ಕೇಂದ್ರ ಸರ್ಕಾರದ ನಿರ್ಬಂಧ ಪ್ರಶ್ನಿಸಿ ಟ್ವಿಟರ್ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿ 50 ಲಕ್ಷ ರೂ. ದಂಡ ವಿಧಿಸಿದ ಹೈಕೋರ್ಟ್
ಆಕ್ಷೇಪಾರ್ಹ ಟ್ವಿಟರ್ ಪೋಸ್ಟ್ ಗಳನ್ನು ತೆಗೆಯಬೇಕೆಂಬ ಕೇಂದ್ರ ಸರ್ಕಾರದ ಸೂಚನೆ ಪ್ರಶ್ನಿಸಿ ಕೋರ್ಟ್ ಮೊರೆ ಹೋಗಿದ್ದ ಟ್ವಿಟ್ಟರ್ಗೆ ಹಿನ್ನಡೆಯಾಗಿದೆ.
ಬೆಂಗಳೂರು: ಆಕ್ಷೇಪಾರ್ಹ ಟ್ವಿಟರ್ ಪೋಸ್ಟ್ ಗಳನ್ನು ತೆಗೆಯಬೇಕೆಂಬ ಕೇಂದ್ರ ಸರ್ಕಾರದ ಸೂಚನೆ ಪಾಲಿಸದ ಟ್ವಿಟರ್ ಗೆ (Twitter) ತೀವ್ರ ಹಿನ್ನಡೆಯಾಗಿದೆ. ಕೇಂದ್ರ ಸರ್ಕಾರದ ಸೂಚನೆಗಳನ್ನು ರದ್ದುಪಡಿಸುವಂತೆ ಕೋರಿದ್ದ ಟ್ವಿಟರ್ ಸಂಸ್ಥೆಯ ರಿಟ್ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್(Karnataka High Court) ವಜಾಗೊಳಿಸಿದೆ. ಅಲ್ಲದೇ ಕೇಂದ್ರ ಸರ್ಕಾರದ ಸೂಚನೆ ಪಾಲಿಸಲು ವಿಳಂಬ ಮಾಡಿದ ಸಂಸ್ಥೆಯ ನಡವಳಿಕೆ ಖಂಡಿಸಿರುವ ಹೈಕೋರ್ಟ್ ಟ್ವಿಟರ್ ಸಂಸ್ಥೆಗೆ 50 ಲಕ್ಷ ರೂ. ದಂಡವನ್ನೂ ವಿಧಿಸಿದೆ. ದಂಡದ ಹಣವನ್ನು 45 ದಿನಗಳಲ್ಲಿ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಪಾವತಿಸಬೇಕು. ದಂಡ ಪಾವತಿಸಲು ತಪ್ಪಿದಲ್ಲಿ ಪ್ರತಿನಿತ್ಯ 5 ಸಾವಿರ ದಂಡ ವಿಧಿಸುವುದಾಗಿಯೂ ಹೈಕೋರ್ಟ್ ಎಚ್ಚರಿಕೆ ನೀಡಿದೆ.
ಇದನ್ನೂ ಓದಿ: Twitter: ಭಾರತದ ತಪ್ಪು ಭೂಪಟ ಪ್ರದರ್ಶಿಸಿದ ಟ್ವಿಟರ್ ವಿರುದ್ಧ ಕೇಂದ್ರ ಸರ್ಕಾರ ಕ್ರಮ
ಸುಳ್ಳು ಸುದ್ದಿ, ಕೋಮು ಸೌಹಾರ್ದತೆಗೆ ದಕ್ಕೆ ತರುವಂತಹ ಆಕ್ಷೇಪಾರ್ಹ ಪೋಸ್ಟ್ ಗಳನ್ನು ಬ್ಲಾಕ್ ಮಾಡುವಂತೆ ಕೇಂದ್ರ ಸರ್ಕಾರ ಟ್ವಿಟರ್ ಸಂಸ್ಥೆಗೆ ಸೂಚನೆಗಳನ್ನು ನೀಡಿತ್ತು. ಇಲ್ಲವಾದರೆ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಕ್ರಮದ ಎಚ್ಚರಿಕೆ ನೀಡಿತ್ತು. ಆದರೆ ಕೇಂದ್ರ ಸರ್ಕಾರದ ಕ್ರಮ ಅಭಿವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆ ಎಂದಿದ್ದ ಟ್ವಿಟರ್ ಸಂಸ್ಥೆ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿತ್ತು. ಪ್ರತಿಯೊಬ್ಬ ವ್ಯಕ್ತಿಗೂ ತನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯವಿದೆ. ಕೇಂದ್ರ ಸರ್ಕಾರದ ಸೂಚನೆಗಳನ್ನು ಪಾಲಿಸಿದರೆ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಲಿದೆ ಎಂದು ಟ್ವಿಟರ್ ಸಂಸ್ಥೆ ಪರ ವಕೀಲರು ವಾದಿಸಿದ್ದರು. ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳುವ ಮೊದಲು ಟ್ವೀಟ್ ಮಾಡುವ ವ್ಯಕ್ತಿಗೆ ನೋಟಿಸ್ ಕಳುಹಿಸಿ ವಾದ ಆಲಿಸಿದ ನಂತರವೇ ಕ್ರಮ ಕೈಗೊಳ್ಳಬೇಕೆಂದು ವಾದಿಸಲಾಗಿತ್ತು.
