TV9 Big Impact | ಟಿವಿ9 ರಹಸ್ಯ ಕಾರ್ಯಾಚರಣೆ ವರದಿ ಫಲಶ್ರುತಿ: ಬೆಂಗಳೂರು-ಬೆಳಗಾವಿ ಸೇರಿದಂತೆ ಜೈಲು ಅಕ್ರಮದಲ್ಲಿದ್ದ 6 ಅಧಿಕಾರಿಗಳು ಸಸ್ಪೆಂಡ್​!

TV9 Big Impact: ಪಾಪಿಗಳ ಲೋಕ ಪರಪ್ಪನ ಅಗ್ರಹಾರದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರಾಗೃಹದ ನಾಲ್ವರು ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿ ಕಾರಾಗೃಹ ಇಲಾಖೆಯ ಡಿಜಿಪಿ‌ ಅಲೋಕ್ ಮೋಹನ್ ಆದೇಶ ಹೊರಡಿಸಿದ್ದಾರೆ. ಸಸ್ಪೆಂಡ್ ಜೊತೆಗೆ ಕಾರಾಗೃಹ ಇಲಾಖೆಯಲ್ಲಿ‌ ಭಾರಿ ಬದಲಾವಣೆಗಳನ್ನು ಸಹ ತರಲಾಗಿದೆ.

  • TV9 Web Team
  • Published On - 7:47 AM, 20 Feb 2021
TV9 Big Impact | ಟಿವಿ9 ರಹಸ್ಯ ಕಾರ್ಯಾಚರಣೆ ವರದಿ ಫಲಶ್ರುತಿ: ಬೆಂಗಳೂರು-ಬೆಳಗಾವಿ ಸೇರಿದಂತೆ ಜೈಲು ಅಕ್ರಮದಲ್ಲಿದ್ದ 6 ಅಧಿಕಾರಿಗಳು ಸಸ್ಪೆಂಡ್​!
ಜೈಲಿನಲ್ಲಿ ಕೈದಿ ಅಧಿಕಾರಿಗಳಿಗೆ ಹಣ ನೀಡುತ್ತಿರುವುದು

ಬೆಂಗಳೂರು: ಪಾಪಿಗಳ ಲೋಕ ಪರಪ್ಪನ ಅಗ್ರಹಾರದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರಾಗೃಹದ ನಾಲ್ವರು ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿ ಕಾರಾಗೃಹ ಇಲಾಖೆಯ ಡಿಜಿಪಿ‌ ಅಲೋಕ್ ಮೋಹನ್ ಆದೇಶ ಹೊರಡಿಸಿದ್ದಾರೆ. ಸಸ್ಪೆಂಡ್ ಜೊತೆಗೆ ಕಾರಾಗೃಹ ಇಲಾಖೆಯಲ್ಲಿ‌ ಭಾರಿ ಬದಲಾವಣೆಗಳನ್ನು ಸಹ ತರಲಾಗಿದೆ. ಕಳೆದ ಹದಿನೈದು ದಿನಗಳ ಹಿಂದೆ ಟಿವಿ9 ಪರಪ್ಪನ ಅಗ್ರಹಾರದ ಭ್ರಷ್ಟಾಚಾರ ಬಯಲು ಮಾಡಿತ್ತು. ಲಕ್ಷ ಲಕ್ಷ ಹಣ ಪಡೆದು ಒಳ್ಳೆಯ ಸೆಲ್​ಗಳ ವ್ಯವಸ್ಥೆ ಮಾಡುವುದು. ಕೈದಿಗಳ ಬಳಿಯಲ್ಲಿ ಹಣ ಪಡೆದು ಬೇಕಾದ ವ್ಯವಸ್ಥೆ ಮಾಡಿ ಕೊಡುವುದು. ಕೇಬಲ್​ಗೆ ಇಷ್ಟು, ಟಿವಿಗೆ ಇಷ್ಟು ಎಂದು ಹಣ ಫಿಕ್ಸ್ ಮಾಡುವುದು. ಎಣ್ಣೆ, ಮಾಂಸ,‌ ಗಾಂಜಾ ಸೇದೊಕ್ಕೆ ಇಂತಿಷ್ಟು ಎಂದು ಹಣ ಫಿಕ್ಸ್ ಮಾಡಿ ವಸೂಲಿ ನೆಡಸ್ತಿದ್ದ ಅಧಿಕಾರಿಗಳ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಟಿವಿ9 ಬಯಲು ಮಾಡಿತ್ತು.

