ರಾಜ್ಯ, ರಾಜಧಾನಿಯಲ್ಲಿ ವರುಣನ ಅಬ್ಬರ; ಉಡುಪಿಯಲ್ಲಿ ಇಬ್ಬರು ಬಲಿ, ಲಕ್ಷಾಂತರ ಮೌಲ್ಯದ ಬೆಳೆ ನಾಶ
ಕಾಪು ತಾಲೂಕಿನ ಮಜೂರು ಮಸೀದಿ ಬಳಿ ಚಲಿಸುತ್ತಿದ್ದ ಆಟೋ ಮೇಲೆ ಬೃಹತ್ ಮರ ಬಿದ್ದಿದ್ದು ಬಿರುಗಾಳಿ ಮಳೆ ಇಬ್ಬರನ್ನು ಬಲಿ ಪಡೆದಿದೆ.
ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ಮೋಕಾ ಚಂಡಮಾರುತದ(Mocha Cyclone) ಹಿನ್ನಲೆ ಹವಮಾನ ಇಲಾಖೆ ರಾಜ್ಯ, ರಾಜಾಧಾನಿಗೆ ಮೂರು ದಿನಗಳ ಮಳೆಯ ಅಲರ್ಟ್(Karnataka Rain) ನೀಡಿದೆ. ಮೊಕಾ ಚಂಡಮಾರತದ ಎಫೆಕ್ಟ್ ರಾಜ್ಯ ಮತ್ತು ರಾಜಧಾನಿಗೆ ಭಾರಿ ಪ್ರಮಾಣದಲ್ಲೇ ತಟ್ಟಿದೆ. ಅದ್ರಲ್ಲೂ ಮಳೆರಾಯ ನಿನ್ನೆ(ಮೇ 11) ಇಬ್ಬರ ಜೀವವನ್ನೆ ಬಲಿಪಡೆದಿದ್ದಾನೆ. ಬಿರುಗಾಳಿ ಮಳೆಗೆ ಮನೆ ಕುಸಿದಿದೆ, ಎಕರೆಗಟ್ಟಲೇ ಬೆಳೆ ನಾಶವಾಗಿದೆ. ಬೀರನಹಳ್ಳಿ-ಅಜ್ಜನಹಟ್ಟಿ ಸಂಪರ್ಕಿಸುವ ಸೇತುವೆ ಮುಳುಗಿದೆ.
ಉಡುಪಿಯಲ್ಲಿ ವರುಣಾರ್ಭಟಕ್ಕೆ ಎರಡು ಬಲಿ
ಉಡುಪಿಯಲ್ಲಿ ಬಿರುಗಾಳಿ ಮಳೆ ಇಬ್ಬರನ್ನು ಬಲಿ ಪಡೆದಿದೆ. ಕಾಪು ತಾಲೂಕಿನ ಮಜೂರು ಮಸೀದಿ ಬಳಿ ಚಲಿಸುತ್ತಿದ್ದ ಆಟೋ ಮೇಲೆ ಬೃಹತ್ ಮರ ಬಿದ್ದಿದೆ. ಪರಿಣಾಮ ಆಟೋದಲ್ಲಿದ್ದ ಕೃಷ್ಣ ಮತ್ತು ಪುಷ್ಪ ಎಂಬುವವರು ಕುಳಿತಲ್ಲೇ ಉಸಿರು ಚೆಲ್ಲಿದ್ದಾರೆ. ಶಿರುವಾದಿಂದ ಕಾಪು ಕಡೆ ಬರುವಾಗ ದುರಂತ ನಡೆದಿದೆ.
