ಟಿವಿ9 ಕನ್ನಡ ಡಿಜಿಟಲ್ ಲೈವ್ ಬ್ಲಾಗ್ 15-01-2021
ಜಗತ್ತಿನೆಲ್ಲೆಡೆಯ ಸುದ್ದಿ ಕ್ಷಣಾರ್ಧದಲ್ಲಿ ಹರಿದು ಬಂದು ಅಂಗೈ ಸೇರುವಾಗ ಯಾವುದರತ್ತ ಕಣ್ಣು ಹಾಯಿಸಬೇಕು ಎಂಬ ಗೊಂದಲ ಸಹಜ.. ಎಷ್ಟೋ ಬಾರಿ ಸುದ್ದಿಯ ಹೆಸರಿನಲ್ಲಿ ಅಸಂಗತ ಸಂಗತಿಗಳೂ ತೇಲಿ ಬರುತ್ತವೆ. ಅವುಗಳನ್ನು ಸೋಸುವುದೇ ಹರಸಾಹಸ. ನಮ್ಮ ಓದುಗರನ್ನು ಇಂತಹ ಗೊಂದಲಗಳಿಂದ ಪಾರು ಮಾಡಲೆಂದೇ ಪ್ರತಿನಿತ್ಯ Live Blog ಮೂಲಕ ಆಯಾ ಕ್ಷಣದ ಮುಖ್ಯಾಂಶಗಳನ್ನು ನೀಡುವ ಪ್ರಯತ್ನ ಮಾಡುತ್ತಿದ್ದೇವೆ. ಇದು ನಿಮಗಿಷ್ಟವಾಗಿದೆ ಎನ್ನುವ ನಂಬಿಕೆ ನಮ್ಮದು.. ಬನ್ನಿ ಇಂದಿನ ಸುದ್ದಿಯ ಹರಿವನ್ನು ನೋಡೋಣ. ಸುದ್ದಿಯ ಸಂಪೂರ್ಣ ವಿವರ ವೆಬ್ಸೈಟ್ನ ವಿವಿಧ ವಿಭಾಗಗಳಲ್ಲಿ ಲಭ್ಯವಿರುತ್ತವೆ. ಓದಲು ಮರೆಯದಿರಿ.
LIVE NEWS & UPDATES
-
ಬೆಂಗಳೂರಿನಲ್ಲಿ ಫೆಬ್ರವರಿ 3ರಿಂದ ಫೆ.5ರವರೆಗೆ ಏರ್‌ಶೋ
ಬೆಂಗಳೂರಿನಲ್ಲಿ ಫೆಬ್ರವರಿ 3ರಿಂದ ಫೆ.5ರವರೆಗೆ ಏರ್‌ಶೋ ನಡೆಯಲಿದೆ. ಈ ವೇಳೆ ಮಾಂಸ ಮಾರಾಟದ ಮೇಲೆ ನಿಷೇಧ ಹೇರಿ ಬಿಬಿಎಂಪಿ ಆದೇಶ ಹೊರಡಿಸಿದೆ. ಏರ್‌ಶೋ ನಡೆಯುವ 10 ಕಿ.ಮೀ ವ್ಯಾಪ್ತಿಯಲ್ಲಿ ಮಾಂಸ ಮಾರಾಟ ನಿಷೇಧ ಇರಲಿದೆ.
-
ಕಮಲ್ ಹಾಸನ್ ಪಕ್ಷಕ್ಕೆ ಟಾರ್ಚ್ ಲೈಟ್ ಚಿಹ್ನೆ ನೀಡಿದ ಚುನಾವಣಾ ಆಯೋಗ
ಕಮಲ್ ಹಾಸನ್ ಪಕ್ಷಕ್ಕೆ ಚುನಾವಣಾ ಆಯೋಗ ಟಾರ್ಚ್ ಲೈಟ್ ಚಿಹ್ನೆ ನೀಡಿದೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಟಾರ್ಚ್ ಲೈಟ್ ಚಿಹ್ನೆಯೊಂದಿಗೆ ಅವರು ಸ್ಪರ್ಧಿಸಬಹುದಾಗಿದೆ. ಟಾರ್ಚ್ ಲೈಟ್ ಚಿಹ್ನೆಗಾಗಿ ಕಮಲ್ ಹಾಸನ್ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದರು.
-
ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಬಿಜೆಪಿ ಸಿದ್ಧತೆ
ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಬಿಜೆಪಿ ಸಿದ್ಧತೆ ನಡೆಸುತ್ತಿದ್ದು, ಈ ನಿಟ್ಟಿನಲ್ಲಿ ಜನವರಿ 23ರಂದು ಪಶ್ಚಿಮ ಬಂಗಾಳಕ್ಕೆ ಪ್ರಧಾನಿ ಮೋದಿ ಭೇಟಿ ನೀಡಲಿದ್ದಾರೆ.
ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಸಂಸದ ಜಿ.ಎಂ.ಸಿದ್ದೇಶ್ವರ್
ಧಾರವಾಡ ತಾಲೂಕಿನ ಇಟ್ಟಿಗಟ್ಟಿ ಬಳಿ ನಡೆದ ಅಪಘಾತದಲ್ಲಿ ಮೃತಪಟ್ಟಿರುವ ಕುಟುಂಬಗಳಿಗೆ ಸಂಸದ ಜಿ.ಎಂ.ಸಿದ್ದೇಶ್ವರ್ ಭೇಟಿ ನೀಡಿದ್ದು, ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.
ಮೀಸಲಾತಿ ಸಿಗುವವರೆಗೂ ನಮ್ಮ ಹೋರಾಟ ನಿಲ್ಲಲ್ಲ: ನಿರಂಜನಾನಂದಪುರಿ ಸ್ವಾಮೀಜಿ
ಕುರುಬರಿಗೆ ಎಸ್‌ಟಿ ಮೀಸಲಾತಿಗಾಗಿ ಹೋರಾಟ ವಿಚಾರವಾಗಿ ಫೆಬ್ರವರಿ 7ರಂದು ಬೃಹತ್ ಸಮಾವೇಶ ಮಾಡಲಾಗುವುದು. ನಮಗೆ ಮೀಸಲಾತಿ ಸಿಗುತ್ತೋ, ಇಲ್ಲವೋ ಗೊತ್ತಿಲ್ಲ. ಆದರೆ ಮೀಸಲಾತಿ ಸಿಗುವವರೆಗೂ ನಮ್ಮ ಹೋರಾಟ ನಿಲ್ಲಲ್ಲ ಎಂದು ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಕಾಗಿನೆಲೆಯಲ್ಲಿ ನಿರಂಜನಾನಂದಪುರಿ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ.
ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಹೆಚ್.ನಾಗೇಶ್ ಪದಗ್ರಹಣ
ಅಬಕಾರ ಇಲಾಖೆ ಸಚಿವರಾಗಿದ್ದ ಹೆಚ್.ನಾಗೇಶ್ ಸಂಪುಟ ವಿಸ್ತರಣೆ ವೇಳೆ ಸ್ಥಾನಕ್ಕೆ ರಾಜಿನಾಮೆ ನೀಡಿದ್ದು, ಸದ್ಯ ಹೆಚ್. ನಾಗೇಶ್ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ.
ಭಾರತೀಯ ಕ್ರಿಕೆಟಿಗರ ವಿರುದ್ಧ ಮತ್ತೆ ಜನಾಂಗೀಯ ನಿಂದನೆ
ಬ್ರಿಸ್ಬೇನ್ ಟೆಸ್ಟ್ ಪಂದ್ಯದ ವೇಳೆ ಅಭಿಮಾನಿಗಳು ಟೀಮ್ ಇಂಡಿಯಾದ ವೇಗಿ ಮೊಹಮ್ಮದ್ ಸಿರಾಜ್ನನ್ನು ಒಂದು ಹುಳ ಎಂದು ನಿಂದನೆ ಮಾಡಿದ್ದಾರೆ. 3ನೇ ಟೆಸ್ಟ್ ಪಂದ್ಯದಲ್ಲೂ ಸಿರಾಜ್ನನ್ನು ಅಭಿಮಾನಿಗಳು ನಿಂದಿಸಿದ್ದು, 4ನೇ ಟೆಸ್ಟ್ ಪಂದ್ಯದಲ್ಲಿಯೂ ಆಸೀಸ್ ಅಭಿಮಾನಿಗಳಿಂದ ಮೊಹಮ್ಮದ್ ನಿಂದನೆಗೆ ಒಳಗಾಗಿದ್ದಾರೆ.
ರೈತ ಸಂಘಟನೆಗಳೊಂದಿಗಿನ ಇಂದಿನ ಮಾತುಕತೆ ನಿರ್ಣಾಯಕವಾಗಿರಲಿಲ್ಲ: ನರೇಂದ್ರ ಸಿಂಗ್ ತೋಮರ್
ರೈತ ಸಂಘಟನೆಗಳೊಂದಿಗಿನ ಇಂದಿನ ಮಾತುಕತೆ ನಿರ್ಣಾಯಕವಾಗಿರಲಿಲ್ಲ. ನಾವು ಮತ್ತೆ ಜನವರಿ 19 ರಂದು ಮಾತುಕತೆ ನಡೆಸುತ್ತೇವೆ. ಮಾತುಕತೆಯ ಮೂಲಕ ಪರಿಹಾರವನ್ನು ನೀಡಲು ನಾವು ಸಕಾರಾತ್ಮಕವಾಗಿದ್ದೇವೆ.ರೈತರು ಪ್ರತಿಭಟನೆ ನಡೆಸುತ್ತಿರುವ ಬಗ್ಗೆ ಸರ್ಕಾರಕ್ಕೂ ಕಳವಳವಿದೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ.
ನಾವು ಸುಪ್ರೀಂ ಕೋರ್ಟ್ ರಚಿಸಿದ ಸಮಿತಿಗೆ ಹೋಗುವುದಿಲ್ಲ: ರಾಕೇಶ್ ಟಿಕೈಟ್
ಮೂರು ಕೃಷಿ ಕಾನೂನುಗಳು ಮತ್ತು ಎಂಎಸ್ಪಿ ಖಾತರಿಯನ್ನು ರದ್ದುಗೊಳಿಸುವ ನಮ್ಮ ಬೇಡಿಕೆಗಳು ಇನ್ನೂ ಹಾಗೆ ಉಳಿದಿವೆ. ನಾವು ಸುಪ್ರೀಂ ಕೋರ್ಟ್ ರಚಿಸಿದ ಸಮಿತಿಗೆ ಹೋಗುವುದಿಲ್ಲ. ಕೇಂದ್ರ ಸರ್ಕಾರದೊಂದಿಗೆ ಮಾತ್ರ ನಾವು ಮಾತನಾಡುತ್ತೇವೆ ಎಂದು ಭಾರತೀಯ ಕಿಸಾನ್ ಯೂನಿಯನ್ ವಕ್ತಾರ ರಾಕೇಶ್ ಟಿಕೈಟ್ ಹೇಳಿದ್ದಾರೆ.
ತಾಲೂಕು ಆಸ್ಪತ್ರೆಗಳಲ್ಲಿ ಮಾತ್ರ ಲಸಿಕೆ ನೀಡಲಾಗುತ್ತದೆ: ಡಾ.ಮಂಚೇಗೌಡ
ದೇಶಾದ್ಯಂತ ನಾಳೆ ಕೊರೊನಾ ಲಸಿಕೆ ನೀಡಿಕೆ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯಲ್ಲಿ ನಾಳೆ 8 ಕೇಂದ್ರಗಳಲ್ಲಿ ವ್ಯಾಕ್ಸಿನೇಷನ್ ಮಾಡಿದ್ದು, 8 ಕೇಂದ್ರಗಳಲ್ಲಿ 800 ಜನರಿಗೆ ಲಸಿಕೆ ಹಾಕಲಾಗುವುದು. ತಾಲೂಕು ಆಸ್ಪತ್ರೆಗಳಲ್ಲಿ ಮಾತ್ರ ಲಸಿಕೆ ನೀಡಲಾಗುತ್ತಿದ್ದು, ಸೋಮವಾರದ ಬಳಿಕ 72 ಕೇಂದ್ರಗಳಲ್ಲಿ ಲಸಿಕೆ ನೀಡುತ್ತೇವೆ ಎಂದು ಮಂಡ್ಯ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಂಚೇಗೌಡ ಹೇಳಿದ್ದಾರೆ.
