ಕೊಪ್ಪಳ, ಜೂನ್ 19: ಅದು ಕೊಪ್ಪಳ (Koppal) ಜಿಲ್ಲೆಗೆ ಅತಿ ದೊಡ್ಡ ಆಸ್ಪತ್ರೆ ಅನ್ನೋ ಹೆಗ್ಗಳಿಕೆ ಪಡೆದುಕೊಂಡಿದ್ದ ಆಸ್ಪತ್ರೆ (Hospital). ಆದ್ರೆ ಅಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಆಸ್ಪತ್ರೆಯ ವ್ಯವಸ್ಥೆಯೇ ಹಾಳಾಗಿ ಹೋಗಿತ್ತು. ಕುಡಿಯುವ ನೀರು, ವೀಲ್ ಚೇರ್ ಗಾಗಿ ಕೂಡಾ ರೋಗಿಗಳು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಈ ಬಗ್ಗೆ ಟಿವಿ9, ಆಸ್ಪತ್ರೆಯ ಅವ್ಯವಸ್ಥೆ ಬಗ್ಗೆ ನಿರಂತರ ವರದಿ ಪ್ರಸಾರ ಮಾಡಿತ್ತು. ಇಂದು ಟಿವಿ9 ವರದಿ ಕೊಪ್ಪಳ ಕೆಡಿಪಿ ಸಭೆಯಲ್ಲಿ ಚರ್ಚೆಗೆ ಬಂದವು. ಜೊತೆಗೆ ಕಿಮ್ಸ್ ನಿರ್ದೇಶಕರನ್ನು ಸಚಿವರು ಸೇರಿದಂತೆ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು ತರಾಟೆಗೆ ತಗೆದುಕೊಂಡಿದ್ದಾರೆ. ಅವ್ಯವಸ್ಥೆ ಸರಿಪಡಿಸಲು ಸೂಚಿಸಿದ್ದಾರೆ.
ನೀವು ಇರೋದು ಏತಕ್ಕೆ, ಕನಿಷ್ಟ ರೋಗಿಗಳಿಗೆ ಚೀಟಿ ಮಾಡಿಕೊಡಲು ಆಗದಿದ್ರೆ ನೀವು ಇದ್ರು ಏನು ಪ್ರಯೋಜನ, ನಿಮ್ಮಂತವರು ಬೇಕೆ, ನೀಮಗೆ ಮಾನವೀಯತೆ ಇಲ್ವಾ ಅಂತ ಸಚಿವ ಶಿವರಾಜ್ ತಂಗಡಗಿ ಕಿಮ್ಸ್ ನಿರ್ದೇಶಕರಿಗೆ ತರಾಟೆಗೆ ತಗೆದುಕೊಳ್ಳುತ್ತಿದ್ದರೆ, ಕಿಮ್ಸ್ ನಿರ್ದೇಶಕರು, ನಿಂತಲ್ಲಿಯೇ ಬೆವರುತ್ತಿದ್ದರು. ಇನ್ನೊಂದಡೆ ಉಳಿದ ಜನಪ್ರತಿನಿಧಿಗಳು ಕೂಡಾ ಒಬ್ಬರಾದ ಮೇಲೆ ಒಬ್ಬರು ಕಿಮ್ಸ್ ನಿರ್ದೇಶಕರನ್ನು ತರಾಟೆಗೆ ತಗೆದೆಕೊಂಡರು. ಕೆಲಸ ಮಾಡಿ ಇಲ್ಲದಿದ್ದರೆ ಖುರ್ಚಿ ಬಿಟ್ಟು ಹೋಗಿ ಅಂತ ಖಡಕ್ ವಾರ್ನಿಂಗ್ ನೀಡಿದ್ರು. ಇನ್ನು ಇಂತಹದೊಂದು ಘಟನೆ ನಡೆದಿದ್ದು ಕೊಪ್ಪಳ ನಗರದ ಜಿಲ್ಲಾ ಪಂಚಾಯತ್ ಸಭಾಭವಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ.