ಬೀರನಹಳ್ಳಿ-ಅಜ್ಜನಹಟ್ಟಿ ಸಂಪರ್ಕಿಸುವ ಸೇತುವೆ ಮುಳುಗಡೆ
ಚಿಕ್ಕಮಗಳೂರು ಜಿಲ್ಲೆಯ ಬೀರನಹಳ್ಳಿ ಗ್ರಾಮದಲ್ಲಿ ಮಳೆಗೆ ಬೀರನಹಳ್ಳಿ-ಅಜ್ಜನಹಟ್ಟಿ ಸಂಪರ್ಕಿಸುವ ಸೇತುವೆ ಮುಳುಗಿದ್ದು 10ಕ್ಕೂ ಹೆಚ್ಚು ಗ್ರಾಮಗಳಿಗೆ ಸಂಪರ್ಕ ಕಟ್ ಆಗಿದೆ. ಜಮೀನಿಗೆ ಮಳೆ ನೀರು ನುಗ್ಗಿ ಅಡಕೆ, ಟೊಮೊಟೊ ಸೇರಿದಂತೆ ಲಕ್ಷಾಂತರ ಮೌಲ್ಯದ ಬೆಳೆ ನಾಶವಾಗಿದೆ.
ಇನ್ನು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪೆರುವಾಯಿ ಗ್ರಾಮದಲ್ಲಿ ಮದುವೆ ಸಂಭ್ರಮದಲ್ಲಿದ್ದವರಿಗೆ ಮಳೆರಾಯ ಶಾಕ್ ಕೊಟ್ಟಿದ್ದಾನೆ. ಮದುವೆ ಸಂಭ್ರಮದಲ್ಲಿದ್ದ ಮನೆಯ ಕಾಂಪೌಂಡ್ ಕುಸಿದು ಹೋಗಿದೆ. ಆದ್ರೆ ಕಾಂಪೌಂಡ್ ಬಳಿ ಯಾರೂ ಇಲ್ಲದಿರುವ ಕಾರಣ ಯಾವುದೇ ಅನಾಹುತ ಸಂಭವಿಸಿಲ್ಲ.
ಕೊಡಗು ಜಿಲ್ಲೆಯ ಚೈಯ್ಯಂಡಾಣೆಯಲ್ಲಿ ಗೊಬ್ಬರ ಗೋದಾಮಿನ ಮೇಲೆ ಮರ ಬಿದ್ದು, ರಸಗೊಬ್ಬರ ನಾಶವಾಗಿದೆ. ಇತ್ತ ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕು ಕುಪ್ಯಾ ಗ್ರಾಮದ ರೈತ ಪುಟ್ಟಮಾದು ಅವರಿಗೆ ಸೇರಿದ 2 ಎಕರೆ ಬಾಳೆ ಸಂಪೂರ್ಣ ನೆಲಕಚ್ಚಿದೆ.
ಬಂಗಾಳ ಕೊಲ್ಲಿಯಲ್ಲಿ ಮೊಕಾ ಚಂಡಮಾರುತದ ಎಫೆಕ್ಟ್ನಿಂದಾಗಿ ಬೆಂಗಳೂರಿನಲ್ಲಿ ಇನ್ನೂ ಮೂರು ದಿನ ಮಳೆಯಾಗಲಿದೆ. ದಕ್ಷಿಣ ಒಳನಾಡ, ಉತ್ತರ ಒಳನಾಡು, ಕರಾವಳಿ ಹಾಗೂ ಬೆಂಗಳೂರು ಭಾಗದಲ್ಲಿ ಮಳೆ ಇರಲಿದೆ ಅಂತ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಮೈಸೂರು, ಕೊಡಗು, ಚಿಕ್ಕಮಗಳೂರು, ರಾಮನಗರ, ಹಾಸನ, ತುಮಕೂರು ಬೆಂಗಳೂರು ನಗರದಲ್ಲಿ ಭಾರೀ ಗಾಳಿ, ಮಳೆ ಆಗ್ಬೋದು ಅಂತ ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ. ಇನ್ನು ಮೂರು ದಿನ ಮಳೆ ಸುರಿಯುವ ಸಾಧ್ಯತೆ ಇರೋದ್ರಿಂದ, ಮತ ಎಣಿಕೆಗೂ ವರುಣನ ಕಾರ್ಮೋಡ ಕವಿದಿದೆ.
ಕರ್ನಾಟಕಕ್ಕೆ ಸೇರಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