AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತುಮಕೂರು: 29 ವರ್ಷದ ಬಳಿಕ ನಡೆದಿದ್ದ ಜಾತ್ರೆಯಲ್ಲಿ ಭಾಗಿಯಾಗಿದ್ದ 35 ಜನ ಅಸ್ವಸ್ಥ

ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಮಿಡಿಗೇಶಿ ಹೋಬಳಿಯ ಚಿನ್ನೇನಹಳ್ಳಿಯಲ್ಲಿ 29 ವರ್ಷದ ಬಳಿಕ ಅದ್ಧೂರಿಯಾಗಿ ಜಾತ್ರೆ ನಡೆಯುತ್ತಿತ್ತು. ಈ ಜಾತ್ರೆಯಲ್ಲಿ ಭಾಗಿಯಾಗಿ ದೇವರ ಕಾರ್ಯ ಮುಗಿಸಿದ ಬಳಿಕ ಮನೆಗೆ ತೆರಳಿದ್ದ 35 ಜನರಲ್ಲಿ ಏಕಾಏಕಿ ವಾಂತಿ, ಭೇದಿ ಕಾಣಿಸಿಕೊಂಡಿದೆ.

ತುಮಕೂರು: 29 ವರ್ಷದ ಬಳಿಕ ನಡೆದಿದ್ದ ಜಾತ್ರೆಯಲ್ಲಿ ಭಾಗಿಯಾಗಿದ್ದ 35 ಜನ ಅಸ್ವಸ್ಥ
ಸಾಂದರ್ಭಿಕ ಚಿತ್ರ
ಮಹೇಶ್ ಇ, ಭೂಮನಹಳ್ಳಿ
| Updated By: ವಿವೇಕ ಬಿರಾದಾರ|

Updated on: Jun 11, 2024 | 3:01 PM

Share

ತುಮಕೂರು, ಜೂನ್​ 11: ಮಧುಗಿರಿ (Madhugiri) ತಾಲೂಕಿನ ಮಿಡಿಗೇಶಿ (Midigeshi) ಹೋಬಳಿಯ ಚಿನ್ನೇನಹಳ್ಳಿ ಗ್ರಾಮದ 35 ಜನ ವಾಂತಿ, ಬೇಧಿಯಿಂದ ಅಸ್ವಸ್ಥಗೊಂಡಿದ್ದಾರೆ. ಎಂಟು ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು, ಡಿಸ್ಚಾರ್ಜ್​ ಮಾಡಲಾಗಿದೆ. 300 ಮನೆಗಳಿರುವ ಗ್ರಾಮದಲ್ಲಿ 29 ವರ್ಷದ ಬಳಿಕ ಲಕ್ಕಮ್ಮ-ಕೆಂಪಮ್ಮ ಜಾತ್ರೆ ನಡೆಯುತ್ತಿದೆ. ಭಾನುವಾರದಿಂದ ಆರಂಭವಾದ ಜಾತ್ರೆ 6 ದಿನಗಳ ಕಾಲ ನಡೆಯುತ್ತದೆ. ಭಾನುವಾರ ರಾತ್ರಿ ದೇವರ ಕಾರ್ಯ ಮುಗಿಸಿದ ಬಳಿಕ ಜನರಲ್ಲಿ ವಾಂತಿ ಬೇಧಿ ಕಾಣಿಸಿಕೊಂಡಿದೆ.

ಇಬ್ಬರನ್ನು ತುಮಕೂರು ಜಿಲ್ಲಾಸ್ಪತ್ರೆ ಮತ್ತು ಉಳಿದವರನ್ನು ಮಧುಗಿರಿ ತಾಲ್ಲೂಕು ಆಸ್ಪತ್ರೆ, ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಂಭೀರವಾಗಿ ಅಸ್ವಸ್ಥಗೊಂಡು ಜಿಲ್ಲಾಸ್ಪತ್ರೆಗೆ ದಾಖಲಾಗಿರುವ ಲಕ್ಷ್ಮಮ್ಮ ಮತ್ತು ಪೆದ್ದಣ್ಣ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಕುಡಿಯುವ ನೀರಿನಿಂದಾಗಿ ವಾಂತಿ-ಬೇಧಿ ಕಾಣಿಸಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಮಿಡಿಗೇಶಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸಚಿವ ಕೆ.ಎನ್ ರಾಜಣ್ಣ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಅಸ್ವಸ್ಥರ ಆರೋಗ್ಯ ವಿಚಾರಿಸಿದರು.