ಬೆಂಗಳೂರಿನ ಏರ್ ಶೊ ಗುರುತರ ಸ್ಥಾನ ಪಡೆದುಕೊಂಡಿದೆ: ಬಿ.ಎಸ್ ಯಡಿಯೂರಪ್ಪ
13ನೇ ಆವೃತ್ತಿಯ ಏರೋ ಇಂಡಿಯಾಗೆ ಸಂಬಂಧಿಸಿದಂತೆ ಇಂದು ಸಭೆ ನಡೆಸಿದ್ದೇವೆ. ಈ ಅವಕಾಶವನ್ನು ಬೆಂಗಳೂರಿಗೆ ನೀಡಿರುವುದಕ್ಕೆ ಕೇಂದ್ರ ಸರ್ಕಾರಕ್ಕೆ ಧನ್ಯವಾದ ತಿಳಿಸುತ್ತೇನೆ. 1996ರಿಂದ ಬೆಂಗಳೂರಿನಲ್ಲಿ ಏರ್ ಶೋ ನಡೆಯುತ್ತಿದೆ. ಈ ಏರ್ ಇಂಡಿಯಾ ಶೋಗೆ ರಾಜ್ಯ ಸರ್ಕಾರ ಎಲ್ಲಾ ರೀತಿಯ ಸಹಕಾರ ಕೊಡುತ್ತದೆ.ಕೊರೋನಾ ಸಂದರ್ಭದಲ್ಲಿ ಮುನ್ನಚ್ವರಿಕೆ ಕ್ರಮಗಳೊಂದಿಗೆ ಶೋ ನಡೆಸ್ತೇವೆ. ವೈಮಾನಿಕ ಕ್ಷೇತ್ರ ಮತ್ತು ರಕ್ಷಣಾ ವಲಯಕ್ಕೆ ಕರ್ನಾಟಕ ಹಾಗೂ ಬೆಂಗಳೂರಿನ ಕೊಡುಗೆ ಮಹತ್ತರವಾದದ್ದು. ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಚಾಚು ತಪ್ಪದೆ ಪಾಲಿಸಲು ಎಲ್ಲಾ ರೀತಿಯ ಕ್ರಮವನ್ನು ಮಾಡಲಾಗಿದೆ. ದೇಶ ವಿದೇಶಗಳಿಂದ ಏರ್ ಶೋಗೆ ಸಾಕಷ್ಟು ಅತಿಥಿಗಳು ಬರ್ತಾರೆ. ಅವರಿಗೆ ಎಲ್ಲಾ ರೀತಿಯ ಆತಿಥ್ಯ ಮತ್ತು ಸುರಕ್ಷತೆ ಒದಗಿಸಲು ಸಜ್ಜಾಗಿದ್ದೇವೆ. ಜಗತ್ತಿನ ಏರೋ ಇಂಡಿಯಾ ಪ್ರದರ್ಶನಗಳಲ್ಲಿ ಬೆಂಗಳೂರಿನ ಏರ್ ಶೊ ಗುರುತರ ಸ್ಥಾನ ಪಡೆದುಕೊಂಡಿದೆ. ಇದಕ್ಕಾಗಿ ರಾಜ್ಯ ಸರ್ಕಾರ ಈ ಬಾರಿಯ ಏರ್ ಶೊಗೆ 30 ಕೋಟಿ ರೂಪಾಯಿ ಖರ್ಚು ಮಾಡುತ್ತಿದೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.
ಮಂಡ್ಯದಲ್ಲಿ ಬ್ಯಾಡ್ ಮ್ಯಾನರ್ಸ್ ಸಿನಿಮಾ ಶೂಟಿಂಗ್ಗೆ ನಟ ದರ್ಶನ್ ಭೇಟಿ
ಮಂಡ್ಯದಲ್ಲಿ ಮೈ ಶುಗರ್ ಸಕ್ಕರೆ ಕಾರ್ಖಾನೆಯಲ್ಲಿ ನಡೆಯುತ್ತಿರುವ ಬ್ಯಾಡ್ ಮ್ಯಾನರ್ಸ್ ಸಿನಿಮಾದ ಮೊದಲ ದಿನದ ಶೂಟಿಂಗ್ ವಿಕ್ಷಿಸಲು ಸಂಸದೆ ಸುಮಲತಾ ಅಂಬರೀಶ್ ಹಾಗೂ ನಟ ದರ್ಶನ್ ಆಗಮಿಸಿದ್ದು, ಮಗ ಅಭಿಷೇಕ್ಗೆ ಸಂಸದೆ ಸುಮಲತಾ ಅಂಬರೀಶ್ ಶುಭಹಾರೈಸಿದ್ದಾರೆ.
ನೂತನ ಕೃಷಿ ಕಾಯ್ದೆ ವಿರೋಧಿಸಿ ಕಾಂಗ್ರೇಸ್ನಿಂದ ಪ್ರತಿಭಟನೆ
ಭೋಪಾಲ್ನಲ್ಲಿ ಕೇಂದ್ರ ಸರ್ಕಾರವು ಜಾರಿಗೆ ತಂದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ ನಡೆಸಿದೆ.
9ನೇ ಸುತ್ತಿನ ಸಭೆಯೂ ವಿಫಲ
ಇಂದು ದೆಹಲಿ ಪ್ರತಿಭಟನಾನಿರತ ರೈತರು ಮತ್ತು ಕೇಂದ್ರ ಸರ್ಕಾರದ ನಡುವೆ ಮೂರು ಕೃಷಿ ಕಾಯ್ದೆಯ ಕುರಿತು 9ನೇ ಸುತ್ತಿನ ಮಾತುಕತೆ ನಡೆದಿದ್ದು, ಈ ಸಭೆಯೂ ಕೂಡ ವಿಫಲವಾಗಿದೆ. ಸಭೆಯಲ್ಲಿ ಯಾವುದೇ ಒಮ್ಮತದ ನಿರ್ಧಾರಕ್ಕೆ ಬರದ ಹಿನ್ನಲೆಯಲ್ಲಿ ಮುಂದಿನ ಸುತ್ತಿನ ಸಭೆಯನ್ನು ಜನವರಿ 19 ಕ್ಕೆ ನಡೆಸಲಾಗುತ್ತದೆ.
ವೈಮಾನಿಕ ಕ್ಷೇತ್ರದಲ್ಲಿ ಬೆಂಗಳೂರಿನ ಕೊಡುಗೆ ಮಹತ್ವದ್ದಾಗಿದೆ: ರಾಜನಾಥ್ ಸಿಂಗ್
ಏರೋ ಇಂಡಿಯಾಗೆ ಮಾಡಿಕೊಂಡಿರುವ ಸಿದ್ಧತೆ ತೃಪ್ತಿ ತಂದಿದ್ದು, ವೈಮಾನಿಕ ಕ್ಷೇತ್ರದಲ್ಲಿ ಬೆಂಗಳೂರಿನ ಕೊಡುಗೆ ಮಹತ್ವದ್ದಾಗಿದೆ. ಬೆಂಗಳೂರಿಗೆ ಏರೋ ಇಂಡಿಯಾ ನಡೆಸಿ ಸಾಕಷ್ಟು ಅನುಭವವಿದೆ. ಇಷ್ಟು ಅನುಭವ ಬೇರೆ ಯಾವ ನಗರಗಳಿಗೂ ಇಲ್ಲ. ರಕ್ಷಣಾ ಸಚಿವಾಲಯ ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಂಡಿದೆ. ಕೊವಿಡ್ ಕುರಿತಾದ ಸುರಕ್ಷತಾ ಕ್ರಮಗಳನ್ನು ಕೂಡ ತೆಗೆದುಕೊಳ್ಳಲಾಗುತ್ತದೆ. ಕಳೆದ ಬಾರಿ ನಡೆದ ದುರ್ಘಟನೆ ಮರುಕಳಿಸದಂತೆ ಕ್ರಮವಹಿಸ್ತೇವೆ ಎಂದು ಬೆಂಗಳೂರಿನಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಸರ್ಕಾರ ಜಾರಿಗೆ ತಂದ ಬದಲಾವಣೆಗಳ ಬಗ್ಗೆ ಮಾಹಿತಿ ನೀಡಿದ ರಾಜನಾಥ್ ಸಿಂಗ್
ಆತ್ಮ ನಿರ್ಭರ ಭಾರತ ಅಭಿಯಾನದ ಅಡಿಯಲ್ಲಿ ಸರ್ಕಾರವು ರಕ್ಷಣಾ ಉತ್ಪಾದನೆ ಮತ್ತು ರಫ್ತು ಉತ್ತೇಜನ ನೀತಿಯ (ಡಿಪಿಇಪಿಪಿ) ಬದಲಾವಣೆ ಅಥವಾ ಹೊಸ ರಕ್ಷಣಾ ಸ್ವಾಧೀನ ಕಾರ್ಯವಿಧಾನದ (ಡಿಎಪಿ) ಸೂತ್ರೀಕರಣವನ್ನು ಮಾಡಿದ್ದು, ಬಹಳಷ್ಟು ಬದಲಾವಣೆಗಳನ್ನು ಮಾಡಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 4 ನ್ನು ಚತುಷ್ಪಥ ರಸ್ತೆ ಮಾಡಲು ನಿರ್ಧಾರ
ಧಾರವಾಡದ ಇಟ್ಟಿಗಟ್ಟಿ ಬಳಿ ಇಂದು ನಡೆದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆಯ ರಾಷ್ಟ್ರೀಯ ಹೆದ್ದಾರಿ 4 ನ್ನು ಚತುಷ್ಪಥ ರಸ್ತೆ ಮಾಡವ ಯೋಜನೆಗೆ 1200 ಕೋಟಿ ರೂಪಾಯಿ ನೀಡಲು ಇಂದು ನಿತಿನ್ ಗಡ್ಕರಿ ಅವರಿಂದಲೇ ಘೋಷಣೆ ಮಾಡಿಸಲಾಗಿದೆ ಎಂದು ಧಾರವಾಡ ತಾಲೂಕಿನ ಗರಗ್ ಗ್ರಾಮದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.
ನನಗೆ ಯಾರ ಸಹಾಯ ಬೇಕಾಗಿಲ್ಲ: ಡಾ.ಕೆ.ಸುಧಾಕರ್
ನಮ್ಮನ್ನು ರಕ್ಷಣೆ ಮಾಡಲು ಸಚಿವ ಸಿ.ಪಿ.ಯೋಗೇಶ್ವರ್ 9 ಕೋಟಿ ಖರ್ಚು ಮಾಡಿದ್ದಾರೆ ಎಂಬ ರಮೇಶ್ ಜಾರಕಿಹೊಳಿ ಹೇಳಿಕೆಗೆ ಕೆ.ಸುಧಾಕರ್ ಪ್ರತಿಕ್ರಿಯೆ ನೀಡಿದ್ದು, ಯಾರ ಸಹಕಾರವೂ ಇಲ್ಲದೆ ನಾನು 3 ಬಾರಿ ಗೆದ್ದಿದ್ದೇನೆ. ನನಗೆ ಯಾರ ಸಹಾಯ ಬೇಕಾಗಿಲ್ಲ ಎಂದು ವಿಕಾಸಸೌಧದಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ವಾಗ್ದಾಳಿ ನಡೆಸಿದ್ದಾರೆ.
ಕೊವಿಶೀಲ್ಡ್ ಲಸಿಕೆಗೆ ನೇಪಾಳದಲ್ಲಿ ಗ್ರೀನ್‌ಸಿಗ್ನಲ್
ಕೊವಿಶೀಲ್ಡ್ ಲಸಿಕೆ ಬಳಕೆಗೆ ನೇಪಾಳದಲ್ಲಿ ಸಮ್ಮತಿಸಿದ್ದು,ಲಿಸಿಕೆಯ ತುರ್ತು ಬಳಕೆಗೆ ನೇಪಾಳ ಸರ್ಕಾರ ಒಪ್ಪಿಗೆ ನೀಡಿದೆ.
ನನಗೆ ಗೊತ್ತಿರುವುದು ಕೊವಾಕ್ಸಿನ್, ಕೊವಿಶಿಲ್ಡ್ ಮಾತ್ರ: ಡಾ. ಕೆ. ಸುಧಾಕರ್
ನನಗೆ ಯಾವ ಸಿಡಿ ಬಗ್ಗೆಯೂ ಗೊತ್ತಿಲ್ಲ. ಯಾರು ಸಿಡಿ ಹೇಳಿದ್ದಾರೋ ಅವರನ್ನೇ ಕೇಳಿ, ನನಗೆ ಗೊತ್ತಿರುವುದು ಕೊವಾಕ್ಸಿನ್, ಕೊವಿಶಿಲ್ಡ್ ಮಾತ್ರ. ವಿಶ್ವನಾಥ್ ತುಂಬಾ ದೊಡ್ಡವರು. ಅವರ ಮಾತುಗಳಿಗೆ ಪ್ರತಿಕ್ರಿಯೆ ಕೊಡುವಷ್ಟು ದೊಡ್ಡ ವ್ಯಕ್ತಿ ನಾನಲ್ಲ ಎಂದು ವಿಕಾಸಸೌಧದಲ್ಲಿ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ.
ನಾಳಿನ ಲಸಿಕೆ ವಿತರಣೆ ಬಗ್ಗೆ ಮಾಹಿತಿ ನೀಡಿದ ಡಾ.ಕೆ.ಸುಧಾಕರ್
ಆರೋಗ್ಯ ಇಲಾಖೆಯ ಡಿ ಗ್ರೂಪ್ ನೌಕರರು, ಸಫಾಯಿ ಕರ್ಮಚಾರಿಗಳಿಗೆ ನಾಳೆ ಸಾಂಕೇತಿಕವಾಗಿ ಮೊದಲು ಲಸಿಕೆ ನೀಡಲಾಗುತ್ತದೆ ವಿಕಾಸಸೌಧದಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿಕೆ ನೀಡಿದ್ದಾರೆ.
ಅಮಿತ್ ಶಾ ಭದ್ರಾವತಿಗೆ ಹೋಗಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ: ಅಶ್ವಥ್ ನಾರಾಯಣ
ನಾಳೆ ರಾಜ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸುವ ಹಿನ್ನೆಲೆಯಲ್ಲಿ ಎಚ್ಎಎಲ್ ಏರ್ಪೋರ್ಟ್ನಲ್ಲಿ ಸಚಿವ ಅರವಿಂದ ಲಿಂಬಾವಳಿ ಮತ್ತು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವಥ್ ನಾರಾಯಣ ಸುದ್ದಿಗೋಷ್ಠಿ ನಡೆಸಿದ್ದು, ನಾಳೆ ಬೆಳಗ್ಗೆ 11 ಕ್ಕೆ ಎಚ್ಎಎಲ್ ಏರ್ಪೋರ್ಟ್ ನಲ್ಲಿ ಅಮಿತ್ ಶಾ ಬಂದಿಳಿಯಲಿದ್ದಾರೆ. ಅಮಿತ್ ಶಾರನ್ನು ಸಿಎಂ ಬಿ.ಎಸ್ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಇನ್ನಿತರ ಸಚಿವರು ಸ್ವಾಗತಿಸುತ್ತಾರೆ. ನಂತರ ಅಮಿತ್ ಶಾ ಭದ್ರಾವತಿಗೆ ಹೋಗಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಬಳಿಕ ಸಂಜೆ 4 ಗಂಟೆಗೆ ಮತ್ತೆ ಭದ್ರಾವತಿಯಿಂದ ಬೆಂಗಳೂರಿಗೆ ವಾಪಸ್ ಆಗುತ್ತಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವಥ್ ನಾರಾಯಣ ತಿಳಿಸಿದ್ದಾರೆ.
