ತುಮಕೂರು, ಜುಲೈ.23: ಗ್ರಾಮ ಪಂಚಾಯತಿ ಅಧ್ಯಕ್ಷ ಚುನಾವಣೆಯಲ್ಲಿ ಸೋತ ಹಿನ್ನಲೆ ಸದಸ್ಯೆಯೊಬ್ಬರು ಮತ್ತೋರ್ವ ಸದಸ್ಯ ಮಂಜುನಾಥ್ ಎಂಬುವವರ ಮೇಲೆ ಚಪ್ಪಲಿಯಿಂದ ಹೊಡೆದು, ಅವಾಚ್ಯ ಶಬ್ಧಗಳಿಂದ ನಿಂದಿಸಿ, ಶರ್ಟ್ ಹರಿದ ಘಟನೆ ಜಿಲ್ಲೆಯ ತುರುವೇಕೆರೆ(Turuvekere) ತಾಲೂಕಿನ ದಬ್ಬೇಘಟ್ಟ ಗ್ರಾಮ ಪಂಚಾಯತಿ(Dabbeghatta Grama Panchayat) ಕಚೇರಿಯಲ್ಲಿ ನಡೆದಿದೆ. ಅಧ್ಯಕ್ಷ ಸ್ಥಾನಕ್ಕೆ ಸೋತ ಹತಾಶೆಯಲ್ಲಿ ಸದಸ್ಯೆ ಸುಧಾ ಜಿ.ಎನ್. ಎಂಬುವವರು ‘ನನಗೆ ಮತ ಹಾಕಿಲ್ಲ, ಹಾಗಾಗಿ ನಾನು ಸೋತಿದ್ದೇನೆಂದು ಗ್ರಾಮ ಪಂಚಾಯತಿ ಕಚೇರಿ ಒಳಗೆ ನುಗ್ಗಿ ಹಲ್ಲೆ ಮಾಡಿದ್ದಾರೆ. ಸದ್ಯ ಸುಧಾ ವಿರುದ್ಧ ಸ್ಪರ್ಧಿಸಿದ್ದ ಛಾಯಮಣಿ ಎಂಬುವವರು ಅಧ್ಯಕ್ಷೆಯಾಗಿ ಗೆಲುವು ಕಂಡಿದ್ದು, ಹಲ್ಲೆ ಮಾಡಿ ಇದೀಗ ಸುಧಾ ತಲೆ ಮರೆಸಿಕೊಂಡಿದ್ದಾರೆ. ಈ ಕುರಿತು ಸುಧಾ ವಿರುದ್ಧ ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು ಇದೇ ರೀತಿ ಘಟನೆ ಜುಲೈ 19 ರಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ತವರು ಕ್ಷೇತ್ರವಾದ ಕೊರಟಗೆರೆ ತಾಲೂಕಿನ ಹುಲಿಕುಂಟೆ ಗ್ರಾಮ ಪಂಚಾಯತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ವೇಳೆ ಗ್ರಾ.ಪಂ ಸದಸ್ಯ ಡಿ.ಎಲ್.ಮಲ್ಲಯ್ಯ ಮೇಲೆ ಕೊರಟಗೆರೆ ಪಿಡಬ್ಯುಡಿ ಪ್ರಥಮ ದರ್ಜೆ ಸಹಾಯಕನಾಗಿರುವ ಚಿಕ್ಕಣ್ಣ ಹಲ್ಲೆ ನಡೆಸಿದ್ದರು. ‘ನನ್ನ ಮತ ನನ್ನ ಹಕ್ಕು ಎಂದು ಹೇಳಿದ ವ್ಯಕ್ತಿಗೆ, ಸರ್ಕಾರಿ ಅಧಿಕಾರಿ ಮನ ಬಂದಂತೆ ಥಳಿಸಿ ದರ್ಪ ಮೆರೆದಿದ್ದರು.
ಇದನ್ನೂ ಓದಿ:ಬೆಂಗಳೂರಿನಲ್ಲಿ ಕರ್ತವ್ಯನಿರತ ಸಂಚಾರಿ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಪ್ರಕರಣ; ಆರೋಪಿ ಬಂಧನ
ಹೌದು ಇತ್ತೀಚಿಗೆ ನಡೆದ ಗ್ರಾ.ಪಂ.ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ವೇಳೆ ತನ್ನ ಪತ್ನಿಗೆ ಮತ ಹಾಕುವಂತೆ ಕೇಳಲು ಬಂದಿದ್ದ ಸರ್ಕಾರಿ ಅಧಿಕಾರಿ, ವ್ಯಕ್ತಿಯೋರ್ವನನ್ನ ಮನ ಬಂದಂತೆ ಥಳಿಸಿ ದರ್ಪ ಮೆರೆದಿದ್ದರು. ಈ ಘಟನೆ ತಡವಾಗಿ ಬೆಳಕಿಗೆ ಬಂದಿತ್ತು. ಚಿಕ್ಕಣ್ಣನ ಪತ್ನಿ ದಿವ್ಯಜ್ಯೋತಿ ಎಂಬುವವರು ಹುಲೀಕುಂಟೆ ಗ್ರಾಪಂ ಅಧ್ಯಕ್ಷ ಚುನಾವಣೆಯ ಆಕಾಂಕ್ಷಿಯಾಗಿದ್ದರು. ಹಾಗೂ ಉಪಾಧ್ಯಕ್ಷೆ ಸ್ಥಾನಕ್ಕೆ ಮಂಜುನಾಥ್ ಎಂಬುವವರ ಪತ್ನಿ ಆಕಾಂಕ್ಷಿಯಾಗಿದ್ದರು. ಹಣ ಕೊಡುತ್ತೇನೆ ಮತಹಾಕು ಎಂದು ಚಿಕ್ಕಣ ಹಾಗೂ ಮಂಜುನಾಥ್ ಇಬ್ಬರೂ ಜೊತೆಗೂಡಿ ಮಲ್ಲಯ್ಯಗೆ ಒತ್ತಾಯ ಮಾಡಿದ್ರು. ಈ ವೇಳೆ ಹಣ ಕೊಟ್ಟರೂ ಒಪ್ಪದಿದ್ದಕ್ಕೆ ಗ್ರಾಪಂ ಸದಸ್ಯ ಮಲ್ಲಯ್ಯನ ಮೇಲೆ ಹಲ್ಲೆ ನಡೆಸಿದ್ದರು.
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:43 am, Sun, 23 July 23