Tumakuru: ಖಾಸಗಿ ಬಸ್ ಡಿಕ್ಕಿಯಾಗಿ ಕಾರಿನಲ್ಲಿದ್ದ ಐವರು ಸ್ಥಳದಲ್ಲೇ ಸಾವು
ಖಾಸಗಿ ಬಸ್ ಡಿಕ್ಕಿಯಾಗಿ ಕಾರಿನಲ್ಲಿದ್ದ ಐವರು ಸ್ಥಳದಲ್ಲೇ ಮೃತಪಟ್ಟಿರುವಂತಹ ಘಟನೆ ತುಮಕೂರಿನ ಹಿರೇಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಡೆದಿದೆ.
ತುಮಕೂರು: ಖಾಸಗಿ ಬಸ್ ಡಿಕ್ಕಿಯಾಗಿ (accident) ಕಾರಿನಲ್ಲಿದ್ದ ಐವರು ಸ್ಥಳದಲ್ಲೇ ಮೃತಪಟ್ಟಿರುವಂತಹ ಘಟನೆ ತುಮಕೂರಿನ ಹಿರೇಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಡೆದಿದೆ. ಶಿರಾದಿಂದ ಬೆಂಗಳೂರು ಕಡೆ ಹೋಗುತ್ತಿದ್ದ ಖಾಸಗಿ ಬಸ್, ಬೆಂಗಳೂರಿನಿಂದ ತುಮಕೂರು ಕಡೆಗೆ ತೆರಳುತ್ತಿದ್ದ ಇನ್ನೋವಾ ಕಾರಿಗೆ ಡಿಕ್ಕಿ ಹೊಡೆದಿದೆ. ಮೃತದೇಹಗಳನ್ನು ತುಮಕೂರು ಜಿಲ್ಲಾಸ್ಪತ್ರೆ ಶವಗಾರಕ್ಕೆ ರವಾನೆ ಮಾಡಲಾಗಿದೆ. ಸ್ಥಳಕ್ಕೆ ಕ್ಯಾತ್ಸಂದ್ರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ. ಮತ್ತೊಂದು ಪ್ರಕರಣದಲ್ಲಿ ಸರ್ಕಾರಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಒಂದೇ ಕುಟುಂಬದ 6 ಜನರು ಸಾವನ್ನಪ್ಪಿರುವಂತಹ ದುರ್ಘಟನೆ ಕೊಡಗು ಜಿಲ್ಲೆಯ ಮಡಿಕೇರಿ-ಮಂಗಳೂರು ನಡುವಿನ ಹೆದ್ದಾರಿಯಲ್ಲಿ ನಡೆದಿದೆ. ಮಡಿಕೇರಿ ತಾಲೂಕಿನ ಸಂಪಾಜೆ ಬಳಿ ಬಸ್ಗೆ ಕಾರು ಅಪ್ಪಳಿಸಿದೆ. ಪರಿಣಾಮ ಕಾರಿನಲ್ಲಿ ತೆರಳುತ್ತಿದ್ದ 6 ಜನರ ಪೈಕಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆ ಮೂವರು ಸಾವನ್ನಪ್ಪಿದ್ದಾರೆ.
ಮೃತರನ್ನು ಮಂಡ್ಯ ಜಿಲ್ಲೆಯ ಮದ್ದೂರು ಮೂಲದವರು ಎಂದು ಗುರುತಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಮತ್ತಿಬ್ಬರನ್ನು ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಪ್ರತಿಷ್ಠಿತ ಬ್ರ್ಯಾಂಡ್ನ್ನೇ ನಕಲು ಮಾಡಿದ್ದ ಉದ್ಯಮಿಯ ಬಂಧನ
ಬೆಂಗಳೂರು: ಪ್ರತಿಷ್ಠಿತ ಬ್ರ್ಯಾಂಡ್ನ್ನೇ ನಕಲು ಮಾಡಿದ್ದ ಉದ್ಯಮಿ ರಾಜಸ್ಥಾನ ಮೂಲದ ಕಿನ್ನಿಲಾಲ್ನನ್ನು ವಿವಿ ಪುರಂ ಪೊಲೀಸರು ಬಂಧಿಸಿದ್ದಾರೆ. 10 ವರ್ಷಗಳಿಂದ ಏಷ್ಯನ್ ಪೇಂಟ್ ನಕಲು ಮಾಡಿ ಮಾರಾಟ ಮಾಡುತ್ತಿದ್ದನಂತೆ. ಮೊದಲಿಗೆ ತನ್ನದೇ ಲೋಕಲ್ ಬ್ರ್ಯಾಂಡ್ನಲ್ಲಿ ವ್ಯವಹಾರ ಆರಂಭ ಮಾಡಿದ್ದ ಇತ, ಬಳಿಕ ಬ್ಯುಸಿನೆಸ್ ಯಶಸ್ಸು ಕಾಣದ ಹಿನ್ನೆಲೆ ಪ್ರತಿಷ್ಠಿತ ಬ್ರ್ಯಾಂಡ್ ಏಷ್ಯನ್ ಕಂಪನಿ ಹೆಸರಿನಲ್ಲಿ ನಕಲಿ ಪೇಂಟಿಂಗ್ ಮಾರಾಟ ಮಾಡಲು ಶುರು ಮಾಡಿದ್ದಾನೆ.
