ಕರ್ನಾಟಕ ಸರ್ಕಾರಿ ನೌಕರರೇ ಎಚ್ಚರ, ಕೇಡರ್ ವರ್ಗಾವಣೆ ಮಾಡಿಸಿಕೊಂಡ್ರೆ ಹೊಡೆತ ಗ್ಯಾರೆಂಟಿ: ಸುಪ್ರೀಂ ಹೇಳಿದ್ದೇನು?
ಸುಪ್ರೀಂ ಕೋರ್ಟ್‌ನ ಪ್ರಮುಖ ತೀರ್ಪಿನ ಪ್ರಕಾರ, ಸರ್ಕಾರಿ ಉದ್ಯೋಗಿಗಳ ಸ್ವಯಂ ವಿನಂತಿಯ ಮೇಲಿನ ವರ್ಗಾವಣೆಗಳಿಗೆ ಹಿಂದಿನ ಇಲಾಖೆಯ ಹಿರಿತನ ಅನ್ವಯಿಸುವುದಿಲ್ಲ. ಸಾರ್ವಜನಿಕ ಹಿತಾಸಕ್ತಿಯ ವರ್ಗಾವಣೆಗಳಿಗೆ ಮಾತ್ರ ಹಿರಿತನ ಲಭ್ಯ. ಈ ತೀರ್ಪು ಕರ್ನಾಟಕದ ಒಂದು ಪ್ರಕರಣದ ವಿಚಾರಣೆಯಲ್ಲಿ ಬಂದಿದ್ದು, ಅನೇಕ ಸರ್ಕಾರಿ ಉದ್ಯೋಗಿಗಳ ಮೇಲೆ ಪರಿಣಾಮ ಬೀರಲಿದೆ. ತೀರ್ಪಿನ ವಿವರ ಇಲ್ಲಿದೆ.

ನವದೆಹಲಿ, ಮಾರ್ಚ್ 26: ಮಹತ್ವದ ಬೆಳವಣಿಗೆಯೊಂದರಲ್ಲಿ, ಸರ್ಕಾರಿ ಉದ್ಯೋಗಿಯ ಮನವಿಯ ಮೇರೆಗೆ ಮಾಡಲಾಗುವ ವರ್ಗಾವಣೆಯನ್ನು ಸಾರ್ವಜನಿಕ ಹಿತಾಸಕ್ತಿಯ ವರ್ಗಾವಣೆ (Transfer) ಎಂದು ಪರಿಗಣಿಸಲಾಗುವುದಿಲ್ಲ ಎಂಬುದಾಗಿ ಸುಪ್ರೀಂ ಕೋರ್ಟ್ (Supreme Court) ಹೇಳಿದೆ. ಇದರಿಂದಾಗಿ, ಉದ್ಯೋಗಿಯ ಮನವಿ ಮೇರೆಗೆ ಇನ್ನೊಂದು ಕೇಡರ್ ಅಥವಾ ಇಲಾಖೆಗೆ (Govt Departments) ವರ್ಗಾವಣೆ ಮಾಡಿದಲ್ಲಿ, ಆತ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಇಲಾಖೆಯಲ್ಲಿನ ಹಿರಿತನವನ್ನು ಪರಿಗಣಿಸಲಾಗುವುದಿಲ್ಲ. ಸುಪ್ರೀಂ ಕೋರ್ಟ್ ಈ ಆದೇಶ ಪ್ರಕಟಿಸಿರುವುದು ಅನೇಕ ಸರ್ಕಾರಿ ಉದ್ಯೋಗಿಗಳ ಮೇಲೆ ಪರಿಣಾಮ ಬೀರಲಿದೆ.
ಸುಪ್ರೀಂ ಕೋರ್ಟ್ ಹೇಳಿದ್ದೇನು?
ಸಾರ್ವಜನಿಕ ಹಿತಾಸಕ್ತಿಯ ಮೇರೆಗೆ ನಿರ್ದಿಷ್ಟ ಹುದ್ದೆಯನ್ನು ಹೊಂದಿರುವ ಸರ್ಕಾರಿ ನೌಕರನನ್ನು ಬೇರೆ ಇಲಾಖೆ ಅಥವಾ ಕೇಡರ್ಗೆ ವರ್ಗಾವಣೆ ಮಾಡಿದರೆ, ಆತ ಈಗಾಗಲೇ ಕಾರ್ಯನಿರ್ವಹಿಸುತ್ತಿದ್ದ ಹುದ್ದೆಯ ಹಿರಿತನ ಸೇರಿದಂತೆ ಅಸ್ತಿತ್ವದಲ್ಲಿರುವ ಸ್ಥಾನಮಾನವನ್ನು ಹೊಂದಿರಲು ಅರ್ಹನಾಗಿರುತ್ತಾನೆ. ಆದಾಗ್ಯೂ, ಒಬ್ಬ ಅಧಿಕಾರಿಯನ್ನು ಆತನ ಸ್ವಂತ ಕೋರಿಕೆಯ ಮೇರೆಗೆ ವರ್ಗಾವಣೆ ಮಾಡಿದರೆ, ಆಗ ಆತ ವರ್ಗಾವಣೆಗೊಂಡ ಇಲಾಖೆಯ ಇತರ ಉದ್ಯೋಗಿಗಳ ಹಕ್ಕುಗಳು ಮತ್ತು ಸ್ಥಿತಿಗತಿಗಳನ್ನು ಗಮನಿಸಿ ಹಿರಿತನ ಪರಿಗಣಿಸಬೇಕಾಗುತ್ತದೆ. ಏಕೆಂದರೆ, ವರ್ಗಾವಣೆಯಲ್ಲಿ ಸಾರ್ವಜನಿಕ ಹಿತಾಸಕ್ತಿ ಇಲ್ಲದೆ ಇದ್ದರೆ ಆಗ ಹಿಂದಿನ ಹುದ್ದೆಯ ಹಿರಿತನ ನೀಡಲಾಗದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಕರ್ನಾಟಕದ ಪ್ರಕರಣದಲ್ಲಿ ಸುಪ್ರೀಂ ತೀರ್ಪು