ಆದರೆ ಟ್ವಟರ್ ಸಂಸ್ಥೆ ವಾದವನ್ನು ತಳ್ಳಿಹಾಕಿರುವ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ರವರಿದ್ದ ಹೈಕೋರ್ಟ್ ಏಕಸದಸ್ಯ ಪೀಠ ಕೇಂದ್ರ ಸರ್ಕಾರದ ನೋಟಿಸ್ ಅನ್ನು ಟ್ವಿಟ್ಟರ್ ಅನುಸರಿಸಿಲ್ಲ. ಸೂಚನೆ ಪಾಲಿಸದಿದ್ದರೆ 7 ವರ್ಷ ಶಿಕ್ಷೆ, ದಂಡವಿದೆ. ಆದರೂ ಟ್ವಿಟ್ಟರ್ ಸಂಸ್ಥೆ ಸೂಚನೆಗಳನ್ನು ಪಾಲಿಸಿಲ್ಲ. ಒಂದು ವರ್ಷದ ವಿಳಂಬದ ನಂತರ ಸೂಚನೆ ಪಾಲಿಸಿ ಕೋರ್ಟ್ ಗೆ ಬಂದಿದ್ದೀರಿ. ನೀವು ರೈತರಲ್ಲ, ಶ್ರೀಮಂತ ಸಂಸ್ಥೆ ಎಂಬುದು ತಿಳಿದಿರಲಿ ಎಂದು ಟ್ವಿಟ್ಟರ್ ಸಂಸ್ಥೆಗೆ ನ್ಯಾ. ಕೃಷ್ಣ ಎಸ್ ದೀಕ್ಷಿತ್ ತರಾಟೆ ಗೆ ತೆಗೆದುಕೊಂಡರು.
ಮಾಹಿತಿ ತಂತ್ರಜ್ಞಾನ ಕಾಯ್ದೆ ಸೆ.69 A ಅಡಿ ಕೇಂದ್ರ ಸರ್ಕಾರಕ್ಕೆ ಆನ್ಲೈನ್ ಮೂಲಕ ಮಾಹಿತಿ ಒದಗಿಸುವ ಸೇವಾ ಸಂಸ್ಥೆಗಳ ಮೇಲೆ ನಿರ್ಬಂಧ ವಿಧಿಸುವ ಅಧಿಕಾರವಿದೆ. ಈ ಅಧಿಕಾರ ಬಳಸಿ ಕೆಲ ಟ್ವಿಟ್ಟರ್ ಅಕೌಂಟ್ ಬ್ಲಾಕ್ ಮಾಡುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿತ್ತು. ಸೆ.69ಎ ಅಡಿ ಈ ರೀತಿಯ ನಿರ್ದೇಶನ ನೀಡುವ ಅಧಿಕಾರ ಸರ್ಕಾರಕ್ಕಿದೆ. ಟ್ವೀಟ್ ರಾಷ್ಟ್ರೀಯ ಭದ್ರತೆ, ಸಾರ್ವಭೌಮತ್ವ, ಸುವ್ಯವಸ್ಥೆ ಗೆ ವಿರುದ್ದವಾಗಿದ್ದರೆ ಕ್ರಮ ಕೈಗೊಳ್ಳಬಹುದು. 2021 ರಲ್ಲಿ ಕೇಂದ್ರ ಸರ್ಕಾರದ ಮಾಹಿತಿ ತಂತ್ರಜ್ಞಾನ ಇಲಾಖೆ ಇಂತಹ 2851 ಟ್ವೀಟ್ ಗಳನ್ನು ಬ್ಲಾಕ್ ಮಾಡಿ ಆದೇಶ ಹೊರಡಿಸಿತ್ತು. 2022 ರಲ್ಲಿಯೂ 2 ಸಾವಿರಕ್ಕೂ ಹೆಚ್ಚು ಆಕ್ಷೇಪಾರ್ಹ ಟ್ವೀಟ್ ಗಳನ್ನು ಬ್ಲಾಕ್ ಮಾಡಿ ಆದೇಶ ಹೊರಡಿಸಿತ್ತು. ಸರ್ಕಾರದ ಈ ಕ್ರಮ ಪ್ರಶ್ನಿಸಿದ್ದ ಟ್ವಿಟ್ಟರ್ ಸಂಸ್ಥೆ ಇದೀಗ ಹಿನ್ನಡೆ ಅನುಭವಿಸಿದೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 12:37 pm, Fri, 30 June 23