ಇದನ್ನೂ ಓದಿ: ನರ್ಸ್ ನಿಗೂಢ ಹತ್ಯೆ! ಹಂತಕ ಆ ಒಂದು ಸುಳಿವು ನೀಡಿದ ತಕ್ಷಣ, ಚಾಣಾಕ್ಷ ಗದಗ ಪೊಲೀಸರು ಆರೋಪಿಯನ್ನು ಲಾಕ್ ಮಾಡಿಯೇ ಬಿಟ್ರು!
ಇನ್ನು ಇತನ ವಿರುದ್ದ ದೂರು ಬಂದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿದಾಗ, ಈ ವೇಳೆ ನಕಲಿ ಪೇಂಟಿಂಗ್ ಮಾರಾಟ ಮಾಡುತ್ತಿರುವುದು ಪತ್ತೆಯಾಗಿದೆ. ಬಳಿಕ ವಿದ್ಯಾರಣ್ಯಪುರದ ಕಚೇರಿ ಮೇಲೆ ದಾಳಿ ನಡೆಸಿದ್ದ ಪೊಲೀಸರು, ದಾಳಿ ವೇಳೆ 10 ಲಕ್ಷ ರೂ. ಮೌಲ್ಯದ ನಕಲಿ ಪೇಂಟಿಂಗ್ ವಶಕ್ಕೆ ಪಡೆದಿದ್ದಾರೆ.
ಇಬ್ಬರು ಯುವಕರ ಕಿಡ್ನಾಪ್
ಬೆಂಗಳೂರು: ಬಾರ್ನಲ್ಲಿ ಎಣ್ಣೆ ಹೊಡೆಯುವಾಗ ಮಾತಿಗೆ ಮಾತು ಬೆಳೆದು ರೌಡಿಶೀಟರ್ ಸಹಚರರು ಹಾಗೂ ಸಿದ್ದಾಪುರ ಯುವಕರ ನಡುವೆ ಗಲಾಟೆಯಾಗಿ ಇಬ್ಬರು ಯುವಕರನ್ನ ಕಿಡ್ನಾಪ್ ಮಾಡಿದ ಘಟನೆ ನಗರದ ಸಿದ್ದಾಪುರದಲ್ಲಿ ನಡೆದಿದೆ. ಇದೇ ತಿಂಗಳ 9ರಂದು ಮನೋಜ್ ಹಾಗೂ 17 ವರ್ಷದ ಬಾಲಕ ಬಾರ್ನಲ್ಲಿದ್ದಾಗ ಅಲ್ಲೇ ಕುಡಿಯಲು ಬಂದಿದ್ದ ಸಿದ್ಧಾಪುರ ಯುವಕರ ಜೊತೆ ಕ್ಷುಲ್ಲಕ ಕಾರಣಕ್ಕೆ ಗಲಾಟೆಯಾಗಿದೆ. ಬಳಿಕ ಮನೋಜ್ ಹಾಗೂ ಬಾಲಕನನ್ನ ಕಿಡ್ನಾಪ್ ಮಾಡಿ ಸಿದ್ಧಾಪುರಕ್ಕೆ ಕರೆದೊಯ್ದಿದ್ದರು.
ಇದನ್ನೂ ಓದಿ: ಚಿಕ್ಕಬಳ್ಳಾಪುರ: ಗಂಡ ಬೇಡ ಎಂದು ಮನೆ ಬಿಟ್ಟು ಹೋಗಿದ್ದ ಮಡದಿ; ಪತ್ನಿ ಮೇಲಿನ ಕೋಪಕ್ಕೆ ಚುಚ್ಚೇ ಬಿಟ್ಟ ಪಾಪಿ ಪತಿ
ವಿಚಾರ ತಿಳಿದ ರೌಡಿಶೀಟರ್ ಹ್ಯಾಂಡ್ರೋ ಹರೀಶ್ ಎಂಬಾತ ತನ್ನ 15 ಸಹಚರರ ಜೊತೆ ಬೈಕ್ನಲ್ಲಿ ಸಿನಿಮಾ ಸ್ಟೈಲ್ನಲ್ಲಿ ಚೇಸ್ ಮಾಡಿ ಸಿದ್ದಾಪುರ ಯುವಕರ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆಗೊಳಗಾದ ಸಿದ್ಧಾಪುರ ಯುವಕರು ಪೊಲೀಸರಿಗೆ ದೂರು ನೀಡಿದ್ದಾರೆ. ಬಳಿಕ ಸಿದ್ದಾಪುರ ಪೊಲೀಸರು ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡಿದ್ದು, ಹಲ್ಲೆ ಸಂಬಂಧ 6 ಜನ ಯುವಕರು, 4 ಮಂದಿ ಕಾನೂನು ಸಂಘರ್ಷಕ್ಕೊಳಗಾದವರನ್ನ ಬಂಧಿಸಲಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:35 pm, Fri, 14 April 23