ಕೊಪ್ಪಳ / ಬಳ್ಳಾರಿ, ಆಗಸ್ಟ್ 14: ತುಂಗಭದ್ರಾ ಡ್ಯಾಂ ಕಲ್ಯಾಣ ಕರ್ನಾಟಕ ಜನರಿಗೆ ಜೀವಜಲದ ಪ್ರಮುಖ ಸೆಲೆ. ಡ್ಯಾಂನ 19ನೇ ಗೇಟ್ ಮುರಿದು 4 ದಿನಗಳು ಕಳೆದಿವೆ. ಅನಿವಾರ್ಯವಾಗಿ ಡ್ಯಾಂನ 29 ಗೇಟ್ಗಳಿಂದ ನೀರನ್ನು ಹೊರಬಿಡಲಾಗುತ್ತಿದೆ. ಇದರಿಂದ ಹೆಚ್ಚು ಕಮ್ಮಿ 21 ಟಿಎಂಸಿಯಷ್ಟು ನೀರು ವ್ಯರ್ಥವಾಗಿ ಹರಿದು ಹೋಗುತ್ತಿದೆ. ಭೋರ್ಗರೆಯುವ ನೀರನ್ನು ತಡೆದು ಗೇಟ್ ಅಳವಡಿಸುವುದೇ ದೊಡ್ಡ ಸವಾಲಾಗಿದೆ. ಏನಾದರೂ ಮಾಡಿ ಹರಿಯುವ ನೀರಿಗೆ ತಾತ್ಕಾಲಿಕ ಬ್ರೇಕ್ ಹಾಕಲು ತಂತ್ರಜ್ಞರು ಮುಂದಾಗಿದ್ದಾರೆ. ಇದಕ್ಕಾಗಿ ತಾತ್ಕಾಲಿಕ ಗೇಟ್ ರೆಡಿಯಾಗುತ್ತಿದ್ದು, ಇಂದಿನಿಂದಲೇ ತಾತ್ಕಾಲಿಕ ಗೇಟ್ ಅಳವಡಿಕೆ ಆರಂಭವಾಗಲಿದೆ. 2 ಕ್ರೇನ್‌ಗಳ ಮೂಲಕ ಗೇಟ್ ಅಳವಡಿಕೆ ಕಾರ್ಯ ನಡೆಯಲಿದೆ.
ಗೇಟ್ ಅಳವಡಿಕೆ ಪ್ಲ್ಯಾನ್ 1 ಪ್ರಕಾರ, 60 ಅಡಿ ಉದ್ದದ ಗೇಟನ್ನ 12 ಪ್ಲೇಟ್ ಮಾಡಲಾಗಿದೆ. ಭೋರ್ಗರೆದು ಹರಿಯುವ ನೀರಿನಲ್ಲೇ 5 ಪ್ಲೇಟ್ ಇಳಿಸಲಾಗುತ್ತದೆ. ಆಪರೇಷನ್ ಸಕ್ಸಸ್ ಆದ್ರೆ ಉಳಿದ ಪ್ಲೇಟ್ ಅಳವಡಿಕೆ ಮಾಡಲಾಗುತ್ತದೆ. ಆ ಮೂಲಕ ಡ್ಯಾಂನಲ್ಲಿ ನೀರು ಇರೋವಾಗ್ಲೇ ಕಂಟ್ರೋಲ್ ಮಾಡಲಾಗುತ್ತದೆ. ಒಂದು ವೇಳೆ ನೀರಿನ ರಭಸಕ್ಕೆ ಪ್ಲೇಟ್‌ಗಳು ಕೊಚ್ಚಿ ಹೋದ್ರೆ ಪ್ಲ್ಯಾನ್-1 ಆಪರೇಷನ್ ಬಂದ್ ಆಗಲಿದೆ.