ಬಜೆಟ್ ಅಧಿವೇಶನಕ್ಕೆ ಹಾಜರಾಗುವಂತೆ ಸೂಚನೆ
ಜನವರಿ 29ರಿಂದ ಕೇಂದ್ರ ಬಜೆಟ್ ಅಧಿವೇಶನ ಹಿನ್ನೆಲೆಯಲ್ಲಿ ಈ ಅಧಿವೇಶನಕ್ಕೆ ಹಾಜರಾಗುವಂತೆ ಬಿಜೆಪಿ ಹೈಕಮಮಾಂಡ್ ಸೂಚನೆ ನೀಡಿದ್ದು, ಲೋಕಸಭೆ, ರಾಜ್ಯಸಭೆಯ ಬಿಜೆಪಿ ಸದಸ್ಯರಿಗೆ ಸೂಚಿಸಲಾಗಿದೆ.
ಯಾವುದೇ ನಿರ್ಧಾರಕ್ಕೆ ಬಂದಿಲ್ಲ: ನರೇಂದ್ರ ಸಿಂಗ್ ತೋಮರ್
ಕೇಂದ್ರ ಸರ್ಕಾರ ಮತ್ತು ರೈತ ಮುಖಂಡರ ನಡುವೆ ಮೂರು ಕೃಷಿ ಕಾಯ್ದೆಗಳ ಕುರಿತ 9ನೇ ಸುತ್ತಿನ ಮಾತುಕತೆ ನಡೆಯುತ್ತಿದೆ. ಈಗ ಸದ್ಯ ಊಟದ ವಿರಾಮ ತೆಗೆದುಕೊಂಡಿದ್ದು ಯಾವುದೇ ನಿರ್ಧಾರಕ್ಕೆ ಬಂದಿಲ್ಲ ಕನಿಷ್ಟ ಬೆಂಬಲ ಬೆಲೆ ಕಾಯ್ದೆಯ ಕುರಿತು ವಿರಾಮದ ನಂತರ ಚರ್ಚಿಸುತ್ತೇವೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ತಿಳಿಸಿದ್ದಾರೆ.
ನನ್ನ ಬಗ್ಗೆ ಭಾರಿ ಅಪಪ್ರಚಾರ ಕೂಡ ನಡೆಯುತ್ತಿತ್ತು: ಎಸ್.ಅಂಗಾರ
ನನಗೆ ಸಚಿವ ಸ್ಥಾನ ಕೊಡಿಸುವುದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲುಗೆ ತುಂಬಾ ಸಾವಾಲಾಗಿತ್ತು, ನನ್ನ ಬಗ್ಗೆ ಭಾರಿ ಅಪಪ್ರಚಾರ ಕೂಡ ನಡೆಯುತ್ತಿತ್ತು. ಪಕ್ಷ ಬದಲಾವಣೆ ಮಾಡುತ್ತೇನೆಂದು ಅನೇಕರು ಭಾವಿಸಿದ್ದರು. ನನ್ನ ಮೇಲೆ ವಿಶ್ವಾಸವಿಟ್ಟ ಎಲ್ಲರ ಭರವಸೆ ಉಳಿಸುತ್ತೇನೆ ಎಂದು ಮಂಗಳೂರಿನಲ್ಲಿ ನೂತನ ಸಚಿವ ಎಸ್.ಅಂಗಾರ ಹೇಳಿದ್ದಾರೆ.
ಧಾರವಾಡದ ಅಪಘಾತಕ್ಕೆ ಸಂತಾಪ ಸೂಚಿಸಿದ ಬಿ.ಎಸ್. ಯಡಿಯೂರಪ್ಪ
ಧಾರವಾಡ ತಾಲೂಕಿನ ಇಟ್ಟಿಗಟ್ಟಿ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ 11 ಜನರು ಮೃತಪಟ್ಟ ಹಿನ್ನೆಲೆಯಲ್ಲಿ ಘಟನೆ ಬಗ್ಗೆ ತನಿಖೆ ನಡೆಸಲು ಅಧಿಕಾರಿಗಳಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೂಚಿಸಿದ್ದು, ಅಪಘಾತದಲ್ಲಿ ಮೃತಪಟ್ಟವರ ಆತ್ಮಕ್ಕೆ ಶಾಂತಿ ಸಿಗಲಿ, ಗಾಯಗೊಂಡವರು ಶೀಘ್ರ ಗುಣಮುಖರಾಗಲಿ ಎಂದು ಬಿಎಸ್ವೈ ಟ್ವೀಟ್ ಮಾಡಿದ್ದಾರೆ.
ವಿಧಾನಸಭೆಗೆ ಭೇಟಿ ನೀಡಿದ ರಾಜನಾಥ್ ಸಿಂಗ್
ಎರ್ ಶೋ ಸಭೆ ಹಿನ್ನೆಲೆಯಲ್ಲಿ ವಿಧಾನಸೌಧಕ್ಕೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಆಗಮಿಸಿದ್ದು, ರಾಜನಾಥ್ ಸಿಂಗ್ ಅವರನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೂಗುಚ್ಛ ನೀಡಿ ಸ್ವಾಗತಿಸಿದ್ದಾರೆ. ವಿಧಾನಸೌಧದ ಮೂರನೇ ಮಹಡಿಯ ಸಮ್ಮೇಳನ ಸಭಾಂಗಣದಲ್ಲಿ ಸಭೆ ನಡೆಯಲಿದ್ದು, ಗೋವಿಂದ ಕಾರಜೋಳ ಬಿಎಸ್ವೈಗೆ ಸಾಥ್ ನೀಡಲಿದ್ದಾರೆ.
ಬೋಧನಾ ಶುಲ್ಕ ಮಾತ್ರ ಪಡೆಯಲು ನಾವು ಸಿದ್ಧರಿದ್ದೇವೆ: ಲೋಕೇಶ್ ತಾಳಿಕಟ್ಟೆ
ಶಿಕ್ಷಣ ಸಚಿವರ ಆದೇಶದ ಮೇರೆಗೆ ಪೋಷಕರು, ಖಾಸಗಿ ಶಾಲೆಗಳ ಮುಖ್ಯಸ್ಥರ ಜತೆ ಸಭೆ ನಡೆಸಿದ್ದು, ಸಭೆಯಲ್ಲಿ ನಾವು ನಮ್ಮ ಸಮಸ್ಯೆಗಳನ್ನು ತಿಳಿಸಿದ್ದೇವೆ. ನಮ್ಮ ಸಲಹೆಗೆ ಅನೇಕ ಪೋಷಕರು ಒಪ್ಪಿಗೆಯನ್ನು ಸೂಚಿಸಿದ್ದಾರೆ. ಶಾಲೆಯ ಶುಲ್ಕದ ವಿಚಾರವಾಗಿ ನಿಯಂತ್ರಿತ ಸಮಿತಿ ಮಾಡದೇ ಇರುವುದು ಸರ್ಕಾರದ ತಪ್ಪು. ಬೋಧನಾ ಶುಲ್ಕ ಮಾತ್ರ ಪಡೆಯಲು ನಾವು ಸಿದ್ಧರಿದ್ದೇವೆ ಎಂದು ರುಪ್ಸಾ ರಾಜ್ಯಾಧ್ಯಕ್ಷ ಲೋಕೇಶ್ ತಾಳಿಕಟ್ಟೆ ಹೇಳಿಕೆ ನೀಡಿದ್ದಾರೆ.
ನಾಳೆ ಪಿಎಂಎಸ್ಎಸ್ವೈ ಸೆಂಟರ್ನಲ್ಲಿ ಮಾತ್ರ ಲಸಿಕೆ ನೀಡಲಾಗತ್ತದೆ: ಡಾ. ಜಯಂತಿ
ನಾಳೆ ಆರೋಗ್ಯ ಕಾರ್ಯಕರ್ತರ ಜೊತೆ ಪ್ರಧಾನಿ ಮೋದಿ ಅವರು ಸಂವಾದ ಮಾಡಬಹುದು ಎಂದು ಹೇಳಲಾಗುತ್ತಿದೆ. ಸಂವಾದ ಆಗುತ್ತೋ ಇಲ್ಲವೋ ಕನ್ಫರ್ಮ್ ಆಗಿಲ್ಲ. ಆದರೆ ನಾಳೆ ಪ್ರಧಾನಿ ಅವರು ಲಸಿಕೆ ಉದ್ಘಾಟನೆ ಮಾಡಲಿದ್ದಾರೆ. ಅದಕ್ಕೆ ಬೇಕಾದ ಎಲ್ಲಾ ಸಕಲ ಸಿದ್ಧತೆ ಈಗಾಗಲೇ ರೆಡಿ ಆಗಿದೆ. ನಮ್ಮಲ್ಲಿ 6 ಸೈಟ್ಗಳಲ್ಲಿ ಲಸಿಕೆ ಹಂಚಿಕೆ ಮಾಡಬೇಕು ಎಂದು ಗುರುತು ಮಾಡಿದ್ದಾರೆ. ನಾಳೆ ಪಿಎಂಎಸ್ಎಸ್ವೈ ಸೆಂಟರ್ನಲ್ಲಿ ಮಾತ್ರ ಲಸಿಕೆ ನೀಡಲಾಗತ್ತದೆ. ಅಲ್ಲಿ ವೇಟಿಂಗ್ ರೂಮ್, ಅಬ್ಸರ್ವೇಶನ್ ರೂಮ್ ಮತ್ತು ವ್ಯಾಕ್ಸಿನ್ ರೂಮ್ ಸಿದ್ಧಪಡಿಸಿದ್ದೇವೆ. ಎಲ್ಲಾ ಸಿದ್ಧತೆ ಆಗಿದೆ ನಾಳೆ ವ್ಯಾಕ್ಸಿನ್ ಹಂಚಿಕೆಯಾಗುತ್ತದೆ ಎಂದು ವಿಕ್ಟೋರಿಯಾ ಆಸ್ಪತ್ರೆ ಡೀನ್ ಡಾ. ಜಯಂತಿ ಹೇಳಿಕೆ ನೀಡಿದ್ದಾರೆ.
ಸಿದ್ದರಾಮಯ್ಯ ನಮ್ಮ ಸೀನಿಯರ್ ಲೀಡರ್ ಇದ್ದ ಹಾಗೆ: ಎಚ್.ವಿಶ್ವನಾಥ್
ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪ್ರಶ್ನೆ ಅಲ್ಲ. ನಮ್ಮ ಸಮುದಾಯವನ್ನ ಎಸ್ಟಿಗೆ ಸೇರಿಸಬೇಕು ಎನ್ನುವ ಪ್ರಶ್ನೆಯಷ್ಟೇ. ಸಿದ್ದರಾಮಯ್ಯ ನಮ್ಮ ಸೀನಿಯರ್ ಲೀಡರ್ ಇದ್ದಾರೆ, ನಮ್ಮ ನಾಯಕರು, ಸಮಾಜದ ಮುಖಂಡರಲ್ಲಿ ಅವರು ಒಬ್ಬರಾಗಿದ್ದಾರೆ ಎಂದು ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಕಾಗಿನೆಲೆಯಲ್ಲಿ ಮಾಜಿ ಸಚಿವ ಎಚ್.ವಿಶ್ವನಾಥ್ ಹೇಳಿಕೆ ನೀಡಿದ್ದಾರೆ.
ಧಾರವಾಡದ ರಸ್ತೆ ಅಪಘಾತಕ್ಕೆ ಸಂತಾಪ ಸೂಚಿಸಿದ ಪ್ರಧಾನಿ ಮೋದಿ
ಧಾರವಾಡದಲ್ಲಿ ಇಂದು ಬೆಳಿಗ್ಗೆ ನಡೆದ ಅಪಘಾತಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದು, ಕರ್ನಾಟಕದ ಧಾರವಾಡ ಜಿಲ್ಲೆಯಲ್ಲಿ ಇಂದು ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತರಾದವರ ಬಗ್ಗೆ ಸಂತಾಪ ಸೂಚಿಸುವೆ. ಈ ಸಂದರ್ಭದಲ್ಲಿ ದುಃಖತಪ್ತ ಕುಟುಂಬಗಳ ನೋವಿನಲ್ಲಿ ನಾನೂ ಭಾಗಿ. ಅಪಘಾತದಲ್ಲಿ ಗಾಯಗೊಂಡವರು ಶೀಘ್ರ ಗುಣಮುಖರಾಗಲೆಂದು ಪ್ರಾರ್ಥಿಸುವೆ ಎಂದು ನರೆಂದ್ರ ಮೋದಿಯವರು ಟ್ವೀಟ್ ಮಾಡಿದ್ದಾರೆ. ವಿಶೇಷವಾಗಿ ಈ ಟ್ವೀಟ್ ಅನ್ನು ಪ್ರಧಾನಿ ಮೋದಿಯವರು ಕನ್ನಡದಲ್ಲಿ ಬರೆದುಕೊಂಡಿದ್ದಾರೆ.
