ಸೂರ್ಯ, ಚಂದ್ರ ಇರುವ ತನಕ ಬೊಮ್ಮಾಯಿ- ಮೋದಿಯನ್ನು ವಾಲ್ಮೀಕಿ ಸಮುದಾಯ ನೆನಪಿಸಬೇಕು: ಶ್ರೀರಾಮುಲು
ಸರ್ಕಾರ ಎಸ್.ಟಿ ಸಮುದಾಯದ ಮೀಸಲಾತಿ ಪ್ರಮಾಣ ಹೆಚ್ಚಿಸಿದ್ದು ಈ ಸಂಬಂಧ ನ. 20ರಂದು ಬಳ್ಳಾರಿಯಲ್ಲಿ ಸಿಎಂ ಬೊಮ್ಮಾಯಿ ಮತ್ತು ಪ್ರಧಾನಿ ಮೋದಿ ಅವರಿಗೆ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಚಿವ ಬಿ. ಶ್ರೀರಾಮುಲು ಹೇಳಿದ್ದಾರೆ.
ತಮಕೂರು: ರಾಜ್ಯ ಸರ್ಕಾರ ಎಸ್.ಟಿ (ST) ಸಮುದಾಯದ ಮೀಸಲಾತಿ ಪ್ರಮಾಣ ಹೆಚ್ಚಿಸಿದ್ದು, ವಾಲ್ಮೀಕಿ ಸಮುದಾಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಮತ್ತು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಸೂರ್ಯ (Sun) ಚಂದ್ರ (Moon) ಇರುವ ತನಕ ನೆನಸಬೇಕು ಎಂದು ತುಮಕೂರಿನಲ್ಲಿ ಸಾರಿಗೆ ಸಚಿವ ಬಿ. ಶ್ರೀರಾಮುಲು (B Sriramulau) ಹೇಳಿದ್ದಾರೆ. ಬಳ್ಳಾರಿಯಲ್ಲಿ ನಡೆಯಲಿರುವ ಎಸ್ಟಿ ಸಮಾವೇಶದ ಕುರಿತು, ತುಮಕೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಎಸ್.ಟಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಿಸಿದ ಹಿನ್ನೆಲೆ ನ. 20ರಂದು ಬಳ್ಳಾರಿಯಲ್ಲಿ ಸಿಎಂ ಬೊಮ್ಮಾಯಿ ಮತ್ತು ಪ್ರಧಾನಿ ಮೋದಿ ಅವರಿಗೆ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಎಸ್.ಟಿ ಸಮುದಾಯದ ಮೀಸಲಾತಿ ಪ್ರಮಾಣ ಹೆಚ್ಚಿಸಿ ನನ್ನ ಸಮುದಾಯಕ್ಕೆ ಕೊಟ್ಟ ಮಾತಿನಂತೆ ಬದ್ಧನಾಗಿದ್ದೇನೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಹಿಂದುಳಿದವರಿಗೆ ಅನ್ಯಾಯವಾಗಿತ್ತು. ಕಾಂಗ್ರೆಸ್ನವರಿಗೆ ತಾಕತಿದ್ದರೇ ಮೀಸಲಾತಿ ಪ್ರಮಾಣ ಹೆಚ್ಚಿಸಬೇಕಿತ್ತು. ಮೀಸಲಾತಿ ಪ್ರಮಾಣ ಹೆಚ್ಚಿಸುವ ಶಕ್ತಿ, ಧೈರ್ಯ ಕಾಂಗ್ರೆಸ್ಗೆ ಇರಲಿಲ್ಲ ಎಂದು ಕಿಡಿಕಾರಿದರು.
ಎಸ್. ಟಿ ಮೀಸಲಾತಿ ಕೊಟ್ಟ ನಂತರ ಸಿದ್ದರಾಮಯ್ಯಗೆ ನಿದ್ದೆ ಬರುತ್ತಿಲ್ಲ. ಮುಂದಿನ ದಿನಗಳಲ್ಲಿ ವಾಲ್ಮೀಕಿ ಸಮುದಾಯ ಪಾಠ ಕಲಿಸುತ್ತದೆ. ಎಸ್. ಟಿ ಸಮುದಾಯದ ನಾಯಕರು ಕಾಂಗ್ರೆಸ್ನಿಂದ ಹೊರ ಬರಬೇಕು. ಕಾಂಗ್ರೆಸ್, ಜೆಡಿಎಸ್ ಪಕ್ಷದ ವಾಲ್ಮೀಕಿ ನಾಯಕರಿಗೆ ಶ್ರೀರಾಮುಲು ಬಹಿರಂಗವಾಗಿ ಆಹ್ವಾನ ನೀಡಿದರು.
2008 ರಿಂದ ಇಲ್ಲಿವರಗೆ ಬಿಜೆಪಿ ಸರ್ಕಾರ ವಾಲ್ಮೀಕಿ ಸಮುದಾಯದ ಪರವಾಗಿದೆ. ರಾಜಕಾರಣಗೋಸ್ಕರ ಮೀಸಲಾತಿ ಕುರಿತು ಕಾಂಗ್ರೆಸ್ ನಾಯಕರು ಟೀಕೆ ಮಾಡುತ್ತಾರೆ. ರಾಹುಲ್ ಗಾಂಧಿ ನಾಟಕೀಯವಾದ ಪಾದಯಾತ್ರೆ ಮಾಡಿದರು. ಅಧಿಕಾರದಲ್ಲಿ ಇರುವಾಗ ಅವರು ಹಿಂದುಳಿದ ಸಮುದಾಯದವರಿಗೆ ಅನ್ಯಾಯ ಮಾಡಿದರು. ವೋಟ್ ಬ್ಯಾಂಕ್ ಮಾಡಿಕೊಂಡು ಕಾಲ ಕಳೆದರು ಎಂದು ವಾಗ್ದಾಳಿ ಮಾಡಿದರು.
ಉತ್ತರ ಹೇಳಲು ತಡವರಿಸಿದ ಸಚಿವ ಶ್ರೀರಾಮುಲು
ನಿಮ್ಮನ್ನು ಬಿಜೆಪಿ ಡಿಸಿಎಂ ಮಾಡಿಲ್ವಲ್ಲಾ ಎಂದು ಮಾಧ್ಯಮದವರ ಪ್ರಶ್ನೆಗೆ ಸಚಿವ ಶ್ರೀರಾಮುಲು ತಡವರಿಸಿ ಉತ್ತರ ಕೊಟ್ಟಿದ್ದಾರೆ. ಮಾಧ್ಯಮದವರು ಎರಡ್ಮೂರು ಬಾರಿ ಪ್ರಶ್ನೆ ಕೇಳಿದರೂ ಉತ್ತರಿಸಲು ಹಿಂದೇಟು ಹಾಕಿದರು. ಕೊನೆಗೆ ಅದು ಪಕ್ಷದ ನಿರ್ಧಾರ, ಪಕ್ಷ ಯಾವುದೇ ನಿರ್ಧಾರ ಕೈಗೊಂಡರೂ ಅದಕ್ಕೆ ಬದ್ದನಾಗಿದ್ದೇನೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