ಹಿರೇಮಗಳೂರು ಕಣ್ಣನ್​​​ ವೇತನ ಬಾಕಿ ಕೇಳಿದ ಪ್ರಕರಣಕ್ಕೆ ಟ್ವಿಸ್ಟ್: ತಹಶೀಲ್ದಾರ್ ತಪ್ಪೆಂದ ಸಿಎಂ ಸಿದ್ದರಾಮಯ್ಯ

ಹಿರೇಮಗಳೂರಿನ ಅರ್ಚಕ ಹಿರೇಮಗಳೂರು ಕಣ್ಣನ್ ಅವರ ವೇತನ ವಾಪಸ್ ಕೇಳಿ ನೋಟಿಸ್​​ ನೀಡಿರುವ ಪ್ರಕರಣಕ್ಕೆ ಸಂಬಂಧಿಸಿ ಇದೀಗ ಸಿದ್ದರಾಮಯ್ಯ ಅವರು ತಹಶೀಲ್ದಾರ್ ಮೇಲೆಯೇ ಗೂಬೆ ಕೂರಿಸಿರುವುದು ಇನ್ನಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಹಾಗಾದರೆ ಈ ಪ್ರಕರಣ ಏನು? ಸಿದ್ದರಾಮಯ್ಯ ನೀಡಿದ ಸ್ಪಷ್ಟನೆ ಹುಟ್ಟುಹಾಕಿದ ಪ್ರಶ್ನೆಗಳೇನು? ಇಲ್ಲಿದೆ ವಿವರ

ಹಿರೇಮಗಳೂರು ಕಣ್ಣನ್​​​ ವೇತನ ಬಾಕಿ ಕೇಳಿದ ಪ್ರಕರಣಕ್ಕೆ ಟ್ವಿಸ್ಟ್: ತಹಶೀಲ್ದಾರ್ ತಪ್ಪೆಂದ ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ & ಹಿರೇಮಗಳೂರು ಕಣ್ಣನ್
Follow us
TV9 Web
| Updated By: Ganapathi Sharma

Updated on: Jan 24, 2024 | 11:38 AM

ಬೆಂಗಳೂರು, ಜನವರಿ 24: ಚಿಕ್ಕಮಗಳೂರಿನ (Chikkamagalur) ಹಿರೇಮಗಳೂರಿನ ಕೋದಂಡರಾಮ ದೇಗುಲದ ಅರ್ಚಕ ಹಿರೇಮಗಳೂರು ಕಣ್ಣನ್ (Hiremagaluru Kannan) ಅವರ ವೇತನ ವಾಪಸ್ ಕೇಳಿ ನೋಟಿಸ್​​ ನೀಡಿರುವ ಪ್ರಕರಣಕ್ಕೆ ಈಗ ಟ್ವಿಸ್ಟ್ ದೊರೆತಿದೆ. ಕಣ್ಣನ್ ಅವರಿಗೆ ಹೆಚ್ಚುವರಿಯಾಗಿ ಹಣ ಪಾವತಿಸಿರುವುದು ತಹಶೀಲ್ದಾರ್ ಅವರದ್ದೇ ತಪ್ಪೆಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈ ವಿಚಾರವಾಗಿ ಮುಖ್ಯಮಂತ್ರಿಗಳ ಅಧಿಕೃತ ಎಕ್ಸ್​​ ಖಾತೆಯಲ್ಲಿ ಸಂದೇಶ ಪ್ರಕಟಿಸಲಾಗಿದೆ.

‘ಹಿರೇಮಗಳೂರು ಕಣ್ಣನ್ ಅವರಿಗೆ ತಸ್ತೀಕ್ ಹಣ ವಾಪಾಸು ನೀಡುವಂತೆ ನೋಟಿಸ್ ನೀಡಿರುವುದರಲ್ಲಿ ತಹಶೀಲ್ದಾರ್ ತಪ್ಪಿದೆ ಹೊರತು ಕಣ್ಣನ್ ಅವರ ತಪ್ಪಿಲ್ಲ. ನೋಟಿಸ್ ಅನ್ನು ಹಿಂಪಡೆಯಲು ಸಂಬಂಧಪಟ್ಟವರ ಜೊತೆ ಮಾತನಾಡುತ್ತೇನೆ. ಕಣ್ಣನ್ ಅವರಿಗೆ ಹೆಚ್ಚುವರಿಯಾಗಿ ಹಣ ಪಾವತಿಸಿರುವುದು ತಹಶೀಲ್ದಾರರು, ಅವರಿಂದಲೇ ಬಾಕಿ ಹಣ ಕಟ್ಟಿಸಿಕೊಳ್ಳುತ್ತೇವೆ’ ಎಂಬ ಮುಖ್ಯಮಂತ್ರಿಗಳ ಹೇಳಿಕೆಯನ್ನು ಮುಖ್ಯಮಂತ್ರಿ ಕಚೇರಿ ಟ್ವೀಟ್ ಮಾಡಿದೆ.