ಕರ್ನಾಟಕದ ಧಾರವಾಡ ಜಿಲ್ಲೆಯಲ್ಲಿ ಇಂದು ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತರಾದವರ ಬಗ್ಗೆ ಸಂತಾಪ ಸೂಚಿಸುವೆ. ಈ ಸಂದರ್ಭದಲ್ಲಿ ದುಃಖತಪ್ತ ಕುಟುಂಬಗಳ ನೋವಿನಲ್ಲಿ ನಾನೂ ಭಾಗಿ. ಅಪಘಾತದಲ್ಲಿ ಗಾಯಗೊಂಡವರು ಶೀಘ್ರ ಗುಣಮುಖರಾಗಲೆಂದು ಪ್ರಾರ್ಥಿಸುವೆ: PM @narendramodi
— PMO India (@PMOIndia) January 15, 2021
ನಾಗರಹೊಳೆಯಲ್ಲಿ ಮೂರು ದಿನ ಕಳೆದ ನಟ ದರ್ಶನ್.
ನಾಗರಹೊಳೆಯ ಕಬಿನಿ ವ್ಯಾಪ್ತಿಯಲ್ಲಿ ಮೂರು ದಿನ ಕಳೆದಿದ್ದು, ಈ ಸಫಾರಿ ವೇಳೆ ದರ್ಶನ್ ಕ್ಯಾಮರಾಗೆ ಕರಿ ಚಿರತೆ ಸೆರೆಯಾಗಿದೆ. ಕಳೆದ ಮೂರು ವರ್ಷಗಳಿಂದ ದರ್ಶನ್ ಕ್ಯಾಮರಾಕ್ಕೆ ಈ ಚಿರತೆ ಸೆರೆ ಸಿಕ್ಕಿರಲಿಲ್ಲ.ಇದೀಗಾ ಕರಿ ಚಿರತೆ ಸೆರೆ ಹಿಡಿದು ನಟ ದರ್ಶನ್ ಖುಷಿಪಟ್ಟಿದ್ದಾರೆ.
ಯಾದಗಿರಿ ಜಿಲ್ಲೆಯಲ್ಲಿ ನಾಳೆಯಿಂದ ಕೊರೊನಾ ವ್ಯಾಕ್ಸಿನ್
ಯಾದಗಿರಿ ಜಿಲ್ಲೆಯಲ್ಲಿ ನಾಳೆಯಿಂದ ಕೊರೊನಾ ಲಸಿಕೆ ನೀಡುತ್ತಿದ್ದು, ಮೊದಲ ಹಂತದಲ್ಲಿ ಆರೋಗ್ಯ ಇಲಾಖೆಯ 450 ಸಿಬ್ಬಂದಿಗಳಿಗೆ ವ್ಯಾಕ್ಸಿನ್ ನೀಡಲಾಗುತ್ತದೆ. ಜಿಲ್ಲಾಸ್ಪತ್ರೆ, ಶಹಾಪುರ ಹಾಗೂ ಸುರಪುರ ತಾಲೂಕು ಆಸ್ಪತ್ರೆ ಯರಗೋಳ ಗ್ರಾಮೀಣ ಆಸ್ಪತ್ರೆ ಹಾಗೂ ಸುರಪುರ ನಗರ ಪ್ರಥಾಮಿಕ ಆರೋಗ್ಯ ಕೇಂದ್ರದಲ್ಲಿ ವ್ಯಾಕ್ಸಿನ್ ನೀಡಲಾಗುತ್ತದೆ ಎಂದು. ಟಿವಿ9ಗೆ ಯಾದಗಿರಿ ಡಿಎಚ್ಒ ಡಾ.ಇಂದುಮತಿ ಪಾಟೀಲ್ ಮಾಹಿತಿ ನೀಡಿದ್ದಾರೆ.
ಎಸ್ಡಿಪಿಐಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನೆ
ಪಾಕಿಸ್ಥಾನದ ಪರ ಘೋಷಣೆ ಆರೋಪದ ಮೇಲೆ ಎಸ್ಡಿಪಿಐ ಕಾರ್ಯಕರ್ತರ ಬಂಧನ ವಿಚಾರವಾಗಿ ಎಸ್ಡಿಪಿಐಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆದಿದ್ದು, ದಕ್ಷಿಣ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಮುತ್ತಲು ಯತ್ತಸಲಾಗಿದೆ. ಈ ನಿಟ್ಟಿನಲ್ಲಿ ಹಂಪನಕಟ್ಟೆ ರಸ್ತೆಯಲ್ಲಿ ಅಡ್ಡಲಾಗಿ ಬ್ಯಾರಿಕೇಡ್ ಹಾಕಿದ್ದು, ಭದ್ರತೆಗೆ 500 ಕ್ಕೂ ಹೆಚ್ಚು ಪೊಲೀಸರನ್ನು ಸ್ಥಳದಲ್ಲಿ ನಿಯೋಜನೆ ಮಾಡಲಾಗಿದೆ.ಈ ಪ್ರತಿಭಟನೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪ್ರತಿಭಟನಕಾರರು ಭಾಗಿಯಾಗಿದ್ದಾರೆ.
ಕೊನೆಯವರೆಗೂ ರೈತರ ಜತೆ ನಿಲ್ಲುವೆ: ರಾಹುಲ್ ಗಾಂಧಿ
ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸದೇ ಕಾಂಗ್ರೆಸ್ ತನ್ನ ಹೋರಾಟವನ್ನು ಕೈಬಿಡುವುದಿಲ್ಲ ಎಂದು ಕ್ರಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.ಚಳುವಳಿಯ ಕೊನೆಯವರೆಗೂ ರೈತರ ಜತೆ ನಿಲ್ಲುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ. ‘ಕಿಸಾನ್ ಅಧಿಕಾರ್ ದಿವಸ್’ ಎಂಬ ಶೀರ್ಷಿಕೆಯಿಡಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಇಡೀ ದೇಶವ್ಯಾಪಿ ಕಾರ್ಯಕ್ರಮ ಸಂಯೋಜಿಸಿದೆ.
देश के अन्नदाता अपने अधिकार के लिए अहंकारी मोदी सरकार के ख़िलाफ़ सत्याग्रह कर रहे हैं।
आज पूरा भारत किसानों पर अत्याचार व पेट्रोल-डीज़ल के बढ़ते दामों के विरुद्ध आवाज़ बुलंद कर रहा है।
आप भी जुड़िये और इस सत्याग्रह का हिस्सा बनिये।#SpeakUpForKisanAdhikar pic.twitter.com/3EG34bUQxm
— Rahul Gandhi (@RahulGandhi) January 15, 2021
ರೈತರ ಅಧಿಕಾರಕ್ಕಾಗಿ ಧ್ವನಿ ಪ್ರತಿಭಟನೆಯಲ್ಲಿ ಭಾಗಿಯಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ಗಾಂಧಿ
ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಕೃಷಿ ಕಾಯ್ದೆ ವಿರೋಧಿಸಿ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ರ ಅಧಿಕೃತ ನಿವಾಸದ ಎದುರು ಪ್ರತಿಭಟನೆ ನಡೆಸಿದರು. ಕಾಂಗ್ರೆಸ್ ಆಯೋಜಿಸಿರುವ ‘ರೈತರ ಅಧಿಕಾರಕ್ಕಾಗಿ ಧ್ವನಿ ಎತ್ತಿ’ ಕಾರ್ಯಕ್ರಮದ ಅಂಗವಾಗಿ ಕಾಂಗ್ರೆಸ್ ಕಾರ್ಯಕರ್ತರ ಜತೆ ಮೆರವಣಿಗೆ ನಡೆಸಿದ್ದು, ಕೃಷಿ ಕಾಯ್ದೆಗಳ ವಿರುದ್ಧ ಇಡೀ ದೇಶವೇ ಸಿಡಿದೆದ್ದಿದೆ. ಜತೆಗೆ, ತೈಲ ಬೆಲೆಯಲ್ಲೂ ಏರಿಕೆಯಾಗಿದೆ. ಹೀಗಾಗಿ ಕೇಂದ್ರ ಸರ್ಕಾರದ ವಿರುದ್ಧ ಧ್ವನಿ ಎತ್ತುವುದು ಅನಿವಾರ್ಯವಾಗಿದೆ ಎಂದು ರಾಹುಲ್ ಗಾಂಧಿ ರಾಜ್ ನಿವಾಸದ ಎದುರು ನಡೆಸಿದ ಪ್ರತಿಭಟನೆಗೆ ಬೆಂಬಲ ನೀಡುವಂತೆ ಟ್ವೀಟ್ ಮಾಡಿದ್ದಾರೆ.
ಮಂಡ್ಯದ ಆರ್ಎಸ್ಎಸ್ ಕಚೇರಿಗೆ ಸಂಸದೆ ಸುಮಲತಾ ಭೇಟಿ
ರಾಮಮಂದಿರ ನಿಧಿ ಸಮರ್ಪಣಾ ಅಭಿಯಾನಕ್ಕೆ ಸಾಥ್ ನೀಡವ ನಿಟ್ಟಿನಲ್ಲಿ ಸಂಸದೆ ಸುಮಲತಾ ದೇಣಿಗೆ ನೀಡಿದ್ದು, ರಾಮಮಂದಿರ ನಿರ್ಮಾಣ ಅಭಿಯಾನದಲ್ಲಿ ಭಾಗವಹಿಸಲು ಬಂದಿದ್ದೇನೆ.ನನ್ನ ಭೇಟಿ ಹಿಂದೆ ಯಾವ ರಾಜಕೀಯವೂ ಇಲ್ಲ. ನಂಬಿಕೆ, ಸಂಪ್ರದಾಯಗಳಿಗೆ ರಾಜಕೀಯ ಬಣ್ಣ ನೀಡುವುದು ತಪ್ಪು ಎಂದು ಆರ್ಎಸ್ಎಸ್ ಕಚೇರಿಗೆ ಭೇಟಿ ನೀಡಿದ ಬಳಿಕ ಸಂಸದೆ ಸುಮಲತಾ ತಿಳಿಸಿದ್ದಾರೆ.
ಇಂಡೋನೇಷ್ಯಾದ ಸುಲವೇಸಿಯಲ್ಲಿ ಭೂಕಂಪ
ಇಂಡೋನೇಷ್ಯಾದ ಸುಲವೇಸಿಯಲ್ಲಿ ಇಂದು ಭೂಕಂಪ ಸಂಭವಿಸಿದ್ದು, 6.2 ಮ್ಯಾಗ್ನಿಟ್ಯೂಟ್ ಪ್ರಬಲ ಭೂಕಂಪದಿಂದಾಗಿ 7 ಮಂದಿ ಸಾವನ್ನಪ್ಪಿದ್ದು, ನೂರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಕಬ್ಬು ಬೆಳಗಾರರಿಂದ ಅಮಿತ್ ಶಾ ಗೋ ಬ್ಯಾಕ್ ಚಳವಳಿ
ಜನವರಿ 17ರಂದು ಬಾದಾಮಿ ತಾಲೂಕಿನ ಕೆರಕಲಮಟ್ಟಿಯಲ್ಲಿರುವ ಕೇದಾರನಾಥ ಸಕ್ಕರೆ ಕಾರ್ಖಾನೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ಹಿನ್ನೆಲೆಯಲ್ಲಿ ಗೋ ಬ್ಯಾಕ್ ಚಳುವಳಿ ನಡೆಸುತ್ತಿದ್ದು, ಕಬ್ಬಿನ ಬಿಲ್, ಷೇರು ಹಣ ಸೇರಿ 36 ಕೋಟಿ ರೂಪಾಯಿ ಬಾಕಿ ಹಣ ಪಾವತಿಸುವವರೆಗೆ ಕಾರ್ಖಾನೆ ಆರಂಭಿಸಬೇಡಿ ಎಂದು ರೈತರು ಆಗ್ರಹಿಸಿದ್ದಾರೆ.
ಕೊಪ್ಪಳ ಜಿಲ್ಲೆಯಲ್ಲಿ ಈವರೆಗೆ ನಾಲ್ವರು ಶಿಕ್ಷಕರಿಗೆ ಕೊವಿಡ್
ಕೊಪ್ಪಳ ತಾಲೂಕಿನ ಒಬ್ಬರು ಶಿಕ್ಷಕಿಗೆ, ಕುಷ್ಟಗಿ ತಾಲೂಕಿನ ಒಬ್ಬರು ಶಿಕ್ಷಕಿಗೆ ಹಾಗೂ ಗಂಗಾವತಿಯಲ್ಲಿ ಇಬ್ಬರು ಶಿಕ್ಷಕರಿಗೆ ಕೊರೊನಾ ಪಾಸಿಟಿವ್ ಬಂದಿದೆ ಎಂದು ಟಿವಿ9ಗೆ ಡಿಡಿಪಿಐ ದೊಡ್ಡಬಸಪ್ಪ ನಿರಲಕೇರಿ ಮಾಹಿತಿ ನೀಡಿದ್ದಾರೆ.
ರಾತ್ರೋರಾತ್ರಿ ಕೆರಕಲಮಟ್ಟಿ ಗ್ರಾಮದ ರಸ್ತೆಯ ದುರಸ್ತಿ
ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಕೆರಕಲಮಟ್ಟಿಯಲ್ಲಿ ಕೇಂದ್ರ ಸಚಿವ ಅಮಿತ್ ಶಾ, ಸಿಎಂ ಬಿ. ಎಸ್. ಯಡಿಯೂರಪ್ಪ ಭೇಟಿ ಹಿನ್ನೆಲೆಯಲ್ಲಿ ಹಲವು ವರ್ಷಗಳಿಂದ ಕಣ್ಣೆತ್ತಿ ನೋಡದ ರಸ್ತೆಯ ದುರಸ್ತಿಯಾಗುತ್ತಿದ್ದು,ರಾತ್ರೋರಾತ್ರಿ ಕೆರಕಲಮಟ್ಟಿ ಗ್ರಾಮದ ರಸ್ತೆಗೆ ಸುಧಾರಣೆ ಭಾಗ್ಯ ಸಿಕ್ಕಿದೆ.
