಂದ ಟೋಲ್ ಸುಂಕ ಏರಿಕೆ
ಕಾವೇರಿ ನೀರು ಬೇಕೇ? ಮೊಬೈಲ್ ಆ್ಯಪ್​ನಲ್ಲೇ ಬುಕ್ ಮಾಡಿ! ಬರ್ತಿದೆ ಹೊಸ ಯೋಜನೆ
ಸಾರಿಗೆ ನೌಕರರ ಮುಷ್ಕರ: cm ನೇತೃತ್ವದಲ್ಲಿ ಸಭೆ, ಸಚಿವರು ಹೇಳಿದ್ದಿಷ್ಟು

ಗ್ರಾಮಸ್ಥರ ಅನುಮಾನದಿಂದ ಹತ್ಯೆಯ ರಹಸ್ಯ ಬಹಿರಂಗ

ಮಿಥುನ್ ಗೌಡ ಅಂತ್ಯಕ್ರಿಯೆಗೆ ಮುನ್ನ, ಸ್ಥಳೀಯರಾದ ಎಸ್ಆರ್ ಗಂಗಾಧರಯ್ಯ ಎಂಬುವರು ಮೃತದೇಹದ ಫೋಟೊ ತೆಗೆದಿದ್ದರು. ಮಾರ್ಚ್ 22ರಂದು ಮತ್ತೆ ಈ ಚಿತ್ರವನ್ನು ವೀಕ್ಷಿಸಿದಾಗ, ಸಾವಿನ ಬಗ್ಗೆ ಅನುಮಾನ ಮೂಡಿತ್ತು. ಈ ಬಗ್ಗೆ ಗ್ರಾಮದ ಜನರು ಸೇರಿ ಚಂದ್ರಶೇಖರ್‌ನನ್ನು ಪ್ರಶ್ನಿಸಿದ್ದಾರೆ. ಆಗ, ಕೊಲೆಯ ಬಗ್ಗೆ ಬಾಯಿಬಿಟ್ಟಿದ್ದಾನೆ ಎನ್ನಲಾಗಿದೆ.

ಇದನ್ನೂ ಓದಿ: ಪತ್ನಿಯ ಜತೆ ಅಕ್ರಮ ಸಂಬಂಧ, ಗುಂಡಿ ತೋಡಿ ಬಾಡಿಗೆದಾರನನ್ನು ಜೀವಂತ ಸಮಾಧಿ ಮಾಡಿದ ವ್ಯಕ್ತಿ

ಈ ಘಟನೆ ಸಂಬಂಧ ಗಂಗಾಧರಯ್ಯ ಪೊಲೀಸರಿಗೆ ದೂರು ನೀಡಿದ್ದರು, ಪ್ರಕರಣವನ್ನು ದಾಖಲಿಸಿಕೊಂಡ ಮಹಿಳಾ ಪೊಲೀಸ್ ಠಾಣೆ ಅಧಿಕಾರಿಗಳು ಚಂದ್ರಶೇಖರ್​​ನನ್ನು ಬಂಧಿಸಿದ್ದಾರೆ. ತಕ್ಷಣವೇ ಮಗುವಿನ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ಮಾಡಿಸಲಾಗಿದೆ.

ತಾಯಿ ಕಾವ್ಯಾಳ ನಡವಳಿಕೆಯ ಮೇಲೂ ಅನುಮಾನ

ಈ ಹತ್ಯೆ ಪ್ರಕರಣದಲ್ಲಿ ಕಾವ್ಯಾಳ ಪಾತ್ರದ ಮೇಲೂ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಮೂಲತಃ ಬೆಳ್ಳೂರು ಕ್ರಾಸ್​ನ ಕಾವ್ಯಾ, ಚಂದ್ರಶೇಖರ್ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು. ಇಬ್ಬರೂ ಸಿದ್ಧಲಿಂಗಯ್ಯನಪಾಳ್ಯದಲ್ಲಿ ನೆಲೆಸಿದ್ದರು. ಮಗುವಿನ ಸಾವಿನ ನಂತರ ತಾಯಿ ಕಾವ್ಯಾಳ ನಡೆ ಅನುಮಾನಾಸ್ಪದವಾಗಿದ್ದು, ಈ ಪ್ರಕರಣದಲ್ಲಿ ಆಕೆಯ ಕೈವಾಡ ಇದೆಯಾ ಎಂಬ ಆಯಾಮದಲ್ಲಿಯೂ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಕ್ಯಾತ್ಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