ಕೊವಿಡ್​ನಿಂದ ಮೃತಪಟ್ಟವರ ಅಂತ್ಯಸಂಸ್ಕಾರ ಮಾಡುತ್ತಿರುವ ಸಹೋದರಿಯರು

ಆಪ್ತ ಸಂಬಂಧಿಕರೇ ದೂರ ಹೋಗೋ ಈ ಕಾಲದಲ್ಲಿ ಯುವತಿಯರು ಸ್ಮಶಾನ ಸೇವೆ ಮಾಡುತ್ತಿದ್ದಾರೆ. ತಂಡದ ಜೊತೆ ಸೇರಿ ಕೊವಿಡ್ ಸೋಂಕಿತರ ಅಂತಿಮ ಸಂಸ್ಕಾರ ಮಾಡಲು ಮುಂದಾಗಿದ್ದಾರೆ.

ಕೊವಿಡ್​ನಿಂದ ಮೃತಪಟ್ಟವರ ಅಂತ್ಯಸಂಸ್ಕಾರ ಮಾಡುತ್ತಿರುವ ಸಹೋದರಿಯರು
ಕೊವಿಡ್ನಿಂದ ಮೃತಪಟ್ಟವರ ಅಂತ್ಯಸಂಸ್ಕಾರ ಮಾಡುವ ಸಹೋದರಿಯರು
Follow us
ಆಯೇಷಾ ಬಾನು
|

Updated on:May 19, 2021 | 10:44 AM

ಆನೇಕಲ್: ಮಹಾಮಾರಿ ಕೊರೊನಾ ಜನರನ್ನು ಮಾನಸಿಕವಾಗಿಯೂ ದೈಹಿಕವಾಗಿಯೂ ದೂರ ಇರುವಂತೆ ಮಾಡಿದೆ. ಕೊರೊನಾ ಕರಾಳತೆಗೆ ಸಿಲುಕಿ ಮೃತಪಟ್ಟವರ ಅಂತ್ಯಸಂಸ್ಕಾರದಲ್ಲಿಯೂ ಕುಟುಂಬಸ್ಥರು ಭಾಗಿಯಾಗುತ್ತಿಲ್ಲ. ಸತ್ತಾಗ ಹೆಗಲು ಕೊಡಲು ನಾಲ್ಕು ಮಂದಿ ಬೇಕು ಅಂತಾರೆ ಆದರೆ ಸದ್ಯದ ಪರಿಸ್ಥಿತಿಯಲ್ಲಿ ಕೊರೊನಾದಿಂದ ಮೃತಪಟ್ಟವರ ದೇಹವನ್ನು ಮುಟ್ಟಲು ಸಹ ಕೆಲ ಕುಟುಂಬಸ್ಥರು ಮುಂದಾಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಮಹಿಳೆಯರು ಕೊರೊನಾ ಆತಂಕದಲ್ಲೂ ಸಾಮಾಜಿಕ ಬದ್ಧತೆ ಮೆರೆದಿದ್ದಾರೆ.

ಆಪ್ತ ಸಂಬಂಧಿಕರೇ ದೂರ ಹೋಗೋ ಈ ಕಾಲದಲ್ಲಿ ಯುವತಿಯರು ಸ್ಮಶಾನ ಸೇವೆ ಮಾಡುತ್ತಿದ್ದಾರೆ. ತಂಡದ ಜೊತೆ ಸೇರಿ ಕೊವಿಡ್ ಸೋಂಕಿತರ ಅಂತಿಮ ಸಂಸ್ಕಾರ ಮಾಡಲು ಮುಂದಾಗಿದ್ದಾರೆ. ಸೇಂಟ್ ಜೊಸೆಫ್ ಕಾಲೇಜಿನಲ್ಲಿ ಸಮಾಜ ಸೇವೆ ಪದವಿ ಅಭ್ಯಾಸ ಮಾಡುತ್ತಿರುವ ನಿಕೊಲ್ ಮೇರಿ ಮತ್ತು MBBS ಫೈನಲ್‌ ಇಯರ್ ಪ್ರಾಕ್ಟೀಸ್ ಮಾಡುತ್ತಿರುವ ಡಾ. ಟೀನಾ ಥಾಮಸ್ ಎಂಬ ಇಬ್ಬರು ಸಹೋದರಿಯರು ಮ್ಯಾಥೂಸ್ ಎಂಬುವವರು ಶುರು ಮಾಡಿದ ತಂಡದಲ್ಲಿ ಬೆರೆತು ತಮ್ಮ ಸೇವೆಯನ್ನು ಮಾಡುತ್ತಿದ್ದಾರೆ.

ಈ ಸಹೋದರಿಯರು ಪ್ರತಿದಿನ‌ 20ಕ್ಕೂ ಹೆಚ್ಚು ಶವಗಳ ಅಂತಿಮ‌ ಸಂಸ್ಕಾರದಲ್ಲಿ ಭಾಗಿಯಾಗಿ ಕೊವಿಡ್ನಿಂದ ಮೃತಪಟ್ಟ ಅಪರಿಚಿತ ಶವಗಳಿಗೆ ಹೆಗಲು ನೀಡುತ್ತಿದ್ದಾರೆ. ಬೆಂಗಳೂರಿನ ಹೊಸೂರು ರಸ್ತೆಯಲ್ಲಿರುವ ಇಂಡಿಯನ್ ಕ್ರಿಶ್ಚಿಯನ್ ಸ್ಮಶಾನದಲ್ಲಿ ಇಂತಹ ಮಹಾನ್ ಕಾರ್ಯದಲ್ಲಿ ಈ ಇಬ್ಬರು ಸಹೋದರಿಯರು ಭಾಗಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪಿಪಿಇ ಕಿಟ್ ಧರಿಸಿ ಸ್ಮಶಾನದಲ್ಲೇ ಟೀ ಬಿಸ್ಕತ್​ ತಿಂದು ಸೇವೆ ಸಲ್ಲಿಸುತ್ತಿದ್ದಾರೆ.

ಕೊರೊನಾ ಎರಡನೇ ಅಲೆಯ ನಂತರ ಸೋಂಕಿತರ ಮರಣ ಪ್ರಮಾಣ ಹೆಚ್ಚಾದ ಹಿನ್ನೆಲೆಯಲ್ಲಿ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು ಆಗದ ಕುಟುಂಬಗಳಿಗೆ ಇವರು ಆಪತ್ಬಾಂಧವರಾಗಿ ಕೊರೊನಾದಿಂದ ಮೃತಪಟ್ಟವರ ಅಂತ್ಯಸಂಸ್ಕಾರವನ್ನು ವಿಧಿವಿಧಾನದಿಂದ ನೆರವೇರಿಸುತ್ತಿದ್ದಾರೆ.

ಇದನ್ನೂ ಓದಿ: ಸೋಂಕಿನ ಭಯಕ್ಕೆ ವೃದ್ಧೆ ಆತ್ಮಹತ್ಯೆ, ತುಮಕೂರಿನಲ್ಲಿ ಮೃತ ಸೋಂಕಿತರ ಅಂತ್ಯಸಂಸ್ಕಾರ ಮಾಡಿ ಭಾವೈಕ್ಯತೆಯ ಸಂದೇಶ ಸಾರುತ್ತಿರುವ ಮುಸ್ಲಿಂ ಯುವಕರು

Published On - 2:24 pm, Mon, 17 May 21