ದೆಹಲಿಯಲ್ಲಿ 81 ಲಸಿಕಾ ಕೇಂದ್ರಗಳು ಸ್ಥಾಪನೆ
ದೆಹಲಿಯ 75 ಸೆಂಟರ್ಗಳಲ್ಲಿ ಕೊವಿಶೀಲ್ಡ್ ಲಸಿಕೆ ನೀಡಲಾಗುತ್ತಿದ್ದು, ಕೊವಾಕ್ಸಿನ್ ಲಸಿಕೆ 6 ಕೇಂದ್ರಗಳಲ್ಲಿ ನೀಡಲಾಗುತ್ತಿದೆ. ಆ ಮೂಲಕ ನಾಳೆಯಿಂದ 81 ಕೇಂದ್ರಗಳಲ್ಲಿ ಲಸಿಕಾ ಅಭಿಯಾನ ಆರಂಭವಾಗಲಿದೆ.
ಕೆಎಂಎಫ್‌ನಿಂದ 4 ಬಗೆಯ ನಂದಿನಿ ಬ್ರೆಡ್ ಬಿಡುಗಡೆ
ಬೆಂಗಳೂರಿನ ಕೆಎಂಎಫ್ ಕಚೇರಿಯಲ್ಲಿ ನಂದಿನಿ ಬ್ರೆಡ್ ಲಾಂಚ್ ಮಾಡಿದ್ದು,ಗುಡ್ ಲೈಫ್ ಮಿಲ್ಕ್ ಬ್ರೆಡ್, ಗುಡ್ ಲೈಫ್ ಸ್ಯಾಂಡ್ವಿಚ್ ಬ್ರೆಡ್, ಗುಡ್ ಲೈಫ್ ವೋಲ್ ವ್ಹೀಟ್ ಬ್ರೆಡ್, ಗುಡ್ ಲೈಫ್ ಮಲ್ಟಿ ಗ್ರೈನ್ ಬ್ರೆಡ್ ಎಂಬ 4 ಬಗೆಯ ಆರೋಗ್ಯಕರ ಹಾಗೂ ಪೌಷ್ಟಿಕವಾದ ನಂದಿನಿ ಬ್ರೆಡ್ ಅನ್ನು ಕೆಎಂಎಫ್ ಮುಖ್ಯಸ್ಥ ಬಿ.ಸಿ.ಸತೀಶ್ ಬಿಡುಗಡೆ ಮಾಡಿದ್ದಾರೆ.
ಖಾತೆಗಳ ಅದಲು ಬದಲು ಬಗ್ಗೆ ಹಿರಿಯ ಸಚಿವರ ಜೊತೆ ಚರ್ಚೆ ಮಾಡುತ್ತೇನೆ: ಬಿ.ಎಸ್.ಯಡಿಯೂರಪ್ಪ
ಅಮಿತ್ ಶಾ ಅವರು ಬಂದು ಹೋದ ಬಳಿಕ ಖಾತೆ ಹಂಚಿಕೆ ಮಾಡೋಣ ಎಂದುಕೊಂಡಿದ್ದೇವೆ ಅದಕ್ಕೂ ಮುನ್ನವೇ ಖಾತೆ ಹಂಚಿಕೆ ಆಗಬಹುದು, ಖಾತೆಗಳ ಅದಲು ಬದಲು ಬಗ್ಗೆ ಹಿರಿಯ ಸಚಿವರ ಜೊತೆ ಚರ್ಚೆ ಮಾಡುತ್ತೇನೆ. ನಾಳೆ ಅಮಿತ್ ಶಾ ಜೊತೆಗೆ ಭದ್ರಾವತಿ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತೇವೆ . ಅಲ್ಲಿಂದ ಬೆಂಗಳೂರಿಗೆ ವಾಪಾಸಾಗಿ, ನಾಡಿದ್ದು ಬೆಳಗಾವಿಯಲ್ಲಿ ಪಕ್ಷದ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತೇವೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಗಣರಾಜ್ಯೋತ್ಸವಂದು ರೈತರ ಪರೇಡ್ಗಳು ನಡೆಯಲಿದೆ
ಕೇಂದ್ರದ ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ರೈತರ ಹೋರಾಟಕ್ಕೆ 50 ದಿನ ತುಂಬಿದ ಹಿನ್ನೆಲೆ ಗಣರಾಜ್ಯೋತ್ಸವಕ್ಕೆ ರೈತರ ಪರೇಡ್ಗಳು ನಡೆಯಲಿದೆ. ಕರ್ನಾಟಕದಲ್ಲಿ ಸಂಯುಕ್ತ ಹೋರಾಟದ ನೇತೃತ್ವದಲ್ಲಿ 1 ಸಾವಿರ ಟ್ರ್ಯಾಕ್ಟರ್, ಕಾರು, ಬೈಕ್ಗಳ ಮೆರವಣಿಗೆ ಇರಲಿದ್ದು, ಈ ಮೆರವಣಿಗೆಯಲ್ಲಿ 15000ರೈತರು ಭಾಗಿಯಾಗಲಿದ್ದಾರೆ. ಜನವರಿ 26ರಂದು ದೇಶಾದ್ಯಂತ ಎಲ್ಲಾ ಟೋಲ್ಗಳು, ರಾಷ್ಟ್ರೀಯ ಹೆದ್ದಾರಿಗಳನ್ನ ಬಂದ್ ಮಾಡಲು ಚಿಂತನೆ ನಡೆಸಿದ್ದು, 1ಲಕ್ಷಕ್ಕೂ ಹೆಚ್ಚು ಟ್ರಾಕ್ಟರ್ಗಳಿಂದ ರಸ್ತೆ ತಡೆಗೆ ಚಿಂತನೆ ಮಾಡಲಾಗಿದೆ ಎಂದು ಬೆಂಗಳೂರಿನಲ್ಲಿ ರೈತ ಮುಖಂಡ ಬಡಗಲಪುರ ನಾಗೇಂದ್ರ ಹೇಳಿಕೆ ನೀಡಿದ್ದಾರೆ.
ಬಾರ್ಡರ್ ಗವಾಸ್ಕರ್ ಟ್ರೋಫಿಯ ಕೊನೆಯ ಟೆಸ್ಟ್ ಪಂದ್ಯದ ಮೊದಲ ದಿನದಾಟ ಮುಕ್ತಾಯ
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್ ಗವಾಸ್ಕರ್ ಟ್ರೋಫಿಯ ಕೊನೆಯ ಟೆಸ್ಟ್ ಪಂದ್ಯದ ಮೊದಲ ದಿನದಾಟ ಮುಕ್ತಾಯವಾಗಿದ್ದು, ಟೀಂ ಆಸ್ಟ್ರೇಲಿಯಾ ದಿನದಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 275 ರನ್ ಗಳಿಸಿದೆ. ಭಾರತದ ಪರ ನಟರಾಜನ್ 2 ವಿಕೆಟ್ ಪಡೆದು ಮಿಂಚಿದರೆ, ಸಿರಾಜ್, ಠಾಕೂರ್, ಸುಂದರ್ ತಲಾ 1 ವಿಕೆಟ್ ಪಡೆದಿದ್ದಾರೆ.
ಬಿಜೆಪಿ ಶಾಸಕರ ಹುಟ್ಟುಬ್ಬಕ್ಕೆ ಶುಭಕೋರಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ಕಲಘಟಗಿ ಕ್ಷೇತ್ರದ ಬಿಜೆಪಿ ಶಾಸಕ ಸಿ.ಎಂ.ನಿಂಬಣ್ಣವರ್ ಜನ್ಮದಿನದ ಹಿನ್ನಲೆಯಲ್ಲಿ ನಿಂಬಣ್ಣವರಿಗೆ ಹೂಗುಚ್ಚ ನೀಡಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಶುಭಕೋರಿದ್ದಾರೆ.
ಎಲಿವೇಟೆಡ್ ಕಾರಿಡಾರ್ ನಿರ್ಮಾಣಕ್ಕೆ ಶಂಕುಸ್ಥಾಪನೆ
ಇಂತಹ ದೊಡ್ಡ ಯೋಜನೆ ಹುಬ್ಬಳ್ಳಿಗೆ ಕೊಟ್ಟಿದ್ದಕ್ಕೆ ಧನ್ಯವಾದ. ನಿತಿನ್ ಗಡ್ಕರಿಯವರಿಗೆ ನಾನು ಧನ್ಯವಾದ ಹೇಳುತ್ತೇನೆ. ಈ ಫ್ಲೈಓವರ್ನಿಂದ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ಸಿಗುತ್ತದೆ. ನಾನು ಮುಖ್ಯಮಂತ್ರಿ ಬಿಎಸ್ವೈರನ್ನ ಮನವಿ ಮಾಡುತ್ತೇನೆ, ಚೆನ್ನಮ್ಮ ಫ್ಲೈಓವರ್ ರಸ್ತೆ ರಾಜ್ಯ ಸರ್ಕಾರಕ್ಕೆ ಸೇರುತ್ತದೆ. ಉಳಿದ ಹಣ ರಾಜ್ಯ ಸರ್ಕಾರ ಹಾಕಿ ಪೂರ್ಣಗೊಳಿಸಬೇಕು. ಅಲ್ಲದೆ ಸಿಆರ್ಎಫ್ ಯೋಜನೆ ಕೂಡ ಪೂರ್ಣಗೊಳಿಸಬೇಕು ಎಂದು ಹುಬ್ಬಳ್ಳಿಯ ಚೆನ್ನಮ್ಮ ವೃತ್ತದಲ್ಲಿ ಎಲಿವೇಟೆಡ್ ಕಾರಿಡಾರ್ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.
ರಾಜಭವನಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿ
ಕೇಂದ್ರದ ರಕ್ಷಣಾ ಖಾತೆ ಸಚಿವ ರಾಜನಾಥ್ ಸಿಂಗ್ ರಾಜಭವನಕ್ಕೆ ಭೇಟಿ ನೀಡಿದ್ದು, ರಾಜ್ಯಪಾಲ ವಜುಭಾಯಿ ವಾಲಾ ರಾಜನಾಥ್ ಸಿಂಗ್ಗೆ ಮೈಸೂರು ಪೇಟಾ ತೊಡಿಸಿ ರಾಜಭವನಕ್ಕೆ ಸ್ವಾಗತಿಸಿದ್ದಾರೆ.
ಚಾಮುಂಡೇಶ್ವರಿ ದೇಗುಲಕ್ಕೆ ಹೆಚ್.ಡಿ.ಕುಮಾರಸ್ವಾಮಿ ಭೇಟಿ
ರಾಮನಗರದದಲ್ಲಿರುವ ಚಾಮುಂಡೇಶ್ವರಿ ದೇಗುಲಕ್ಕೆ ಹೆಚ್.ಡಿ. ಕುಮಾರಸ್ವಾಮಿ, ಶಾಸಕಿ ಅನಿತಾ, ಪುತ್ರ ನಿಖಿಲ್ ಮತ್ತು ನಿಖಿಲ್ ಅವರ ಪತ್ನಿ ರೇವತಿ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಬೆಂಗಳೂರಿನಲ್ಲಿ ನಾಳೆ ಬಿಜೆಪಿ ರಾಜ್ಯ ಕೋರ್ ಕಮಿಟಿ ಸಭೆ
ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಾಳೆ ನಡೆಯಲಿರುವ ಬಿಜೆಪಿ ರಾಜ್ಯ ಕೋರ್ ಕಮಿಟಿ ಸಭೆಯಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಸಚಿವ ಅರುಣ್ ಸಿಂಗ್ ಭಾಗಿಯಾಗಲಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಕೋರ್ ಕಮಿಟಿಯಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ.
ಪ್ರತಿಭಟನಾನಿರತ ರೈತರು ಮತ್ತು ಕೇಂದ್ರದ ನಡುವೆ ಸಭೆ ಆರಂಭ
ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ರೈತರ ಹೋರಾಟದ ಕುರಿತು ಕೇಂದ್ರ ಸರ್ಕಾರ ಮತ್ತು ರೈತ ಮುಖಂಡರ ನಡುವೆ ದೆಹಲಿಯ ವಿಜ್ಞಾನ ಭವನದಲ್ಲಿ 9ನೇ ಸುತ್ತಿನ ಸಭೆ ಪ್ರಾರಂಭವಾಗಿದೆ.
ಪ್ರಭಾಸ್ ಸಿನಿಮಾ ಮುಹೂರ್ತಕ್ಕೆ ರಾಕಿಂಗ್ ಸ್ಟಾರ್ ಯಶ್ ಚೀಫ್ ಗೆಸ್ಟ್
ಹೈದ್ರಾಬಾದ್ನ ರಾಮನಾಯ್ಡು ಸ್ಟುಡಿಯೋದಲ್ಲಿ ತೆಲುಗು ನಟ ಪ್ರಭಾಸ್ ನಟನೆಯ ಸಲಾರ್ ಸಿನಿಮಾದ ಮುಹೂರ್ತ ನಡೆದಿದ್ದು, ಪ್ರಶಾಂತ್ ನೀಲ್ ನಿರ್ದೇಶನದ ಈ ಸಿನಿಮಾದ ಮುಹೂರ್ತದಲ್ಲಿ ನಟ ಯಶ್ ಭಾಗಿಯಾಗಿದ್ದಾರೆ.
ಶ್ರೀಪಾದ್ ನಾಯಕ್ ಅವರನ್ನು ಭೇಟಿ ಮಾಡಿದ ಉಪಾಧ್ಯಕ್ಷ ಎಂ.ವೆಂಕಯ್ಯ ನಾಯ್ಡು
ಉಪಾಧ್ಯಕ್ಷ ಎಂ.ವೆಂಕಯ್ಯ ನಾಯ್ಡು ಅವರು ಗೋವಾ ವೈದ್ಯಕೀಯ ಕಾಲೇಜಿಗೆ ಭೇಟಿ ನೀಡಿದ್ದು, ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಕೇಂದ್ರ ಸಚಿವ ಶ್ರೀಪಾದ್ ನಾಯಕ್ ಅವರನ್ನು ಭೇಟಿ ಮಾಡಿ ಆರೋಗ್ಯ ಸ್ಥಿತಿಯ ಬಗ್ಗೆ ವಿಚಾರಿಸಿದ್ದಾರೆ.
