ಕಾವೇರಿ 5ನೇ ಹಂತದ ಯೋಜನೆ: 83000 ಮನೆಗಳಿಗಷ್ಟೇ ನೀರಿನ ಸಂಪರ್ಕ ಸಿಕ್ಕರೂ ಟ್ಯಾಂಕರ್ ಬೇಡಿಕೆ ಕುಸಿತ
ಬೆಂಗಳೂರಿನಲ್ಲಿ ಕಾವೇರಿ ಐದನೇ ಹಂತದ ಯೋಜನೆಯಿಂದ 83,000 ಮನೆಗಳಿಗೆ ಮಾತ್ರ ನೀರಿನ ಸಂಪರ್ಕ ಒದಗಿಸಲಾಗಿದೆ. ಇದು ಜಲಮಂಡಳಿ ಗುರಿಯ ಕಾಲು ಭಾಗಕ್ಕಿಂತ ಕಡಿಮೆ. ಖಾಸಗಿ ಟ್ಯಾಂಕರ್‌ಗಳ ಬೇಡಿಕೆ ಕುಸಿದಿದ್ದರೂ, ಹೊರವಲಯಗಳಲ್ಲಿ ನೀರಿನ ಕೊರತೆ ಹೆಚ್ಚಾಗಿದೆ. ಏಪ್ರಿಲ್ 1 ರಿಂದ 'ಕಾವೇರಿ ಆನ್ ವೀಲ್ಸ್' ಯೋಜನೆ ಜಾರಿಗೆ ಬರಲಿದೆ. ವಿವರಗಳು ಇಲ್ಲಿವೆ.

ಬೆಂಗಳೂರು, ಮಾರ್ಚ್ 26: ಸಾಮಾನ್ಯವಾಗಿ ಬೇಸಿಗೆ ಸಂದರ್ಭದಲ್ಲಿ ಬೆಂಗಳೂರಿನ ಅನೇಕ ಪ್ರದೇಶಗಳಲ್ಲಿ ಖಾಸಗಿ ಟ್ಯಾಂಕರ್‌ಗಳಿಗೆ (Water Tanker) ಬೇಡಿಕೆ ಹೆಚ್ಚಾಗುತ್ತದೆ. ಆದರೆ, ಕಾವೇರಿ ಐದನೇ ಹಂತದ (Cauvery Phase 5) ಯೋಜನೆಯಡಿ ನೀರಿನ ಸಂಪರ್ಕ ಒದಗಿಸುತ್ತಿರುವುದರಿಂದಾಗಿ, ಹೊಸದಾಗಿ ಕಾವೇರಿ ನೀರಿನ ಸಂಪರ್ಕಗಳನ್ನು ಪಡೆದ ಪ್ರದೇಶಗಳಲ್ಲಿ ಟ್ಯಾಂಕರ್‌ಗಳಿಗೆ ಬೇಡಿಕೆ ತೀವ್ರವಾಗಿ ಕುಸಿದಿದೆ ಎಂದು ವರದಿಯಾಗಿದೆ. ಆದಾಗ್ಯೂ, ಕಾವೇರಿ ಐದನೇ ಹಂತದ ಯೋಜನೆಯಡಿ ಉದ್ದೇಶಿತ ಗುರಿ ತಲುಪಲು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ (BWSSB) ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ.
110 ಹಳ್ಳಿಗಳಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ಕಾವೇರಿ ನೀರಿನ ಸಂಪರ್ಕ ಒದಗಿಸುವ ಗುರಿಯನ್ನು ಜಲ ಮಂಡಳಿ ಹೊಂದಿತ್ತು. ಆದರೆ ಇಲ್ಲಿಯವರೆಗೆ ಸುಮಾರು 83000 ಮನೆಗಳಿಗಷ್ಟೇ ಸಂಪರ್ಕ ಒದಗಿಸಲಾಗಿದೆ. ಇದು ಜಲಮಂಡಳಿ ಗುರಿಯ ಕಾಲು ಭಾಗಕ್ಕಿಂತ ಕಡಿಮೆ ಎಂಬುದು ತಿಳಿದುಬಂದಿದೆ ಎಂದು ‘ದಿ ಹಿಂದೂ’ ವರದಿ ಮಾಡಿದೆ. 55,000 ಸಂಪರ್ಕಗಳನ್ನು ಯೋಜನೆಯ ಅಧಿಕೃತ ಕಾರ್ಯಾರಂಭಕ್ಕೆ ವರ್ಷಗಳ ಮೊದಲೇ, ಅಂದರೆ 2024 ರ ಅಕ್ಟೋಬರ್ನಲ್ಲಿ ನೀಡಲಾಗಿತ್ತು. ಅನೇಕ ವಿಶೇಷ ಕ್ರಮಗಳ ಹೊರತಾಗಿಯೂ ಕಳೆದ ಆರು ತಿಂಗಳಲ್ಲಿ ಕೇವಲ 30,000 ಹೊಸ ಸಂಪರ್ಕಗಳನ್ನು ಒದಗಿಸಲು ಸಾಧ್ಯವಾಗಿದೆ ಎಂದು ವರದಿ ಉಲ್ಲೇಖಿಸಿದೆ.