ಪ್ರತೀ ಅಧಿಕಾರಿಯ ಕೆಲಸದಲ್ಲಿ‌ ರೊಟೇಶನ್ ಅನುಸರಿಸಲು ಫ್ಲ್ಯಾನ್..
ಪ್ರತೀ ಅಧಿಕಾರಿಯ ಕೆಲಸದಲ್ಲಿ‌ ರೊಟೇಶನ್ ಅನುಸರಿಸಲು ಫ್ಲ್ಯಾನ್ ಮಾಡಲಾಗಿದ್ದು, ಒಬ್ಬ ಅಧಿಕಾರಿ ಒಂದೇ ವಿಭಾಗಲ್ಲಿ‌ ನೆಲೆ ನಿಲ್ಲುವಂತಿಲ್ಲ. ಒಂದೇ ಕಡೆ ಇದ್ದರೆ ಭ್ರಷ್ಟಾಚಾರಕ್ಕೆ ಅನುಕೂಲ‌ವಾಗುವ ಸಾಧ್ಯತೆಯಿಂದಾಗಿ ಪ್ರತೀ ವಿಭಾಗದಲ್ಲೂ ಕೆಲಸ ನಿರ್ವಹಿಸುವುದನ್ನು ಕಡ್ಡಾಯ ಮಾಡಲಾಗಿದೆ.

ಎಂಟ್ರಿ ಹಾಗೂ ಎಕ್ಸಿಟ್​ನಲ್ಲಿ ಕ್ಯಾಮೆರಾ ಕಡ್ಡಾಯ‌..
ಕಳ್ಳಾಟಕ್ಕೆ ಬ್ರೇಕ್ ಹಾಕಲು ಕ್ಯಾಮೆರಾ ಅಳವಡಿಕೆ ಮಾಡಲಾಗುತ್ತಿದೆ. ಅಧಿಕಾರಿಗಳಿಗೂ ಬಾಡಿ ಕ್ಯಾಮೆರಾ ಕಡ್ಡಾಯಗೊಳಿಸಲು ಚಿಂತನೆ ನಡೆಸಲಾಗಿದೆ. ಇನ್ಮುಂದೆ ಜೈಲಿನ ಒಳಗೆ ಅಧಿಕಾರಿಗಳ ಅನಾವಶ್ಯಕ ಓಡಾಟ, ಸಂವಹನಕ್ಕೆ ಅವಕಾಶವಿಲ್ಲ. ಸೆಲ್ ಒಳಗಿನವರ ಜೊತೆಗಿನ ಮಾತುಕತೆ ಮುಂತಾದವುಗಳ ಬಗ್ಗೆ ಮಾಹಿತಿ ತಿಳಿಯಲು ಈಗಾಗಲೇ ಬಾಡಿ ಕ್ಯಾಮೆರಾಗಳಿಗೆ ಬೇಡಿಕೆ ಇಡಲಾಗಿದೆ.

ಸ್ಮಾರ್ಟ್ ವರ್ಕ್​ಗೆ ಹೆಚ್ಚಿನ ಆದ್ಯತೆ‌..
ವಿಡಿಯೋ ಕಾನ್ಫರೆನ್ಸ್ ಮೂಲಕ ಆರೋಪಿಗಳನ್ನ ಕೋರ್ಟಿಗೆ ಹಾಜರುಪಡಿಸಲು ಆದ್ಯತೆ ನೀಡಲಾಗಿದೆ. ಇದರಿಂದಾಗಿ ಖರ್ಚು ಉಳಿಯಲಿದೆ, ಕೆಲಸವೂ ಸುಲಭವಾಗಲಿದೆ. ಸಿಬ್ಬಂದಿಗಳ ಲಭ್ಯತೆಯೂ ಹೆಚ್ಚು ಇರಲಿದೆ. ಆದ್ದರಿಂದ ಹೆಚ್ಚು ವಿಡಿಯೋ ಕಾನ್ಫರೆನ್ಸ್​ಗೆ ಆದ್ಯತೆ ನೀಡಲು‌ ಚಿಂತನೆ ನಡೆಸಲಾಗಿದೆ.