ಹಿರೇಮಗಳೂರು ಕಣ್ಣನ್ ಅವರು ಕಳೆದ 44 ವರ್ಷಗಳಿಂದ ಕಲ್ಯಾಣ ಕೋದಂಡ ರಾಮ ದೇವಾಲಯದ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಕಣ್ಣನ್ ಅವರಿಗೆ ರಾಜ್ಯ ಸರ್ಕಾರ ಪ್ರತಿ ತಿಂಗಳು 7500 ರೂ. ವೇತನ ನೀಡುತ್ತಿತ್ತು. ಆದರೆ, ಇದೀಗ ದೇವಾಲಯದ ಆದಾಯ ಕಡಿಮೆ‌ ಇದೆ ಎಂಬ ಕಾರಣ ನೀಡಿ ಈ ಹಿಂದೆ ನೀಡಿದ್ದ 7500 ರೂ. ವೇತನದಲ್ಲಿ 4500 ರೂ. ಅನ್ನು ವಾಪಸ್ ನೀಡುವಂತೆ ಸೂಚಿಸಲಾಗಿತ್ತು. 4500 ರೂಪಾಯಿಯಂತೆ 10 ವರ್ಷದ 4,74,000 ರೂ. ಹಣವನ್ನು ವಾಪಸ್ ನೀಡುವಂತೆ ತಹಶೀಲ್ದಾರ್ ನೋಟಿಸ್ ನೀಡಿದ್ದರು.

ತಹಶೀಲ್ದಾರ್ ಕ್ರಮಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ಎಚ್ಚೆತ್ತುಕೊಂಡಿದ್ದ ಮುಜರಾಯಿ ಇಲಾಖೆಯ ಸಚಿವ ರಾಮಲಿಂಗಾರೆಡ್ಡಿ, ಹಿರೇಮಗಳೂರು ಕಣ್ಣನ್ ಅವರಿಗೆ ನೀಡಿರುವ ನೋಟಿಸ್‌ ಹಿಂಪಡೆಯಲು ಮುಜರಾಯಿ ಇಲಾಖೆ ಆಯುಕ್ತರಿಗೆ ಸೂಚನೆ ನೀಡುವುದಾಗಿ ತಿಳಿಸಿದ್ದರು.

ಇದನ್ನೂ ಓದಿ: ಹಿರೇಮಗಳೂರು ಕಣ್ಣನ್​​ಗೆ ನೀಡಿರುವ ನೋಟಿಸ್ ಹಿಂಪಡೆಯಲು ಸೂಚಿಸುವೆ: ಸಚಿವ ರಾಮಲಿಂಗಾರೆಡ್ಡಿ

ಹಲವು ಪ್ರಶ್ನೆಗಳಿಗೆ ಕಾರಣವಾದ ಸಿಎಂ ಸಿದ್ದರಾಮಯ್ಯ ಹೇಳಿಕೆ

ಇದೀಗ ಸಿದ್ದರಾಮಯ್ಯ ಅವರು ತಹಶೀಲ್ದಾರ್ ಮೇಲೆಯೇ ಗೂಬೆ ಕೂರಿಸಿರುವುದು ಇನ್ನಷ್ಟು ಪ್ರಶ್ನೆಗಳಿಗೆ ಕಾರಣವಾಗಿದೆ. ಹಾಗಾದರೆ, ರಾಜ್ಯದ ಇತರ ದೇವಾಲಯಗಳಲ್ಲಿ ಆದಾಯಕ್ಕಿಂತ ಹೆಚ್ಚು ವೇತನ ನೀಡಿದ್ದರೆ ಅಂಥ ಕಡೆಗಳಲ್ಲಿಯೂ ಸಂಬಂಧಪಟ್ಟ ತಹಶೀಲ್ದಾರ್ ಅವರಿಂದಲೇ ವೇತನ ವಾಪಸ್ ವಸೂಲಿ ಮಾಡಿಕೊಳ್ಳಲಾಗುತ್ತದೆಯೇ? ಹೆಚ್ಚು ಆದಾಯ ಇರುವ ದೇಗುಲಗಳ ಅರ್ಚಕರಿಗೆ ಅದಕ್ಕೆ ತಕ್ಕಂತೆ ಹೆಚ್ಚು ವೇತನ ನೀಡಲಾಗುತ್ತಿದೆಯೇ? ಕಡಿಮೆ ಆದಾಯ ಇರುವ ದೇವಾಲಯಗಳ ಅರ್ಚಕರಿಗೆ ಅದಕ್ಕೆ ತಕ್ಕಂತೆ ಕಡಿಮೆ ವೇತನ ನೀಡಬೇಕು ಎಂದಾದರೆ ಹೆಚ್ಚು ಆದಾಯ ಇರುವ ದೇಗುಲಗಳ ಅರ್ಚಕರಿಗೆ ಹೆಚ್ಚು ವೇತನ ನೀಡಬೇಕಲ್ಲವೇ ಎಂಬ ಪ್ರಶ್ನೆಗಳು ಉದ್ಭವಿಸಿವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