ಕೊಪ್ಪಳ ನಗರದಲ್ಲಿರುವ ಕೊಪ್ಪಳ ಜಿಲ್ಲಾ ಆಸ್ಪತ್ರೆ, ಜಿಲ್ಲೆಗೆ ದೊಡ್ಡ ಆಸ್ಪತ್ರೆ ಅನ್ನೋ ಗರಿಮೆಯನ್ನು ಹೊಂದಿದೆ. ಆದ್ರೆ ಇಲ್ಲಿ ಉತ್ತಮ ವ್ಯದ್ಯರು ಇರೋದರಿಂದ ಮತ್ತು ಗುಣಮಟ್ಟದ ಚಿಕಿತ್ಸೆ ಸಿಗುತ್ತೆ ಅಂತ ಹೆಚ್ಚಿನ ರೋಗಿಗಳು ಬರ್ತಾರೆ. ಆದ್ರೆ ಇಲ್ಲಿಗೆ ಬರೋ ರೋಗಿಗಳು ಇದೀಗ ನರಕಯಾತನೆ ಅನುಭವಿಸವಂತಾಗಿದೆ. ಆಸ್ಪತ್ರೆಗೆ ಬಂದು ಚೀಟ್ ಮಾಡಿಸಲಿಕ್ಕೇನೆ ಗಂಟೆ ಗಂಟೆಲೆ ಕಾಯಬೇಕಾಗಿದೆ. ಇನ್ನು ಆಸ್ಪತ್ರೆಗೆ ಬರೋ ಅನೇಕರಿಗೆ ನಡೆದುಕೊಂಡು ಹೋಗಲು ಕೂಡಾ ಆಗದಂತಹ ಸ್ಥಿತಿಯಿದೆ. ಅಂತವರಿಗೆ ಕನಿಷ್ಟ ವೀಲ್ ಚೇರ್, ಸ್ಟ್ರೆಚರ್ ವ್ಯವಸ್ಥೆ ಕೂಡಾ ಆಸ್ಪತ್ರೆಯಲ್ಲಿ ಇಲ್ಲಾ. ಹೀಗಾಗಿ ರೋಗಿಗಳ ಸಂಬಂಧಿಗಳೇ, ರೋಗಿಗಳನ್ನು ಹೊತ್ತುಕೊಂಡು ಹೋಗಬೇಕಾದ ಸ್ಥಿತಿಯಿದ್ರೆ, ಇನ್ನೊಂದಡೆ ಆಗದೇ ಇರೋರು, ಗಂಟೆಗಟ್ಟಲೇ ವೀಲ್ ಚೇರ್ ಗಾಗಿ ಕಾಯಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಇದನ್ನೂ ಓದಿ: ಮಳೆಗಾಲ ಆರಂಭವಾಗ್ತಿದ್ದಂತೆ ಸಾಂಕ್ರಾಮಿಕ ರೋಗಗಳ ಭೀತಿ; ಗ್ರಾಮೀಣ ಭಾಗದಲ್ಲಿ ಹೆಚ್ಚಾದ ಡೆಂಗ್ಯೂ, ಚಿಕನಗುನ್ಯಾ
ಇನ್ನು ಆಸ್ಪತ್ರೆಯಲ್ಲಿ ಕುಡಿಯುವ ನೀರಿನ ಸೌಲಭ್ಯವಿಲ್ಲ. ರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ಕೂಡಾ ಸಿಗ್ತಿಲ್ಲಾ. ಬೆಡ್ ಗಳ ಕೊರತೆ ಸೇರಿದಂತೆ ಅನೇಕ ಸಮಸ್ಯೆಗಳಿವೆ. ಈ ಎಲ್ಲಾ ಸಮಸ್ಯೆಗಳ ಬಗ್ಗೆ ಟಿವಿ9 ಕಳೆದ ಕೆಲ ತಿಂಗಳಿಂದ ನಿರಂತರವಾಗಿ ವರದಿ ಮಾಡಿದೆ. ಆಸ್ಪತ್ರೆಯ ಅವ್ಯವಸ್ಥೆಗಳನ್ನು ಸಾಕ್ಷಿ ಸಮೇತ ವರದಿ ಪ್ರಸಾರ ಮಾಡಿತ್ತು. ಟಿವಿ9 ವರದಿಗಳು ಇಂದು ಕೊಪ್ಪಳ ಜಿಲ್ಲಾ ಕೆಡಿಪಿ ಸಭೆಯಲ್ಲಿ ಪ್ರಸ್ತಾಪಿಸಲಾಗಿದೆ.
ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪ್ರಮುಖವಾಗಿ ಕೊಪ್ಪಳ ಜಿಲ್ಲಾ ಆಸ್ಪತ್ರೆಯ ಚರ್ಚೆ ನಡೆಯಿತು. ಕೊಪ್ಪಳ ಕಿಮ್ಸ್ ಮೆಡಿಕಲ್ ಕಾಲೇಜು ಅಧೀನದಲ್ಲಿರುವ ಆಸ್ಪತ್ರೆಯ ಅವ್ಯವಸ್ಥೆ ಬಗ್ಗೆ ಪ್ರಸಾಪ ಮಾಡಿದ ಸಚಿವ ಶಿವರಾಜ್ ತಂಗಡಗಿ, ಕಿಮ್ಸ್ ನಿರ್ದೇಶಕಾ ಡಾ. ವಿಜಯನಾಥ್ ಇಟಗಿರನ್ನು ತರಾಟೆಗೆ ತಗೆದುಕೊಂಡರು.
ನಿಮ್ಮ ಪಾಡಿಗೆ ನೀವೆ ಬೆನ್ನು ಚಪ್ಪರಿಸಿಕೊಳ್ಳಬೇಡಿ, ನಿಮ್ಮ ಕೆಲಸವನ್ನು ಬೇರೆಯವರು ಮಾತಾಡುವಂತಾಗಬೇಕು. ಜವಾಬ್ದಾರಿ ಸ್ಥಾನದಲ್ಲಿರುವ ನಿಮಗೆ, ಜವಾಬ್ದಾರಿ ಬೇಡವೆ, ಪ್ರತಿಸಲ ಮಾಧ್ಯಮದಲ್ಲಿ ಜಿಲ್ಲಾ ಆಸ್ಪತ್ರೆಯ ಅವ್ಯವಸ್ಥೆ ಅಂತ ವರದಿ ಬರ್ತಿವೆ. ನಿಮಗೆ ಸರ್ಕಾರ ಸಂಬಳ ಯಾಕೆ ನೀಡ್ತದೆ, ನೀವು ಮಾಡ್ತಿದ್ದೀರಿ ಅಂತ ಡಾ. ವಿಜಯನಾಥ್ ಇಟಗಿ ವಿರುದ್ದ ಹರಿಹಾಯ್ದರು. ರೋಗಿಗಳಿಗೆ ಕನಿಷ್ಟ ಗೌರವ ನೀಡಲು ಆಗದೇ ಇದ್ರು ಕೂಡಾ ನೀವು ಯಾಕೆ ಇರಬೇಕು, ನಿಮಗೆ ಮನುಷ್ಯತ್ವ ಇಲ್ವಾ ಅಂತ ತರಾಟೆಗೆ ತಗೆದುಕೊಂಡರು. ಇನ್ನು ಕಿಮ್ಸ್ ಕಾಲೇಜಿನಲ್ಲಿ ಅನೇಕ ಅವ್ಯವಹಾರಗಳು ನಡೆದಿದ್ದು, ಅವುಗಳ ಬಗ್ಗೆ ಕೂಡಾ ಪರಿಶೀಲನೆ ನಡೆಸಿ, ಕ್ರಮ ಕೈಗೊಳ್ಳೋದಾಗಿ ಸಚಿವರು ವಾರ್ನಿಂಗ್ ನೀಡಿದ್ದಾರೆ.
ಇದನ್ನೂ ಓದಿ: ಕೊಪ್ಪಳದಲ್ಲಿ ಹೆಚ್ಚಾದ ಸರಗಳ್ಳರ ಹಾವಳಿ, ಆತಂಕದಲ್ಲಿ ಮಹಿಳೆಯರು
ಕೂಡಲೇ ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿರುವ ಅವ್ಯವಸ್ಥೆ ಸರಿಪಡಿಸಬೇಕು. ಇಲದಿದ್ದರೆ ನಿಮ್ಮ ವಿರುದ್ದ ಕಠೀಣ ಕ್ರಮ ಕೈಗೊಳ್ಳೋದಾಗಿ ಸಚಿವರು ಸೇರಿದಂತೆ ಶಾಸಕರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಆದ್ರೆ ಎಷ್ಟರ ಮಟ್ಟಿಗೆ ವ್ಯವಸ್ಥೆ ಸರಿಯಾಗುತ್ತೆ ಅನ್ನೋದು ಕಾಲವೇ ಉತ್ತರ ಹೇಳಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:31 pm, Wed, 19 June 24