ಸೆಲ್​ಗಳ ರೆಗ್ಯುಲರ್ ಚೆಕಪ್ ಕಾಡ್ಡಾಯ..
ಇನ್ಮುಂದೆ ಕೈದಿಗಳ ಸೆಲ್​ಗಳನ್ನು ಎಂದೋ ಒಮ್ಮೆ ದಿಢೀರ್ ಪರಿಶೀಲನೆ ಮಾಡುವಂತಿಲ್ಲ. ರೆಗ್ಯುಲರ್ ಚೆಕಪ್ ಕಡ್ಡಾಯ ಮಾಡಲಾಗಿದೆ. ಕೈದಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು. ಅವರ ಕುಂದು ಕೊರತೆ ಆಲಿಸಬೇಕು. ಸಮಸ್ಯೆಗಳನ್ನ ಬಗೆಹರಿಸಲು ಒತ್ತು ನೀಡಬೇಕು.

ಹೆಚ್ಚುವರಿ ಕೈದಿಗಳ ನಿರ್ವಹಣೆಗಾಗಿ ಹೊಸ ಕಟ್ಟಡ..
ಕೈದಿಗಳ ಸಂಖ್ಯೆಯಲ್ಲಿ ಏರಿಕೆ ಹಿನ್ನೆಲೆಯಿಂದಾಗಿ ಇರುವ ಕಟ್ಟಡದಲ್ಲಿ ಕೈದಿಗಳ‌ ಒತ್ತಡದ ಜೀವನಕ್ಕೆ ಬ್ರೇಕ್ ಬಿಳಲಿದೆ. ಹೊಸ ಕಟ್ಟಡ ನಿರ್ಮಿಸಲು ಚಿಂತನೆ ಮಾಡಲಾಗಿದೆ. ಮತ್ತಷ್ಟು ಕೈದಿಗಳಿಗೆ ಇರಲು ಪ್ರತ್ಯೇಕ ಸ್ಥಳ ಒದಗಿಸಲು‌ ಫ್ಲ್ಯಾನ್ ಮಾಡಲಾಗಿದೆ.

ಕಾರಾಗೃಹಕ್ಕೆ ಪ್ರತ್ಯೇಕ ಐಪಿಎಸ್ ಅಧಿಕಾರಿ?
ಇಷ್ಟು ದಿನ ಇಲ್ಲಿಂದಲೇ ಕಾರಾಗೃಹದ ಮೇಲೆ ಓರ್ವ ಐಪಿಎಸ್ ಅಧಿಕಾರಿ ಕಣ್ಣಿಡುತ್ತಿದ್ದರು. ಇನ್ಮುಂದೆ ಕಾರಾಗೃಹದ ಮೇಲೆ ನಿಗವಿಡಲು ಪ್ರತ್ಯೇಕ ಐಪಿಎಸ್ ಅಧಿಕಾರಿ ನೇಮಕಕ್ಕೆ ಚಿಂತನೆ ಮಾಡಲಾಗಿದೆ. ಪ್ರತ್ಯೇಕ ಐಪಿಎಸ್ ಅಧಿಕಾರಿಯಿಂದ ಮೇಲ್ವಿಚಾರಣೆಗೆ ರಾಜ್ಯ ಸರ್ಕಾರದಿಂದ ಫ್ಲ್ಯಾನ್ ಮಾಡಲಾಗಿದೆ.

ಬೆಳಗಾವಿಯಲ್ಲೂ ಭ್ರಷ್ಟಾಚಾರಿಗಳಿಗೆ ಬಿಸಿ..
ಬೆಂಗಳೂರು ಮಾತ್ರವಲ್ಲ ಬೆಳಗಾವಿಯಲ್ಲೂ ಭ್ರಷ್ಟಾಚಾರಿಗಳಿಗೆ ಬಿಸಿ ತಟ್ಟಿದೆ. ಬೆಂಗಳೂರು, ಬೆಳಗಾವಿ ಸೇರಿದಂತೆ 6 ಜನ ಜೈಲಧಿಕಾರಿಗಳ ಸಸ್ಪೆಂಡ್ ಮಾಡಲಾಗಿದೆ. ಬೆಂಗಳೂರಿನ ಜೈಲರ್ ಪಟ್ಟಣಶೆಟ್ಟಿ, ಮುಖ್ಯ ವಾರ್ಡರ್ ತುಗದಾಳಿ, ವಾರ್ಡರ್ ಅಜಯ್, ಸಹಾಯಕ ಜೈಲರ್ ಬಿ.ಎಂ ನವಿ ಸಸ್ಪೆಂಡ್ ಆಗಿರುವ ಅಧಿಕಾರಿಗಳಾಗಿದ್ದಾರೆ. ಬೆಳಗಾವಿಯಲ್ಲೂ ಇಬ್ಬರು ಅಧಿಕಾರಿಗಳಿಗೆ ಶಾಕ್ ನೀಡಲಾಗಿದೆ. ಹಿಂಡಲಗಾ ಜೈಲಿನ ಇಬ್ಬರು ಜೈಲಧಿಕಾರಿಗಳ ಸಸ್ಪೆಂಡ್ ಮಾಡಲಾಗಿದೆ. ಬೆಳಗಾವಿಯ ವಿ.ಯು ಕಿಲಾರಿ , ಎ.ಯು ಅಜ್ಮಿ ಸಸ್ಪೆಂಡ್ ಆಗಿರುವ ಅಧಿಕಾರಿಗಳಾಗಿದ್ದಾರೆ.