ಏಪ್ರಿಲ್ 1 ರಿಂದ ‘ಕಾವೇರಿ ಆನ್ ವ್ಹೀಲ್ಸ್’
ನಗರದ ಹೊರ ವಲಯಗಳಲ್ಲಿ ಕೊಳವೆಬಾವಿಗಳು ಬತ್ತಿಹೋಗುತ್ತಿದ್ದು, ಟ್ಯಾಂಕರ್ ನೀರಿನ ಬೆಲೆಗಳು ಗಗನಕ್ಕೇರುತ್ತಿರುವೆ. ಹೀಗಾಗಿ ಜಲಮಂಡಳಿ ಏಪ್ರಿಲ್ 1 ರಿಂದ ‘ಕಾವೇರಿ ಆನ್ ವ್ಹೀಲ್ಸ್’ ಉಪಕ್ರಮವನ್ನು ವಿಸ್ತರಿಸಲು ಸಜ್ಜಾಗಿದೆ. ಈ ಯೋಜನೆಯಡಿಯಲ್ಲಿ, ನಗರ ನಿವಾಸಿಗಳು ಮೊಬೈಲ್ ಅಪ್ಲಿಕೇಶನ್ ಮೂಲಕ ಕಾವೇರಿ ನೀರಿನ ಟ್ಯಾಂಕರ್‌ಗಳನ್ನು ಬುಕ್ ಮಾಡಬಹುದಾಗಿದೆ.
ಇದನ್ನೂ ಓದಿ: ಕಾವೇರಿ ನೀರು ಬೇಕೇ? ಮೊಬೈಲ್ ಆ್ಯಪ್ನಲ್ಲೇ ಬುಕ್ ಮಾಡಿ! ಜಲಮಂಡಳಿಯಿಂದ ಹೊಸ ಯೋಜನೆ
‘ಕಾವೇರಿ ಆನ್ ವ್ಹೀಲ್ಸ್’ ಉಪಕ್ರಮದಡಿ ನೀರಿನ ಟ್ಯಾಂಕರ್‌ಗಳ ಬೆಲೆಯನ್ನು ಇನ್ನಷ್ಟೇ ಅಂತಿಮಗೊಳಿಸಬೇಕಿದೆ. ಆದರೂ ಖಾಸಗಿ ನಿರ್ವಾಹಕರು ಪ್ರಸ್ತುತ ವಿಧಿಸುವ ದುಬಾರಿ ದರಕ್ಕಿಂತ ಕಡಿಮೆ ಇರಲಿದೆ ಎಂದು ಜಲಮಂಡಳಿ ಭರವಸೆ ನೀಡಿದೆ. ಈ ಕ್ರಮದಿಂದ ಮಾರುಕಟ್ಟೆಯನ್ನು ನಿಯಂತ್ರಿಸಲು ಸಾಧ್ಯವಾಗುವುದರ ಜತೆಗೆ ಟ್ಯಾಂಕರ್ ನೀರಿನ ವೆಚ್ಚವನ್ನು ಕಡಿಮೆ ಮಾಡಲು ಪ್ರಯೋಜನವಾಗಲಿದೆ ಎಂದು ಮಂಡಳಿ ತಿಳಿಸಿದೆ.
ಜಲ ಮಂಡಳಿಯು ಏಪ್ರಿಲ್ 1 ರಿಂದ ಇಎಂಐ ಯೋಜನೆಯನ್ನು ಸಹ ಪರಿಚಯಿಸಲಿದೆ. ಹೊಸ ಯೋಜನೆಯಡಿಯಲ್ಲಿ, ನಿವಾಸಿಗಳು ಒಟ್ಟು ಸಂಪರ್ಕ ಶುಲ್ಕದ ಶೇಕಡಾ 20 ರಷ್ಟು ಹಣವನ್ನು ಮುಂಗಡವಾಗಿ ಪಾವತಿಸಬೇಕಾಗುತ್ತದೆ, ಉಳಿದ ಶೇಕಡಾ 80 ರಷ್ಟು ಹಣವನ್ನು 12 ಮಾಸಿಕ ಕಂತುಗಳಲ್ಲಿ ಪಾವತಿಸಬಹುದು. ಇದನ್ನು ಅವರ ನೀರಿನ ಬಿಲ್‌ಗಳ ಜತೆ ಸೇರಿಸಿ ನೀಡಲಾಗುತ್ತದೆ ಎಂದು ಜಲ ಮಂಡಳಿ ತಿಳಿಸಿದೆ.