ಹರಜಾತ್ರೆಗೆ ಆಗಮಿಸಿದ ನಟ ಪುನೀತ್ ರಾಜ್ಕುಮಾರ್
ಹರಿಹರ ಪಂಚಮಸಾಲಿ ಮಠದಲ್ಲಿ ನಡೆಯುತ್ತಿರುವ ಹರಜಾತ್ರೆಯಲ್ಲಿನ ಯುವರತ್ನ ಸಮಾವೇಶದ ಚಾಲನೆಗೆ ಆಗಮಿಸಿದ ನಟ ಪುನೀತ್ ರಾಜ್ಕುಮಾರ್ನ್ನು ನೋಡಲು ಅಭಿಮಾನಿಗಳು ಆಗಮಿಸಿದ್ದು, ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.
ಸೇನಾ ದಿನದ ಪ್ರಯುಕ್ತ ಡ್ರೋನ್ ಪ್ರದರ್ಶನ
2021ರ ಸೇನಾ ದಿನದ ಪರೇಡ್ ಪ್ರಯುಕ್ತ ಇದೇ ಮೊದಲ ಬಾರಿಗೆ ದೆಹಲಿಯಲ್ಲಿ ಭಾರತೀಯ ಸೇನೆಯೂ ಡ್ರೋನ್ ಹರಾಟವನ್ನು ಪ್ರದರ್ಶಿಸಿದೆ.
ರಾಜ್ಯದಲ್ಲಿ ಕೊರೊನಾ ಲಸಿಕೆ ಹಂಚಿಕೆ ಕುರಿತು ಇಂದು ಸಭೆ
ನಾಳೆ ರಾಜ್ಯದಲ್ಲಿ ಕೊರೊನಾ ಹಂಚಿಕೆ ಕುರಿತು ಚರ್ಚಿಸಲು ಇಂದು ಮಧ್ಯಾಹ್ನ 1 ಗಂಟೆಗೆ ಎಲ್ಲಾ ಡಿಸಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸಭೆ ನಡೆಸಲಿದ್ದು, ಹೇಗೆ ಲಸಿಕೆ ನೀಡಬೇಕು ಎಂಬ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಲಿದ್ದಾರೆ. ವಿಡಿಯೋ ಕಾನ್ಫರೆನ್ಸ್ನಲ್ಲಿ ಬಿಬಿಎಂಪಿ ಆಯುಕ್ತರು ಭಾಗಿಯಾಗಲಿದ್ದು, ಇದು ನಾಳೆ ಯಾವುದೇ ರೀತಿ ಗೊಂದಲ ಇಲ್ಲದಂತೆ ಲಸಿಕೆ ವಿತರಣೆ ಬಗ್ಗೆ ಪೂರ್ವಭಾವಿ ಸಭೆಯಾಗಿದೆ.
ವಿಜ್ಞಾನ ಭವನಕ್ಕೆ ಆಗಮಿಸಿದ ನರೇಂದ್ರ ಸಿಂಗ್ ತೋಮರ್
ದೆಹಲಿ ಪ್ರತಿಭಟನಾನಿರತ ರೈತರು ಮತ್ತು ಕೇಂದ್ರ ಸರ್ಕಾರದ ನಡುವೆ 9ನೇ ಸುತ್ತಿನ ಮಾತುಕತೆ ನಡೆಯಲಿದ್ದು, ಈ ಸಂಬಂಧ ನೂತನ ಕೃಷಿ ಕಾಯ್ದೆಯ ಕುರಿತು ರೈತ ಮುಖಂಡರೊಂದಿಗೆ ಮಾತನಾಡಲು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ವಿಜ್ಞಾನ ಭವನಕ್ಕೆ ಆಗಮಿಸಿದ್ದಾರೆ.
ನೋಟೀಸ್ ಅವಧಿಯ ಕೆಲಸ ಮಾಡಬೇಕು ಇಲ್ಲ ಜಿಎಸ್‌ಟಿ ಕಟ್ಟಬೇಕು
ಕಂಪನಿ ಉದ್ಯೋಗಿಗಳು ಕೆಲಸ ಬಿಡುವಾಗ ನೋಟೀಸ್ ಅವಧಿಯ ಕೆಲಸ ಮಾಡಬೇಕು. ನೋಟೀಸ್ ಅವಧಿಯ ಕೆಲಸ ಮಾಡದಿದ್ದರೇ ಶೇ.18 ರಷ್ಟು ಜಿಎಸ್‌ಟಿ ಪಾವತಿಸಬೇಕು ಎಂದು ಗುಜರಾತ್ನ ಅಥಾರಿಟಿ ಆಫ್ ಅಡ್ವಾನ್ಸ್ ರೂಲಿಂಗ್ನಿಂದ ಆದೇಶ ನೀಡಲಾಗಿದೆ. ಗುಜರಾತ್ನ ರಫ್ತು ಕಂಪನಿಯೊಂದರ ಉದ್ಯೋಗಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಕೆಲಸಕ್ಕೆ ಸೇರುವಾಗ ನಡೆದಿರುವ ಅಗ್ರಿಮೆಂಟ್ನಂತೆ ಮೂರು ತಿಂಗಳ ನೋಟೀಸ್ ಅವಧಿ ಪೂರೈಸಬೇಕು.
ರಾಮಮಂದಿರ ನಿರ್ಮಾಣಕ್ಕೆ ರಾಷ್ಟ್ರಪತಿ ಕೋವಿಂದ್ ದೇಣಿಗೆ
ರಾಮಮಂದಿರ ನಿರ್ಮಾಣಕ್ಕೆ ಇಂದಿನಿಂದ ದೇಣಿಗೆ ಪಡೆಯಲಾಗುತ್ತಿದ್ದು, ರಾಷ್ಟ್ರಪತಿ ರಾಮನಾಥ ಕೋವಿಂದ್ 5 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ.
ವಿಜ್ಞಾನ ಭವನಕ್ಕೆ ಆಗಮಿಸಿದ ಪ್ರತಿಭಟನಾನಿರತ ರೈತರು
ಇಂದು ದೆಹಲಿ ಪ್ರತಿಭಟನಾನಿರತ ರೈತರು ಮತ್ತು ಕೇಂದ್ರ ಸರ್ಕಾರದ ನಡುವೆ ನೂತನ ಕೃಷಿ ಕಾಯ್ದೆಯ ಕುರಿತು 9ನೇ ಸುತ್ತಿನ ಮಾತುಕತೆ ನಡೆಯಲಿದ್ದು, ಈ ಸಂಬಂಧ ಕೇಂದ್ರ ಸರ್ಕಾರದೊಂದಿಗೆ ಮಾತನಾಡಲು ಸಿಂಗು ಗಡಿಯಿಂದ ಆಗಮಿಸಿದ ರೈತರು ವಿಜ್ಞಾನ ಭವನಕ್ಕೆ ತಲುಪಿದ್ದಾರೆ
ನಾಳೆ ರಾಜ್ಯದ 243 ಕೇಂದ್ರದಲ್ಲಿ ಲಸಿಕೆ ವಿತರಣೆ ನಡೆಯಲಿದೆ
ನಾಳೆ ಬೆಂಗಳೂರು ಮೆಡಿಕಲ್ ಕಾಲೇಜಿನ ಆವರಣದಲ್ಲಿ ಕೊರೊನಾ ಲಸಿಕೆ ಉದ್ಘಾಟನೆಯಾಗಲಿದ್ದು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ನಾನು ಲಸಿಕೆ ವಿತರಣೆಗೆ ಚಾಲನೆ ನೀಡುತ್ತೇವೆ. ನಾಳೆ ರಾಜ್ಯದ 243 ಕೇಂದ್ರದಲ್ಲಿ ಲಸಿಕೆ ವಿತರಣೆ ನಡೆಯಲಿದೆ ಎಂದು ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿಯಲ್ಲಿ ಆರೋಗ್ಯ ಇಲಾಖೆಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಫ್ಲೈಓವರ್ ಭೂಮಿ ಪೂಜೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜೋಶಿ
ಹುಬ್ಬಳ್ಳಿಯ ಚೆನ್ನಮ್ಮ ವೃತ್ತದಲ್ಲಿನ ಫ್ಲೈಓವರ್‌ಗೆ ಭೂಮಿ ಪೂಜೆ ಸಲ್ಲಿಸಿದ್ದು, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯಿಂದ ಚಾಲನೆ ಮಾಡಿದ್ದಾರೆ. 323 ಕೋಟಿ ರೂಪಾಯಿ ವೆಚ್ಚದಲ್ಲಿ ಬೃಹತ್ ಫ್ಲೈಓವರ್ ನಿರ್ಮಾಣ ಮಾಡಲಾಗುತ್ತಿದ್ದು, 5.37 ಕಿ.ಮೀ ಉದ್ದದ ಫ್ಲೈಓವರ್ ನಿರ್ಮಾಣಕ್ಕೆ ಇಂದು ವಿಡಿಯೋ ಕಾನ್ಫರೆನ್ಸ್ ಕೇಂದ್ರ ಸಾರಿಗೆ, ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಚಾಲನೆ ನೀಡಿದ್ದಾರೆ. ದೀಪ ಬೆಳಗಿಸುವ ಮೂಲಕ ಪ್ರಹ್ಲಾದ್ ಜೋಶಿ,ಜಗದೀಶ್ ಶೆಟ್ಟರ್, ಶಾಸಕರಾದ ಅರವಿಂದ ಬೆಲ್ಲದ್,ಬಸವರಾಜ್ ಹೊರಟ್ಟಿ, ಪ್ರಸಾದ್ ಅಬ್ಬಯ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ.
ನಾಳೆಯಿಂದ ಕೊರೊನಾ ಲಸಿಕೆ ನೀಡಲು ವೈದ್ಯರು ಸಿದ್ಧ
10 ತಿಂಗಳು ಪಟ್ಟ ಕಷ್ಟಕ್ಕೆ ಈಗ ಅಂತಿಮ ಪರಿಹಾರ ಸಿಕ್ಕಿದ್ದು, ಕೊರೊನಾ ಲಸಿಕೆ ನೀಡುವುದಕ್ಕೆ ನಮಗೆ ಸಂತೋಷವಾಗುತ್ತಿದೆ. ಕೊರೊನಾ ಲಸಿಕೆ ನೀಡಿದ್ದಕ್ಕೆ ಸರ್ಕಾರಕ್ಕೆ ಧನ್ಯವಾದಗಳು ಎಂದು ಬೆಂಗಳೂರಿನಲ್ಲಿ ಸಿ.ವಿ.ರಾಮನ್ ಆಸ್ಪತ್ರೆಯ ಸಿಬ್ಬಂದಿ ಹೇಳಿದ್ದಾರೆ.
ಭಾರತದ ಕೊರೊನಾ ಪ್ರಕರಣಗಳು
ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ 24 ಗಂಟೆಗಳಲ್ಲಿ 15590 ಹೊಸ ಕೊವಿಡ್ ಪ್ರಕರಣಗಳು ದಾಖಲೆಯಾಗಿದ್ದು, 15975 ಮಂದಿ ಗುಣಮುಖರಾಗಿದ್ದಾರೆ ಮತ್ತು 191 ಮಂದಿ ಸಾವನ್ನಪ್ಪಿದ್ದಾರೆ. ಭಾರತದ ವರದಿಯಂತೆ ಒಟ್ಟು 1,05,27,683 ಪ್ರಕರಣಗಳಿದ್ದು, ಸಕ್ರೀಯ ಕೊರೊನಾ ಪ್ರಕರಣಗಳು 2,13,027, ಒಟ್ಟು ಗುಣಮುಖರಾದವರ ಸಂಖ್ಯೆ 1,01,62,738 ಹಾಗೂ ಒಟ್ಟು ಸಾವಿಗೀಡಾದವರ ಸಂಖ್ಯೆ 1,51,918 ಆಗಿದೆ.
ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಬೇಡಿಕೆ ಈಡೇರಿಸಿ: ಮಾಯಾವತಿ
ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಎಲ್ಲಾ ಬೇಡಿಕೆಗಳನ್ನು ಈಡೇರಿಸುವಂತೆ ಬಹುಜನ ಸಮಾಜ ಪಕ್ಷ (ಬಿಎಸ್ಪಿ) ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ ಎಂದು ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಹೇಳಿದ್ದಾರೆ.
ತಾಯಿ ಚಾಮುಂಡೇಶ್ವರಿ ದರ್ಶನ ಪಡೆದ ನಟ ಅಭಿಷೇಕ್
ನೂತನ ಸಿನಿಮಾ ಸೆಟ್ಟೇರುವ ಮುನ್ನ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತಾಯಿ ಸುಮಲತಾ ಜೊತೆ ಆಗಮಿಸಿದ ನಟ ಅಭಿಷೇಕ್ ವಿಶೇಷ ಪೂಜೆ ಸಲ್ಲಿದ್ದಾರೆ. ಅಭಿಷೇಕ್ ಮುಂದಿನ ಸಿನಿಮಾ ಬ್ಯಾಡ್ ಮ್ಯಾನರ್ಸ್ ಚಿತ್ರ ತಂಡ ಮತ್ತು ನಿರ್ದೇಶಕ ಸೂರಿ ಕೂಡ ತಾಯಿ ಚಾಮುಂಡೇಶ್ವರಿ ದರ್ಶನ ಪಡಯಲು ಸಾಥ್ ನೀಡಿದ್ದಾರೆ.