ಗೇಟ್ ಅಳವಡಿಕೆ ಪ್ಲ್ಯಾನ್ 2 ಪ್ರಕಾರ, ಡ್ಯಾಂನಲ್ಲಿನ 65 ಟಿಎಂಸಿ ನೀರು ಖಾಲಿ ಮಾಡಲಾಗುತ್ತದೆ. ಡ್ಯಾಂನ ನೀರು 40 ಟಿಎಂಸಿಗೆ ಇಳಿಸಲಾಗುತ್ತೆ. ನೀರಿನ ರಭಸ ನಿಲ್ಲುತ್ತಿದ್ದಂತೆಯೇ ಕಾರ್ಯಾಚರಣೆ ಶುರುವಾಗುತ್ತದೆ. ಆಗ ಶಾಶ್ವತವಾಗಿ ಕ್ರಸ್ಟ್ ಗೇಟ್ ಅಳವಡಿಸುತ್ತಾರೆ. ವಿಷಯ ಏನೆಂದರೆ, 2ನೇ ಕಾರ್ಯಾಚರಣೆ ಆರಂಭ ಮಾಡಬೇಕು ಎಂದರೆ ಇನ್ನೂ ಮೂರು ದಿನ ಕಾಯಲೇ ಬೇಕು.
ತುಂಗಭದ್ರಾ ಡ್ಯಾಂ ವೀಕ್ಷಣೆಗೆ ಮಂಗಳವಾರ ಸಿಎಂ ಸಿದ್ದರಾಮಯ್ಯ ಆಗಮಿಸಿ, ಮುರಿದು ಹೋದ ಗೇಟ್ ವೀಕ್ಷಿಸಿದ್ರು. ನೀರು ಉಳಿಸಲು ನಡೆಯುತ್ತಿರುವ ಕಾರ್ಯದ ಬಗ್ಗೆ ತಜ್ಞರಿಂದ ಮಾಹಿತಿ ಪಡೆದರು. ಬಳಿಕ ಮಾತನಾಡಿದ ಸಿಎಂ, ನಾಲ್ಕೈದು ದಿನಗಳಲ್ಲಿ ರೆಡಿಯಾಗಲಿದೆ. ಆತಂಕ ಬೇಡ ಎಂದು ಭರವಸೆ ನೀಡಿದರು.
ಇದನ್ನೂ ಓದಿ: ತುಂಗಭದ್ರಾ ಜಲಾಶಯದ ಆಯುಷ್ಯ ಮುಗಿದಿದೆ: ಜಲತಜ್ಞರು ನೀಡಿದ ಅಚ್ಚರಿಯ ಮಾಹಿತಿ ಇಲ್ಲಿದೆ
ಈ ಮಧ್ಯೆ ಡ್ಯಾಂ ವಿಚಾರವೂ ರಾಜಕೀಯ ಬಣ್ಣ ಪಡೆದಿದೆ. ಡ್ಯಾಂ ನಿರ್ವಹಣೆ ಅನುಮಾನ ವ್ಯಕ್ತಪಡಿಸಿರೋ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ತನಿಖೆಗೆ ಆಗ್ರಹಿಸಿದ್ದರೆ, ಜಲಸಂಪನ್ಮೂಲ ಸಚಿವರು ಬರೀ ಸಂಪನ್ಮೂಲದ ಬಗ್ಗೆಯೇ ಹೆಚ್ಚು ತಲೆಕೆಡಿಸಿಕೊಂಡಂತೆ ಕಾಣುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಕುಟುಕಿದ್ದಾರೆ.
ಒಟ್ಟಿನಲ್ಲಿ ಇಂದಿನಿಂದ ಟಿಬಿ ಡ್ಯಾಂನಲ್ಲಿ ತಾತ್ಕಾಲಿಕ ಗೇಟ್ ಅಳವಡಿಕೆ ಕಾರ್ಯ ಶುರುವಾಗಲಿದ್ದು, ಭಾನುವಾರದ ವೇಳೆಗೆ ಗೇಟ್ ಅಳವಡಿಕೆ ಮುಗಿಯಬಹುದು ಎಂದು ನಿರೀಕ್ಷಿಸಲಾಗಿದೆ.
ಬಳ್ಳಾರಿಯಿಂದ ವಿನಾಯಕ್ ಬಡಿಗೇರ್ ಜತೆ ಸಂಜಯ್ ‘ಟಿವಿ9’ ಕೊಪ್ಪಳ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