ಕರ್ನಾಟಕ ಹೈಕೋರ್ಟ್ ಆದೇಶ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಪಿಎಸ್ ನರಸಿಂಹ ಮತ್ತು ಮನೋಜ್ ಮಿಶ್ರಾ ಅವರ ಪೀಠವು ಮಹತ್ವದ ಆದೇಶ ನೀಡಿದೆ. ಸರ್ಕಾರಿ ಸ್ಟಾಫ್ ನರ್ಸ್ ಒಬ್ಬರು 1985 ರಲ್ಲಿ ಆರೋಗ್ಯ ಸಮಸ್ಯೆಗಳ ಕಾರಣ ಪ್ರಥಮ ದರ್ಜೆ ಸಹಾಯಕ (ಎಫ್‌ಡಿಎ) ಆಗಿ ಕೇಡರ್ ಬದಲಾವಣೆಯನ್ನು ಕೋರಿದ್ದರು. ವೈದ್ಯಕೀಯ ಮಂಡಳಿಯು ಅವರ ಅಸಮರ್ಥತೆಯನ್ನು ದೃಢಪಡಿಸಿದ್ದರಿಂದ ಕರ್ನಾಟಕ ಸರ್ಕಾರ 1989ರಲ್ಲಿ ಅವರನ್ನು ಬೇರೊಂದು ಕೇಡರ್ಗೆ ವರ್ಗಾವಣೆ ಮಾಡಿ ಅನುಮೋದನೆ ನೀಡಿತ್ತು. ಆದರೆ, ಅವರ ಸೇವಾ ಹಿರಿತನವನ್ನು 1979 ರ ಬದಲಿಗೆ 1989 ರಿಂದ ನಿಗದಿಪಡಿಸಿತ್ತು. ಇದನ್ನು ಪ್ರಶ್ನಿಸಿದ್ದ ಅವರು 2007ರಲ್ಲಿ ಹೈಕೋರ್ಟ್ ಮೊರೆ ಹೋಗಿದ್ದರು. ಅಲ್ಲಿ ಅವರ ಪರವಾಗಿ ತೀರ್ಪು ಬಂದಿತ್ತು. ಕರ್ನಾಟಕ ರಾಜ್ಯ ಹಾಗೂ ಕೆ. ಸೀತಾರಾಮುಲು (2010) ಪ್ರಕರಣದ ತೀರ್ಪನ್ನು ಉಲ್ಲೇಖಿಸಿ, ವೈದ್ಯಕೀಯ ಕಾರಣ ಆಧಾರಿತ ವರ್ಗಾವಣೆಗಳನ್ನು ಸಾರ್ವಜನಿಕ ಹಿತಾಸಕ್ತಿ ವರ್ಗಾವಣೆಗಳೆಂದು ಪರಿಗಣಿಸಿ, ಮೂಲ ಸೇವಾ ಹಿರಿತನವನ್ನು ಉಳಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿತ್ತು.
ಇದನ್ನೂ ಓದಿ: ಸರ್ಕಾರದ ವಿರುದ್ದ ಮತ್ತೆ ಸಮರ ಸಾರಿದ ಸಾರಿಗೆ ನೌಕರರು: ಹೋರಾಟದ ಎಚ್ಚರಿಕೆ
ಹೈಕೋರ್ಟ್ ತೀರ್ಪಿನಿಂದ ಅಸಮಾಧಾನಗೊಂಡ ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಹೈಕೋರ್ಟ್ ತೀರ್ಪನ್ನು ತಳ್ಳಿಹಾಕಿದ ನ್ಯಾಯಮೂರ್ತಿ ನರಸಿಂಹ, ಪ್ರತಿವಾದಿಯು ಸ್ವಯಂಪ್ರೇರಣೆಯಿಂದ ವರ್ಗಾವಣೆಯನ್ನು ಕೋರಿದ್ದರು ಮತ್ತು ಹೊಸ ಕೇಡರ್‌ನ ಕೆಳಭಾಗದಲ್ಲಿ ಕಾರ್ಯನಿರ್ವಹಿಸಲು ಒಪ್ಪಿಗೆ ನೀಡಿದ್ದರು. ಹೀಗಾಗಿ ಅವರು ತಮ್ಮ ಆರಂಭಿಕ ನೇಮಕಾತಿ ದಿನಾಂಕದಿಂದ ಹಿರಿತನವನ್ನು ಪಡೆಯಲು ಸಾಧ್ಯವಿಲ್ಲ. ಒಂದು ವೇಳೆ ಹಾಗೆ ಮಾಡಿದರೆ, ಹೊಸ ಕೇಡರ್‌ನಲ್ಲಿ ಮೊದಲಿನಿಂದಲೇ ಇರುವ ಉದ್ಯೋಗಿಗಳಿಗೆ ಅನ್ಯಾಯವಾಗುತ್ತದೆ ಎಂದು ಅಭಿಪ್ರಾಯಪಟ್ಟಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:44 am, Wed, 26 March 25