ಕೇರಳದಲ್ಲಿ ಇಂದು ಬಜೆಟ್ ಮಂಡನೆ
ಕೇರಳದಲ್ಲಿ ಇಂದು ಬಜೆಟ್ ಮಂಡನೆಯಾಗಲಿದ್ದು, ಕೆರಳದ ಹಣಕಾಸು ಸಚಿವ ಡಾ. ಥಾಮಸ್ ಐಸಾಕ್ ಅವರು ತಮ್ಮ ನಿವಾಸದಿಂದ ತಿರುವನಂತಪುರಂನ ವಿಧಾನಸಭೆಗೆ ರಾಜ್ಯ ಬಜೆಟ್ ಮಂಡನೆಗಾಗಿ ಆಗಮಿಸಿದ್ದಾರೆ.
ಶ್ರೀ ರಾಮಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನಕ್ಕೆ ಚಾಲನೆ
ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ವತಿಯಿಂದ ನಿಧಿ ಸಮರ್ಪಣಾ ಅಭಿಯಾನಕ್ಕೆ ನಟ ಅಭಿಷೇಕ ಗೌಡ ಚಾಲನೆ ನೀಡಿದ್ದು, ನಗರದ ಕೋಟೆ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ಅಂಬರೀಷ್ ಪುತ್ರ ನಟ ಅಭಿಷೇಕ್ ಗೌಡ ಚೆಕ್ ನೀಡಿ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಈ ಅಭಿಯಾನ ಕಾರ್ಯಕ್ರಮದಲ್ಲಿ ಬಿಜೆಪಿ ನಗರಾಧ್ಯಕ್ಷ ಶ್ರೀವತ್ಸ ಮತ್ತು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಸದಸ್ಯರು ಭಾಗಿಯಾಗಿದ್ದರು.
ಬೆಳ್ಳಂಬೆಳಿಗ್ಗೆ ಬೆಂಗಳೂರಿನಲ್ಲಿ ಮಾಸ್ಕ್ ಕಿರಿಕ್
ಮಾಸ್ಕ್ ಧರಿಸದಿದ್ದಕ್ಕೆ ದಂಡ ವಿಧಿಸಿದ ಬಿಬಿಎಂಪಿ ಮಾರ್ಷಲ್ ಮಾತಿಗೆ ನಿರಾಕರಿಸಿ ಸವಾರ ಬೈಕ್ ಬಿಟ್ಟು ಹೋದ ಘಟನೆ ಬೆಂಗಳೂರಿನ ಕೆ.ಆರ್.ಪುರದ ಅಯ್ಯಪ್ಪನಗರದಲ್ಲಿ ನಡೆದಿದ್ದು, ಮಾಸ್ಕ್ ಧರಿಸಿದ್ದರೂ ದಂಡ ಹಾಕುತ್ತಾರೆ ಎಂದು ಸವಾರ ಆರೋಪ ಮಾಡಿದ್ದಾರೆ.
ಬೆಳಗಾವಿಯ ಬಿ.ಕೆ ಕಾಲೇಜಿನಲ್ಲಿ ಕೊವಿಡ್ ನಿಯಮ ಉಲ್ಲಂಘನೆ
ಬೆಳಗಾವಿಯಲ್ಲಿ ಇಂದಿನಿಂದ ಪದವಿ ಪ್ರಥಮ ಮತ್ತು ದ್ವಿತೀಯ ವರ್ಷದ ತರಗತಿಗಳು ಆರಂಭ ಹಿನ್ನಲೆಯಲ್ಲಿ ಎಂದಿನಂತೆ ಪದವಿ ಕಾಲೇಜುಗಳು ಆರಂಭವಾಗಿದ್ದು, ಬಿ.ಕೆ ಕಾಲೇಜಿನಲ್ಲಿ ಕೊವಿಡ್ ನಿಯಮ ಉಲ್ಲಂಘನೆಯಾಗಿದೆ.ಒಂದು ಕೊಠಡಿಯಲ್ಲಿ 140 ಜನ ವಿದ್ಯಾರ್ಥಿಗಳನ್ನ ಆಡಳಿತ ಮಂಡಳಿ ಕೂರಿಸಿದ್ದು, ವಿದ್ಯಾರ್ಥಿಗಳಲ್ಲಿ ದೈಹಿಕ ಅಂತರ ಕಾಯ್ದುಕೊಳ್ಳದೇ ತರಗತಿ ಆರಂಭಿಸಿದ್ದಾರೆ.
ಸರ್ಕಾರ ರಚನೆಯ ಪ್ರಹಸನದ ಬಗ್ಗೆ ಪುಸ್ತಕದಲ್ಲಿ ಬರೆಯುತ್ತಿದ್ದೇನೆ: ಹೆಚ್.ವಿಶ್ವನಾಥ್
78 ವರ್ಷದ BSYಗೆ ಅಧಿಕಾರದ ವ್ಯಾಮೋಹವಿರಬೇಕಾದರೆ, 77 ವರ್ಷದ ನನಗೆ ಅಧಿಕಾರ ವ್ಯಾಮೋಹ ಇದ್ದರೆ ತಪ್ಪೇನು? ನಾನು ನಾಯಕತ್ವದ ವಿರುದ್ಧ ಧ್ವನಿ ಎತ್ತಿ ಪಕ್ಷ ಬದಲಿಸಿದ್ದೇನೆ. ನಾನು ಪಕ್ಷಾಂತರಿ ಅಲ್ಲ, ಎಲ್ಲಾ ವಿಚಾರಗಳನ್ನು ಪುಸ್ತಕ ರೂಪದಲ್ಲಿ ಹೊರತರುತ್ತೇನೆ, ಬಾಂಬೆ ಡೇಸ್ ಪುಸ್ತಕದಲ್ಲಿ ಎಲ್ಲಾ ವಿಚಾರ ಬರೆಯುತ್ತೇನೆ. ಸರ್ಕಾರ ರಚನೆಯ ಪ್ರಹಸನದ ಬಗ್ಗೆಯೂ ಬರೆಯುತ್ತಿದ್ದೇನೆ. ಇನ್ನು ನಾಲ್ಕೈದು ಅಧ್ಯಾಯ ಬಾಕಿ ಇದೆ ಎಂದು ಹುಬ್ಬಳ್ಳಿಯಲ್ಲಿ ಬಿಜೆಪಿ ಎಂಎಲ್‌ಸಿ ಹೆಚ್.ವಿಶ್ವನಾಥ್ ಹೇಳಿಕೆ ನೀಡಿದ್ದಾರೆ.
ಕುರುಬರಿಗೆ ಎಸ್‌ಟಿ ಮೀಸಲಾತಿ ನೀಡುವಂತೆ ಒತ್ತಾಯಿಸಿ ಇಂದಿನಿಂದ ಪಾದಯಾತ್ರೆ
ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಕಾಗಿನೆಲೆಯಿಂದ ಬೆಂಗಳೂರಿನವರೆಗೆ ಪಾದಯಾತ್ರೆ ಕುರುಬರಿಗೆ ಎಸ್‌ಟಿ ಮೀಸಲಾತಿ ನೀಡುವಂತೆ ಒತ್ತಾಯಿಸಿ ನಡೆಯಲಿದೆ. ಕಾಗಿನೆಲೆ ಕನಕಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ಈ ಪಾದಯಾತ್ರೆ ನಡೆಯಲಿದ್ದು, ಮಧ್ಯಾಹ್ನ ಮೂರೂವರೆ ಗಂಟೆಯ ನಂತರ ಪಾದಯಾತ್ರೆ ನಡೆಯಲಿದ್ದು, ಇಂದಿನಿಂದ ಫೆಬ್ರುವರಿ 7ರವರೆಗೆ ಪಾದಯಾತ್ರೆ ನಡೆಯಲಿದೆ. ಪಾದಯಾತ್ರೆಗೂ ಮುನ್ನ ಕನಕಗುರುಪೀಠದ ಆವರಣದಲ್ಲಿ ಬೆಳಿಗ್ಗೆ 11 ಗಂಟೆಗೆ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ, ಸಚಿವ ಆರ್.ಶಂಕರ, ಮಾಜಿ ಸಚಿವರಾದ ಎಚ್.ವಿಶ್ವನಾಥ, ಎಚ್.ಎಂ.ರೇವಣ್ಣ, ಬಂಡೆಪ್ಪ ಕಾಶೆಂಪೂರ ಸೇರಿದಂತೆ ಕುರುಬ ಸಮಾಜದ ಶಾಸಕರು ಭಾಗಿಯಾಗಲಿದ್ದಾರೆ.
ಮೈಸೂರಲ್ಲಿ ಕೊರೊನಾ ಲಸಿಕೆ ವಿತರಣೆಗೆ ಸಿದ್ಧತೆ
ಮೈಸೂರು ಜಿಲ್ಲೆಯಲ್ಲಿ ಒಟ್ಟು 33,009 ಜನಕ್ಕೆ ಮೊದಲ ಹಂತದಲ್ಲಿ ಲಸಿಕೆ ನೀಡಲಾಗುತ್ತಿದ್ದು, ಜಿಲ್ಲೆಯಲ್ಲಿ ಒಟ್ಟು 70,000 ಲಸಿಕೆ ಸ್ಟೋರೆಜ್ ಮಾಡಲು ಕೋಲ್ಡ್ ಸ್ಟೋರೆಜ್ ಮಾಡಲಾಗಿದೆ. 14,976 ಸರ್ಕಾರಿ ಆರೋಗ್ಯ ಕಾರ್ಯಕರ್ತರು, 8,033 ಖಾಸಗಿ ಆರೋಗ್ಯ ಕಾರ್ಯಕರ್ತರು, ಜಿಲ್ಲೆಯಲ್ಲಿ ಒಟ್ಟು 234 ಕೇಂದ್ರಗಳಲ್ಲಿ ಲಸಿಕೆ ವಿತರಣೆ ಮಾಡಲಾಗುತ್ತದೆ. ಇದರಲ್ಲಿ 162 ಸರ್ಕಾರಿ ಲಸಿಕಾ ಕೇಂದ್ರ, 72 ಖಾಸಗಿ ಲಸಿಕಾ ಕೇಂದ್ರಗಳಾಗಿವೆ.
ಕೊಪ್ಪಳ ಜಿಲ್ಲೆಗೆ ನಿನ್ನೆ 6500 ಲಸಿಕೆ ಆಗಮನ
ಕೊರೊನಾ ವಾರಿಯರ್ಸ್ ಗೆ ಲಸಿಕೆ ನೀಡಲು ಸಕಲ ಸಿದ್ಧತೆ ನಡೆದಿದ್ದು, ನಿನ್ನೆ ಬಾಗಲಕೋಟೆಯಿಂದ ಕೊಪ್ಪಳಕ್ಕೆ ಲಸಿಕೆ ಆಗಮಿಸಿದೆ. ಮೊದಲ ಹಂತದಲ್ಲಿ 10335 ಜನರಿಗೆ ಲಸಿಕೆ ನೀಡಲಿದ್ದು, ಲಸಿಕಾ ಉಗ್ರಾಣದಲ್ಲಿ ಕೊರೊನಾ ಲಸಿಕೆ ಇಡಲಾಗಿದೆ. ಜಿಲ್ಲೆಯ ನಾಲ್ಕು ಆಸ್ಪತ್ರೆಗಳಲ್ಲಿ ಲಸಿಕೆ ಹಂಚಿಕೆಗೆ ಸಿದ್ಧತೆ ಮಾಡಿದ್ದು, ಕೊಪ್ಪಳ ಜಿಲ್ಲಾ ಆಸ್ಪತ್ರೆ, ಕುಷ್ಟಗಿ ತಾಲೂಕ ಆಸ್ಪತ್ರೆ, ಗಂಗಾವತಿ ಹಾಗೂ ಯಲಬುರ್ಗಾ ತಾಲೂಕು ಆಸ್ಪತ್ರೆಯಲ್ಲಿ ಲಸಿಕೆ ನೀಡಲಾಗುತ್ತದೆ.
ಯಾದಗಿರಿ ಜಿಲ್ಲೆಗೂ ಬಂತು ಕೊರೊನಾ ವ್ಯಾಕ್ಸಿನ್
ಕಲಬುರಗಿಯಿಂದ ಯಾದಗಿರಿ ಜಿಲ್ಲೆಗೆ ಕೊರೊನಾ ವ್ಯಾಕ್ಸಿನ್ ಆಗಮಿಸಿದ್ದು, ಡಿಎಚ್ಒ ಕಚೇರಿಗೆ ಪೊಲೀಸ್ ಭದ್ರತೆಯಲ್ಲಿ ಲಸಿಕೆ ಹೊತ್ತ ವಾಹನ ಆಗಮಿಸಿದೆ. ಜಿಲ್ಲಾಧಿಕಾರಿ ನೇತೃತ್ವದಲ್ಲಿ ವ್ಯಾಕ್ಸಿನ್ ಡಿಎಚ್ಒ ಕಚೇರಿಯಲ್ಲಿ ಇರಿಸಲಾಗಿದ್ದು, ಮೊದಲ ಹಂತದಲ್ಲಿ 3000 ವ್ಯಾಕ್ಸಿನ್ ಬಂದಿದೆ.