ಇದನ್ನೂ ಓದಿ: ಚಿತ್ರದುರ್ಗದಲ್ಲಿ ಮದುವೆ ಊಟ ಸೇವಿಸಿ 30ಕ್ಕೂ ಹೆಚ್ಚು ಜನರು ಅಸ್ವಸ್ಥ

ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು,  ಮಧುಗಿರಿಯ ಚಿನ್ನೇನಹಳ್ಳಿಯಲ್ಲಿ ಜಾತ್ರೆ ಮಹೋತ್ಸವ ಇತ್ತು. ಮಳೆ ಕೂಡ ಹೆಚ್ಚಾಗಿದೆ. ಮಳೆ ನೀರಿನಿಂದಲೋ ಅಥವಾ ಊಟದಿಂದಲೋ ಕೆಲವರು ಅಸ್ವಸ್ಥರಾಗಿದ್ದಾರೆ. ಪೆದ್ದಣ್ಣ, ಲಕ್ಷ್ಮಮ್ಮ ಎನ್ನುವವರಿಗೆ ಗಂಭೀರವಾಗಿತ್ತು, ಈಗ ಚೇತರಿಕೆ ಆಗುತ್ತಿದೆ. ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದರು.

ಬೈಕ್ ಡಿಕ್ಕಿ, ಪಾದಚಾರಿ ಸಾವು

ನೆಲಮಂಗಲ: ಬೈಕ್ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 4 ರಾಯರಪಾಳ್ಯ ಗ್ರಾಮದ ಬಳಿ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕು ದೊಡ್ಡಜಾಲ ಮೀನುಕುಂಟೆ ನಿವಾಸಿ ಪರಮೇಶ್(35) ಮೃತ ದುರ್ದೈವಿ. ಬೈಕ್ ಸ್ಥಳದಲ್ಲೇ ಬಿಟ್ಟು ಸವಾರ ಪರಾರಿಯಾಗಿದ್ದಾನೆ. ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕನಕಪುರದಲ್ಲಿ 15 ಕುರಿಗಳ ಸಾವು

ರಾಮನಗರ: ಕನಕಪುರ ತಾಲೂಕಿನ ಕೋಡಿಹಳ್ಳಿಯಲ್ಲಿ ಚಿರತೆ ದಾಳಿಯಿಂದ 15 ಕುರಿಗಳು ಮೃತಪಟ್ಟಿವೆ. ಕೋಡಿಹಳ್ಳಿ ಗ್ರಾಮದ ಚನ್ನಪ್ಪನವರ ಎಂಬುವರ ಸೇರಿದ 20 ಕುರಿಗಳಲ್ಲಿ 15 ಕುರಿಗಳು ಸಾವಿಗೀಡಾಗಿವೆ. ಚನ್ನಪ್ಪನವರ ಕುರಿಗಳನ್ನು ಮೇಯಿಸಿದ ಬಳಿಕ ಜಮೀನಿನಲ್ಲಿ ಬಿಟ್ಟಿದ್ದರು. ಬೆಳಗಾಗುವುದರೊಳಗೆ 20 ಕುರಿಗಳ ಪೈಕಿ 15 ಕುರಿಗಳನ್ನು ಚಿರತೆ ಬಲಿ ಪಡೆದಿದೆ. ಉಳಿದ 5 ಕುರಿಗಳು ನಾಪತ್ತೆಯಾಗಿದ್ದು ಚಿರತೆಯೇ ಎಳೆದೊಯ್ದಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡುವಂತೆ ಗ್ರಾಮಸ್ಥರ ಮನವಿ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