Hindalga Central Jail
90% ಪಾಲು ಪಡೆದುಕೊಳ್ತಿದ್ದ ಕಾರಗೃಹ ಸಿಬ್ಬಂದಿ..
ಭ್ರಷ್ಟಾಚಾರದ ಬಗ್ಗೆ ತನಿಖೆಗೆ ಕಾರಾಗೃಹ ಇಲಾಖೆ ಆದೇಶ ಹೊರಡಿಸಿದೆ. ಇಲಾಖಾ ತನಿಖೆಗೆ ಅಲೋಕ್ ಮೋಹನ್‌ ಆದೇಶಿಸಿದ್ದಾರೆ. ಈ ಹಿಂದೆ ಚೀಫ್ ಸೂಪರಿಂಟೆಂಡೆಂಟ್ ನೇತೃತ್ವದಲ್ಲಿ ವರದಿಗೆ ಆದೇಶವಾಗಿತ್ತು.

ಅಕ್ರಮಗಳಿಗೆ ಸಾಥ್ ನೀಡ್ತಿದ್ದ ಜೈಲರ್,ವಾರ್ಡನ್​ಗಳು..
ಒಂದು ಜೈಲಿನ ಸಂಪೂರ್ಣ ಮೇಲುಸ್ತುವಾರಿ ಜೈಲರ್ ಬಳಿ‌ ಇರುತ್ತದೆ. ಜೈಲಿನ ಆಡಳಿತ, ಭದ್ರತೆಯನ್ನ ನೋಡಿಕೊಳ್ಳುವವನು ಜೈಲರ್. ನಿಗದಿತ ವಾರ್ಡ್​ಗಳಲ್ಲಿ ಕೈದಿಗಳ‌ ಬೇಕು‌ ಬೇಡಗಳನ್ನ ಆಲಿಸುವವರು ವಾರ್ಡನ್. ಆದರೆ ಜೈಲರ್​ಗಳ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಟಿವಿ9 ಬಯಲಿಗೆಳೆದಿತ್ತು. ಬರಿ ವರದಿ, ಭ್ರಷ್ಟರ ಸಸ್ಪೆನ್ಷನ್ ನಿಮ್ಮ ಟಿವಿ9 ಉದ್ದೇಶವಾಗಿರಲಿಲ್ಲ. ಬದಲಿಗೆ ಜೈಲು ಎಂದರೆ ಕೈದಿಗಳ ಮನಃಪರಿವರ್ತನಾ ಕೇಂದ್ರವಾಗಬೇಕು. ಅಪರಾಧ ಹಿನ್ನೆಲೆಯುಳ್ಳವರಲ್ಲಿ ಬದಲಾವಣೆಗಳಾಬೇಕು. ತಪ್ಪಿತಸ್ಥರಿಗೆ ಶಿಕ್ಷಿಸಲ್ಪಡುವ ಜೈಲಿನಲ್ಲಿ ಅಕ್ರಮಗಳು ಕೊನೆಗಾಣಬೇಕು. ಸರ್ಕಾರ ಇತ್ತ ಗಮನ ಹರಿಸಬೇಕು ಎನ್ನುವುದು ನಮ್ಮ ಉದ್ದೇಶವಾಗಿತ್ತು. ನಮ್ಮ ಉದ್ದೇಶಕ್ಕೆ ಅತೀ ಕಡಿಮೆ ಅವಧಿಯಲ್ಲಿ ಯಶಸ್ಸು ಸಿಕ್ಕಿದೆ.