ಬಿಸಿಲು ನಾಡು ರಾಯಚೂರಿಗೆ ಬಂದ ಕೊರೊನಾ ಲಸಿಕೆ
ಕೊವಿಶೀಲ್ಡ್ ಲಸಿಕೆ ಹೊತ್ತ ವಾಹನ ರಾಯಚೂರಿಗೆ ಆಗಮಿಸಿದ್ದು ,ಇಲ್ಲಿನ ಜಿಲ್ಲಾ ಆರೋಗ್ಯ ಇಲಾಖೆ ಆರತಿ ಬೆಳಗಿ ಲಸಿಕೆ ಹೊತ್ತ ವಾಹನವನ್ನು ಸ್ವಾಗತಿಸಿದೆ. ಈಗ ಒಟ್ಟು 9000 ಡೋಸ್ ಲಸಿಕೆ ಬಂದಿದ್ದು, ಜನವರಿ 16 ರಂದು ಜಿಲ್ಲೆಯ 6 ಕೇಂದ್ರಗಳಲ್ಲಿ ಲಸಿಕೆ ನೀಡಲಿದ್ದಾರೆ. ಮೊದಲ ದಿನ ಪ್ರತಿ ಕೇಂದ್ರದಲ್ಲಿ 100 ಜನರಿಗೆ ಲಸಿಕೆ ನೀಡಲಾಗುವುದು, ನಂತರ ಜನವರಿ 18 ರಿಂದ ಉಳಿವರಿಗೆ ಲಸಿಕೆ ನೀಡಲಾಗುತ್ತದೆ. ಜಿಲ್ಲೆಯಲ್ಲಿ 15260 ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ನೀಡಲಿದ್ದು, ಲಸಿಕೆ ಸಂಗ್ರಹ ಹಾಗೂ ವಿತರಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ರಾಯಚೂರು ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಕೃಷ್ಣ ತಿಳಿಸಿದ್ದಾರೆ.
ಬಿಬಿಎಂಪಿ ನೂತನ ಕಾಯ್ದೆ ಜಾರಿ
ಬಿಬಿಎಂಪಿ ನೂತನ ಕಾಯ್ದೆ ಜಾರಿಗೆ ತಂದಿದ್ದು, ಆ ಮೂಲಕ ಬಿಬಿಎಂಪಿ ಆಯುಕ್ತರ ಅನುಮತಿ ಮೇಲೆ ಜಾಹಿರಾತು ಫಲಕಗಳನ್ನು ಹಾಕಲು ಸರ್ಕಾರ ಗ್ರಿನ್ ಸಿಗ್ನಲ್ ನೀಡಿದೆ. ಆದರೆ, bng bbmp on banner ಎಂಬ ಬಿಬಿಎಂಪಿ ಜಾಹೀರಾತು ಬೈಲಾ ಪ್ರಕಾರ ಫಲಕಗಳನ್ನ ಹಾಕಲು ಅನುಮತಿ ಇಲ್ಲ. ಹೀಗಾಗಿ ಜಾಹೀರಾತು ಹಾಕಲು ಅನುಮತಿ ನೀಡಬೇಕೇ ಅಥವಾ ಬೇಡವೇ ಎಂಬ ಸ್ಪಷ್ಟನೆ ಕೋರಿ ಸರ್ಕಾರಕ್ಕೆ ಬಿಬಿಎಂಪಿ ಪತ್ರ ಬರೆದಿದೆ.
ಹುಬ್ಬಳ್ಳಿಯ ಚೆನ್ನಮ್ಮ ವೃತ್ತದ ಫೈಓವರ್‌ಗೆ ಭೂಮಿ ಪೂಜೆ
ಹುಬ್ಬಳ್ಳಿಯ ಚೆನ್ನಮ್ಮ ವೃತ್ತದಲ್ಲಿ ಫೈಓವರ್‌ನ ಭೂಮಿ ಪೂಜೆಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಕೇಂದ್ರ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಚಾಲನೆ ನೀಡಲಿದ್ದು, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಚಿವ ಜಗದೀಶ್ ಶೆಟ್ಟರ್ ಹಾಗೂ ಸ್ಥಳೀಯ ನಾಯಕರಿಂದ ಸ್ಥಳದಲ್ಲಿ ಸಾಂಕೇತಿಕ ಭೂಮಿ ಪೂಜೆ ನಡೆಲಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೂಡ ವೀಡಿಯೋ ಕಾನ್ಫರೆನ್ಸ್ ಮೂಲಕ ಭಾಗಿಯಾಗಲಿದ್ದು, ಬೆಳಗ್ಗೆ 10.45 ಕ್ಕೆ ಡೆನಿಸನ್ ಹೋಟೆಲ್‌ನಲ್ಲಿ ಪ್ಲೈ ಓವರ್ ಕಾರ್ಯಕ್ರಮ ನಂತರ12.15 ಕ್ಕೆ ರಾಣಿ ಚೆನ್ನಮ್ಮ ಸರ್ಕಲ್ನಲ್ಲಿ ಪ್ಲೈ ಓವರ್ ಕಾಮಗಾರಿಗೆ ಔಪಚಾರಿಕ ಭೂಮಿ ಪೂಜೆ ನಡೆಯಲಿದೆ.
ನಾಳೆ ಮೊದಲ ಹಂತದ ಕೊರೊನಾ ವ್ಯಾಕ್ಸಿನ್ ವಿತರಣೆ
ಬೆಂಗಳೂರಿನ 6 ಕೇಂದ್ರದಲ್ಲಿ ನಾಳೆ ಮೊದಲ ಹಂತದ ಕೊರೊನಾ ಲಸಿಕೆ ವಿತರಣೆ ಮಾಡಲಿದ್ದು, ವಿಕ್ಟೋರಿಯಾ ಆಸ್ಪತ್ರೆಯ ಬಿಎಂಸಿಆರ್ಐ, ಕೋರಮಂಗಲದ ಅಕಾಡೆಮಿ ಆಫ್ ಹೆಲ್ತ್ ಸೈನ್ಸ್, ಸೆಂಟ್ ಜಾನ್ಸ್ ನ್ಯಾಷನಲ್ ಅಕಾಡೆಮಿ ಆಫ್ ಹೆಲ್ತ್ಸೈನ್ಸ್, ಮಲ್ಲೇಶ್ವರಂನ ಕೆಸಿಜಿ ಆಸ್ಪತ್ರೆ, ಇಂದ್ರಾನಗರದ ಸಿ.ವಿ.ರಾಮನ್ ಆಸ್ಪತ್ರೆ, ಜಯನಗರದ ಆಸ್ಪತ್ರೆ, ಮಲ್ಲಸಂಧ್ರ ಯುಪಿಹೆಚ್ಸಿನಲ್ಲಿ ಕೊರೊನಾ ಲಸಿಕೆ ನೀಡಲಾಗುತ್ತದೆ. ಈಗಾಗಲೇ 1.68 ಲಕ್ಷ ಕಾರ್ಯಕರ್ತರು ಹೆಸರು ನೋಂದಣಿ ಮಾಡಿದ್ದಾರೆ. ಆದರೆ ನಾಳೆ 600 ಆರೋಗ್ಯ ಕಾರ್ಯಕರ್ತರಿಗೆ ಮಾತ್ರ ಲಸಿಕೆ ನೀಡಲಾಗುತ್ತದೆ.
ಸೇನಾ ದಿನಾಚರಣೆ ಪ್ರಯುಕ್ತ ಶುಭಾಶಯ ಕೋರಿದ ಪ್ರಧಾನಿ ನರೇಂದ್ರ ಮೋದಿ
ಸೈನಿಕರು ಮತ್ತು ಸೈನಿಕರ ಕುಟುಂಬಸ್ಥರಿಗೆ ಸೇನಾ ದಿನಾಚರಣೆ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಅವರು ಶುಭಕೋರಿದ್ದು, ನಮ್ಮ ಸೇನೆ ಪ್ರಬಲವಾಗಿದೆ, ಧೈರ್ಯಶಾಲಿಯಾಗಿದೆ ಆ ಮೂಲಕ ಇದು ಯಾವಾಗಲೂ ದೇಶವನ್ನ ಹೆಮ್ಮೆ ಪಡುವಂತೆ ಮಾಡಿದೆ. ದೇಶದ ಜನರ ಪರವಾಗಿ ಭಾರತೀಯ ಸೇನೆಗೆ ನಮಸ್ಕರಿಸುವೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
मां भारती की रक्षा में पल-पल मुस्तैद देश के पराक्रमी सैनिकों और उनके परिजनों को सेना दिवस की हार्दिक बधाई। हमारी सेना सशक्त, साहसी और संकल्पबद्ध है, जिसने हमेशा देश का सिर गर्व से ऊंचा किया है। समस्त देशवासियों की ओर से भारतीय सेना को मेरा नमन।
— Narendra Modi (@narendramodi) January 15, 2021
ಪಂಚಮಸಾಲಿ ಗುರುಪೀಠ ಸ್ವಾಮೀಜಿಗೆ ಪಟ್ಟಾಧಿಕಾರದ ಕಿರೀಟ
ಪಂಚಮಸಾಲಿ ಗುರುಪೀಠಾಧ್ಯಕ್ಷರಾದ ವಚನಾನಂದ ಸ್ವಾಮೀಜಿಗೆ ಇಂದು ಮಧ್ಯಾಹ್ನ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಪಟ್ಟಾಧಿಕಾರದ ಕಿರೀಟವನ್ನು ಧಾರಣೆ ಮಾಡಲಿದ್ದಾರೆ. ಆ ಮೂಲಕ ಇಂದು ಸಂಜೆ ಎರಡು ದಿನಗಳ ಕಾಲ ನಡೆದ ಹರಿಹರ ಪಂಚಮಸಾಲಿ ಮಠದ ಹರಜಾತ್ರೆಗೆ ತೆರೆ ಬೀಳಲಿದೆ.
ಯುವರತ್ನ ಸಮಾವೇಶಕ್ಕೆ ಚಾಲನೆ ನೀಡಲಿರುವ ನಟ ಪುನೀತ್ ರಾಜ್ಕುಮಾರ್
ಹರಿಹರ ಪಂಚಮಸಾಲಿ ಮಠದಲ್ಲಿ ನಡೆಯುತ್ತಿರುವ ಹರಜಾತ್ರೆಯಲ್ಲಿ ಇಂದು ಯುವರತ್ನ ಸಮಾವೇಶ ನಡೆಯುತ್ತಿದ್ದು, ಈ ಸಮಾವೇಶಕ್ಕೆ ನಟ ಪುನೀತ್ ರಾಜ್ಕುಮಾರ್ ಚಾಲನೆ ನೀಡಲಿದ್ದಾರೆ. ಇನ್ನು ಈ ಸಮಾವೇಶದಲ್ಲಿ ಬಿಜೆಪಿ ಮುಖಂಡ ಬಿ.ವೈ. ವಿಜಯೇಂದ್ರ, ಸಂಸದ ಪ್ರಜ್ವಲ್ ರೇವಣ್ಣ ಭಾಗವಹಿಸಲಿದ್ದಾರೆ.
ನಾಳೆ ದೇಶದಾದ್ಯಂತ ಕೊರೊನಾ ಲಸಿಕೆಗೆ ಚಾಲನೆ
ನಾಳೆ ಬೆಳಗ್ಗೆ 10:30ಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ವಿಡಿಯೋ ಕಾನ್ಫರೇನ್ಸ್ ಮೂಲಕ ಲಸಿಕೆ ನೀಡುವಿಕೆಗೆ ಚಾಲನೆ ನೀಡಲಿದ್ದು, ದೇಶದ 3 ಲಕ್ಷ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುತ್ತದೆ. ಈ ಸಂಬಂಧ 3000 ಸ್ಥಳಗಳಲ್ಲಿ ಕೊರೊನಾ ವೈರಸ್ ಲಸಿಕೆ ನೀಡುವಿಕೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ನೀತಿ ಆಯೋಗದ ಸದಸ್ಯ ವಿ.ಕೆ.ಪೌಲ್ ಮಾಹಿತಿ ನೀಡಿದ್ದಾರೆ.
ಅಂತಿಮ ಟೆಸ್ಟ್: ಟಾಸ್ ಗೆದ್ದ ಆಸ್ಟ್ರೇಲಿಯಾ
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್ ಗವಾಸ್ಕರ್ ಟ್ರೋಫಿಯ ಕೊನೆಯ ಪಂದ್ಯದ ಮೊದಲ ದಿನ ಇಂದಾಗಿದ್ದು, ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಆರಂಭದಲ್ಲೇ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕ್ಕಿದ್ದ ಟೀಂ ಆಸಿಸ್ಗೆ ಸ್ಮಿತ್ ಮತ್ತು ಲಾಬುಶೆನ್ ಅವರ ಅರ್ಧಶತಕ ನೆರವಾಗಿದೆ.
ಮಹಾರಾಷ್ಟ್ರದಲ್ಲಿ ಹಕ್ಕಿಜ್ವರದ ಭೀತಿ
ಮಹಾರಾಷ್ಟ್ರದ 9 ಜಿಲ್ಲೆಗಳಲ್ಲಿಂದು 382 ಪಕ್ಷಿಗಳು ಸಾವಿಗೀಡಾಗಿದ್ದು, ಮಹಾರಾಷ್ಟ್ರದಲ್ಲಿ ಈವರೆಗೆ 3,378 ಪಕ್ಷಿಗಳು ಸಾವನ್ನಪ್ಪಿವೆ.
5A ಉಪಕಾಲುವೆ ನಿರ್ಮಾಣಕ್ಕೆ ಆಗ್ರಹಿಸಿ ರೈತರ ಹೋರಾಟ
ನಾರಾಯಣಪುರ ಬಲದಂಡೆ ಕಾಲುವೆಗೆ 5A ಉಪಕಾಲುವೆ ನಿರ್ಮಾಣ ಮಾಡಲು ಆಗ್ರಹಿಸಿ ರೈತರು ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಪಾಮನಕಲ್ಲೂರಿನಲ್ಲಿ ನಡೆಸುತ್ತಿರುವ ಹೋರಾಟ 55ನೇ ದಿನಕ್ಕೆ ಕಾಲಿಟ್ಟಿದ್ದು,ಕಾಲುವೆ ನಿರ್ಮಾಣಕ್ಕೆ ಸರ್ಕಾರ ಆದೇಶ ಹೊರಡಿಸಬೆಕೆಂದು ರೈತರು ಬಿಗಿಪಟ್ಟು ಹಿಡಿದಿದ್ದಾರೆ.
Published On - Jan 15,2021 7:49 PM